ಜೆಡಿಎಸ್ಗೆ ಬಂಡೆಯಾಗಿರುವ ಬಂಡಾಯ...
ಹಾಸನ: ಇಲ್ಲಿನ ನಗರಸಭೆಯ ಚುನಾವಣೆ ಪ್ರಚಾರ ವೈಖರಿ ಹಿಂದಿನದಕ್ಕೆ ಹೋಲಿಸಿಕೊಂಡರೆ ಏನೇನು ಅಲ್ಲ ಅಂತಾನೇ ಹೇಳಬಹುದು. ಆಯೋಗದ ನೀತಿ ಸಂಹಿತೆಯ ಭಯ ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದೆ. ನಗರ ಪೊಲೀಸ್ ಠಾಣೆಯಲ್ಲಿ ಪಕ್ಷೇತರ ಅಭ್ಯರ್ಥಿಯೊಬ್ಬರು ಮಾತ್ರ ಆಟೋ ಮೂಲಕ ಧ್ವನಿವರ್ಧಕದಲ್ಲಿ ಪ್ರಚಾರ ಮಾಡಲು ಅನುಮತಿ ಪಡೆದುಕೊಂಡಿದ್ದಾರೆ. ಉಳಿದವರು ಯಾರೂ ಪಡೆದಿಲ್ಲ. ಇದು ಪ್ರಚಾರ ಅಬ್ಬರ ಹಿಂದಿನಂತೆ ಇಲ್ಲ ಎಂಬುದಕ್ಕೆ ಸಾಕ್ಷಿ ಎಂದೇ ಹೇಳಬಹುದು.
ಅಭ್ಯರ್ಥಿಗಳು ಮತ್ತವರ ಬೆಂಬಲಿಗರು ಜನ ಮನ ಒಲಿಸಲು ಮನೆ ಮನೆಗೆ ಹೋಗಿ ಕರಪತ್ರ ನೀಡಿ ಮತ ಕೇಳುತ್ತಿರುವುದಲ್ಲದೇ, ಕೆಲವು ಹಿರಿಯ ಮತದಾರರಿಗೆ ಅಡ್ಡಡ್ಡ ಬಿದ್ದು ಕಾಲಿಗೆ ನಮಸ್ಕಾರ ಮಾಡುತ್ತಿರುವುದು ಕಂಡು ಬಂದಿದೆ. ಸದ್ಯ ಪರಿಸ್ಥಿತಿ ಅವಲೋಕನ ಮಾಡಿದರೆ ಜೆಡಿಎಸ್, ಕಾಂಗ್ರೆಸ್ ಆಗಲಿ ಇತರೇ ಪಕ್ಷಗಳಾಗಲಿ ಎಲ್ಲಾ ಕಡೆ ಪೈಪೋಟಿ ಒಡ್ಡುತ್ತಿಲ್ಲ. ಬದಲಿಗೆ 35 ವಾರ್ಡ್ಗಳ ಪೈಕಿ 8 ವಾರ್ಡ್ಗಳಲ್ಲಿ ಜೆಡಿಎಸ್ ಟಿಕೆಟ್ ಸಿಗದೇ ಬೇಸತ್ತು ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕೆ ಧುಮುಕಿರುವ ಮಂದಿಗೆ ಸ್ಪರ್ಧೆ ಒಡ್ಡುತ್ತಿರುವುದು ಕಂಡು ಬಂದಿದೆ.
ಮಾವ - ಸೊಸೆಯೇ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿದ್ದಾರೆ. ಅಂತಿಮವಾಗಿ ಮತದಾರರು ತೆನೆ ಹೊತ್ತ ಮಹಿಳೆಗೆ ಒಲಿಯುವ ಮೂಲಕ ಬಂಡಾಯಕ್ಕೆ ತಕ್ಕ ಉತ್ತರ ನೀಡುವರೇ ಅಥವಾ ಬಂಡಾಯಗಾರರಿಗೆ ಬಂಡೆಯಂತೆ ನಿಲ್ಲುವರೇ ಎಂಬ ಕುತೂಹಲ ಉಂಟಾಗಿದೆ.
ವಾರ್ಡ್ ನಂ 3 ರಲ್ಲಿ 2007 ರಲ್ಲಿ ಜೆಡಿಎಸ್ನಿಂದ ಗೆದ್ದು ಪ್ರಥಮ ಬಾರಿಗೆ ನಗರಸಭೆ ಪ್ರವೇಶಿಸಿದ್ದ ಎಚ್.ಎಂ. ಸುರೇಶ್ಕುಮಾರ್ ಈಗ ಪಕ್ಷಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಆಟೋ ಗುರುತು ಪಡೆದು ಗೆಲ್ಲಲು ಅವಿರತ ಶ್ರಮ ಹಾಕುತ್ತಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಕೃಷ್ಣೇಗೌಡರನ್ನು ಗೆಲ್ಲಿಸಿಕೊಳ್ಳಬೇಕೆಂಬ ಹಠಕ್ಕೆ ಜೆಡಿಎಸ್ ಮುಖಂಡರು ಬಿದ್ದಿದ್ದಾರೆ. ಅದಕ್ಕಾಗಿ ಬೇಕಾದ ಕಸರತ್ತನ್ನು ನಡೆಸುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಆರ್. ಕೃಷ್ಣಮೂರ್ತಿ ಮತದಾರರ ಕಣ್ಣಿಗೆ ಡಮ್ಮಿಯಂತೆ ಕಾಣುತ್ತಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಇಲ್ಲ. ಬಂಡಾಯ ಅಭ್ಯರ್ಥಿ ಮತ್ತು ಜೆಡಿಎಸ್ ಅಧಿಕೃತ ಅಭ್ಯರ್ಥಿ ನಡುವೆ ಸೆಣಸಾಟ ನಡೆಯುತ್ತಿದೆ.
ಶಾಸಕ ಪ್ರಕಾಶ್ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡುವ ಬಗ್ಗೆ ಪ್ರತ್ಯೇಕ ಸಭೆ ನಡೆಸುವ ಮೂಲಕ ಸುರೇಶ್ಕುಮಾರ್ ಕನಿಷ್ಠ ರಾಜಕಾರಣಿಯಾಗಿ ಗರಿಷ್ಠ ಚಟುವಟಿಕೆ ನಡೆಸಿದರು. ಇದು ಅವರಿಗೆ ಟಿಕೆಟ್
ತಪ್ಪಲು ಪ್ರಮುಖ ಕಾರಣ ಎನ್ನಲಾಗಿದೆ. ಅಲ್ಲದೇ ಜೆಡಿಎಲ್ಪಿ ನಾಯಕ ರೇವಣ್ಣನವರನ್ನು ನೇರವಾಗಿ ಬಂದು ಟಿಕೆಟ್ ನೀಡಿದ್ದರೇ ಟಿಕೆಟ್ ದಕ್ಕುತ್ತಿತ್ತು ಎಂದು ಕೂಡ ಹೇಳಲಾಗುತ್ತಿದೆ.
ವಾರ್ಡ್ ನಂ 6 ರಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಮೋಹನ್ಕುಮಾರ್ (ಅಂಗಡಿ ಸ್ವಾಮಿ ) ಪಕ್ಷೇತರ ಅಭ್ಯರ್ಥಿಯಾಗಿ ಹೋರಾಟ ಮಾಡುತ್ತಿದ್ದಾರೆ. ಶಾಸಕ ಎಚ್.ಎಸ್. ಪ್ರಕಾಶ್ ಆಪ್ತ ಮಿತ್ರ ಎಂಬ ಏಕೈಕ ಕಾರಣಕ್ಕಾಗಿ 2 ನೇ ಬಾರಿಗೆ ಜೆಡೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವ ಎಚ್.ಎಸ್. ಪ್ರಸನ್ನ ಕೃಷ್ಣಮೂರ್ತಿ ಬಂಡಾಯ ಅಭ್ಯರ್ಥಿ ಜೊತೆಗೆ ಕಮಲ ಪಕ್ಷದ ಎಸ್. ಲೋಕೇಶ್ ಹಾಗೂ ಕಾಂಗ್ರೆಸ್ನ ಕುಮಾರಸ್ವಾಮಿ ಅವರೊಡನೆ ಸೆಣಸುತ್ತಿದ್ದಾರೆ. ಬಂಡಾಯ ಇಲ್ಲದಿದ್ದರೆ ಪ್ರಸನ್ನಕುಮಾರ್ ಗೆಲ್ಲುವುದು ಕಷ್ಟವಾಗುತ್ತಿರಲಿಲ್ಲ.
ಬಿಜೆಪಿಯಿಂದ ನಗರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿದ್ದರೂ ಬಿಜೆಪಿಯಿಂದ ಸ್ಪರ್ಧಿಸಲು ಹಿಂದೇಟು ಹಾಕಿ ವಕೀಲ ಕೆ.ಎಸ್. ಶ್ಯಾಮಸುಂದರ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿದೆ. ಏಕೆಂದರೆ ನಗರಸಭೆಗೆ ನಾಮ ನಿರ್ದೇಶನರಾಗಲು ಬಿಜೆಪಿ ಬೇಕು. ಚುನಾವಣೆಗೆ ನಿಲ್ಲಲು ಬಿಜೆಪಿ ಬೇಡ ಎಂಬುದು ಸರಿಯೇ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ವಾರ್ಡ್ ನಂ 8: ಇಲ್ಲೂ ಜೆಡಿಎಸ್ನ ಬಂಡಾಯ ಎಂಬ ಬಂಡೆಗೆ ತಲೆ ಚಚ್ಚಿ ಕೊಳ್ಳುವಂತಾಗಿದೆ. ನಗರಸಭೆ ಮಾಜಿ ಅಧ್ಯಕ್ಷ ಚನ್ನವೀರಪ್ಪನವರ ಸೊಸೆ ನೇತ್ರಾವತಿ ಗಿರೀಶ್ ಅವರಿಗೆ 2 ನೇ ಬಾರಿ ಜೆಡಿಎಸ್
ಟಿಕೆಟ್ ನೀಡಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನೇತ್ರಾವತಿ ನಗರಸಭೆ ಅಧ್ಯಕ್ಷರಾಗಿ ಉತ್ತಮವಾಗಿಯೇ ಕಾರ್ಯ ನಿರ್ವಹಿಸಿದ್ದರು. ಪದವೀಧರೇ ನೇತ್ರಾವತಿ ಈಗ ತಮ್ಮ ಪಕ್ಷದವರೇ ಆದ ತಾರಾ ಪುಟ್ಟಸ್ವಾಮಿ ಅವರ ವಿರುದ್ಧ ಹೋರಾಟ ಮಾಡಬೇಕಾಗಿದೆ. ಕಾಂಗ್ರೆಸ್ ನಿರೀಕ್ಷಿತ ರೀತಿಯಲ್ಲಿ ಹೋರಾಟ ನೀಡುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಇಲ್ಲಿಲ್ಲ. ಪುಟ್ಟಸ್ವಾಮಿ ಅವರು ಜೆಡಿಎಸ್ಗೆ ನಿಷ್ಠಾವಂತರೇ. ಏಕೋ ಏನೋ ಟಿಕೆಟ್
ನೀಡಲಿಲ್ಲ. ಇದರಿಂದ ಬೇಸತ್ತು ಪಕ್ಷೇತರಾಗಿ ಸ್ಪರ್ಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

