ಹಾಸನ

ನಗರಸಭೆ ಚುನಾವಣೆ: 29 ನಾಮಪತ್ರ ತಿರಸ್ಕೃತ

Published On :

ಹಾಸನ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಾಮಪತ್ರಗಳ ಪರಿಶೀಲನೆ ಕಾರ್ಯ ಸೋಮವಾರ ನಡೆದಿದ್ದು, ಹಾಸನ ನಗರಸಭೆಯ ನಾನಾ ವಾರ್ಡ್‌ಗಳಲ್ಲಿ ಒಟ್ಟು 29 ನಾಮಪತ್ರ ತಿರಸ್ಕೃತಗೊಂಡಿವೆ.
ವಾರ್ಡ್ 1ರಿಂದ 7ರವರೆಗೆ 60 ನಾಮಪತ್ರ ಸ್ವೀಕೃತಗೊಂಡಿದ್ದು, ಒಟ್ಟು 11 ನಾಮಪತ್ರ ತಿರಸ್ಕೃತಗೊಂಡಿವೆ. 49 ನಾಮಪತ್ರ ಕ್ರಮಬದ್ಧವಾಗಿದ್ದು, ಅಂಗೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಜಿಲ್ಲಾ ಪಂಚಾಯ್ತಿ ಡಿ ಅರ್‌ಡಿಎ ಕೋಶದ ಯೋಜನಾ ನಿರ್ದೇಶಕ ಕೆ.ಎಂ.ಜಗದೀಶ್ ತಿಳಿಸಿದ್ದಾರೆ. ವಾರ್ಡ್ 8ರಿಂದ 14ರವರೆಗೆ ಒಟ್ಟು 55 ನಾಮಪತ್ರ ಸ್ವೀಕರಿಸಲಾಗಿದ್ದು, ಅದರಲ್ಲಿ 3 ನಾಮಪತ್ರ ತಿರಸ್ಕೃತಗೊಂಡಿವೆ. ವಾರ್ಡ್ 9, 10 ಮತ್ತು 14 ರಿಂದ ತಲಾ 1 ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ ನೂರುದ್ದೀನ್ ಷರೀಫ್ ತಿಳಿಸಿದ್ದಾರೆ. ನಗರದ ವಾರ್ಡ್ 15ರಿಂದ 21ರವರೆಗೆ 68 ನಾಮಪತ್ರ ಪೈಕಿ ಒಟ್ಟು 9 ನಾಮಪತ್ರ ತಿರಸ್ಕೃತಗೊಂಡಿದ್ದು, 59 ನಾಮಪತ್ರ ಅಂಗೀಕರಿಸಲ್ಪಟ್ಟಿವೆ. ವಾರ್ಡ್ 15, 16, 19, 20, 21ರಲ್ಲಿ ತಲಾ 1 ನಾಮಪತ್ರ ತಿರಸ್ಕೃತಗೊಂಡಿದ್ದು, ವಾರ್ಡ್ 17 ಮತ್ತು 18ರಲ್ಲಿ ತಲಾ 2 ನಾಮಪತ್ರ ತಿರಸ್ಕೃತಗೊಂಡಿವೆ ಎಂದು  ಚುನಾವಣಾ ಅಧಿಕಾರಿ ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
ವಾರ್ಡ್ 22ರಿಂದ 28ರವರೆಗೆ 3 ನಾಮಪತ್ರ ತಿರಸ್ಕೃತಗೊಂಡಿದ್ದು, 52 ನಾಮಪತ್ರ ಅಂಗೀಕರಿಸಲಾಗಿದೆ. ವಾರ್ಡ್ 22, 23 ಮತ್ತು 26ರಿಂದ ತಲಾ ಒಂದೊಂದು ತಿರಸ್ಕೃತಗೊಂಡಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಸಿ. ಚಿದಾನಂದ ಹೇಳಿದ್ದಾರೆ. ವಾರ್ಡ್ 29ರಿಂದ 35ರವರೆಗೆ ಒಟ್ಟು 63 ನಾಮಪತ್ರಗಳಲ್ಲಿ 3 ನಾಮಪತ್ರ ತಿರಸ್ಕೃತಗೊಂಡಿವೆ. ವಾರ್ಡ್ 32, 33, 34ರಲ್ಲಿ ತಲಾ ಒಂದು ತಿರಸ್ಕೃತಗೊಂಡಿದ್ದು 60 ನಾಮಪತ್ರ ಅಂಗೀಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ವಿ.ನಾಗರಾಜ್ ತಿಳಿಸಿದ್ದಾರೆ. ಜಿಲ್ಲಾ ಎಸ್ಪಿ ಅಮಿತ್‌ಸಿಂಗ್ ಸಹಾಯಕ ಜಿಲ್ಲಾ ಎಸ್ಪಿ ಯಡಾ ಮಾರ್ಟಿನ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಸುನಿಲ್‌ಕುಮಾರ್ ಉಪಸ್ಥಿತರಿದ್ದರು.

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೆ ಸೂಚನೆ
ಚುನಾವಣೆ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಅಕ್ರಮ ಮದ್ಯ ತಯಾರಿಕೆ, ದಾಸ್ತಾನು, ಸಾಗಾಣಿಕೆ ಹಾಗೂ ಸರಬರಾಜು ಮಾಡುವ ಬಗ್ಗೆ ನಿಗಾ ವಹಿಸುವಂತೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಪಿ. ಮೋಹನರಾಜ್ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಅಬಕಾರಿ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ವಿಭಾಗದ ವಿಶೇಷ ಪೊಲೀಸ್ ಸಿಬ್ಬಂದಿ ತಾಲೂಕು, ಹೋಬಳಿವಾರು ಕೆಲಸ ಹಂಚಿಕೆ ಮಾಡಿಕೊಂಡು ಅಕ್ರಮ ಮದ್ಯ ಮಾರಾಟ ಬಗ್ಗೆ ಗಮನ ಹರಿಸುವಂತೆ ತಿಳಿಸಿದರು. ಹಾಗೂ ಸಾರ್ವಜನಿಕರು ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರು ನೀಡಲು ಸಹಕಾರಿಯಗುವಂತೆ ಕಾರ್ಯ ನಿರ್ವಹಿಸುವ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನು ಪ್ರಚಾರ ಪಡಿಸಲು ಕ್ರಮ ವಹಿಸುವಂತೆ ಸೂಚಿಸಿದರು. ಅಕ್ರಮ ಮದ್ಯ  ಮಾರಾಟ ಕುರಿತು ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ದಾಖಲಿಸಿಕೊಂಡು ಕ್ರಮ ವಹಿಸಿರುವ ಬಗ್ಗೆ ಪ್ರತಿ ಮಾಹೆ ವರದಿ ನೀಡಬೇಕು. ಮದ್ಯ ಮಾರಾಟಕ್ಕೆ ಪರವಾನಗಿ ಹೊಂದಿಲ್ಲದ ಇತರೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ದೂರು ಬಂದಾಗ ಅಂತಹ ಅಂಗಡಿಗಳನ್ನು ಕನಿಷ್ಠ ಒಂದು ತಿಂಗಳು ಬಾಗಿಲು ಮುಚ್ಚಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.