ಗುಲ್ಬರ್ಗಾ

ವಾಡಿ ಪುರಸಭೆ: 11 ಕೋಟಿ ಆದಾಯ ಬಜೆಟ್

Published On :

ಶಹಾಬಾದ್: ವಾಡಿ ಪುರಸಭೆಯಲ್ಲಿ 2014-15ನೇ ಸಾಲಿನ 11 ಕೋಟಿಯ ಆದಾಯ ಆಯವ್ಯಯ ಪತ್ರವನ್ನು ಗುರುವಾರ ಯಾವುದೇ ಚರ್ಚೆಯಿಲ್ಲದೆ ಮಂಡಿಸಿ, ಅನುಮೋದನೆಯನ್ನೂ ಪಡೆಯಲಾಯಿತು. ಇದಕ್ಕೆ ಸದಸ್ಯರೂ ಸಂಪೂರ್ಣ ಸಾಥ್ ನೀಡಿದರು!
ಹೌದು, ಪುರಸಭೆ ಅಧ್ಯಕ್ಷೆ ಹಸೀನಾ ಬೇಗಂ ಖುರೇಶಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯಾಧಿಕಾರಿ ಎಸ್.ಬಿ. ಕಾಳೆ ಅವರು ಬಜೆಟ್ ಪ್ರತಿ ಮಂಡಣೆ ಮಾಡುತ್ತಿದ್ದಾಗ ಸದಸ್ಯ ವಿಜಯಕುಮಾರ್ ಅವರು, 'ನಾವು ಬಜೆಟ್ ಪ್ರತಿಯನ್ನು ಓದಿಕೊಳ್ಳುತ್ತೇವೆ ನೀವು ಸಾಕು ಮಾಡಿ' ಎಂದು ಹೇಳಿ ಸಂಪೂರ್ಣ ಬಜೆಟ್ ಮಂಡನೆಗೆ ಅವಕಾಶ ಕೊಡಲಿಲ್ಲ. ಇದರಿಂದ ಅಧಿಕಾರಿಗಳು ಆಯವ್ಯಯ ವಿವರ ನೀಡುವುದನ್ನು ಅರ್ಧಕ್ಕೆ ನಿಲ್ಲಿಸಿದ ಘಟನೆ ನಡೆಯಿತು.
ಆರಂಭಿಕ ಶುಲ್ಕ 8.49 ಕೋಟಿ. 2014- 15ನೇ ಸಾಲಿನ 2.55 ಕೋಟಿ ಆದಾಯ ನೀರಿಕ್ಷೆಯ ಒಟ್ಟು 11 ಕೋಟಿ ಆದಾಯ ಬಜೆಟ್ನ್ನು ಮುಖ್ಯಾಧಿಕಾರಿ ಕಾಳೆ ಮಂಡಿಸಿದರು. ಆದರೆ ಪ್ರಸಕ್ತ ಸಾಲಿನಲ್ಲಿ ಪುರಸಭೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಪಕ್ಷಿನೋಟ, ಯಾವ್ಯಾವ ಕಾಮಗಾರಿಗಳಿಗೆ ಎಷ್ಟೆಷ್ಟು ಹಣ ಮೀಸಲಿಡಬೇಕು ಎಂಬುದರ ಬಗ್ಗೆ ಚರ್ಚೆಯೇ ನಡೆಯಲಿಲ್ಲ.
ಮಾಹಿತಿ ವಂಚಿತ ಎಸ್ಸಿ-ಎಸ್ಟಿ ಜನತೆ: ಇದಕ್ಕೆ ಪುರಸಭೆಯ ಎಲ್ಲ ಸದಸ್ಯರು ಆಯವ್ಯಯ ಬಗ್ಗೆ ಚರ್ಚೆ ನಡೆಸುವ ಬಗ್ಗೆ ನಿರ್ಲಕ್ಷ್ಯ ತೋರಿದ್ದು ಪ್ರಮುಖ ಕಾರಣವಾಗಿತ್ತು. ಇದರಿಂದ ಮುಂದಿನ ಒಂದು ವರ್ಷ ವಾಡಿ ಪಟ್ಟಣಕ್ಕೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನತೆಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಸಿಗಬೇಕಾದ ಮಾಹಿತಿ ಅವಕಾಶ ತಪ್ಪಿ ಹೋಯಿತು.
ನಂತರ ನಡೆದ ಸಾಮಾನ್ಯ ಚರ್ಚೆಯಲ್ಲಿ ಎಸಿಸಿ ಕಾರ್ಖಾನೆಯ ಮನೆಗಳು, ರೈಲ್ವೆ ಕಾಲೋನಿ, ಪೊಲೀಸ್ ಕಾಲೋನಿ ಮನೆಗಳ ಸರ್ವೆ ನಡೆಸಿ ಅವುಗಳಿಗೆ ಕರ ವಸೂಲಿ ಮಾಡಲು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ನಡೆದ ಚರ್ಚೆಯಲ್ಲಿ ವಿಜಯ ನಾಯಕ, ಹರಿ, ಪ್ರಕಾಶ ನಾಯಕ, ಚಾಂದಮಿಯ್ಯಾ ಸೂರ್ಯಕಾಂತ ರದ್ದೇವಾಡಿ ಮಾತನಾಡಿದರು.
ಪರವಾನಗಿಯಿಲ್ಲದೆ ನಿರ್ಮಾಣ: ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆಯ ಆರೋಗ್ಯ ಉಪಕೇಂದ್ರ ಸ್ಥಾಪಿಸಲು ಸ್ಥಳ ನೀಡಿದ್ದರೂ ಬಲರಾಮ ಚೌಕ್ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಪುರಸಭೆಯ ಪರವಾನಗಿಯಿಲ್ಲದೆ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಉಪಾಧ್ಯಕ್ಷ ಮಲ್ಲೇಶಿ ಚುಕ್ಕೇರ ಆರೋಪಿಸಿದರು. ಪರವಾನಗಿಯಿಲ್ಲದೆ ನಿರ್ಮಿಸುತ್ತಿರುವ ಉಪಕೇಂದ್ರವನ್ನು ತೆರವುಗೊಳಿಸಬೇಕೆಂದು ಗಿರಿಮಲ್ಲಪ್ಪ, ಪ್ರಕಾಶ ನಾಯಕ, ಉಮಾದೇವಿ ಇತರರು ಆಗ್ರಹಿಸಿದರು.
ಪ್ರತಿ ವಾರ್ಡಿನಲ್ಲಿ ಜನರೊಂದಿಗೆ ಸಭೆ ಏರ್ಪಡಿಸಿದಾಗ ಅಲ್ಲಿಯ ಸಮಸ್ಯೆ ಅರಿವಾಗುತ್ತಿದೆ ಎಂದು ಮುಖ್ಯಾಧಿಕಾರಿಗಳು ಸಭೆಗೆ ತಿಳಿಸಿದಾಗ, ಅಭಿವೃದ್ಧಿ ಕಾಮಗಾರಿಗಳು ನಡೆಯದಿರುವ ಕಾರಣ ಜನ ನಮಗೆ ಉಗಿಯುತ್ತಾರೆಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಮೌನಾಚರಣೆ: ಮರಳಿನ ಸಮಸ್ಯೆಯಿಂದ ಅಭಿವೃದ್ಧಿ ಕಾರ್ಯಗಳು ವಿಳಂಬವಾಗಿದ್ದು ಶೀಘ್ರವೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿಗಳು ಆಶ್ವಾಸನೆ ನೀಡಿದರು. ಪ್ರಾರಂಭದಲ್ಲಿ ಮೃತಪಟ್ಟ ಸದಸ್ಯೆ ಭಾಗಮ್ಮ ಅವರ ಗೌರವಾರ್ಥ ಮೌನ ಆಚರಿಸಲಾಯಿತು.
ಸಭೆ ವಿಳಂಬ: ವಾಡಿ ಪುರಸಭೆ ಅಧ್ಯಕ್ಷರು, ಸರ್ವ ಸದಸ್ಯರು 11 ಗಂಟೆಗೆ ಸಭೆಗೆ ಹಾಜರಾದರೆ, ಮುಖ್ಯಾಧಿಕಾರಿಗಳು ಕಾರ್ಯದ ನಿಮಿತ್ತ ಕಚೇರಿಯಿಂದ ಹೊರಗೆ ಹೋಗಿದ್ದರಿಂದ ಅರ್ಧ ಗಂಟೆ ಸಭೆ ತಡವಾಗಿ ಆರಂಭವಾಯಿತು.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.