ಕನ್ನಡಕ್ಕೆ ಹೀನಸ್ಥಿತಿ
ಕ.ಪ್ರ. ವಾರ್ತೆ ಗುಲ್ಬರ್ಗ ಜು.30
ಪ್ರಾಥಮಿಕ ಹಂತದಲ್ಲಿ ಕನ್ನಡ ಕಲಿಸಬೇಕೋ ಬಿಡಬೇಕೋ ಎಂಬುದೇ ದೊಡ್ಡ ವಿವಾದವಾಗಿ ಕೋರ್ಟ್ ಮೆಟ್ಟಿಲೇರುತ್ತದೆ. ಅರೆ ಕನ್ನಡ ನೆಲದಲ್ಲಿ ಕನ್ನಡ ಕಲಿಸುವ ಸಂಗತಿಯೇ ವಿವಾದ ಆಗಬೇಕಾ, ಕನ್ನಡಕ್ಕೆ ಇದಕ್ಕಿಂತ ಹೀನಾಯ ಸ್ಥಿತಿ ಇನ್ನೇನು ಒದಗಿ ಬರಬೇಕು ನೀವೇ ಹೇಳಿ...?
ಹೀಗೆಂದವರು ಹಿರಿಯ ಚಿತ್ರನಟ ಎಸ್. ಶಿವರಾಂ. ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಅವರು, ರಾಜಧಾನಿ ಬೆಂಗಳೂರಲ್ಲೇ ಕನ್ನಡ ಅಲ್ಪಸಂಖ್ಯಾತವಾಗಿದೆ, ಅನಾಥವಾಗಿದೆ. ಕನ್ನಡಕ್ಕೊದಗಿರುವ ಹೀನಸ್ಥಿತಿಗೆ ಕನ್ನಡಿಗರ ಮನೋಧೋರಣೆಯೇ ಕಾರಣ ಎಂದರು.
ಕನ್ನಡಕ್ಕೆ ಹೀನಸ್ಥಿತಿ ಒದಗಿದೆ, ಸರ್ಕಾರ ಕಣ್ಣು ತೆರೆಯಲಿ ಅಂದರೆ ಆಗದು. ಕನ್ನಡದಲ್ಲೇ ಅರ್ಜಿ ಬರೆಯಬೇಕು, ಕನ್ನಡದಲ್ಲಿ ಅರ್ಜಿ ಇಲ್ಲದೆ ಹೋದ್ರೆ ಹರಿದು ಹಾಕಿ ಅನ್ನೋ ಆದೇಶ ಹೊರಡಿಸಿ ಸುಮ್ಮನಿದ್ರೆ ಆಗದು. ಕನ್ನಡೀಕರಣ ಅಕ್ಷರಶಃ, ನೈಜವಾಗಿ, ವಾಸ್ತವತೆಯ ನೆಲೆಗಟ್ಟಲ್ಲಿ ಆಗಬೇಕು. ಅದಕ್ಕಾಗಿ ಆಳುವವರು, ಕನ್ನಡ ಹೃದಯ ಸಿರಿವಂತಿಕೆ ಇರುವವರೆಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ಕನ್ನಡ ಚಿತ್ರರಂಗಕ್ಕೆ ಅಲ್ಪಪ್ರಾಣ- ಮಹಾಪ್ರಾಣವೂ ಗೊತ್ತಿಲ್ಲ: ಕನ್ನಡ ಚಿತ್ರರಂಗದಲ್ಲಿಂದು ಕನ್ನಡ ಹುಡುಕುವಂತಹ ಸ್ಥಿತಿ ಎದುರಾಗಿದೆ ಎಂದು ಚಲನಚಿತ್ರರಂಗವೇ ಕನ್ನಡವನ್ನು ಹಾಳು ಮಾಡುತ್ತಿದೆ ಎಂದು ದೂರಿದರು.
ಹಿಂದೆಲ್ಲ ರಂಗಭೂಮಿಯ ಹಿನ್ನೆಲೆ ಇರುವ ನಟರು, ನಿರ್ದೇಶಕರು ಬರುತ್ತಿದ್ದರು. ಇದರಿಂದಾಗಿ ಕನ್ನಡದ ಅಲ್ಪಪ್ರಾಣ, ಮಹಾಪ್ರಾಣಗಲನ್ನೆಲ್ಲ ಗಟ್ಟಿಯಾಗಿ ಹೇಳುವವರೇ ಇರುತ್ತಿದ್ದರು. ಈಗ ನೋಡಿದರೆ ಕನ್ನಡ ಚಿತ್ರರಂಗದ ಮಂದಿಗೆ ಕನ್ನಡ ವರ್ಣಮಾಲೆ ಎಷ್ಟೆಂಬ ಪರಿಚಯ ಇದ್ದಂತಿಲ್ಲ, ಆ ರೀತಿ ಕನ್ನಡವನ್ನು ಹದಗೆಡಿಸುತ್ತಿದ್ದಾರೆ ಎಂದು ಬೇಸರದಿಂದ ಹೇಳಿದರು.
ಸಾಧಕರನ್ನು ಗೌರವಿಸಬೇಕು: ಕನ್ನಡ ನೆಲದಲ್ಲೇ ಕನ್ನಡಿಗರನ್ನು ಗೌರವಿಸುವಂತಾಗಬೇಕು, ಜೊತೆಗೆ ಸಾಧಕರಿಗೆ ಮನ್ನಣೆ ನೀಡುವ ಮನಸ್ಸುಗಳು ನಾವು ಕಟ್ಟಿಕೊಳ್ಳಬೇಕು. ಕನ್ನಡವನ್ನು ಇಂದಿನ ಹೀನಸ್ಥಿತಿಯಿಂದ ಮೇಲೆತ್ತುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮತನ ಉಳಿಸಿಕೊಂಡೇ ನಾವು ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಕಲಿಸಿಕೊಡಬೇಕಾಗಿದೆ. ಎಲ್ಲರೂ ಪಂಚೇಂದ್ರೀಯ ತೆರೆದು ಕಾರ್ಯಪ್ರವೃತ್ತರಾದಲ್ಲಿ ಕನ್ನಡ ಕಟ್ಟುವ ಕೆಲಸ ಭಾರವೇನಲ್ಲ ಎಂದರು.
ಸಾಹಿತ್ಯದಿಂದ ಮನಸ್ಸಿನ ಪರಿವರ್ತನೆ: ಸಾಹಿತ್ಯ ಸಮಾರಂಭಗಳೆಂದರೆ ಮನಸ್ಸಿನಲ್ಲಿನ ಕೆಟ್ಟ ಯೋಚನೆಗಳನ್ನು ಹೊರಹಾಕುವ ಹಾಗೂ ಉತ್ತಮ ವಿಚಾರಗಳಿಗೆ ಸ್ಫೂರ್ತಿ ತುಂಬುವಂತಹವು. ಕಸಾಪ ಸಮ್ಮೇಳನವೂ ಈ ದಿಶೆಯಲ್ಲಿ ಅಂತಹ ಪರಿಣಾಮ ಉಂಟುಮಾಡಲಿ ಎಂದು ಅಫಜಲ್ಪುರ ಶಾಸಕ ಮಾಲೀಕಯ್ಯ ಗುತ್ತೇದಾರ್ ಹಾರೈಸಿದರು. ಸಮ್ಮೇಳನದಲ್ಲಿ ಮಾತನಾಡಿದ ಅವರು, ಗುಲ್ಬರ್ಗ ನೆಲ ಸಾಹಿತ್ಯ- ಸಂಸ್ಕೃತಿಯ ಸಿರಿವಂತ ನಾಡು. ಎಲ್ಲ ಜಾತಿ-ಜನ ಸಮುದಾಯದಲ್ಲಿ ಇಲ್ಲಿನ ಅನೇಕರು ಸಾಧನೆ ಮಾಡಿದ್ದಾರೆ. ಎಲ್ಲರಿಗೂ ಅವಕಾಶ ನೀಡಿ ಗೌರವಿಸುವ ಕೆಲಸ ಕಸಾಪದಂತಹ ಸಂಸ್ಥೆಗಳು ಇಂದು ತುಂಬ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾಲೀಕಯ್ಯ ಗುತ್ತೇದಾರ್, ಜಿಪಂ ಅಧ್ಯಕ್ಷ ನಿತಿನ್ ಗುತ್ತೇದಾರ್ ಸಮ್ಮೇಳನದ ಅಧ್ಯಕ್ಷ ಡಾ. ಹನುಮಂತರಾವ್ ದಂಪತಿಗೆ 25 ಸಾವಿರ ಹಣ ನೀಡಿ ಗೌರವಿಸಿದರು. ಕಸಾಪದಿಂದಲೂ ಡಾ. ಹನುಮಂತರಾವ್ ಅವರಿಗೆ ಗೌರವಿಸಲಾಯ್ತು.
ವೇದಿಕೆಯಲ್ಲಿ ಅಕ್ಷತಾ ಪಾಟೀಲ್ ಜಿ.ಎಸ್. ಕರ್ಕಿ ಅವರ 'ಹಚ್ಚೇವು ಕನ್ನಡದ ದೀಪ...' ಹಾಡಿಗೆ ದೀಪದೊಂದಿಗೆ ನೃತ್ಯ ಮಾಡಿ ಗಮನ ಸೆಳೆದಳು. ಯಾದಗಿರಿಯ ಸಿದ್ದಪ್ಪ ಹೊಟ್ಟಿ, ರಾಯಚೂರಿನ ಮಹಾಂತೇಶ ಮಸ್ಕಿ, ಬೀದರ್ನ ಸಿದ್ರಾಮಪ್ಪ ಮಾಸಿಮಾಡೆ ಸೇರಿದಂತೆ ಜಿಲ್ಲೆಯ ತಾಲೂಕುಗಳು, ಹೋಬಳಿ ಘಟಕಗಳ ಕಸಾಪ ಅಧ್ಯಕ್ಷರು ಇದ್ದರು.
ಹಿರಿಯ ಸಾಹಿತಿಗಳಾದ ಡಾ. ಚನ್ನಣ್ಣ ವಾಲೀಕಾರ್, ಡಾ. ವಸಂತ ಕುಷ್ಟಗಿ, ಡಾ. ಸ್ವಾಮೀರಾವ ಕುಲಕರ್ಣಿ, ವಕೀಲರಾದ ಕಲ್ಯಾಣರಾವ ಭಕ್ಷಿ, ಡಾ. ಮೀನಾಕ್ಷಿ ಬಾಳಿ ಸೇರಿದಂತೆ ಅನೇಕರು ಸಾಹಿತಿಗಳು, ಸಾಹಿತ್ಯಾಸಕ್ತರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಶಾಲಾ ಮಕ್ಕಳು ಸಹ ಮೇಳದ ಗೋಷ್ಠಿಗಳು, ಉದ್ಘಾಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಸ್ಸಾಗತದಲ್ಲಿ ಮೂನ್ನೂರ್ ಸ್ವಗತ
ಸಮ್ಮೇಳನದ ಸ್ವಾಗತದಲ್ಲಿ ಅನ್ಯರಾಕೆಂದು ತಮ್ಮ ಪರಿಚಯ ತಾವೇ ಹೇಳಿಕೊಂಡ್ರು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್. ಪ್ರಸ್ತಾವನೆ- ಅತಿಥಿಗಳ ಸ್ವಾಗತ ಮಾತುಗಳಲ್ಲೇ ತಮ್ಮನ್ನು ಪರಿಚಯಿಸಿಕೊಂಡಾಗ ಸಭಿಕರಿಗೆ ಮುನ್ನೂರರ ಮಾತುಗಳು ತಕ್ಷಣಕ್ಕೆ ಅರ್ಥವಾಗಲಿಲ್ಲ. ಕನ್ನಡದ ಲಾಕ್ಷಣಿಕ ಗ್ರಂಥ ಕವಿರಾಜಮಾರ್ಗದ ನೆಲದ ಸೇಡಂನ ಕಮಲಾವತಿ ನದಿ... ಎಂದು ಸಾಹಿತ್ಯಿಕವಾಗಿ ಹೇಳಲಾರಂಭಿಸಿದಾಗ ಕಮಲಾವತಿ ನದಿತೀರದ ಕುಂಬಾರ ಓಣಿಯ ಹುಡಗನೆಂದು ತಮ್ಮನ್ನು ತಾವು ಪರಿಚಯಿಸಿಕೊಂಡಾಗ ಇದು ಮಹಿಪಾಲರೆಡ್ಡಿ ಅವರ ಸ್ವಗತ ಎಂದು ಸಭಿಕರಿಗೆ ಗೊತ್ತಾಯ್ತು. ಪ್ರಸ್ತಾವನೆ- ಸ್ವಾಗತಕ್ಕೆ ತಮಗೆ ದೊರಕಿದ್ದ ಅವಕಾಶ- ಸಮಯದಲ್ಲೇ ತಮ್ಮ ಊರು, ಸೀಮೆ, ಹಳ್ಳಿ, ಓಣಿಯ ಮಾಹಿತಿ ಒಳಗೊಂಡ ವಿಸ್ತೃತ ಸ್ವಗತ ಹೇಳಲು ಮಹಿಪಾಲರೆಡ್ಡಿ ತೋರಿದ ಜಾಣತನಕ್ಕೆ ಸಭಿಕರು ಭೇಷ್ ಎಂದರು.
ಕನ್ನಡ ಮನಸ್ಸುಗಳು..
ಸಮ್ಮೇಳನದ ದ್ವಾರಗಳು, ವೇದಿಕೆಗಳು, ಮಂಟಪಗಳಿಗೆಲ್ಲ 'ಮಹಾ ವಿಶೇಷ' ಹೆಸರನ್ನು ಎಗ್ಗಿಲ್ಲದೆ ಬಳಸಿದ್ದು ವಿಶೇಷವಾಗಿತ್ತು. ಜೊತೆಗೇ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ತನ್ನ ಸ್ವಾಗತ, ಪ್ರಸ್ತಾವನೆಗಳಲ್ಲಿ ಕನ್ನಡದ ಮನಸ್ಸುಗಳು.. ಎಂಬ ಶಬ್ದ ಅನಂತ ರೂಪದಲ್ಲಿ ಬಳಸಿದ್ದೂ ಸಭಿಕರ ಗಮನ ಸೆಳೆಯಿತು. ಮಹಾಮಂಟಪವಾಗಿ ಅಮೋಘವರ್ಷ ನೃಪತುಂಗನ ಹೆಸರಿಡಲಾಗಿತ್ತು. ಇಲ್ಲಿಂದ ಶುರುವಾದ ಮಹಾ ಪದದ ಬಳಕೆ ವೇದಿಕೆ, ಮಂಟಪಗಳಿಗೆಲ್ಲದಕ್ಕೂ ಮಹಾ ಎಂದೇ ಬಣ್ಣಿಸಲ್ಪಟ್ಟಿತ್ತು. ಇನ್ನು ಕಸಾಪ ಅಧ್ಯಕ್ಷರು ತಮ್ಮ ಸ್ವಾಗತ, ಪ್ರಸ್ತಾವನೆಯ ನುಡಿಗಳಲ್ಲೆಲ್ಲಾ ಪ್ರತಿ ವಾಕ್ಯದ ಕೊನೆ, ಕೆಲವು ವಿಶೇಷ ಹೇಳಿಕೆಗಳ ಕೊನೆಯಲ್ಲಿ ಕನ್ನಡ ಮನಸ್ಸುಗಳು ಎಂದೇ ಹೇಳುವ ಮೂಲಕ ತಮ್ಮ ಮಾತಿಗೆ ಪೂರ್ಣವಿರಾಮ ನೀಡಿದರು.
ಸೊರಗಿತ್ತು ಮೆರವಣಿಗೆ
ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ. ಹನುಮಂತರಾವ ದೊಡ್ಮನಿ ಅವರ ಸಾರೋಟದಲ್ಲಿನ ಮೆರವಣಿಗೆ ಜನರಿಲ್ಲದೆ ಭಣಗುಟ್ಟಿತ್ತು. ಎಸ್ಪಿ ಅಮೀತ್ ಸಿಂಗ್ ಅವರ ಚಾಲನೆಯೊಂದಿಗೆ ಕನ್ನಡ ಭವನದಿಂದ ಶುರುವಾದ ಮೆರವಣಿಗೆ ಸರ್ದಾರ್ ಪಟೇಲ್ ವೃತ್ತ, ಜಗತ್ ವೃತ್ತದ ಮೂಲಕ ಸಾಗಿತು. ಅಂಬೇಡ್ಕರ್, ಬಸವೇಶ್ವರ ಪ್ರತಿಮೆಗಳಿಗೆ ಮಾಲಾರ್ಪಣೆ ನಡೆದ ನಂತರ ಸಮ್ಮೇಳನದ ಸ್ಥಳ ಪಂಡಿತ ರಂಗಮಂದಿರದಲ್ಲಿ ಮುಕ್ತಾಯಗೊಂಡಿತು. ಜನಪದ ಕಲಾ ತಂಡಗಳೊಂದಿಗೆ ಈ ಬಾರಿ ಸಮ್ಮೇಳನಾಧ್ಯಕ್ಷರ ರಾಜಬೀದಿ ಉತ್ಸವದಲ್ಲಿ ಇಂಥವರೆಲ್ಲ ಇರುತ್ತಾರೆಂದು ಜಿಲ್ಲಾ ಕಸಾಪ ನಗರ ಹಾಗೂ ಜಿಲ್ಲೆಯಲ್ಲಿರುವ ವಿವಿಧ ಕನ್ನಡಪರ ಸಂಘಟನೆಗಳ ಸಂಸ್ಥಾಪಕರು, ಅಧ್ಯಕ್ಷರ ಹೆಸರುಗಳನ್ನು ಆಮಂತ್ರಣದಲ್ಲೇ ಅಚ್ಚುಹಾಕಿ ಮಾಹಿತಿ ನೀಡಿತ್ತು. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಕಂಡುಬಂದ ಕನ್ನಡಪರ ಸಂಘಟನೆಗಳವರ ಪೈಕಿ ನಂದಕುಮಾರ ನಾಗಭುಜಂಗೆ, ಅಮೃತ ಪಾಟೀಲ್, ಸಚಿನ್ ಫರತಾಬಾದ್, ಎಂಎಸ್ ಪಾಟೀಲ್, ನರಿಬೋಳ, ಮಲ್ಲಿಕಾರ್ಜುನ ಸಾರವಾಡ, ಗೋಪಾಲ ನಾಟೀಕಾರ್ ಮೆರವಣಿಗೆಯಲ್ಲಿ ಅಲ್ಲಲ್ಲಿ ಕಂಡುಬಂದರು. ಉಳಿದಂತೆ ಇನ್ನೂ ಹಲವರು ಎರಡು ಗಂಟೆ ನಡೆದ ಮೆರವಣಿಗೆಯಲ್ಲಿ ಎಲ್ಲಿಯೂ ಕಂಡುಬರಲಿಲ್ಲ. ಈ ಸಂಗತಿಯನ್ನು ಉಲ್ಲೇಖಿಸಿದ ಹಿರಿಯ ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಎಸ್. ಶಿವರಾಂ, ಗುಲ್ಬರ್ಗದ ಮುಕ್ಕಾಲು ಭಾಗ ಜನರಾದರೂ ಮೆರವಣಿಗೆಯಲ್ಲಿರುತ್ತಾರೆಂದು ನಿರೀಕ್ಷಿಸಿದ್ದೆ. ಆದರೆ ವೇಷಧಾರಿಗಳು, ಜನಪದ ಕಲಾ ತಂಡಗಳವರು ಬಿಟ್ಟರೆ ಇನ್ನಾರೂ ಇರಲಿಲ್ಲ. ಇವರಾದರೋ ಪಾಪ ನೀವು ಗೌರವಧನ ಕೊಡ್ತೀರಿ, ಬಂದಿರ್ತಾರೆ, ಜನರ್ಯಾಕೆ ಸಮ್ಮೇಳನ, ಮೆರವಣಿಗೆಯಂತಹ ಸಾಹಿತ್ಯ ಉತ್ಸವಗಳತ್ತ ಬರುತ್ತಿಲ್ಲವೋ ಎಂದು ಕಳವಳ ಹೊರಹಾಕಿದರು. ನಗರದಲ್ಲಿ ನಿತ್ಯ ಕನ್ನಡಪರ ಸಂಘಟನೆಗಳವರು ಪ್ರತಿಭಟನೆ, ಹೋರಾಟ ನಡೆಸುತ್ತಿರುತ್ತಾರೆ. ಅದಕ್ಕಾಗಿ ನೂರಾರು ಯುವಕರು, ಜನರನ್ನು ಕಲೆ ಹಾಕುತ್ತಾರೆ. ಆದ್ರೆ ಸಾಹಿತ್ಯ ಮೇಳಕ್ಕೆ ತಮ್ಮೊಂದಿಗೆ ತಮ್ಮ ಅಭಿಮಾನಿಗಳು, ಬೆಂಬಲಿಗರನ್ನು ಯಾಕೆ ಕಲೆ ಹಾಕಲಿಲ್ಲ ಎಂಬ ಪ್ರಶ್ನೆ ಸೇರಿದ್ದ ಅನೇಕರನ್ನು ಕಾಡಿತ್ತು.
ಬಯ್ಯೋಡೇಟಾ
ಕನ್ನಡಿಗರಿಗೆ ಅತ್ಯುತ್ತಮ ಚಲನಚಿತ್ರಗಳನ್ನು ನೀಡಿದ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಕ ಶಿವರಾಂ ಅವರನ್ನು ಪರಿಚಯವನ್ನು ನಿರೂಪಕರು, ಪ್ರಾಸ್ತಾವಿಕ ನುಡಿಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮಾಡಿದರು. ನಿರೂಪಕರು 30 ವರ್ಷದಿಂದ ಚಲನಚಿತ್ರರಂಗದಲ್ಲಿರುವವರು ಎಂದರೆ, ಮತ್ತೊಬ್ಬರು 40 ವರ್ಷ ಎಂದರು. ಇವನ್ನೆಲ್ಲ ಆಲಿಸಿದ್ದ ಶಿವರಾಂ ತಮ್ಮ ಉದ್ಘಾಟಕರ ಭಾಷಣ ಸರದಿ ಬಂದಾಗ ಸ್ಥಳೀಯ ಕಸಾಪ ಘಟಕಕ್ಕೆ, ಪದಾಧಿಕಾರಿಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಬಿಸಿ ಮುಟ್ಟಿಸಿದರು. ಕನ್ನಡ ಚಿತ್ರರಂಗದ ಜೊತೆ ತಮ್ಮದು 60 ವರ್ಷಗಳ ನಂಟಿದೆ ಎನ್ನುತ್ತ ಸಮಾರಂಭದಲ್ಲಿ ಅನೇಕರು ಏನೇನನ್ನೋ ಹೇಳುತ್ತಿದ್ದಾರೆಂದು ಬೇಸರಿಸಿದರು. ಕಸಾಪ ತಮ್ಮ ಸ್ವವಿವರ ಕೇಳಿತ್ತಾದರೂ ಅದನ್ನು ಎಲ್ಲಿಗೆ ಕಳುಹಿಸಬೇಕೆಂಬ ವಿಳಾಸ ತಮಗೆ ಹೇಳಿರಲಿಲ್ಲ. ಆದಾಗ್ಯೂ ಅಂಚೆಯಲ್ಲಿ ಬಯೋಡೇಟಾ ಲಕೋಟೆ ಹಾಕಿದ್ದೆ. ಅದು ಕಸಾಪಕ್ಕೆ ತಲುಪಿಲ್ಲ ಎಂಬುದಕ್ಕೆ ಇಲ್ಲಿ ತಮ್ಮ ಬಗೆಗೆ ಸಾಗಿರುವ ಪರಿಚಯವೇ ಕನ್ನಡಿ ಎಂದರು. ಗುಲ್ಬರ್ಗ ತಲುಪಿದಾಗ ಕಸಾಪ ಗೌರವ ಕಾರ್ಯದರ್ಶಿ ಸುರೇಶ ಬಯೋಡಾಟಾ ಕೇಳಿದ್ದರು. ಇಲ್ಲಾದರೂ ಬರೆದು ಕೊಡೋಣವೆಂದು ರಾತ್ರಿ ಸಿದ್ಧಪಡಿಸಿಕೊಂಡಿದ್ದೆ. ಆದರೆ ಈವರೆಗೂ ಸುರೇಶ ಸುಳಿಯಲೇ ಇಲ್ಲ ಎಂದು ತಮ್ಮ ಜೇಬಿನಲ್ಲಿದ್ದ ಬಯೋಡೇಟಾ ಚಿಟ್ಟಿ ತೆಗೆದು ತೋರಿಸಿದರು. ಆಂಗ್ಲ ಭಾಷೆಯ ಬಯೋಡೇಟಾ ಕನ್ನಡದಲ್ಲಿ 'ಬಯ್ಯೋ... ಡೇಟಾ' ಆಗಿದೆ ಎಂದು ಗೇಲಿ ಮಾಡಿದರಲ್ಲದೆ ಬಯೋಡೇಟಾ ಗೊತ್ತಿಲ್ಲದ ಅತಿಥಿಗಳನ್ನು ನಿರೂಪಕರು ಅದ್ಹೇಗೆ ಪರಿಚಯಿಸುತ್ತಾರೆ ಎಂಬುದನ್ನು ಹತ್ತು ಹಲವು ವಿಧಗಳಲ್ಲಿ ಹೇಳುತ್ತ ಸೇರಿದ್ದ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು. ಸ್ಥಳೀಯ ಕಸಾಪಕ್ಕೆ ಆಮಂತ್ರಿತ ಅತಿಥಿಗಳ ವಿವರ ಪಡೆದೇ ಮಾತನಾಡಬೇಕೆಂಬ ಪಾಠವನ್ನು ಶಿವರಾಂ ಹೇಳಿಕೊಟ್ಟರು.
ತಪ್ಪಾಯ್ತು ತಿದ್ಕೋತೀವಿ
ಉದ್ಘಾಟನೆಯ ವೇದಿಕೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಎಲ್ಲರನ್ನೂ ಸ್ವಾಗತಿಸುತ್ತ ಅಲ್ಲಿ ಉಪಸ್ಥಿತಿಯೇ ಇಲ್ಲದ ಪಾಲಿಕೆ ಮೇಯರ್ ಅಲಿಯಾ ಸರೀನ್ ಹೆಸರು ಹೇಳಿ ನಮ್ಮೊಂದಿಗೆ ಇದ್ದಾರೆಂದು ವೇದಿಕೆಯಲ್ಲಿದ್ದ ಡಿಡಿಪಿಐ ಮೆಹರುನ್ನೀಸಾ ಬೇಗಂ ಅವರತ್ತ ನೋಡಿದಾಗ ಖುದ್ದು ಬೇಗಂ ಅವರೇ ದಂಗು! ಮುನ್ನೂರ್ ಅವರ ಸ್ವಾಗತದ ಮುನ್ನುಡಿಗೆ ದಂಗಾಗಿದ್ದ ಬೇಗಂ ತಾವು ಅಲಿಯಾ ಸರೀನ್ ಅಲ್ಲವೇ ಅಲ್ಲ ಎಂದು ತಮ್ಮತ್ತ ನೋಡುತ್ತಿದ್ದ ಎಲ್ಲರಿಗೂ ಗೊತ್ತಾಗುವಂತೆ ತಲೆ, ಕೈ ಅಲ್ಲಾಡಿಸಿ ಸಂಜ್ಞೆ ಮಾಡಿಬಿಟ್ಟರು. ಕೊನೆಗೂ ಕಸಾಪ ಜಿಲ್ಲಾಧ್ಯಕ್ಷರಿಗೆ ತಮ್ಮ ತಪ್ಪಿನ ಅರಿವಾಗಿ ಡಿಡಿಪಿಐ ಇಲ್ಲಿದ್ದಾರೆಂದು ಮೆಹರುನ್ನೀಸಾ ಬೇಗಂ ಹೆಸರು ಹೇಳಿ ಸ್ವಾಗತಿಸಿದರು.
ಬಡವರೇ ಕನ್ನಡ ಬೆಳೆಸಲಿ
ಕನ್ನಡಿಗರಿಗೆ ನೌಕರಿಗಳಲ್ಲಿ ಆದ್ಯತೆ ನೀಡಬೇಕಂತ ಪ್ರತಿಪಾದಿಸಿದ ಮಹಿಷಿ ವರದಿ ಜಾರಿಯಾಗಿಲ್ಲ, ಅಂತಹ ವರದಿ ಇದ್ದು ಇಲ್ಲದಂತಾಗಿದೆ. ಗೋಕಾಕ್ ಚಳವಳಿಯ ಉದ್ದೇಶವೂ ಈಡೇರಿಲ್ಲ, ಇನ್ನು ಅಂತಹ ಮಹಾನ್ ಚಳವಳಿಗೆ ನಾವು ಸಾಕ್ಷಿಯಾಗಿದ್ದೇವು, ಭಾಗವಹಿಸಿದ್ದೇವು ಎಂದು ಹೇಳುವುದರಲ್ಲಿ ಅರ್ಥವೇ ಇಲ್ಲ ಎಂದು ಬೇಸರಿಸಿದ ಶಿವರಾಂ, ಬಡವರೇ ಇಂದು ಕನ್ನಡ ಬೆಳೆಸಬೇಕಾಗಿದೆ. ಕನ್ನಡಕ್ಕೆ ಈಗಾಗಲೇ ಸಿರಿವಂತರು ಕೈಬಿಟ್ಟಿದ್ದಾರೆ ಎಂದರು. ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಗುಲ್ಬರ್ಗದಂತಹ ಪ್ರದೇಶದಲ್ಲಿ ಕನ್ನಡ ತನ್ನ ಗಟ್ಟಿತನ ಉಳಿಸಿಕೊಂಡಿದೆ. ಹಳೇ ಮೈಸೂರು ಭಾಗದಲ್ಲಂತೂ ಕನ್ನಡವೇ ಇಲ್ಲದಂತಾಗಿದೆ, ಬೆಂಗಳೂರಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗಿದ್ದಾರೆ. ಯಾಕೆ ಹೀಗಾಗುತ್ತಿದೆ ಎಂದು ನಾವಿಂದು ಚರ್ಚಿಸಬೇಕಾಗಿದೆ. ಇಂತಹ ನುಡಿಜಾತ್ರೆ, ಉತ್ಸವಗಳಲ್ಲಿ ಚಿಂತನೆ ನಡೆಸಬೇಕಾಗಿದೆ. ಇಲ್ಲದೆ ಹೋದಲ್ಲಿ ಕನ್ನಡ ಇನ್ನೊಂದು ದಶಕದಲ್ಲಿ ಇನ್ನೂ ಹೀನಸ್ಥಿತಿ ತಲುಪಿದರೂ ಅಚ್ಚರಿಪಡಬೇಕಾಗಿಲ್ಲ ಎಂದರು.
ಹಳ್ಳಿ ಕಡೆಗೆ ಕಸಾಪ ನಡಿಗೆ
ಕಸಾಪ ಜಿಲ್ಲಾಧ್ಯಕ್ಷ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ್ ಸರ್ವರನ್ನು ಸ್ವಾಗತಿಸಿದರು. ಕಳೆದೆರಡು ವರ್ಷಗಳ ತಮ್ಮ ಅಧ್ಯಕ್ಷಗಿರಿಯಲ್ಲಿ ಸತತ ಕಾರ್ಯಕ್ರಮಗಳ ಮೂಲಕ ಕನ್ನಡ ಸೇವೆ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳನ್ನು ಹಳ್ಳಿಹಳ್ಳಿಗೂ ಪರಿಚಯಿಸುವ 'ಕಸಾಪ ನಡಿಗೆ ಹಳ್ಳಿ ಕಡೆಗೆ' ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳಿದರು. 2014- 2015 ಕಸಾಪ ಶತಮಾನದ ವರ್ಷ. ಈ ವರ್ಷ ಇನ್ನೂ ಹೆಚ್ಚಿನ ರಚನಾತ್ಮಕ ಯೋಜನೆಗಳೊಂದಿಗೆ ಸಾಹಿತ್ಯ ಸೇವೆ ಮಾಡುವ ಇರಾದೆ ಕಸಾಪ ಹೊಂದಿದೆ. ಈ ದಿಶೆಯಲ್ಲಿ ಸರ್ವರ ಸಹಕಾರ ಬೇಕು ಎಂದರು.
ಅಧ್ಯಕ್ಷೀಯ ಮುಖ್ಯಾಂಶಗಳು
ಮಹಿಷಿ ವರದಿ ಜಾರಿಯಾಗಬೇಕು, ಐಟಿ-ಬಿಟಿ ಸೇರಿದಂತೆ ವಿವಿಧ ರಂಗಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ತೆರೆದುಕೊಳ್ಳಬೇಕು.
ರೈತರ ಸಮಸ್ಯೆ ಹೆಚ್ಚುತ್ತಿದೆ, ಸರ್ಕಾರ ಇದನ್ನು ಗಮನಿಸಿ ತಕ್ಷಣ ರೈತರ ನೆರವಿಗೆ ಧಾವಿಸಬೇಕು.
ಹೈ-ಕ ಹಿಂದುಳಿದ ಭಾಗಕ್ಕೆ ದೊರಕಿರುವ ಕಲಂ 371(ಜೆ) ನ್ಯೂನ್ಯತೆಗಳನ್ನು ಸರಿಪಡಿಸಿ ಎಲ್ಲರಿಗೂ ಸಮವಾಗಿ ಸೌಲಭ್ಯ ದೊರಕುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು.
ಬೆಳಗಾವಿ ಗಡಿ ತಂಟೆಯನ್ನು ಸರ್ಕಾರ ಗಟ್ಟಿತನದಿಂದ ನಿರ್ವಹಿಸಲಿ. ಎಂಇಎಸ್ ಪುಂಡಾಟಿಕೆಗೆ ಉತ್ತರ ನೀಡಲಿ.
ಆಂಧ್ರ- ಮಹಾರಾಷ್ಟ್ರ ಗಡಿಯಲ್ಲಿನ ಕನ್ನಡ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಅಲ್ಲಿನ ಕನ್ನಡಿಗರಿಗೆ ಅಕ್ಷರ ಕಲಿಕೆಗೆ ಸೌಕರ್ಯ ಕಲಿಪಿಸಬೇಕು.
ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು.
ಶಾಲೆಗಳಲ್ಲಿ ಶೌಚಾಲಯ ಸಮಸ್ಯೆ ಕಾಡುತ್ತಿದ್ದು, ತಕ್ಷಣ ಪರಿಹಾರ ಕ್ರಮಗಳು ಜರುಗಲಿ.
ಮಲ್ಲಿಕಾರ್ಜುನ ಖರ್ಗೆಯವರ ಅಭಿವೃದ್ಧಿಪರ ಚಿಂತನೆಗಳು ಎಲ್ಲರಿಗೂ ಮಾದರಿಯಾಗಲಿ.
ದಂದಣ ದತ್ತಣ ಎನ್ನಿ
ಕವಿಗೋಷ್ಠಿಗೆ ಕೇಂದ್ರೀಯ ವಿವಿ ಗುಲ್ಬರ್ಗದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಚಾಲನೆ ನೀಡಿದರು. ಡಾ. ಮಹಾದೇವ ಬಡಿಗೇರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವೀರಯ್ಯ ಸ್ವಾಮಿ ಮೂಲಿಮನಿ, ರಾಜಶೇಖರ ಮಾಂಗ್, ಅಮೃತ ದೊಡ್ಮನಿ ಸೇರಿದಂತೆ ಅನೇಕರು ಕಾವ್ಯ ವಾಚನ ಮಾಡಿದರು. ಕವಿತಾ ಹಳ್ಳಿ ನಿರೂಪಿಸಿದರು. ಗುಂಡಪ್ಪ ಕೆರೆಮನೋರ್ ಸ್ವಾಗತಿಸಿದರು. ಮಂಗಲಾ ಕಪರೆ ವಂದಿಸಿದರು.
ಗಮನ ಸೆಳೆದ ಕವಿಗೋಷ್ಠಿ: ಸಾಹಿತ್ಯ ಸಮ್ಮೇಳನದ ಮೊದಲ ದಿನದ ಚೊಚ್ಚಲ ಗೋಷ್ಠಿಯಾಗಿ ದಲಿತ ಸಾಹಿತ್ಯ, ಸಂಕೀರ್ಣ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಕುರಿತಂತೆ ಸಾಹಿತ್ಯ ಚಿಂತನ ಗೋಷ್ಠಿ ನಡೆಯಿತು. ಭಾರತೀಯ ಭಾಷಾ ಅಧ್ಯಯನ ಕೇಂದ್ರದ ಕಾರ್ಯಕ್ರಮ ವ್ಯವಸ್ಥಾಪಕ ಡಾ. ಪವನಜ ಅವರು ಗೋಷ್ಠಿಯನ್ನು ಉದ್ಘಾಟಿಸಿದರು. ಪಿಡಿಎ ಕಾಲೇಜಿನ ಡಾ. ಸಂಜಯ ಮಾಕಲ್ ವಚನ ಸಾಹಿತ್ಯದ ಕುರಿತಂತೆ, ಚಿತ್ತಾಪುರ ಸರ್ಕಾರಿ ಕಾಲೇಜಿನ ಡಾ. ವಿಜಯಕುಮಾರ್ ಸಾಲಿಮನಿ ದಲಿತ ಸಾಹಿತ್ಯದ ಬಗ್ಗೆ ಹಾಗೂ ಸಂಕೀರ್ಣ ಸಾಹಿತ್ಯದ ಬಗ್ಗೆ ಡಾ. ಶಿವಾಜಿ ಮೇತ್ರೆ ವಿಷಯ ಮಂಡಿಸಿದರು.
ಭಣಗಿದ ಭವನ
ಕನ್ನಡ ಸಾಹಿತ್ಯ ಚಟುವಟಿಕೆಗಳ ಕೇಂದ್ರಸ್ಥಳ ಕನ್ನಡ ಭವನ. ಕಳೆದ ವರ್ಷದ 13ನೇ ಸಮ್ಮೇಳನಕ್ಕೆ ಇದೇ ಆಸರೆಯಾಗಿತ್ತು. ಈ ಬಾರಿ ಮಳೆಯ ಕಾರಣದಿಂದ ಅಕ್ಷರ ಜಾತ್ರೆ ಪಂಡಿತ ರಂಗಮಂದಿರಕ್ಕೆ ಸ್ಥಳಾಂತರಗೊಂಡಿದೆ. ಆದರೆ ಕಸಾಪ ತನಗೆ ಆಸರೆ ನೀಡಿದ ಕನ್ನಡ ಭವನದಲ್ಲಿ ಸಾಹಿತ್ಯ ಜಾತ್ರೆ ನಡೆಯುತ್ತಿರುವ ಕುರುಹಾಗಿ ಯಾವ ಸಂಕೇತಗಳನ್ನು ಅಲ್ಲಿ ಬಿಂಬಿಸಿಲ್ಲ. ಕಲ್ಯಾಣ ಮಂಟಪಗಳಲ್ಲಿ ಮದುವೆ ನಡೆದರೂ ಮನೆಗಳ ಮುಂದೆ ದೀಪಾಲಂಕಾರ, ಬಣ್ಣಸುಣ್ಣ ಮಾಡಿ, ಮನೆಯನ್ನೆಲ್ಲ ಗುಡಿಸಿ ಅಂದಗೊಳಿಸಲಾಗಿರುತ್ತೆ. ಅದರಂತೆ ಕನ್ನಡ ಭವನದಿಂದ ಸಮ್ಮೇಳನ ದೂರದ ಪಂಡಿತ ರಂಗಮಂದಿರಕ್ಕೆ ಸ್ಥಳಾಂತರಗೊಂಡರೂ ಕನ್ನಡ ಭವನ, ಅಲ್ಲಿನ ಆವರಣದಲ್ಲಿ ಝಗಮಗಿಸುವ ದೀಪಾಲಂಕಾರ ಕಂಡಿದ್ದರೆ ನೋಡುವವರು ಸಾಹಿತ್ಯ ಚಟುವಟಿಕೆಗಳ ಮನೂಲತಾಣದಲ್ಲಿ ಝಗಮಗ ದೀಪಗಳ ಬೆಳಕಾದರೂ ಇದೆಯಲ್ಲ ಎಂದು ಸಮಾಧಾನ ಪಡುತ್ತಿದ್ದರೇನೋ... ಈ ಬಾರಿ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಕನ್ನಡ ಭವನದ ಆವರಣ ಗೋಡೆ ಮುಂಭಾಗದಲ್ಲೇ ಕುಸಿದು ಕಟ್ಟಡ ಕಳೆಗುಂದಿದೆ. ಈಗಂತೂ ಸಮ್ಮೇಳನ ಅಲ್ಲಿ ನಡೆಯುವಾಗ ಇಲ್ಯಾಕೆ ಅಲಂಕಾರ ಎಂಬುದು ಕಸಾಪ ಪದಾಧಿಕಾರಿಗಳ ಧೋರಣೆಯಾಗಿರಬೇಕು. ಅದಕ್ಕೇ ಕನ್ನಡ ಭವನದ ಆವರಣ ಕತ್ತಲಲ್ಲಿ ಉಳಿಯುವಂತೆ ಹಾಗೇ ಬಿಟ್ಟಿದ್ದಾರೆಂದು ಅನೇಕರು 'ಕನ್ನಡಪ್ರಭ' ಜೊತೆ ಮಾತನಾಡುತ್ತ ತಮ್ಮ ನೋವು ಹಂಚಿಕೊಂಡರು. ಸಮ್ಮೇಳನದ ಉದ್ಘಾಟನೆಯಲ್ಲಿ ಕಸಾಪ ಅಧ್ಯಕ್ಷ ಮಹಿಪಾಲರೆಡ್ಡಿ ತಮ್ಮ ವರ್ಷವಿಡೀ ನಡೆದಂತಹ ಸಾಹಿತ್ಯ ಕಾರ್ಯಕ್ರಮಗಳ ವಿಚಾರ ಹೇಳುವಾಗ ಕನ್ನಡ ಭವನದ ಮೆಲಕು ಹಾಕಿದರು. ಆದರೆ ಅದ್ಯಾಕೋ ದೀಪಾಲಂಕಾರ, ಭವನದ ಸ್ವಚ್ಛತೆ ವಿಚಾರದಲ್ಲಿ ಯಾಕೆ ಇದನ್ನು ಮರೆತರೋ ಎಂದು ಸಾಹಿತ್ಯಾಸಕ್ತರು ಚಿಂತಿಸುವಂತಾಗಿದೆ.
ಹಚ್ಚೇವು ಕನ್ನಡದ ದೀಪ...
ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಅಕ್ಷತಾ ಪಾಟೀಲ್ ದೀಪಗಳೊಂದಿಗೆ ಕವಿ ಡಿ.ಎಸ್. ಕರ್ಕಿ ವಿರಚಿತ 'ಹಚ್ಚೇವು ಕನ್ನಡದ ದೀಪ...' ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಸಾಹಿತ್ಯಾಸಕ್ತರೆಲ್ಲರ ಗಮನ ಸೆಳೆದರು. ಅಕ್ಷತಾ ಅವರ ನಾಟ್ಯದ ಭಂಗಿಗಳಿವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

