ಗುಲ್ಬರ್ಗಾ

ವಿಷ್ಣುಸಹಸ್ರನಾಮ

Published On :

ಗುಲ್ಬರ್ಗ: ಇಲ್ಲಿನ ರಿಂಗ್ ರಸ್ತೆಯಲ್ಲಿರುವ ರವೀಂದ್ರನಾಥ ಟ್ಯಾಗೋರ್ ನಗರ, ಓಜಾ ಕಾಲೋನಿ ಬಡಾವಣೆಯ ಹಂಸನಾಮಕ ಪಾರಾಯಣ ಸಂಘದ ವಾರದ ವಿಷ್ಣುಸಹಸ್ರನಾಮ ಪಾರಾಯಣ ರವೀಂದ್ರನಾಥ ಹಂದರ್ಕಿ ಇವರ ಮನೆಯಲ್ಲಿ ಭಾನುವಾರ ನಡೆಯಿತು.  ನಾರಾಯಣಾಚಾರ್ಯ ಓಂಕಾರ ಇವರು ಸುಮಧ್ವ ವಿಜಯ ಪಾಠ ಹೇಳಿದರು. ವಿಶ್ವ ಮಧ್ವ ಮಹಾ ಪರಿಷತ್ ಜಿಲ್ಲಾಧ್ಯಕ್ಷ ಅರವಿಂದ ನವಲಿ ಇತ್ತೀಚೆಗೆ ಉಡುಪಿಯಲ್ಲಿ ಆರಂಭವಾಗಿರುವ ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥರ ಚಾತುರ್ಮಾಸದ ಸಮಾರಂಭದ ವಿಷಯವನ್ನು ವಿವರಿಸಿದರು. ಹಿರಿಯರಾದ ಗಣಪತರಾವ್ ಕುಲ್ಕರ್ಣಿ, ಪದ್ಮನಾಭಾಚಾರ್ಯ ಜೋಷಿ, ಸತೀಶಚಂದ್ರ ಅಲಗುಡಕರ್, ನರೇಂದ್ರ ಫಿರೋಜಾಬಾದ್ ಸೇರಿದಂತೆ ಸಂಘದ ಸದಸ್ಯರು ಭಾಗವಹಿಸಿದ್ದರು.
ಸಾಂಸ್ಕೃತಿಕ ಚಟುವಟಿಕೆ
ಸೇಡಂ: ತಾಲೂಕಿನ ಜಾಕನಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಾನು ನಮ್ಮೂರು ಶಾಲಾ ಮಕ್ಕಳ ವೇದಿಕೆ ಎಸ್.ಎಲ್. ಭೈರಪ್ಪ ಅವರ ಕಾದಂಬರಿ ಆಧಾರಿತ ತಬ್ಬಲಿಯು ನೀನಾದೆ ಮಗನೆ ಚಲನಚಿತ್ರವನ್ನು ಮಕ್ಕಳಿಗೆ ತೋರಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಲಕ್ಷ್ಮಣ ಬೇಡರ್, ಚಿತ್ರ ಪ್ರದರ್ಶನದಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಲಾಗುತ್ತಿದೆ. ಚಿತ್ರದಲ್ಲಿ ಬರುವ ಕಾಳಿಂಗನ ಬಗ್ಗೆ ಮತ್ತು ಕೊನೆಯಲ್ಲಿ ಆ ಕಾಳಿಂಗ ಗೋವುಗಳನ್ನು ಕರೆದಾಗ ಹಿಂದೆ ನೋಡುವ ಪರಿ ಮತ್ತು ಉಳಿದಂತೆ ಅನೇಕ ವಿಷಯಗಳ ಕುರಿತು ವಿದ್ಯಾರ್ಥಿಗಳು ಚರ್ಚಿಸಿದರು ಎಂದರು.  ನಾಟಕ ನಿರ್ದೇಶಕ ಅಶೋಕ ತೊಟ್ನಳ್ಳಿ, ಮುಖ್ಯಗುರು ಭೀಮಶಪ್ಪ, ದೊಡ್ಡ ಕಿಷ್ಟಪ್ಪ ಇದ್ದರು.
ದಾಸೋಹ ಆರಂಭ
ಆಳಂದ: ತಾಲೂಕಿನ ಮಾಡಿಯಾಳ ಗ್ರಾಮದ ಹೊರವಲಯದಲ್ಲಿರುವ ಏಳಕೋಟಿ ಮಲ್ಲಯ್ಯನ ದೇವಸ್ಥಾನದಲ್ಲಿ ಪ್ರತಿ ಅಮಾವಾಸ್ಯೆ ದಿನ ಭಕ್ತರೇ ಅನ್ನದಾಸೋಹದ ಕೈಗೊಂಡರು. ಅಮಾವಾಸ್ಯೆ ಮುಂಚೆಯೇ ದಾಸೋಹ ಸೇವೆಗಾಗಿ ತಮ್ಮ ಹೆಸರನ್ನು ಇಲ್ಲಿನ ದೇವಸ್ಥಾನ ಸಮಿತಿಯಲ್ಲಿ ಬಂದು ನೋಂದಾಯಿಸಲಾಗುತ್ತಿದೆ. ಒಂದು ದಿನದ ಸಂಪೂರ್ಣ ಖರ್ಚು ಹರಕೆ ಹೊತ್ತ ಭಕ್ತರೇ ಭರಿಸುತ್ತಾರೆ. ಇದರಿಂದ ದೇವಸ್ಥಾನ ಸಮಿತಿ ಕೂಡ ಹೊಸ, ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ದಿನೇ ದಿನೆ ಹೆಚ್ಚುತ್ತಿರುವ ಭಕ್ತರಿಗಾಗಿ ಭಕ್ತನಿವಾಸ ಕೋಣೆಗಳ ವ್ಯವಸ್ಥೆ, ಕಾಂಪೌಂಡ್ ನಿರ್ಮಾಣ, ದ್ವಾರ ಬಾಗಿಲು ನಿರ್ಮಾಣ, ಕುಡಿಯುವ ನೀರು ಸೇರಿದಂತೆ ಗುಡಿಯ ಸಂಪೂರ್ಣ ಆವರಣ ಸ್ವಚ್ಛತೆ ಕೈಗೊಳ್ಳಲು ದೇವಸ್ಥಾನ ಸಮಿತಿ ಕೈಗೊಳ್ಳುತ್ತಿದೆ ಎಂದು ಮುಖಂಡರು ಹೇಳಿದ್ದಾರೆ. ಲಾಲು ರಾಠೋಡ, ಪ್ರಭಾಕರ ಖಂಡೆಕರ, ವಿಠ್ಠಲ್ ಪೂಜಾರಿ, ಶಂಕರ ಬಿರಾದಾರ, ಸಿದ್ದರಾಮ ಪೂಜಾರಿ, ಮಹಾಂತಪ್ಪ ಬಿರಾದಾರ, ಉಪಸ್ಥಿತರಿದ್ದರು. ಪ್ರಸಾದ ಸೇವೆಯನ್ನು ವೆಂಕಟೇಶ ಕುಲಕರ್ಣಿ ನಡೆಸಿಕೊಟ್ಟರು.
ನಾಗೇಂದ್ರಪ್ಪ ನಿಧನ
ಶಹಾಬಾದ್: ಸಮೀಪದ ಭಂಕೂರ ವಾಡಾದ ಪ್ರಾಥಮಿಕ ಶಾಲೆಯ ಮುಖ್ಯಗುರು ನಾಗೇಂದ್ರಪ್ಪ(50) ಅವರು ಭಾನುವಾರ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂರು ಗಂಡು, ಹೆಣ್ಣು ಮಗು, ಅಪಾರ ಬಂಧು ಬಳಗ ಇದ್ದಾರೆ. ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ವಾಡಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.