ಸಮರ್ಪಕ ನೀರು ಕೊಡಿ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.2
ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ನಗರದ ಲೋಕೋಪಯೋಗಿ ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿಯ ಸಂಬಂಧಿಗಳು ಹಾಗೂ ಮಕ್ಕಳು ರಸ್ತೆಗಿಳಿದು ಕೆಲಕಾಲ ರಸ್ತೆತಡೆ ನಡೆಸಿ ಶನಿವಾರ ಪ್ರತಿಭಟನೆ ನಡೆಸಿದರು.
ಸಮರ್ಪಕ ಪೂರೈಕೆಯಿಲ್ಲ: ನಗರಸಭೆ ಸಿಬ್ಬಂದಿ ಹಾಗೂ ಕೆಲ ಇಲಾಖೆಯ ವ್ಯಕ್ತಿಗಳು ಸಿಬ್ಬಂದಿಗಳಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಇದರಿಂದಾಗಿ 2-3 ತಿಂಗಳಿಂದ ನಗರಸಭೆಯವರು ಸಮರ್ಪಕ ನೀರು ಪೂರೈಸುತ್ತಿಲ್ಲ. ಅಲ್ಲದೇ ಆಂಜನೇಯ ದೇವಸ್ಥಾನ ಆವರಣದಲ್ಲಿ ನಗರಸಭೆಯಿಂದ ಕೊಳವೆ ಬಾವಿ ಕೊರೆಯಲಾಗಿದೆ. ಇದರಿಂದ ಗುಂಪು ವಸತಿ ಗೃಹದ ಎಲ್ಲ ಮನೆಗಳಿಗೂ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ.
ಕೊಂಡು ತರುವ ದುಃಸ್ಥಿತಿ: ಕೊಳವೆ ಬಾವಿ ಅಕ್ಕಪಕ್ಕದ ಮನೆಯವರು ಅಗತ್ಯಕ್ಕಿಂತ ಹೆಚ್ಚಿನ ನೀರಿನ ಬಳಕೆಯಿಂದ ಕೆಳ ಭಾಗದ ಇತರ ಮನೆಗಳಿಗೆ ನೀರು ಸೂಕ್ತ ಪೂರೈಕೆಯಾಗದೇ ಕೊಡ ನೀರಿಗಾಗಿ ಪಕ್ಕದ ಓಣಿಯಲ್ಲಿರುವ ಕೊಳವೆ ಬಾವಿ, ಮನೆಗಳಿಂದ ನೀರು ತರುವ ದುಃಸ್ಥಿತಿ ಬಂದಿದೆ. ಹಣ ನೀಡಿ ಬಾಡಿಗೆ ವಾಹನಗಳ ಮೂಲಕ ನೀರನ್ನು ಕೊಂಡು ತರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನೀರಿಲ್ಲದೇ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಸಾರ್ವಜನಿಕರು, ಕೂಡಲೇ ಸಮರ್ಪಕ ನೀರು ಸರಬರಾಜಿಗೆ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಖಾಲಿ ಕೊಡಗಳನ್ನು ರಸ್ತೆಯಲ್ಲಿಟ್ಟು ನಗರಸಭೆ ಕಾರ್ಯವೈಖರಿ ಖಂಡಿಸಿ, ಅದರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
2 ದಿನದಲ್ಲಿ ಸರಿ ಮಾಡಲಾಗುವುದು: ಬಳಿಕ ವಾಟರ್ಮನ್ ಬಂದು 2-3 ದಿನಗಳಲ್ಲಿ ವ್ಯವಸ್ಥೆ ಸರಿಗೊಳ್ಳಲಿದೆ ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯಿಂದ ಹಿಂದೆ ಸರಿದರು. ಪ್ರತಿಭಟನೆಯಲ್ಲಿ ಎಂ.ಎನ್. ಮೊಕಾಶಿ, ಎಸ್.ವಿ. ಕೊಪ್ಪದ, ಎಂ.ಡಿ.ದೇವಕ್ಕಿ, ಎ.ಡಿ. ಭಜಂತ್ರಿ, ಎಂ.ಪಿ. ವಾದಿತ್ರ, ನೂರಅಹ್ಮದ್ ಕಲೀಫ್, ಷಣ್ಮುಖ ಭಜಂತ್ರಿ, ಜಿ. ಸುಂದರಮೂರ್ತಿ, ಸರೋಜಾ ಸವಣೂರು, ಮೋಹನ ಕೊರವರ, ರವಿಕಾಂತ ಹಿರೇಮಠ, ಇನ್ನಿತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

