ಹಾಸನ

ಕಾಯ್ದೆ ಬಲಗೊಳ್ಳಲಿ

Published On :

ಕನ್ನಡಪ್ರಭ ವಾರ್ತೆ, ಅರಸೀಕೆರೆ, ಜು 21
ಸಮಾಜ ಎಚ್ಚೆತ್ತುಕೊಳ್ಳದ ಹೊರತು ಅತ್ಯಾಚಾರದಂತಹ ಪಿಡುಗನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ನ್ಯಾಯಮೂರ್ತಿ  ಭಾಸ್ಕರ ರಾವ್ ಅಭಿಪ್ರಾಯಪಟ್ಟರು.
 ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುವ ಮಾರ್ಗಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅತ್ಯಾಚಾರವೆಸಗುವಂತಹ ನೀಚರನ್ನು ಸಮಾಜ ಬಹಿಷ್ಕರಿಸಬೇಕು. ಅತ್ಯಾಚಾರ ತಡೆ ಸಂಬಂಧ ಈಗಾಗಲೇ ಕಠಿಣ ಕಾನೂನು ರೂಪಿಸಲಾಗಿದ್ದು ಇದನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದರು.
ನೈತಿಕ ಶಿಕ್ಷಣ ನೀಡಿ: ಸರ್ಕಾರ ಶಾಲಾ ಹಂತದಲ್ಲಿಯೇ ನೈತಿಕ ಶಿಕ್ಷಣ ಬೋಧನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಪಠ್ಯವಸ್ತುವನ್ನು ಮತ್ತಷ್ಟು ಉತ್ತಮಗೊಳಿಸಬೇಕು. ಶಾಲಾ ವಿದ್ಯಾರ್ಥಿಗಳನ್ನು ಇಂಟರ್‌ನೆಟ್, ಮೊಬೈಲ್‌ನಂತಹ ಚಟದಿಂದ ದೂರವಿಡಲು ಪೋಷಕರು ಪ್ರಯತ್ನಿಸಬೇಕು.  ಅತ್ಯಾಚಾರದಂತಹ ಪ್ರಕರಣಗಳು ಸಂಭವಿಸಿದ ವೇಳೆಯಲ್ಲಿ ಮಹಿಳೆಯರು ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡದೆ ದೂರು ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.  ಅನಧಿಕೃತ ಗಣಿಗಾರಿಕೆ ಹಾಗೂ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಅಧಿಕಾರಿಗಳಿಗೆ ಕಾನೂನಿನ ಚೌಕಟ್ಟಿನಲ್ಲಿ ತನಿಖೆ ನಡೆಸಲಾಗುವುದು  ಎಂದರು. ತಹಸೀಲ್ದಾರ್ ನಟರಾಜ್, ಡಿವೈಎಸ್ಪಿ ಸಜಿತ್, ನಗರಠಾಣೆ  ವೃತ್ತ ನಿರೀಕ್ಷಕ ನಂದಕುಮಾರ್, ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಪುಷ್ಪಗುಚ್ಛ ನೀಡಿ ಬರಮಾಡಿಕೊಂಡರು.
ವಿದ್ಯಾರ್ಥಿನಿಯರು ಜಾಗೃತರಾಗಲಿ
ಅರಕಲಗೂಡು:  ವಯಸ್ಸಿನ ತಾರತಮ್ಯವಿಲ್ಲದೆ ಅತ್ಯಾಚಾರ ಪ್ರಕರಣಗಳು ನೆಡೆಯುತ್ತಿರುವುದು ಆತಂಕಕಾರಿ ಬೆಳೆವಣಿಗೆಯಾಗಿದ್ದು, ವಿದ್ಯಾರ್ಥಿನಿಯರು ಹೆಚ್ಚು ಜಾಗೃತರಾಗಬೇಕಿದೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಎಸ್.ರಾಜು ಸಲಹೆ ಮಾಡಿದರು.
 ಸೋಮವಾರ ಪಟ್ಟಣದ ಶಿಕ್ಷಕರ ಭವನದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಅತ್ಯಾಚಾರ ಪ್ರಕರಣಗಳು ಕುರಿತು ವಿದ್ಯಾರ್ಥಿನಿಯರಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ, ಇಂತಹ ಅಮಾನುಷ ಪ್ರಕರಣಗಳ ಬಗ್ಗೆ ಎಲ್ಲರೂ ಧ್ವನಿ ಎತ್ತಬೇಕಿದೆ ಎಂದರು.
ಮೊಬೈಲ್ ದುರ್ಬಳಕೆ ಬೇಡ: ಬಹುತೇಕ ವಿದ್ಯಾರ್ಥಿಗಳು ಮೋಬೈಲ್‌ನಲ್ಲಿನ ದೂರಸಂಪರ್ಕ ಜಾಲದಿಂದ ಅನೇಕ ಸಮಸ್ಯೆಗಳನ್ನು ಸ್ವಯಂಪ್ರೇರಿತವಾಗಿ ತಂದುಕೊಳ್ಳುತಿದ್ದಾರೆ. ಯಾವುದೇ ವಸ್ತು ಬಳಕೆ ಮಿತವಾಗಿದ್ದರೇ ಅದು ಆರೋಗ್ಯಕರವಾಗಿರುತ್ತದೆ ಎಂದರು.
ಪೊಲೀಸರ ನೇಮಕ: ನಾಳೆಯಿಂದಲೇ ಸ್ಥಳಕ್ಕೆ ಪೊಲೀಸರನ್ನು ನೇಮಿಸುವುದಾಗಿ ಸಿಪಿಐ ಮತ್ತು  ಪಿಎಸ್‌ಐ ಭರವಸೆ ನೀಡಿದರು. ಕಾಲೇಜು ಪ್ರಾಂಶುಪಾಲ ಗೋಪಾಲಕೃಷ್ಣ ಮಾತನಾಡಿದರು. ಪಿಎಸ್‌ಐ ರೇವಣ್ಣ, ಉಪನ್ಯಾಸಕ ಹರೀಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.