ಮತ ಸೆಳೆಯಲು ತೆರೆಮರೆಯ ಕಸರತ್ತು
ಅ.ರಾ.ಸುಬ್ಬರಾವ್
ಕನ್ನಡಪ್ರಭವಾರ್ತೆ.ಅರಕಲಗೂಡು.ಮಾ.5
ಇಲ್ಲಿನ ಪಟ್ಟಣ ಪಂಚಾಯಿತಿಯ 15 ವಾರ್ಡುಗಳ ಜನಪ್ರತಿನಿಧಿಗಳ ಆಯ್ಕೆಗೆ ಇನ್ನು ಕೇವಲ ಒಂದು ದಿನ ಬಾಕಿ ಇದ್ದು, ಈ ಸಂಬಂಧ ವಾರದಿಂದ ನಡೆದ ಪ್ರಚಾರದ ಭರಾಟೆಗೆ ಅಧಿಕೃತ ತೆರೆ ಬಿದ್ದಿದೆ.
ಆದರೂ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮತದಾರನ ಮತ ಸೆಳೆಯುವ ಸಲುವಾಗಿ ನಡೆಸುತ್ತಿರುವ ತೆರೆಮರೆಯ ಕಸರತ್ತು ಮಾತ್ರ ಮುಗಿದಿಲ್ಲ.
ಅಭ್ಯರ್ಥಿಗಳು ಮನೆಮನೆಗೆ ಒಬ್ಬೊಬ್ಬರೆ ತೆರಳಿ ಅಂತಿಮವಾಗಿ ಮತದಾರನ ಮನವೊಲಿಸಲು ಪ್ರಯತ್ನ ನಡೆಸುತ್ತಿದ್ದಾರೆ. ಇತ್ತ ಮತದಾರರಿಗೆ ಕರಪತ್ರ ಹಾಗೂ ಮಾದರಿ ಬ್ಯಾಲೆಟ್ ಪೇಪರ್ಗಳನ್ನು ಹಂಚುವ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಮತ್ತೊಂದೆಡೆ ಮತದಾರರಿಗೆ ಹೆಂಡ, ತುಂಡುಗಳ ಜೊತೆಗೆ ಓಟಿಗಾಗಿ ನೋಟು ನೀಡುವ ಕೆಲಸಗಳೂ ಸಾಗಿವೆ.ಮತ್ತೆ ಕೆಲವೆಡೆ ಅಲ್ಲಲ್ಲಿ ಕೆಲ ಅಭ್ಯರ್ಥಿಗಳು ಸೀರೆಗಳನ್ನು ಹಂಚುತ್ತಿದ್ದಾರೆಂಬ ಮಾತುಗಳೂ ವ್ಯಾಪಕವಾಗಿ ಕೇಳಿಬರುತ್ತಿದೆ.
ಗುಂಡು ತುಂಡಿನ ವ್ಯವಸ್ಥೆ ಬಗ್ಗೆ ಕೆಲ ಮತದಾರರು ಆಸಕ್ತಿ ಹೊಂದಿಲ್ಲವಾದರೂ ಊಟಕ್ಕೆ ಕರೆದಾಗ ಹೋಗದಿದ್ದರೆ ಅಭ್ಯರ್ಥಿಗಳು ಅನುಮಾನ ಪಡುತ್ತಾರೆ. ತಮ್ಮ ಬೆಂಬಲಿತ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡಿಸುವ ಸಲುವಾಗಿ ಮುಖಂಡ ಶಾಸಕ ಕಾಂಗ್ರೆಸ್ನ ಎ.ಮಂಜು, ಮಾಜಿ ಶಾಸಕ ಜೆಡಿಎಸ್ನ ಎ.ಟಿ.ರಾಮಸ್ವಾಮಿ ಹಾಗೂ ಎಲ್ಲ 15 ಕ್ಷೇತ್ರಗಳಲ್ಲೂ ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳ ಪರ ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದು, ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 10,704 ಮತದಾರರಿದ್ದು, ಮತದಾನಕ್ಕೆ ತಾಲೂಕು ಆಡಳಿತ ಸಕಲ ಸಿದ್ದತೆ ನಡೆಸಿದೆ. ಮತದಾನಕ್ಕೆ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವುದರಿಂದ ಈ ಸಂಬಂಧ ಅಭ್ಯರ್ಥಿಗಳ ಸಭೆ ಕರೆದು ಮಾಹಿತಿ ನೀಡಲಾಗಿದೆ.
ವಾರ್ಡುವಾರು ಸ್ಥಿತಿಗತಿ:
1ನೇ ವಾರ್ಡ್: ಪಟ್ಟಣದ ಹೊಲದ ಮನೆ,ಬೋಳಯ್ಯನಕೊಪ್ಪಲು, ಅರವಟ್ಟಿಗೆತಿಟ್ಟ,ಜಡಿಯನಕೊಪ್ಪಲು, ಭಂಗಿತಿಮ್ಮನಕೊಪ್ಪಲು, ಹೊರ ಉಪ್ಪಾರರ ಬೀದಿ, ಎನ್ಇಎಸ್ ಕಾಲೋನಿಗಳು ಈ ವಾರ್ಡಿಗೆ ಸೇರಿದ್ದು,ಇಲ್ಲಿ 699 ಮತದಾರರಿದ್ದಾರೆ. ಪುರುಷರು-355 ಹಾಗೂ 344 ಮಹಿಳಾ ಮತದಾರರು. ಹಿಂದುಳಿದ ವರ್ಗ(ಎ)ಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಶಾರದಮ್ಮ, ಕಾಂಗ್ರೆಸ್ನಿಂದ ಜಯಮ್ಮ ಗೋಪಾಲ್,ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಪದ್ಮ ನಲ್ಲೂರಯ್ಯ ಕಣದಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಜಯಮ್ಮ ಗೋಪಾಲ್ ಪುನರಾಯ್ಕೆ ಬಯಸಿದ್ದು, ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿದ್ದವರು. ಪ್ರತಿಸ್ಪರ್ಧಿ ಶಾರದಮ್ಮ ಕಳೆದ ಚುನಾವಣೆಯಲ್ಲಿ ಇದೇ ಜಯಮ್ಮ ಅವರೆದುರು ಸ್ಪರ್ಧಿಸಿ ಅತ್ಯಂತ ಕಡಿಮೆ ಅಂತರದಿಂದ ಸೋತಿದ್ದರು.ಈ ಬಾರಿಯೂ ಈ ಇಬ್ಬರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯಿಂದ ಎ.ಜೆ.ಮಮತ,ಪಕ್ಷೇತರ ಅಭ್ಯರ್ಥಿಯಾಗಿ ಕೆಂಪಮ್ಮ ಕಣದಲ್ಲಿದ್ದಾರೆ. ಮತದಾನ ಸ್ಥಳ- ಕೃಷಿ ಪಾಠಶಾಲೆ ಅರಕಲಗೂಡು
2 ನೇ ವಾರ್ಡು: ಅಂಗಡಿ ಬೀದಿ, ಪೊಲೀಸ್ ಕ್ವಾಟ್ರಸ್, ಬ್ರಾಹ್ಮಣರ ಬೀದಿ, ಉಪ್ಪಾರರ ಬೀದಿ, ಬಡಿಗರ ಬೀದಿ ಈ ವಾರ್ಡಿಗೆ ಸೇರಿದ್ದು,ಸಾಮಾನ್ಯ ವರ್ಗಕ್ಕೆ ಮೀಸಲು.596 ಮತದಾರರಿದ್ದು,302 ಪುರುಷರು,294 ಮಹಿಳೆಯರು.ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಎ.ಎಸ್.ರಾಮಸ್ವಾಮಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ.ಜೆಡಿಎಸ್ನಿಂದ ವೆಂಕಟೇಶ್ ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದಾರೆ. ಈ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.
ಈ ಮಧ್ಯೆ ರಮೇಶ್ ವಾಟಾಳ್ ಪೊಟ್ಯಾಟೋ ಕಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿದ್ದು, ಇವರು ಯಾರ ಮತ ಕಸಿಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.ಇವರು ಕಸಿಯುವ ಮತಗಳು ಒಬ್ಬರನ್ನು ಗೆಲ್ಲಿಸಿ ಮತ್ತೊಬ್ಬರನ್ನು ಸೋಲಿಸಲು ಕಾರಣವಾಗಬಹುದು.ಮತ್ತೊಬ್ಬ ಪಕ್ಷೇತರ ಅಭ್ಯರ್ಥಿ ಪಿ.ಮಂಜುನಾಥ್ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ಶಿವಣ ನರಸೇಗೌಡ ಕಣದಲ್ಲಿದ್ದಾರೆ.ಮತದಾನ ಸ್ಥಳ- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
3ನೇ ವಾರ್ಡು: ಪ.ಜಾತಿ ಮಹಿಳೆಗೆ ಮೀಸಲಾಗಿದ್ದು,ಮಂಡಿಕೇರಿ,ಗುಡ್ಡನಕೊಪ್ಪಲು, ಎಡಿ ಕಾಲೋನಿ ,ಕೋಟೆ ಹಿಂದಲ ಕೊಪ್ಪಲು, ಎಡಿ ಕಾಲೋನಿಗಳು ಈ ವಾರ್ಡಿಗೆ ಸೇರಿವೆ. 819 ಮತದಾರರಿದ್ದು, ಆ ಪೈಕಿ 454 ಪುರುಷ ಹಾಗೂ 365 ಮಹಿಳಾ ಮತದಾರರಿದ್ದಾರೆ.ಇಲ್ಲಿ ಜೆಡಿಎಸ್ನಿಂದ ಲಲಿತ,ಕಾಂಗ್ರೆಸ್ನಿಂದ ಹರದಮ್ಮ,ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ಗೌರಮ್ಮ ಕಣದಲ್ಲಿದ್ದು ಮತಗಳಿಕೆಗೆ ಪೈಪೋಟಿ ನಡೆಸಿದರೆ ಪಕ್ಷೇತರರಾಗಿ ಹೆಚ್.ಕೆ. ಶೋಭಾ ಕೃಷ ಮತ್ತು ಇ.ಆರ್.ಸುಮಿತ್ರ ಕಣದಲ್ಲಿದ್ದಾರೆ.ಮತದಾನ ಸ್ಥಳ-ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ, ಸಾಲಗೇರಿ.
4ನೇ ವಾರ್ಡು: ಒಟ್ಟು 667 ಮತದಾರರಿದ್ದು,335 ಪುರುಷ ಮತ್ತು 332 ಮಹಿಳಾ ಮತದಾರರಿದ್ದಾರೆ.ಈ ವಾರ್ಡಿಗೆ ಸಾಲಗೇರಿ,ಕೆಳಸಾಲಗೇರಿ,ಹಂಪಾಪುರ, ಎ ಕೆ ಕಾಲೋನಿ ಹಂಪಾಪುರ ಗ್ರಾಮಗಳು ಸೇರಿದ್ದು,ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಕಾಂಗ್ರೆಸ್ನಿಂದ ಎಚ್.ಜಿ.ಮಂಜಪ್ಪ,ಜೆಡಿಎಸ್ನಿಂದ ಶ್ರೀನಿವಾಸ,ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಎಸ್.ಟಿ.ಪ್ರಕಾಶ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಚಂದ್ರ ಕಣದಲ್ಲಿದ್ದಾರೆ.ಇಲ್ಲಿಯೂ ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಸೆಣಸಾಡಲಿದ್ದಾರೆ.
5ನೇ ವಾರ್ಡು: ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಲಗೇರಿ,ಮುಸಲ್ಮಾನರ ಬೀದಿ,ನಯನ ಕ್ಷತ್ರಿಯ ಬೀದಿ,ಅರಕಲಗೂಡು ಕೋಟೆ,ಈ ಪ್ರದೇಶಗಳು ಬರಲಿದ್ದು, 673 ಮತದಾರರಿದ್ದಾರೆ.358 ಪುರುಷರು ಮತ್ತು 315 ಮಹಿಳಾ ಮತದಾರರು.ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಿರುವ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಿ,ಕಾಂಗ್ರೆಸ್ನಿಂದ ಎಂ.ಕೆ.ಸಾಕಮ್ಮ,ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರರಾಗಿ ಯಶೋದಮ್ಮ ಕಣದಲ್ಲಿದ್ದಾರೆ.ಇಲ್ಲಿ ಕಾಂಗ್ರೆಸ್ನ ಎಂ.ಕೆ.ಸಾಕಮ್ಮ ಮತ್ತು ಜೆಡಿಎಸ್ನ ಕುಮಾರಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.ಮತದಾನ ಸ್ಥಳ-ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
6ನೇ ವಾರ್ಡು: 1055 ಮತದಾರರನ್ನು ಒಳಗೊಂಡಿರುವ ವಾರ್ಡಿನಲ್ಲಿ 504 ಪುರುಷರು ಮತ್ತು 451 ಮಹಿಳಾ ಮತದಾರರಿದ್ದಾರೆ. ಸಾಮಾನ್ಯ ಕ್ಷೇತ್ರ ಇದಾಗಿದ್ದು,ತೀವ್ರ ಜಿದ್ದಾ ಜಿದ್ದಿಯ ಕ್ಷೇತ್ರ ಇದಾಗಿದೆ.ಜನತಾ ಮನೆ,ಅರಕಲಗೂಡು-6 ,ಜನತಾ ಮನೆ,ಗ್ರಂಥಾಲಯ ರಸ್ತೆ,ಹೊಲದ ಮನೆ ಈ ವಾರ್ಡಿಗೆ ಸೇರಿದ್ದು,ಇಲ್ಲಿ ಕಾಂಗ್ರೆಸ್ನಿಂದ ಉದ್ಯಮಿ ಹೆಚ್.ಮಂಜುನಾಥ್ ,ಜೆಡಿಎಸ್ನಿಂದ ನಾಗರಾಜ,ಬಿಜೆಪಿಯಿಂದ ಗಿಡ್ಡೇಗೌಡ,ಪೊಟ್ಯಾಟೋ ಬೆಂಬಲಿತ ಪಕ್ಷೇತರ ಅಭ್ಯರ್ಥಿಯಾಗಿ ನಾಸಿರ್,ಹಾಗೂ ಮತ್ತೊಬ್ಬ ಪಕ್ಷೇತರ ಅಭ್ಯರ್ಥಿಯಾಗಿ ಎ.ಪಿ.ರಮೇಶ್ ಕಣದಲ್ಲಿದ್ದಾರೆ.ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ನಡುವೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸಮಾನ ಪೈಪೋಟಿ ನಡೆಸಿದಉ್ದಾರೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ಶೆಟ್ಟಿಗೌಡರ ಪುತ್ರ ಮಂಜುನಾಥ್ ಪ್ರಥಮ ಬಾರಿಗೆ ಕಣಕ್ಕೆ ಧುಮುಕಿರುವುದಲ್ಲದೇ, ಪಟ್ಟಣ ಪಂಚಾಯಿತಿ ಸದಸ್ಯ ಎ.ಪಿ.ರಮೇಶ್ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಪುನರಾಯ್ಕೆ ಬಯಸಿದ್ದಾರೆ.ಮತದಾನ ಸ್ಥಳ-ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಜನತಾ ಕಾಲೋನಿ.
7ನೇ ವಾರ್ಡು: 582 ಮತದಾರರನ್ನು ಹೊಂದಿದ್ದು,ಪುರುಷರು ಮತ್ತು ಮಹಿಳೆಯರು ತಲಾ 291ಮತಗಳ ಸಮಬಲ ಹೊಂದಿದ್ದಾರೆ. ಹಿಂದುಳಿದ ವರ್ಗ-ಬಿ ಗೆ ಮೀಸಲಿರುವ ಕ್ಷೇತ್ರದ ವ್ಯಾಪ್ತಿ ಕೆಇಬಿ ರಸ್ತೆ,7 ಮತ್ತು 9ನೇ ಬ್ಲಾಕ್ ಜೆಡಿಎಸ್ನಿಂದ ಕೆ.ಎನ್.ಅಶ್ವಿನಿ,ಕಾಂಗ್ರೆಸ್ನಿಂದ ಹೆಚ್.ಎಂ.ನಿರಂಜನ,ಬಿಜೆಪಿ.ಯಿಂದ ಪಿ.ಟಿ.ಕೇಶವೇಗೌಡ,ಪೊಟ್ಯಾಟೋ ಬೆಂಬಲಿತ ಪಕ್ಷೇತರರಾಗಿ ವಿಶ್ವೇಶ್ವರಯ್ಯ ಕಣದಲ್ಲಿದ್ದಾರೆ.ಇಲ್ಲಿಯೂ ಕಾಂಗ್ರೆಸ್ಮ್ತ್ತು ಜೆಡಿಎಸ್ ನಡುವೆ ಹಣಾಹಣಿ ಏರ್ಪಡುವ ಸಾಧ್ಯತೆಗಳಿದೆ.ಪಕ್ಷೇತರ ಅಭ್ಯರ್ಥಿ ಯಾರ ಮತ ಕಸಿಯುತ್ತಾರೆ ಎಂಬುದನ್ನು ಕಾದು ನೋಡಬೇಕು.ಮತದಾನ ಸ್ಥಳ- ಪಟ್ಟಣ ಪಂಚಾಯಿತಿ ಕಚೇರಿ.
8ನೇ ವಾರ್ಡು: 754 ಮತದಾರರನ್ನು ಹೊಂದಿದೆ.ಈ ಪೈಕಿ ಪುರುಷರು-386,ಮಹಿಳೆಯರು-368. ಕುರುಬರ ಬೀದಿ,ಪೇಟೆ ಮಾಚಗೌಡನಹಳ್ಳಿ ಮತದಾರರು ಮತ ಚಲಾಯಿಸಲಿದ್ದು,ಈ ಕ್ಷೇತ್ರ ಹಿಂದುಳಿದ ವರ್ಗ(ಎ) ಗೆ ಮೀಸಲಾಗಿದೆ.ಇಲ್ಲಿ ಜೆಡಿಎಸ್ನಿಂದ ಕಾಂತರಾಜು ಮತ್ತು ಕಾಂಗ್ರೆಸ್ನಿಂದ ಬೀರಪ್ಪ ಸ್ಪರ್ಧಿಸಿದ್ದು,ಇಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ.ಮತದಾನ ಸ್ಥಳ-ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆ ಪೇಟೆ ಮಾಚಗೌಡನಹಳ್ಳಿ
9ನೇ ವಾರ್ಡು: 547 ಮತದಾರರಿದ್ದು,270 ಪುರುಷ ಹಾಗೂ 275 ಮಹಿಳಾ ಮತದಾರರಿದ್ದಾರೆ. ಕುರುಬರ ಬೀದಿ, ತೆಲುಗರ ಬೀದಿ, ದೊಡ್ಡನಾಯಕನ ಕೊಪ್ಪಲು ಈ ವಾರ್ಡಿನ ವ್ಯಾಪ್ತಿಗೆ ಸೇರಿದ್ದು, ಕಾಂಗ್ರೆಸ್ನಿಂದ ಮಂಜುಳ,ಜೆಡಿಎಸ್ ನಿಂದ ರಾಣಿ ಮತ್ತು ಪೊಟ್ಯಾಟೋ ಕ್ಲಬ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಎ.ವಿ.ಮಂಜುಳ ಮಾದೇಶ್ ಕಣದಲ್ಲಿದ್ದಾರೆ.
ಈ ಮೂವರ ನಡುವೆ ತೀವ್ರ ಪೈಪೋಟಿ ಇದ್ದು ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡು ಬರುತ್ತಿದೆ.ವಿಜಯಲಕ್ಷ್ಮಿ ಯಾರ ಕೊರಳಿಗೆ ಕಾದು ನೋಡಬೇಕಿದೆ.ಮತದಾನ ಸ್ಥಳ-ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಪೇಟೆ
10ನೇ ವಾರ್ಡು: ಮತದಾರರು-432,ಪುರುಷರು-211,ಮಹಿಳೆಯರು-221. ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ಕ್ಷೇತ್ರ ವ್ಯಾಪ್ತಿ ಪೇಟೆ ಮುಖ್ಯ ರಸ್ತೆ,ಬಸವನಗುಡಿ ಬೀದಿ.ಇಲ್ಲಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸಮಾಜಸೇವಕ ಎ.ಜಿ.ರಾಮನಾಥ್,ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕೇಶ್,ಬಿಜೆಪಿ ಅಭ್ಯರ್ಥಿಯಾಗಿ ಸಂಜಯ್,ಪೊಟ್ಯಾಟೋ ಕ್ಲಬ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ಮದ್ಯಂತರ ಮಂಡಲ ಪಂಚಾಯಿತಿ ಅಧ್ಯಕ್ಷ ಪಿ.ಎನ್.ರಂಗನಾಥ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

