ಹಾಸನ

ಬಾಡುತ್ತಿದ್ದ ಬೆಳೆಯ ಜೀವ ಉಳಿಸಿದ ಮಳೆ

Published On :

ರೈತರಲ್ಲಿ ಹರ್ಷ, ಹೇಮಾವತಿಗೆ ಹೆಚ್ಚಿನ ನೀರು
-ದಯಾಶಂಕರ ಮೈಲಿ
ಹಾಸನ: ಮಳೆಯ ಶಕ್ತಿಯೇ ಅಂಥದ್ದು.... ಮಳೆ ಇಳೆಯ ಜೀವ ಅನ್ನೋದು ಇದಕ್ಕೇನೆ... ಅಲ್ಲವೇ
ಹಾಸನ ಜಿಲ್ಲಾದ್ಯಂತ ಬಾಡಿ ನಶಿಸುವ ಹಂತದಲ್ಲಿ ಇದ್ದ ಬೆಳೆಗಳ ಜೀವವನ್ನು ಮಳೆ ಉಳಿಸಿದೆ. ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ, ಬೆಳೆಗಳನ್ನು ಉಳಿಸುವ ಮೂಲಕ ರೈತರಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಮೂಡಿಸಿದೆ.
 ಸರಿಯಾಗಿ ಜೂನ್‌ನಿಂದ ಆರಂಭವಾಗಬೇಕಾಗಿದ್ದ ಮಳೆ ಜುಲೈ ಹತ್ತಾದರೂ ಸುರಿದಿರಲಿಲ್ಲ. ಇದರಿಂದ ಸಾವಿರಾರು ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಬಿಸಿಲಿನ ಬೇಗೆಗೆ ಬಾಡಿ ಒಣಗುವ ಹಂತ ಮುಟ್ಟುತ್ತಿದ್ದವು. ಇಂಥಹ ಪರಿಸ್ಥಿತಿಯಲ್ಲಿ ಈಗಾಗುತ್ತಿರುವ ಮಳೆ ಬೆಳೆಗಳಿಗೆ ಜೀವ ನೀಡಿದೆ.  
ಮಳೆ ಆಶ್ರಿತ ಬೆಳೆ:  35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ, 16 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿರುವ ಆಲೂಗಡ್ಡೆ, 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಇರುವ ಉದ್ದು ಹೆಸರು ಮತ್ತಿತರ ದ್ವಿದಳ ಧ್ಯಾನಗಳ ಬೆಳೆಗಳಿಗೆ ಮಳೆ ಆಶ್ರಯ ನೀಡಿದೆ. ಹೊಳೆನರಸೀಪುರ, ಅರಕಲಗೂಡು ತಾಲೂಕುಗಳಲ್ಲಿ 1200 ಹೆಕ್ಟೇರ್ ಪ್ರದೇಶಲ್ಲಿ ಬೆಳೆದಿರುವ ಹೊಗೆಸೊಪ್ಪು ಚೇತರಿಸಿಕೊಳ್ಳುತ್ತಿದೆ.
 ಕಡೆ ಪಕ್ಷ ವಾರದ ಹಿಂದೆಯಾದರೂ ಇಂದಿನಂತೆ ಮಳೆ ಸುರಿದಿದ್ದರೇ ಇಳುವರಿ ಹೆಚ್ಚಾಗುತ್ತದೆ. ಈ ಮಳೆ ಹೀಗೆ ಮುಂದುವರಿದರೇ ಶೇ. 50 ರಷ್ಟು ಬೆಳೆ ಮಾತ್ರ ರೈತರ ಹಟ್ಟಿ ಸೇರಬಹುದು. ಏಕೆಂದರೆ ಸಕಾಲದಲ್ಲಿ ಮಳೆಯಾಗದೇ ಬೆಳೆಗಳ ಇಳುವರಿ ಕಡಮೆಯಾಗಿದೆ. ಹಾಗೇ ನೋಡಿದರೇ, ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಆಲೂಗಡ್ಡೆಗೆ ವಾರದ ಹಿಂದೆ ಮಳೆ ಬೇಕಿತ್ತು. ಆಗ ಬುಡದಲ್ಲಿ ಆಲೂಗಡ್ಡೆ ಗೆಂಡೆ ಕಟ್ಟುವ ಸಮಯ. ದುರಾದೃಷ್ಟವಶಾತ್ ಈ ಸಮಯದಲ್ಲಿ ಮಳೆ ಇಲ್ಲದೇ ಉಷ್ಣಾಂಶ ಹೆಚ್ಚಾಗಿತ್ತು. ಇದರಿಂದ ಗುಣಮಟ್ಟದ ಆಲೂಗಡ್ಡೆ ಲಭ್ಯವಾಗುವುದಿಲ್ಲ.
ಹೇಮಾವತಿಗೆ ಹೆಚ್ಚಿನ ನೀರು: ಈಗ ಹೇಮಾವತಿ ಜಲಾಶಯಕ್ಕೆ 4,000 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ.  ಹೊರ ಹರಿವು 250 ಕ್ಯೂಸೆಕ್. ಜಲಾಶಯದ ಇಂದಿನ ಮಟ್ಟ- 2877.50 ಅಡಿಗಳು, ಗರಿಷ್ಟ ಮಟ್ಟ- 2922 ಅಡಿಗಳು. ಜಲಾಶಯದ ನೀರಿನ ಸಂಗ್ರಹ ಸಾಮಾರ್ಥ್ಯ 37.103 ಟಿಎಂಸಿ.
 ಜು. 11 ರಂದು ಜಲಾಶಯಕ್ಕೆ ಕೇವಲ 1,500 ಕ್ಯೂಸೆಕ್ ನೀರು ಬರುತ್ತಿತ್ತು. ಈಗ ಡಬ್ಬಲ್ ಆಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಮತ್ತು ಜಲಾಶಯದ ಸುತ್ತಮುತ್ತ ಮಳೆ ಆಗುತ್ತಿದ್ದು, ಜಲಾಶಯಕ್ಕೆ ಇನ್ನೂ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆಗಳಿವೆ ಎನ್ನುತ್ತಾರೆ ಹೇಮಾವತಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್.
ಬತ್ತಕ್ಕೆ ಕಷ್ಟ: ಕಳೆದ ವರ್ಷ ಜು. 15 ರಂದು ಜಲಾಶಯ ಹೆಚ್ಚು ಕಡಿಮೆ ಭರ್ತಿಯಾಗಿತ್ತು.   ಇದರಿಂದ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿತ್ತು. ಆದರೆ ಈಗ ಅದು ಸಾಧ್ಯವಿಲ್ಲ. ಬತ್ತ ಮತ್ತಿತರ ಬೆಳೆಗಳನ್ನು ಬೆಳೆಯಲು ಈ ವರ್ಷ ಕಷ್ಟವಾಗಬಹುದು. ಒಂದು ವೇಳೆ ಮಳೆ ಸುರಿದರೇ ಮಾತ್ರ ಜಲಾಶಯದಿಂದ ಬತ್ತಕ್ಕೆ ನೀರು ಬಿಡುಗಡೆ ಮಾಡಬಹುದು. ಇಲ್ಲದಿದ್ದರೇ ಇಲ್ಲ ಎಂಬುದು ಕೃಷಿ ಇಲಾಖೆ ಉಪ ನಿರ್ದೇಶಕ ಶಿವರಾಜ್ ಅವರ ಖಚಿತ ನುಡಿ.

ಮಲೆನಾಡಲ್ಲಿ ಮಳೆಯ ಸೊಬಗು
ಜುಲೈ ಆರಂಭವಾದರೂ ಮಲೆನಾಡು ಪ್ರದೇಶಗಳಾದ ಸಕಲೇಶಪುರ, ಬೇಲೂರು ಮತ್ತು ಆಲೂರು ತಾಲೂಕುಗಳಲ್ಲಿ ಜನರು ಬಿಸಿಲ ಬೇಗೆ ತಾಳಲಾರದೇ ಕೊಡೆ ಹಿಡಿದು ಸಂಚರಿಸಬೇಕಿತ್ತು. ಆದರೆ ಈಗ ಮಲೆನಾಡಲ್ಲಿ ಭರ್ಜರಿ ಮಳೆಯಾಗುತ್ತಿದೆ. ಆದ್ದರಿಂದ ಈಗ ಮಳೆಯಲ್ಲಿ ಸಂಚರಿಸಲು ಕೊಡೆಗಳ ಆಶ್ರಯ ಪಡೆಯಲಾಗುತ್ತಿದೆ. ಈ ಮಳೆಯಿಂದ ಇದು ಕಾಫಿ, ಮೆಣಸಿಗೆ ಕೊಂಚ ಅನುಕೂಲವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.