ಹಾಸನ

ಮಹಿಳೆಯರ ರಕ್ಷಿಸುವಲ್ಲಿ ಕಾನೂನು ವಿಫಲ

Published On :

ಹಾಸನ: ಹಲವಾರು ಕಾನೂನುಗಳು ಮತ್ತು  ನೂರಾರು ಯೋಜನೆಗಳು ಜಾರಿಯಲ್ಲಿದ್ದರೂ   ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆ ಮತ್ತು ಅಭಿವೃದ್ಧಿ ಸಂವಿಧಾನದ ಆಶಯದಂತೆ  ನೆರವೇರಿಲ್ಲ ಎಂಬುದು ಸತ್ಯ ಎಂದು  ಹೈಕೋರ್ಟ್ ನ್ಯಾಯಾಧೀಶ ಎನ್.ಕೆ. ಪಾಟೀಲ್ ವಿಷಾದಿಸಿದ್ದಾರೆ.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತದ ಆಶ್ರಯದಲ್ಲಿ ನಗರದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವುದರ ಬಗ್ಗೆ ಸಮಗ್ರ ಕಾರ್ಯ ಯೋಜನೆ- ಅನುಷ್ಠಾನ  ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಬಗ್ಗೆ ಅರಿವು-ನೆರವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪೌಷ್ಟಿಕತೆ ಕೊರತೆ: ಸುಸಂಸ್ಕೃತ ನಾಡಾದ ದೇಶವನ್ನು ಭವಿಷ್ಯದಲ್ಲಿ  ಮುನ್ನಡೆಸಬೇಕಾದ ಮುಗ್ದ ಮಕ್ಕಳು ಪೌಷ್ಟಿಕ ಆಹಾರ ಕೊರತೆಯಿಂದ ಅಸಮರ್ಪಕ ಆರೋಗ್ಯ ಸೇವೆಯಿಂದ, ಶಿಕ್ಷಣದ ಕೊರತೆಯಿಂದ ಈಗಲೂ ದೇಶದ ಕೆಲ ಭಾಗಗಳಲ್ಲಿ ನರಳುತ್ತಿದ್ದಾರೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಪೋಷಕರು, ಸಮಾಜ ಸೂಕ್ತ ಸಮಯದಲ್ಲಿ ಸ್ಪಂದಿಸದಲ್ಲಿ ಮಗುವಿನ ಭವಿಷ್ಯ ಮೊಟಕುಗೊಳಿಸಿದಂತಾಗುತ್ತದೆ ಎಂದು ಕಿವಿಮಾತು ಹೇಳಿದರು.
ಮಕ್ಕಳಲ್ಲಿನ ಅಪೌಷ್ಟಿಕತೆ ತಡೆಯಬೇಕಿದ್ದಲ್ಲಿ ಮಕ್ಕಳಿಗೆ ಕೇವಲ ಪೌಷ್ಟಿಕ ಆಹಾರವನ್ನು ಒದಗಿಸಿದರೆ ಸಮಸ್ಯೆ ತಡೆಯಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಸಮಿತಿ ಸಮಗ್ರವಾಗಿ  ಅಧ್ಯಯನ ನಡೆಸಿ ಪರಿಪೂರ್ಣವಾದ  ವರದಿ ತಯಾರಿಸಿ ಉಚ್ಚನ್ಯಾಯಾಲಯಕ್ಕೆ ಸಲ್ಲಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಹೈಕೋರ್ಟ್ ನ್ಯಾಯಾಧೀಶ ಕೆ.ಎಲ್. ಮಂಜುನಾಥ್, ಎ.ವಿ. ಚಂದ್ರಶೇಖರ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಜಿ. ನಿಜಗಣ್ಣನವರ್, ಜಿಲ್ಲಾಧಿಕಾರಿ  ವಿ.ಅನ್ಬುಕುಮಾರ್, ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಿಪಂ  ಸಿಇಒ ಉಪೇಂದ್ರಪ್ರತಾಪ್ ಸಿಂಗ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೆ. ಶಂಕರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಕೆ.ವಿ. ರುದ್ರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ,   ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಆರ್. ಬಸವರಾಜು ಇದ್ದರು.
ವಿಚಾರ ಮಂಡನೆ: ನಂತರ ನಡೆದ ಮೊದಲ ಅಧಿವೇಶನದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ತಡೆಗಟ್ಟುವ ಬಗ್ಗೆ  ವೈದ್ಯಕೀಯ ವಿಶ್ಲೇಷಣೆಯೊಂದಿಗೆ ತಜ್ಞರ ಸಲಹೆ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಮಕ್ಕಳ ತಜ್ಞ ಡಾ. ಪಿ.ಬಿ.ಕೆ. ಸಾಗರ್ ಹಾಗೂ ಮಕ್ಕಳ ತಜ್ಞ ಡಾ.ಜಿ.ಎಂ. ವೆಂಕಟೇಶ್ ವಿಚಾರ ಮಂಡಿಸಿದರು. ಎರಡನೇ ಅಧಿವೇಶನದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿ.ಆರ್. ಬಸವರಾಜು, ಸರ್ವಶಿಕ್ಷಣ ಅಭಿಯಾನದ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಫಣೀಶ್ ಮಾತನಾಡಿದರು.
72ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತ
ಯೂನಿಸೆಫ್‌ನ ಒಂದು ವರದಿ ಪ್ರಕಾರ ವಿಶ್ವದಲ್ಲಿ 5 ರಿಂದ 14 ವರ್ಷ ವಯಸ್ಸಿನ ಅಂದಾಜು 72 ಲಕ್ಷ ಮಕ್ಕಳು ಮೂಲ ಶಿಕ್ಷಣ ಅವಕಾಶದಿಂದ ವಂಚಿತರಾಗಿದ್ದಾರೆ ಎಂದು ವಿಷಾದಿಸಿದರು. 2002 ರಲ್ಲಿ ಸಂವಿಧಾನದಲ್ಲಿ ತರಲಾಗಿರುವ  86ನೇ ತಿದ್ದುಪಡಿ ಅನ್ವಯ 6 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಬಾಲ್ಯದ ಪಾಲನೆ ಮತ್ತು ಶಿಕ್ಷಣ ನೀಡುವ ಜವಾಬ್ದಾರಿ ರಾಜ್ಯ ಮತ್ತು ರಾಷ್ಟ್ರವಾಗಿದೆ. ಇದಲ್ಲದೆ ಸಂವಿಧಾನದ 86ನೇ  ತಿದ್ದುಪಡಿ ಮೂಲಕ ಅನುಚ್ಚೇದ 21 ಎ  ಅಡಿ 6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ಒದಗಿಸುವುದು ರಾಜ್ಯದ ಜವಾಬ್ದಾರಿಯಾಗಿದೆ ಎಂದು ಸಾರುವುದರ ಜತೆಗೆ ಶಿಕ್ಷಣ ಮಕ್ಕಳ ಮೂಲಭೂತ ಹಕ್ಕಾಗಿದೆ  ಎಂಬುದನ್ನು ಅನುಚ್ಚೇದ 21-ಎ ನಲ್ಲಿ  ಸಂವಿಧಾನ ಘೋಷಿಸಲಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.