ಸಂಪರ್ಕ ಸೇವೆಗಳ ಹೊಸ ಯೋಜನೆಗಳು
ಗುಲ್ಬರ್ಗ: ವಿವಿಧ ಕಡೆ ಅಧಿಕ ಸಂಖ್ಯೆಯಲ್ಲಿ ಗ್ರಾಹಕರಿಗಾಗಿ ಬಿ.ಎಸ್.ಎನ್.ಎಲ್. ಮೇಳ ಆಯೋಜಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆಯಬೇಕೆಂದು ರಾಜ್ಯಸಭಾ ಸದಸ್ಯ ಬಸವರಾಜ ಪಾಟೀಲ ಸೇಡಂ ತಿಳಿಸಿದರು. ಅವರು ಇತ್ತೀಚಿಗೆ ಗುಲ್ಬರ್ಗ ದೂರ ಸಂಪರ್ಕ ಇಲಾಖೆಯಲ್ಲಿ ಆಯೋಜಿಸಿದ್ದ ದೂರವಾಣಿ ಸಲಹೆಗಾರರ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ದೂರಸಂಪರ್ಕ ಜಿಲ್ಲಾ ಮಹಾಪ್ರಬಂಧಕ ವಾಯ್. ಶಿವಶಂಕರರೆಡ್ಡಿ ಮಾತನಾಡುತ್ತ ಬಿಎಸ್ಎನ್ಎಲ್.ಸಲಹಾ ಸಮಿತಿ ಸದಸ್ಯರ ಸಲಹೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳು ಹಾಗೂ ಸದಸ್ಯರೆಲ್ಲರು ಸಹಕರಿಸಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಸಭೆಯಲ್ಲಿ ಕೋರಲಾಯಿತು.
ಅಪರ ಮಹಾಪ್ರಬಂಧಕರಾದ ಸಿ.ರಾಮಚಂದ್ರನ್ ಸ್ವಾಗತಿಸಿ ದೂರವಾಣಿ ಪ್ರಗತಿ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಉಪಮಹಾಪ್ರಬಂಧಕ ಎಂ.ಕೆ.ವಗ್ಗೇರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವಂದನಾರ್ಪಣೆಗೈದರು. ಬಿ.ಎಸ್.ಎನ್.ಎಲ್ ಸಹಾಯಕ ನಿರ್ದೇಶಕ ಎಚ್.ಸಿ.ರಾಠೋಡ ಅವರು ಹಿಂದಿನ ಸಭೆಯಲ್ಲಿ ಜರುಗಿದ ಸಭೆಯ ನಡುವಳಿಕೆಗಳನ್ನು ತಿಳಿಹೇಳಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಸಲಹಾ ಸಮಿತಿ ಸದಸ್ಯರಾದ ಮಹಾದೇವಯ್ಯ ಬಿ.ಕರದಳ್ಳಿ. ಉಪಸ್ಥಿತರಿದ್ದರು.
ಉದ್ಯೋಗ ಮೇಳ ನಾಳೆ
ಗುಲ್ಬರ್ಗ: ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರಗಳ ಆ್ತಶ್ರಯದಲ್ಲಿ ಜು.2ರಂದು ಬೆ.10 ರಿಂದ ಸಂಜೆ 4ರವರೆಗೆ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಐಟಿಐ ಹಾಗೂ ಡಿಪ್ಲೋಮಾ ಉತ್ತೀರ್ಣ ಅಥವಾ ಅನ್ನುತ್ತೀರ್ಣರಾದವರು ಭಾಗವಹಿಸಬಹುದು. ವಿವಿಧ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸುತ್ತಿದ್ದು, ಬೆಂಗಳೂರು ಅಥವಾ ಹೈದ್ರಾಬಾದಿನಲ್ಲಿ ಉದ್ಯೋಗ ಕೈಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಬಿಸಿನೆಸ್ ಡೆವಲಪ್ಮೆಂಟ್ ಆಫೀಸರ್ ರೇವಣಸಿದ್ದಯ್ಯ ಎಸ್. ನೀಲಾ ಅವರನ್ನು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಗುಲ್ಬರ್ಗದಲ್ಲಿ ಭೇಟಿ ನೀಡಿ. ಅಥವಾ 08472- 274 846ಕ್ಕೆ ಸಂಪರ್ಕಿಸಿ.
ಗ್ರಾ ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ
ಆಳಂದ: ತಾಲೂಕಿನ ನರೋಣಾ ಗ್ರಾಮ ಪಂಚಾಯತ ಎರಡನೇ ಅವಧಿಗಾಗಿ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಹಾಂತಪ್ಪಾ ಬೋಧನ ಹಾಗೂ ಉಪಾಧ್ಯಕ್ಷೆಯಾಗಿ ಸುಜಾತಾ ಮಠಪತಿ ಅವರು ಅವಿರೋಧವಾಗಿ ಆಯ್ಕೆಯಾದರು. ಗ್ರಾ.ಪಂ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯನ್ನು ತಹಸೀಲ್ದಾರ ಬಸವರಾಜ ಅಂಬರಶೆಟ್ಟಿ ನಡೆಸಿಕೊಟ್ಟರು. ಒಟ್ಟು ಹತ್ತೊಂಬತ್ತು ಸದಸ್ಯರಲ್ಲಿ ಹದಿನೆಂಟು ಜನ ಸದಸ್ಯರು ಪಾಲ್ಗೊಂಡು ಅವಿರೋಧ ಆಯ್ಕೆಗೆ ಬೆಂಬಲ ವ್ಯಕ್ತಪಡಿಸಿದರು. ಸದಸ್ಯರಾದ ನಾಗಪ್ಪಾ ಡೆಂಕಿ, ಮುಖಂಡರಾದ ಶಿವಕುಮಾರ ಸರಸಂಬಿ, ಬಸವರಾಜ ಚಿತಲಿ, ಪಿಡಿಓ ಪೀರಪ್ಪಾ ಸಜ್ಜನ ಹಾಗೂ ಗ್ರಾ.ಪಂ ಸದಸ್ಯರು ಭಾಗವಹಿಸಿದರು. ಚುನಾವಣಾ ಪ್ರಕ್ರಿಯೇ ಶಾಂತಿಯುತವಾಗಿ ಜರುಗಿತು. ನಂತರ ಗ್ರಾಮದ ಕ್ಷೇಮಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಗ್ರಾಮದ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಅಧ್ಯಕ್ಷ, ಉಪಾಧ್ಯಕ್ಷರು ಭರವಸೆ ನೀಡಿದರು.
ದಲಿತ ಪ್ಯಾಂಥರ್ ಪದಾಧಿಕಾರಿಗಳ ಆಯ್ಕೆ
ಚಿಂಚೋಳಿ: ಭಾರತೀಯ ದಲಿತ ಪ್ಯಾಂಥರ್ ತಾಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಅಧ್ಯಕ್ಷರಾಗಿ ರುದ್ರಮುನಿ ರಾಮತೀರ್ಥಕರ ಆಯ್ಕೆಯಾಗಿದ್ದಾರೆ ಎಂದು ರಾಜ್ಯಾಧ್ಯಕ್ಷ ಮಲ್ಲಪ್ಪಾ ಹೊಸಮನಿಕರ್ ತಿಳಿಸಿದ್ದಾರೆ.ಪದಾಧಿಕಾರಿಗಳು: ರುದ್ರಮುನಿ ರಾಮತೀರ್ಥಕರ- ಅಧ್ಯಕ್ಷ, ಅನುರಾಜ ಬುಗಡಿಕರ್, ಲಕ್ಷ್ಮಣ ಮೇತ್ರಿ (ಉಪಾಧ್ಯಕ್ಷ) ನಾಗರಾಜ ಚಕ್ರವರ್ತಿ (ಪ್ರಧಾನ ಕಾರ್ಯದರ್ಶಿ) ಅರುಣಕುಮಾರ ರಂಗನೂರ- ಸಹ-ಕಾರ್ಯದರ್ಶಿ, ವಿದ್ಯಾಸಾಗರ ಪಟವಾದಿಕರ- ಸಂಘಟನಾ ಕಾರ್ಯದರ್ಶಿ, ಶಿವಕುಮಾರ ಜಟ್ಟೂರ- ಖಜಾಂಚಿ.
ಮಣ್ಣೆತ್ತಿನ ಸಂಭ್ರಮ
ಆಳಂದ: ತಾಲೂಕಿನ ಖಜೂರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಣ್ಣೆತ್ತಿನ ಮೂರ್ತಿಗೆ ಕಂಡಾ, ಮಗಡಾ, ಮುಗದಾಣಿ, ಜಂಗ, ಸರಜಂಗ, ಗೊಂಡ್ಯಾಗಳಿಂದ ಸಿಂಗರಿಸಿ ಊರಿನ ತುಂಬಾ ಬಾಜಾ ಭಜಂತ್ರಿಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನಂತರ ಊರಿನ ಹನುಮಾನ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಳೆ ಬೆಳೆ ಚೆನ್ನಾಗಿ ಆಗಿ ರೈತರಿಗೆ ಮತ್ತು ಜಾನುವಾರುಗಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದರು. ಗುರುಬಸಪ್ಪಾ, ಮಹಾದೇವೆ, ಪ್ರಭುಲಿಂಗ, ವೀರೇಶ ಹಳ್ಳೆ, ಸಿದ್ಧರಾಮ, ವಿನೋದ ಹಳ್ಳೆ, ಬಸಯ್ಯಾ ಸ್ವಾಮಿ, ಪ್ರವೀಣ, ಕುಮಾರ, ಮಂಜುನಾಥ ಹಂಬಳೆ, ಕುಮಾರ ತುಪ್ಪಾದೊಡ್ಡೆ, ಮಲ್ಲಿನಾಥ, ಗುರುನಾಥ, ಸಿದ್ದಾರಾಮ, ಕರ್ಣಕುಮಾರ, ಲೋಕೇಶ ನೂರಾರು ಯುವಕರು ಮೆರವಣಿಗೆಯಲ್ಲಿದ್ದರು.
ಮಳೆ ಗಾಳಿಗೆ ನೆಲಕಚ್ಚಿದ ರೇಷ್ಮೆ ಹುಳು ಸಾಕಣೆ ಕೇಂದ್ರ
ಆಳಂದ: ಮಳೆ, ಗಾಳಿಗೆ ತೋಟಗಾರಿಕಾ ಬೆಳೆಗಳು ಸೇರಿದಂತೆ ಇನ್ನಿತರ ಕೃಷಿಗೆ ಸಂಬಂಧಿಸಿದ ಸಾಮಾಗ್ರಿ ಹಾನಿಗೀಡಾಗಿವೆ. ಕಡಗಂಚಿ ಗ್ರಾಮದ ಪ್ರಗತಿಪರ ರೇಷ್ಮೆ ಬೆಳೆಗಾರ ಕಾಶಿನಾಥ ಚೆಂಗಟಿ ಅವರ ಹೊಲದಲ್ಲಿನ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರ ಹಾನಿಯಾಗಿದೆ. ಸಾವಿರಾರು ರು. ಖರ್ಚು ಮಾಡಿ ನಿರ್ಮಿಸಿದ ಸಾಕಾಣಿಕೆ ಕೇಂದ್ರದಲ್ಲಿ ರೇಷ್ಮೆ ತಳಿಗೆ ಸಂಬಂಧಿಸಿದ ವಿವಿಧ ತರಹದ ಹುಳುಗಳು ಸಾಕಾಣಿಕೆ ಮಾಡಲಾಗುತ್ತಿತ್ತು. ಹೊಲದಲ್ಲಿ ಬೆಳೆದು ನಿಂತ ರೇಷ್ಮೆ ಬೆಳೆಗಳು ಮಳೆ, ಗಾಳಿಗೆ ಸಂಪೂರ್ಣವಾಗಿ ನೆಲಕಚ್ಚಿವೆ. ಹೀಗಾಗಿ ಇವರು ತೀವ್ರ ಸಂಕಷ್ಟದಲ್ಲಿದ್ದು ಸರ್ಕಾರ ಪರಿಹಾರ ಕಲ್ಪಸಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ. 10 ವರ್ಷಗಳಿಂದ ರೇಷ್ಮೆ ಕೃಷಿ ಮಾಡುತ್ತಿರುವ ರೈತರಿಗೆ ಅಘಾತ ಉಂಟಾಗಿದ್ದು, ಔಷದೋಪಚಾರ, ಬೆಳೆ ನಿರ್ವಹಣೆ, ಕಸಕಡ್ಡಿ ವಿಲೇವಾರಿಗೆ ವಿನಿಯೋಗಿಸಿದ ಖರ್ಚು ರೈತರಿಗೆ ನುಂಗಲಾರದ ತುತ್ತಾಗಿದೆ. ಕೇಂದ್ರದ ಮೇಲಿದ್ದ ಚಾವಣಿ ಪತ್ರಾಗಳು ಗಾಳಿಗೆ ಹಾರಿಹೋಗಿವೆ. ಈ ಕುರಿತು ರೇಷ್ಮೆ ಹಾಗೂ ಕಂದಾಯ ಅಧಿಕಾರಿಗಳಿಗೆ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಲಾಗಿದೆ. ಆದರೆ ಸ್ಪಂದಿಸಿಲ್ಲ. ಕಷ್ಟಪಟ್ಟು ರೇಷ್ಮೆ ಬೆಳೆದ ರೈತರಿಗೆ ಪರಿಹಾರ ಕೊಡಬೇಕೆಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಮಲೇರಿಯಾ ನಿಯಂತ್ರಣಕ್ಕೆ ಸ್ವಚ್ಛತೆ ಮುಖ್ಯ: ಡಾ. ಕಂದಕೂರ
ಯಾದಗಿರಿ: ಮಲೇರಿಯಾ ಸಾಂಕ್ರಾಮಿಕ ರೋಗವಾದ್ದರಿಂದ ಅದರ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸಹಕರಿಸಬೇಕು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಸೂರ್ಯಪ್ರಕಾಶ ಕಂದಕೂರ ಹೇಳಿದರು. ನಗರದ ಆರ್.ವಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡ ಮಲೇರಿಯಾ ಮಾಸಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಗ ಬಂದ ಮೇಲೆ ಅನುಭವಿಸುವುದಕ್ಕಿಂತ ಬಾರದಂತೆ ಮುಂಜಾಗ್ರತೆ ವಹಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರು ಸ್ವಯಂ ರಕ್ಷಣಾ ವಿಧಾನಗಳನ್ನು ಅಳವಡಿಸಿಕೊಂಡು ಮಲಗುವಾಗ ತಪ್ಪದೇ ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು. ರಾತ್ರಿ ವೇಳೆ ಬೇವಿನ ಸೊಪ್ಪಿನ ಹೊಗೆ, ಧೂಪ ಹಾಕಿದರೆ ಸೊಳ್ಳೆಯಿಂದ ಬರುವ ರೋಗವನ್ನು ತಡೆಗಟ್ಟಬಹುದು. ಅಂತಹ ಕೆಲಸವನ್ನು ಸಾರ್ವಜನಿಕರು ಮಾಡಿ ಮಲೇರಿಯಾ ರೋಗವನ್ನು ತಡೆಗಟ್ಟಬೇಕು ಎಂದು ತಿಳಿಸಿದರು. ಪ್ರಾಂಶುಪಾಲ ಸುಚೆತಾ, ಹಿರಿಯ ಆರೋಗ್ಯ ಸಹಾಯಕರಾದ ಪರಮರೆಡ್ಡಿ, ಶರಣಪ್ಪ ಕಾಳಾ, ಶಿಕ್ಷಕಿ ಆಶಿಯಾ ಇದ್ದರು.
ಕ್ರಿಮಿನಲ್ ಮೊಕದ್ದಮೆ ಆದೇಶ ಖಂಡಿಸಿ ಪ್ರತಿಭಟನೆ
ಯಾದಗಿರಿ: ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಕೆಲಸ ಮಾಡುತ್ತಿರುವ ಗಣಕ ಯಂತ್ರ ಸಿಬ್ಬಂದಿಗಳನ್ನು ವಜಾಗೊಳಿಸುವಂತೆ ಹಾಗೂ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಧ್ಯಕ್ಷರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಸಾಮಾಜಿಕ ಲೆಕ್ಕ ಪರಿಶೋಧನೆ ತಂಡ ಆದೇಶ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಪಂಚಾಯತ್ರಾಜ್ ಗ್ರಾಮೀಣಾಭಿವೃದ್ಧಿ ನೌಕರರ ಸಂಘ ಜಿಲ್ಲಾ ಘಟಕದ ನೌಕರರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಿಂದ ನೌಕರರು ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೌಕರ ಸಂಘದ ಮುಖಂಡರು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನ ಆಗಸ್ಟ್ ತಿಂಗಳವರೆಗೆ ಜಿಲ್ಲೆಯಲ್ಲಿ ಕೂಲಿಕಾರರ ಬೇಡಿಕೆ ಕಡಿಮೆ ಇತ್ತು. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳ 15 ಅಂಶಗಳ ಕಾರ್ಯಕ್ರಮ ಘೋಷಣೆಯಂತೆ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸಿ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಪ್ರಚಾರ ಕೈಗೊಂಡು ಮಾನವ ದಿನಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಯಿತು. ಪರಿಶೀಲನೆಗೆ ಆಗಮಿಸಿದ ತಂಡದ ಸದಸ್ಯರು ಹೊರಗುತ್ತಿಗೆ ಸಿಬ್ಬಂದಿಗಳಾಗಿದ್ದು, ಅವರಿಗೆ ಸಾರ್ವಜನಿಕ ಆಡಳಿತ ಜ್ಞಾನ ಕಿಂಚಿತ್ತೂ ಇಲ್ಲ. ಗ್ರಾಪಂಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಕಾಮಗಾರಿಗಳನ್ನು ಮಾತ್ರ ಪರಿಶೀಲನೆ ಮಾಡಿದ್ದಾರೆ. ಆದರೆ ಮೇಲಾಧಿಕಾರಿಗಳಿಗೆ ಮಾತ್ರ ಎಲ್ಲಾ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ್ದೇವೆ ಎಂದು ವರದಿ ಸಲ್ಲಿಸಿದ್ದಾರೆ. ಕಾರಣ ನಮ್ಮ ಮೇಲೆ ಹಾಕಲು ಆದೇಶಿಸಿರುವ ಪ್ರಕರಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವರು ಹಾಗೂ ಯೋಜನೆ ಆಯುಕ್ತರು ಕೈಬಿಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ಜಿಪಂ ಪಿಡಿಒ, ಕಾರ್ಯದರ್ಶಿಗಳು ಹಾಗೂ ಗಣಕ ಯಂತ್ರ ಸಿಬ್ಬಂದಿ ಇದ್ದರು.
ಯಾದಗಿರಿಯಲ್ಲಿ ರೈಲು ನಿಲ್ಲಿಸಲೇಬೇಕು: ಕರವೇ
ಯಾದಗಿರಿ: ಸೋಲಾಪೂರ-ಯಶವಂತಪುರ ರೈಲು ಯಾದಗಿರಿ ರೈಲ್ವೆ ನಿಲ್ದಾಣಲ್ಲಿ ಮೊದಲಿನಂತೇ ರೈಲು ನಿಲ್ಲಿಸುವಂತೆ ಆಗ್ರಹಿಸಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ನೇತೃತ್ವದಲ್ಲಿ ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು. ಈ ಕುರಿತಾಗಿ ಗುಂತಕಲ್ ರೈಲ್ವೆ ವಿಭಾಗಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ಅವರು, ಸೋಲಾಪುರ-ಯಶವಂತಪುರ ರೈಲು ಯಾದಗಿರಿಯಲ್ಲಿ ಮೊದಲಿನಂತೆ ನಿಲ್ಲಬೇಕು. ಇಲ್ಲದಿದ್ದಲ್ಲಿ ಕರವೇಯಿಂದ ಜುಲೈ 3ರಂದು ರೈಲು ನಿಲ್ದಾಣದಲ್ಲಿ ಪಂಜಿನ ಮೆರವಣಿಗೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸುಮಾರು 6 ತಿಂಗಳಿಂದ ಸತತವಾಗಿ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿತ್ತು. ಆದರೆ ಇಗ ಜುಲೈ 1ರಿಂದ ನಿಲ್ಲಿಸುವುದಿಲ್ಲ ಮತ್ತು ಟಿಕೇಟ್ಗಳು ಕೂಡಾ ಲಭ್ಯವಾಗುವುದಿಲ್ಲ ಎಂಬ ಮಾಹಿತಿ ಬಂದಿದ್ದು, ಇದರಿಂದ ಯಾದಗಿರಿ ಜಿಲ್ಲೆಗೆ ಅಪಮಾನವಾಗಿದೆ. ಕೂಡಲೇ ಇಲಾಖೆ ಎಚ್ಚೆತ್ತುಕೊಂಡು ಮೊದಲಿನಂತೆ ರೈಲು ನಿಲ್ಲಿಸುವ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಗಳಿಗೆ ರೈಲ್ವೆ ಇಲಾಖೆಯೇ ಕಾರಣವಾಗುವುದು ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶರಣು ಇಟಗಿ, ದೇವು ಪಾಟೀಲ್, ರವಿ ತಡಿಬಿಡಿ, ಕಾಶಿಂ ಪಟೇಲ್, ಗೌಡಪ್ಪಕೋರಿ, ಬಾಪುಗೌಡ, ಹಣಮಂತ ಶೇಖಪ್ಪ, ರಾಮು, ನಂದು ಶಂಕರ ಗೋನಾಲ, ರಾಜಪ್ಪ ಸಾಹುಕಾರ್ ಸೇರಿದಂತೆ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

