ಜನಪದ ಆಹಾರ ಮೇಳ, ಕಲಾ ಉತ್ಸವ ನಾಳೆ
ಹಾಸನ: ಜನಪದ ಆಹಾರ ಮೇಳ ಹಾಗೂ ಕಲಾ ಉತ್ಸವ ಕಾರ್ಯಕ್ರಮ ಫೆ.24 ರಂದು ನಗರ ಕಸಾಪ ಭವನದಲ್ಲಿ ನಡೆಯಲಿದೆ ಎಂದು ಜಾನಪದ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ಡಾ. ಹಂಪನಹಳ್ಳಿ ತಿಮ್ಮೇಗೌಡ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾ ಘಟಕವನ್ನು ಕೇಂದ್ರ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ, ಪ್ರಸಿದ್ಧ ಜನಪದ ಕಲಾವಿದರ ಕಲಾ ಉತ್ಸವ ಕಾರ್ಯಕ್ರಮವನ್ನು ಶಾಸಕ ಎಚ್.ಎಸ್. ಪ್ರಕಾಶ್ ಉದ್ಘಾಟಿಸುವರು. ಜನಪದ ಆಹಾರ ಮೇಳ ಮತ್ತು ಮಾರಾಟದ ಮಳಿಗೆಯನ್ನು ಖ್ಯಾತ ಜಾನಪದ ತಜ್ಞ ಹಿ.ಶಿ. ರಾಮಚಂದ್ರೇಗೌಡ ಚಾಲನೆ ನೀಡುವರು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ನಗರೀಕರಣದ ಪ್ರಭಾವಕ್ಕೆ ಒಳಗಾಗಿರುವ ನಾವು ಗ್ರಾಮೀಣ ಪ್ರದೇಶದ ಜಾನಪದ ಪರಂಪರೆ ಹಾಗೂ ಹಳ್ಳಿಯ ಸೊಗಡನ್ನು ಮರೆಯುತ್ತಿರುವ ಸಂದರ್ಭದಲ್ಲಿ ಈ ಮೇಳ ನಡೆಸುತ್ತಿರುವುದು ಔಚಿತ್ಯ ಪೂರ್ಣವಾಗಿದೆ ಎಂದು ಅವರು ಹೇಳಿದರು.
ಬಾಯಿ ಚಪ್ಪರಿಸುವ ದೇಸಿ ಅಡಿಗೆ: ಜನಪದ ಆಹಾರ ಮೇಳ ಮತ್ತು ಮಾರಾಟದ 20 ಮಳಿಗೆಯಲ್ಲಿ ಅಂದು ಶಾವಿಗೆ-ಕಾಯಿಹಾಲು, ನಾಟಿ ಕೋಳಿಸಾರು, ರೊಟ್ಟಿ-ಹಲಸಿನ ಬಡಕು ಪಲ್ಯ, ಹುಚ್ಚೆಳ್ಳು ಚಟ್ನಿ, ಬಾಳೆ ದಿಂಡಿನ ಪಲ್ಯ, ಮಲೆನಾಡು ಮಾದರಿ ಹಂದಿ ಮಾಂಸದ ಕರಿ-ರೊಟ್ಟಿ, ನಾಮದ ಹಲಗೆ, ಹಾಲುಬಾಯಿ, ರಾಗಿ ಹಲ್ವ, ಗಿಣ್ಣ, ಹುರಳಿಕಟ್ಟು, ಅಂಗು ಸಿಹಿತಿಂಡಿ, ಕಡುಬು ಕೋಳಿಸಾರು, ಮೀನಿನ ಕರಿ, ಕಜ್ಜಾಯ, ಚಕ್ಕುಲಿ, ಕೋಡುಬಳೆ, ತಂಬಿಟ್ಟು, ಚಿಗಳಿ ಉಂಡೆ, ಕೆಸುವಿನ ಪಲ್ಯ, ನೀರುದೋಸೆ, ಜೋಳದ ರೊಟ್ಟಿ-ಎಣ್ಣೆಗಾಯಿ, ವಿವಿಧ ರೀತಿಯ ಪಾನಕಗಳು ದೊರಕಲಿವೆ ಎಂದರು.
ಮಾಂಸದ ಕರಿ, ಮಡಕೆ ಮಜ್ಜಿಗೆ, ಬೆಲ್ಲದ ಕಡ್ಲೆ ಪಾಯಸ, ಹಸಿ ಮೊಳಕೆ ಕಾಳು, ಪುಟ್ಟಿಟ್ಟು, ಹೋಳಿಗೆ, ಮದ್ದೂರು ವಡೆ ಇತ್ಯಾದಿ ಬಾಯಿ ಚಪ್ಪರಿಸುವ ದೇಸಿ ಆಹಾರ ತಯಾರಿಸಿ ಮಾರಾಟ ಮಾಡಲಾಗುವುದು ಎಂದು ಹೇಳಿದರು.
ಜಾನಪದ ಪರಿಷತ್ ಜಿಲ್ಲಾ ಘಟಕ ಗೌರವಾಧ್ಯಕ್ಷ ಆರ್.ಪಿ. ವೆಂಕಟೇಶ್ಮೂರ್ತಿ ಆಹಾರ ಮೇಳ ಸಂಚಾಲಕ ಬಿ.ಇ. ಶಿವರಾಮೇಗೌಡ, ಕಾರ್ಯದರ್ಶಿ ಟೆ.ಪಿ. ಪುಟ್ಟರಾಜ್, ಖಜಾಂಚಿ ಡಾ. ಐ.ಎಂ. ಮೋಹನ್, ಸದಸ್ಯ ಎಂ.ಆರ್. ರಂಗಸ್ವಾಮಿ ಇತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

