ಚಾರಣ ತರುತ್ತೆ ಜೀವಕ್ಕೆ ಸಂಚಕಾರ!

-ದಯಾಶಂಕರ ಮೈಲಿ
ಹಾಸನ: ಜೀವನದಲ್ಲಿ ರಿಸ್ಕ್ ಇರಲಿ ಎಂದು ಚಾರಣ ಮಾಡುತ್ತಾರೆ, ಆದರೆ ಜೀವವನ್ನೇ ರಿಸ್ಕ್ಗೆ ತಳ್ಳಿಕೊಳ್ಳುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಇಲ್ಲಾಗುತ್ತಿರುವುದೂ ಅದೇ ಕಥೆ.
ಸಕಲೇಶಪುರ ತಾಲೂಕಿನ ಪಶ್ಚಿಮಘಟ್ಟ ಮತ್ತು ಸುಬ್ರಮಣ್ಯ ಮಧ್ಯೆ ಮತ್ತು ಸುತ್ತಮತ್ತ ಇರುವ ಕಾಡುಗಳಲ್ಲಿ ಚಾರಣಕ್ಕೆಂದು ಹೋಗಿ ಜೀವಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ.
ಅದು ಮೊನ್ನೆ ಜುಲೈ 26 ರ ಮುಂಜಾನೆ 5 ಗಂಟೆ. ಚೆನ್ನೈನಿಂದ ಬಂದ 14 ಮಂದಿ ತಂಡ ಸಕಲೇಶಪುರ ಮತ್ತು ಮಂಗಳೂರು ಗಡಿಭಾಗದಲ್ಲಿರುವ ಚೌಡೇಶ್ವರಿ ದೇವಾಲಯದ ಬಳಿಯಿಂದ ದಟ್ಟಾರಣ್ಯ ಪ್ರವೇಶಿಸಿದೆ. ಇದೇ ಸಂದರ್ಭದಲ್ಲಿ ಭಾರಿ ಮಳೆ, ಜರಿ-ತೊರೆಗಳೆಲ್ಲಾ ತೀವ್ರ ರಭಸದಿಂದ ಹರಿಯುತ್ತಿತ್ತು. ಇಡೀ ಕಾಡನ್ನು ಮೋಡ ಆವರಿಸಿತ್ತು. ಮುಂದಿನ ಒಂದಂಗುಲ ಜಾಗವೂ ಕಾಣುತ್ತಿರಲಿಲ್ಲ. ಇಷ್ಟಾಗಿಯೂ ಅವರು ಹುಚ್ಚು ಸಾಹಸಕ್ಕೆ ಕೈ ಹಾಕಿ ಇನ್ನೊಂದು ದಿನ ಚಾರಣ ಮಾಡಿದ್ದರೆ ಯಾರೂ ಜೀವಂತವಾಗಿ ಬರುತ್ತಿರಲಿಲ್ಲ. ಅದೃಷ್ಟವಶಾತ್ ತಿರುಗಿ ಬರುವ ನಿರ್ಧಾರ ಮಾಡಿದ್ದು ಪ್ರಾಣ ಉಳಿಸಿತು. ಆದರೆ ಈಗ ಪೊಲೀಸ್ ಅತಿಥಿಯಾಗಿದ್ದಾರೆ.
ಆಪತ್ತು ಹೇಗೆ?: ಇವು ಅಂತಿಂಥ ಕಾಡುಗಳಲ್ಲ. ದಟ್ಟಾರಣ್ಯಗಳು. ಮರಗಳ ಮೇಲೆ ಕಾರ್ಕೋಟಕ ವಿಷವಿರುವ ಘಟಸರ್ಪಗಳಿರುತ್ತವೆ. ಹುಲಿ, ಆನೆ, ಚಿರತೆ ಸೇರಿದಂತೆ ಕ್ರೂರ ಮೃಗಗಳ ತಾಣ ಇದು. ಜತೆಗೆ ರಕ್ತ ಹೀರುವ ಜಿಗಣೆಗಳು. ಇವುಗಳಿಗೆ ಮಾನವನ ವಾಸನೆ ಬಂದರೆ ಸಾಕು ಮೈಮೇಲೆ ಅಂಟಿಕೊಂಡು ರಕ್ತ ಹೀರುತ್ತವೆ. ಒಂದನ್ನು ಕಿತ್ತು ಹಾಕಿದರೆ, ಮತ್ತೊಂದು ರಕ್ತ ಹೀರುತ್ತಿರುತ್ತದೆ. ಹೀಗೆ ಒಂದಲ್ಲಾ ಒಂದು ಸಂಕಷ್ಟಗಳು ಎದುರಾಗುತ್ತವೆ.
ಸಾಯುತ್ತಿದ್ದರೂ: ಈ ಚೆನ್ನೈ ಮೂಲದ ಯುವಕರು ಚಾರಣಕ್ಕೆ ಹೋಗಿ ಬಂದ ಜಾಗಕ್ಕೇ 2006 ಜುಲೈ 6ರಂದು ಬೆಂಗಳೂರಿನ ಮೂವರು ಹೋಗಿದ್ದರು. ಆದರೆ ಅವರ್ಯಾರೂ ಜೀವಂತವಾಗಿ ಮರಳಲಿಲ್ಲ. ಕಾಡೆಲ್ಲ ಹುಡುಕಾಡಿದಾಗ ಇವರ ತಲೆ ಬುರುಡೆಗಳು ಮಾತ್ರ ಸಿಕ್ಕಿದ್ದವು. ಅದೂ ಇವರದ್ದೆಂದು ತಿಳಿದದ್ದು ಹೇಗೆ ಗೊತ್ತೇ? ಅಲ್ಲಿ ಮೃತಪಟ್ಟಿದ್ದವರಲ್ಲೊಬ್ಬರು ಚಿನ್ನದ ಹಲ್ಲನ್ನು ಕಟ್ಟಿಸಿಕೊಂಡಿದ್ದರು. ಅದರಿಂದ ಸಂಬಂಧಿಕರು ಪತ್ತೆ ಹಚ್ಚಿದರು. ಇಲ್ಲದಿದ್ದರೆ ಏನೂ ಸಿಗುತ್ತಿರಲಿಲ್ಲ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಮೃತಪಟ್ಟವರ ಪೈಕಿ ಒಬ್ಬರು ಚಾರಣದ ಬಗ್ಗೆ ಬೆಂಗಳೂರಿನಲ್ಲಿ ತರಬೇತಿ ನಡೆಸುತ್ತಿದ್ದರು.
2012ರಲ್ಲಿ ಕಬ್ಬಿನಾಲೆ ರಕ್ಷಿತಾರಣ್ಯ ಪ್ರದೇಶಕ್ಕೆ ಚಾರಣ ಹೋಗಿ ನೀರಿನಲ್ಲಿ ಮುಳುಗಿ ಒಬ್ಬರು ಮೃತಪಟ್ಟಿದ್ದರು. 2014 ಜು. 26ರಂದು ಚೆನ್ನೈ ಮೂಲಕ ಬೆಂಗಳೂರಿನಲ್ಲಿ ಉದ್ಯೋಗಿಗಳಾಗಿರುವ 14 ಮತ್ತು ಬೆಂಗಳೂರಿನವರೇ 7 ಜನರಿದ್ದ ಮತ್ತೊಂದು ತಂಡ ಅಪಾಯಕಾರಿ ಕಾಡಿಗೆ ಹೋಗಿ ಬಚಾವ್ ಆಗಿದ್ದಾರೆ. ಇವರ ಬಳಿ ಭೌಗೋಳಿಕ ಪ್ರದೇಶದ ದಿಕ್ಕುಗಳನ್ನು ತೋರಿಸುವ ಜಿಪಿಆರ್ಎಸ್ ಯಂತ್ರ ಇದ್ದರೂ ಕಾಡಿನಲ್ಲಿ ತಪ್ಪಿಸಿಕೊಂಡಿದ್ದಾರೆ.
ನಿರ್ಲಕ್ಷ್ಯ: ರಕ್ಷಿತಾರಣ್ಯ ಪ್ರವೇಶ ಮಾಡುವುದಿದ್ದರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕು. ಅನುಮತಿ ಇಲ್ಲದ ಪ್ರವೇಶ ಕಾನೂನು ಬಾಹಿರ. ಹೀಗಿದ್ದಾಗ ಅರಣ್ಯ ಇಲಾಖೆಯವರು ಹಾಗೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಆದರೆ ಅವಘಡ ಸಂಭವಿಸಿದ ಒಂದೆರಡು ತಿಂಗಳು ಎಚ್ಚರವಹಿಸುವುದು ಬಿಟ್ಟರೆ, ಮತ್ತೆ ದಿವ್ಯ ನಿರ್ಲಕ್ಷ್ಯ ತಳೆಯುತ್ತಾರೆ.
ಇಂಥ ಅವಘಡ ತಪ್ಪಿಸುವುದು ಕಷ್ಟಕರವಲ್ಲ. ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಜಂಟಿಯಾಗಿ ಗಸ್ತು ತಿರುಗಬೇಕು. ಜತೆಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಎಚ್ಚರಿಕೆಯ ನಾಮಫಲಕ ಹಾಕಬೇಕು. ಹೀಗೆ ಕೆಲವು ಕ್ರಮಗಳನ್ನು ಪ್ರಾಮಾಣಿಕವಾಗಿ ಜಾರಿಗೊಳಿಸಿದರೇ ಅನಾಹುತ ತಪ್ಪಿಸಬಹುದು.
-ಕಿಶೋರ್ ಕುಮಾರ್, ಮಲೆನಾಡು ಹೋರಾಟ ಸಮಿತಿ ಅಧ್ಯಕ್ಷ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


