ಹಾಸನ

ಪ್ರಕೃತಿ- ಮಹಿಳೆ ರಕ್ಷಣೆ ಅಗತ್ಯ

Published On :

ಸಕಲೇಶಪುರ: ಪ್ರಕೃತಿ ಹಾಗೂ ಮಹಿಳೆ ಇಂದು ಅಪಾಯದಲ್ಲಿದ್ದು, ಅವರನ್ನು ರಕ್ಷಿಸ ಬೇಕಾಗಿರುವ ಜವಾಬ್ದಾರಿ ಪ್ರಜ್ಞಾವಂತ ಸಮಾಜದ ಮೇಲಿದೆ ಎಂದು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಸುಶೀಲ ಸೋಮಶೇಖರ್ ಹೇಳಿದ್ದಾರೆ.
 ಶನಿವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ  ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಪಂಚದಲ್ಲಿ ಉತ್ತಮ ಸಂಸ್ಕೃತಿ ಹೊಂದಿರುವ 5 ರಾಷ್ಟ್ರಗಳಲ್ಲಿ ಭಾರತವು ಒಂದಾಗಿದೆ. ಇಂತಹ ಸಂಸ್ಕೃತಿಗೆ ಮುಖ್ಯ ಕಾರಣ ಮಹಿಳೆ, ಇಂತಹ ಹೆಣ್ಣಿಗೆ ಮಾನ್ಯತೆ ಕಲ್ಪಿಸಬೇಕಾಗಿರುವುದು ಇಂದಿನ ನಾಗರಿಕ ಪ್ರಪಂಚದ ಕರ್ತವ್ಯ ಎಂದರು.
 ಇಂದು ರಾಜ್ಯದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಹೆಣ್ಣು ಸಹ ತಮಗೆ ನೀಡಿರುವ ಸ್ವಾತಂತ್ರ್ಯವನ್ನು ಸ್ವೇಚ್ಚಾಚಾರವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಚಾರವಂತ ಹೆಣ್ಣನ್ನು ಎಲ್ಲರು ಪೂಜಿಸುತ್ತಾರೆ ಎಂದು ಹೇಳಿದರು.
ಪಶ್ಚಿಮಘಟ್ಟ ರಕ್ಷಿಸಿ: ತಾಲೂಕಿನ ಪಶ್ಚಿಮಘಟ್ಟದ ಮೇಲೆ ಅಭಿವೃದ್ದಿ ಹೆಸರಿನಲ್ಲಿ ನಿರಂತರ ಅತ್ಯಚಾರಗಳು ನಡೆಯುತ್ತಿದೆ. ಅರಣ್ಯ ನಾಶವಾದರೆ ಮಾನವ ಜನಾಂಗಕ್ಕೆ ಉಳಿಗಾಲವಿಲ್ಲ ಎಂಬ ಸತ್ಯ ತಿಳಿದಿದ್ದರು ಇಂತಹ ಕೆಲಸಕ್ಕೆ ಮುಂದಾಗುತ್ತಿರುವುದು ಬೇಸರದ ಸಂಗತಿ ಎತ್ತಿನಹೊಳೆ ನಮ್ಮ ತಾಲೂಕಿನಲ್ಲಿ ಹರಿಯುತ್ತಿದ್ದು ನಮ್ಮ ತಾಲೂಕಿನಲ್ಲೆ ಕಾಮಗಾರಿ ಕೈಗೊಳ್ಳಬೇಕಿದೆ. ಆದರೆ ಕೋಲಾರದಲ್ಲಿ ಗುದ್ದಲಿ ಪೂಜೆ ನೆರವೇರಿಸಿದ ಸರ್ಕಾರದ ಉದ್ದೇಶವೇನು  ಎಂದು ಪ್ರಶ್ನಿಸಿದರು.
 ಮಲೆನಾಡ ಮಣ್ಣಿಗೆ ಕವಿಗಳನ್ನು ಸೃಷ್ಟಿಸುವ ಶಕ್ತಿ ಇದೆ. ಈ ಮಣ್ಣಿನ ಹಲವರು ಉತ್ತಮ ನಾಡಿನ ಉತ್ತಮ ಕವಿಗಳಾಗಿದ್ದಾರೆ. ಇಂದಿಗೂ ಅನೇಕ ಅದ್ಬುತ ಸಾಧಕರು ಗ್ರಾಮೀಣ ಪ್ರದೇಶದಲ್ಲಿ ಎಲೆಮರೆಯ ಕಾಯಿಯಂತಿದ್ದು ಇವರನ್ನು ಗುರುತಿಸಿ ಬೆಳಸ ಬೇಕಾಗಿರುವುದು ಕಸಾಪ ಹಾಗೂ ಕನ್ನಡಪರ ಸಂಘಟನೆಗಳ ಕೆಲಸವಾಗಿದೆ ಎಂದು ಹೇಳಿದರು.
ಭಾಷೆ ಬೆಳವಣಿಗೆ ಬಳಕೆಯಲ್ಲಿದೆ: ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆ ಅದರ ಬಳಕೆಯಲ್ಲಿ ಅಡಕವಾಗಿದೆ. ಯಾವುದೇ ಭಾಷೆಯನ್ನು ತಮ್ಮ ಬದುಕಿನಲ್ಲಿ  ಅಧಿಕವಾಗಿ ಬಳಸಿಕೊಂಡಷ್ಟು ಭಾಷೆ ಬೆಳೆಯುತ್ತದೆ. ತಪ್ಪಿದಲ್ಲಿ ಸಂಸ್ಕೃತ ಹಾಗೂ ಪಾಲಿ ಭಾಷೆಯಂತೆ ಒಂದು ಕಾಲಕ್ಕೆ ಕನ್ನಡ ಭಾಷೆಯು ನಶಿಸಿ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ಭಾಷೆ ಬರಿ ವಾಹಕವಲ್ಲ: ಗಮಕ ಕಲೆಯ ವಿದ್ವಾಂಸ ವೈ.ಕೆ.ಮುದ್ದುಕೃಷ್ಣ ಮಾತನಾಡಿ, ಕನ್ನಡ ಭಾಷೆ ಬರೀ ವಾಹಕವಲ್ಲ ಅದೊಂದು ಜೀವನದ ಮಾರ್ಗ. ಇಂತಹ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳಸಲು ಪ್ರತಿಯೊಬ್ಬ ಕನ್ನಡಿಗನು ಹೋರಾಡುವುದು ಇಂದು ಅನಿವಾರ್ಯವಾಗಿದೆ. ಬದುಕಿನ ಪ್ರತಿಯೊಂದು ಹಂತದಲ್ಲೂ ಕನ್ನಡ ಬಳಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಉನ್ನತಿಗೆ ಶ್ರಮಿಸ ಬೇಕು ಎಂದರು.
 ಸಾಹಿತಿ ಸುಬ್ಬು ಹೊಲೆಯರ್ ಮಾತನಾಡಿ, ಕನ್ನಡ ಭಾಷೆ ಹಾಗೂ ಬದುಕಿನ ನಡುವೆ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ನಮ್ಮ ಪೂರ್ವಿಕರು ಕನ್ನಡ ಸಾಹಿತ್ಯ ಸಮ್ಮೇಳದಂತಹ ನುಡಿಹಬ್ಬ ಆಚರಣೆಗೆ ಚಾಲನೆ ನೀಡಿದರು ಎಂದು ತಿಳಿಸಿದರು.
ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನಾಧ್ಯಕ್ಷೆ ಸುಶೀಲ ಸೋಮಶೇಖರ್ ಅವರನ್ನು  ಪಟ್ಟಣದ ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಡೊಳ್ಳುಕುಣಿತ ವೀರಗಾಸೆಯ  ಮೂಲಕ ಪಟ್ಟಣದ ಮುಖ್ಯ ಬೀದಿಯಲ್ಲಿ  ಆದ್ದೂರಿಯಾಗಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಈ ವೇಳೆ ಹಲವು ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
 ವೇದಿಕೆಯಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್, ತಾಲೂಕು ಕಸಾಪ ಗೌರವಾಧ್ಯಕ್ಷೆ ಚನ್ನವೇಣಿ ಎಂ ಶೆಟ್ಟಿ, ಕಸಾಪ ಜಿಲ್ಲಾಧ್ಯಕ್ಷ ಡಾ.ಜನಾಧನ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಎಂ ಮಂಜುನಾಥ್, ನೌಕರರ ಸಂಘದ ಅಧ್ಯಕ್ಷ ಪ್ರಕಾಶ್, ಗುರುವೇಗೌಡ ಕಲ್ಯಾಣ ಮಂಟಪದ ಅಭಿವೃದ್ಧ ಸಮಿತಿ ಅಧ್ಯಕ್ಷ ಬಸವಣ್ಣ, ಡಿವೈಎಸ್ಪಿ ಸ್ನೇಹ, ತಹಸೀಲ್ದಾರ್ ಪಾರ್ವತಿ, ಇಒ ಭಜಂತ್ರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.