'ಅತ್ಯಾಚಾರ ಹೆಚ್ಚಳದಿಂದ ವಿದೇಶಿಯರ ಮುಂದೆ ತಲೆ ತಗ್ಗಿಸುವಂತಹ ಸ್ಥಿತಿ'
ಕ.ಪ್ರ.ವಾರ್ತೆ ಹಾಸನ ಮಾ. 29
ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿದ್ದು, ಇದರಿಂದ ವಿದೇಶಿಯರ ಎದುರು ತಲೆ ತಗ್ಗಿಸಿ ನಿಲ್ಲುವಂತಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಲಕ್ಷ್ಮಿನಾರಾಯಣ ಆತಂಕ ವ್ಯಕ್ತಪಡಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹಾಸನ ಜಿಲ್ಲಾ ಲೈಂಗಿಕ ದೌರ್ಜನ್ಯ ನಿವಾರಣಾ ವೇದಿಕೆ ಸಮೀಪದ ಬೂವನಹಳ್ಳಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೇ. 20 ರಷ್ಟು ಹೆಣ್ಣು ಮಕ್ಕಳು ದಿನನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಪ್ರತಿ 45 ನಿಮಿಷಕ್ಕೆ ಒಂದು ಅತ್ಯಾಚಾರ ನಡೆಯುತ್ತಿದ್ದು, ಶೇ.50 ರಷ್ಟು ಮಾತ್ರ ದಾಖಲಾಗುತ್ತಿದೆ. ಬೆಳಕಿಗೆ ಬಾರದ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿವೆ ಎಂದು ವಿಷಾದಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಗಾರರಾದ ವಕೀಲೆ ಗಿರಿಜಾಂಬಿಕೆ ಮಾತನಾಡಿ, ಹಲವು ವಿಪರ್ಯಾಸಗಳು, ವೈರುಧ್ಯಗಳನ್ನು ಈ ದೇಶ ಹೊಂದಿದೆ. ಕಾನೂನಿನಿಂದ ಮಾತ್ರ ಅತ್ಯಾಚಾರ ತಡೆಯಲು ಸಾಧ್ಯವಿಲ್ಲ. ಶಾಲಾ ಹಂತದಲ್ಲಿ ಈ ಹಿಂದೆ ಇದ್ದಂತೆ ನೀತಿ ಪಾಠವೇ ಇಲ್ಲ ಎಂದು ಹೇಳಿದರು.
ವಕೀಲ ಚಂದ್ರಶೇಖರ ಮಾತನಾಡಿದರು. ಡಾ.ಹೇಮಲತಾ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದರೂ ಬದಲಾದ ಜೀವನ ಶೈಲಿಯಿಂದ ಮಾನವೀಯ ಅನುಕಂಪ, ಕಳಕಳಿ, ಮನುಷ್ಯತ್ವ, ವಿನಾಶದ ಅಂಚಿನಲ್ಲಿದೆ ಎಂದು ನುಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ , ಡಾ. ಸೌಮ್ಯ ದಿನೇಶ ಮಾತನಾಡಿದರು. ಡಾ. ಹೆಬ್ಬಾರ ಅಧ್ಯಕ್ಷತೆ ವಹಿಸಿದ್ದರು. ಕೆ.ಟಿ.ಜಯಶ್ರೀ ನಿರೂಪಿಸಿದರು. ಅನುಗನಾಳು ಕೃಷ್ಣಮೂರ್ತಿ ವಂದಿಸಿದರು. ಸೃಜಲಾ ಸಿರಿ ಕಲಾ ತಂಡದವರು ಮಂಗಳಾ ವೆಂಕಟೇಶ ನೇತೃತ್ವದಲ್ಲಿ ವಿಮೋಚನೆ ನಾಟಕ ಪ್ರದರ್ಶಿಸಿದರು. ರಂಗೋಲಿ ಸ್ಫರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪುಟಾಣಿ ನಮ್ರತಾ ಪ್ರಾರ್ಥಿಸಿದರು. ಮಹಿಳಾ ಸ್ವಸಹಾಯ ಸಂಘದ ನಾಗರತ್ನ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

