ಗುಲ್ಬರ್ಗಾ

ತೋರ್ಸಿದ್ದನ್ನೇ ತೋರಿಸ್ತೀರಿ...

Published On :

ಕ.ಪ್ರ. ವಾರ್ತೆ    ಗುಲ್ಬರ್ಗ    ಜು. 21
'ನೀವು(ಮಾಧ್ಯಮದವರು) ತೋರಿಸಿದ್ದನ್ನೇ ತೋರಿಸ್ತೀರಿ, ಇಡೀ ದಿನ ಒಂದೇ ವಿಷಯ ಹೈಲೆಟ್ ಮಾಡೋದ್ರಿಂದ ನೋಡುವವರಿಗೆ ಬೇಸರ ಆಗೋದಿಲ್ವಾ' ಎಂದು ಪ್ರಶಿಕ್ಷಣಾರ್ಥಿ ಪ್ರಶ್ನಿಸಿದರೆ, 'ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಮಾಧ್ಯಮದವರು ಏನೆಲ್ಲ ಮಾಡ್ತೀರಿ ಹೇಳ್ರಿ' ಎಂದು ಮತ್ತೊಂದು ಪ್ರಶ್ನೆ ತೂರಿಬಂತು.
ಇಂತಹ ಪ್ರಶ್ನೆಗಳ ನಡುವೆಯೇ ಮಾಧ್ಯಮದವರ ಸೇವೆ ಕೊಂಡಾಡುವ ಸಂಗತಿಗಳನ್ನು ಹೇಳುತ್ತಲೇ, 'ಹೀಗೆ ಬರೆದ್ರೆ ಹೇಗೆ, ಅದನ್ನ ಈ ರೀತಿ ಬರೆಯಬಹುದಿತ್ತಲ್ವಾ' ಎಂದು ಸಲಹೆ ಭರಿತ ಪ್ರಶ್ನೆಗಳು ಹಲವು. ಸುಮಾರು 2 ಗಂಟೆಗಳ ಸಂವಾದದಲ್ಲಿ ಇಂತಹ ಅನೇಕ ಪ್ರಶ್ನೆಗಳ ಬಾಣ ಮಾಧ್ಯಮದವರತ್ತ ತೂರಿ ಬಂದವು. ಅವುಗಳನ್ನೆಲ್ಲ ಮಾಧ್ಯಮ ಮಿತ್ರರು(ಮುದ್ರಣ- ವಿದ್ಯುನ್ಮಾನ) ಬಲು ಸಮರ್ಥವಾಗಿ ಎದುರಿಸಿದರಲ್ಲದೆ ಪ್ರಶ್ನೆ ಕೇಳಿದವರಿಗೆ ಮನವರಿಕೆ ಆಗುವ ರೀತಿಯಲ್ಲಿ ಉತ್ತರ ಸಹ ನೀಡಿದರು.
ಸ್ಥಳೀಯ, ರಾಜ್ಯ, ರಾಷ್ಟ್ರ ಮಟ್ಟದಲ್ಲಿನ ಮಾಧ್ಯಮ ಸಾಧನೆಗಳನ್ನು ವಿವರಿಸುತ್ತ ಮಾಧ್ಯಮ ಅದ್ಹೇಗೆ ಸಮಾಜಮುಖಿಯಾಗಿದೆ, ಬದಲಾವಣೆಗೆ ತುಡಿಯುತ್ತಿದೆ, ಹೇಗೆ ಸಾಮಾನ್ಯ ಜನರ ಧ್ವನಿಯಾಗುತ್ತಿದೆ, ಅನ್ಯಾಯ ಪ್ರತಿಭಟಿಸಿ ಅದ್ಹೇಗೆ ನೊಂದವರ ಧ್ವನಿಯಾಗುತ್ತಿದೆ ಎಂಬುದನ್ನು ಉದಾಹರಣೆ ಸಮೇತ ಪತ್ರಕರ್ತರು ಹೇಳಿದಾಗ ಪ್ರಶಿಕ್ಷಣಾರ್ಥಿ ಪೊಲೀಸರು ಮಾಧ್ಯಮದವರ ಸಾಧನೆ, ಸವಾಲುಗಳನ್ನೆಲ್ಲ ಅರಿತುಕೊಂಡರು.
ಸಂಪರ್ಕ ಸೇತುವೆ ನಿರ್ಮಾಣ ಪ್ರಯತ್ನ: ಇಲ್ಲಿನ ಹೊರವಲಯ ನಾಗನಹಳ್ಳಿ ಬಳಿ ಇರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿ ಪೊಲೀಸರು ಹಾಗೂ ಮಾಧ್ಯಮ ಮಿತ್ರರ ಸಂವಾದದ ಝಲಕ್ ಇದು. ಇದೇ ಮೊದಲ ಬಾರಿಗೆ ಪತ್ರಕರ್ತರು ಹಾಗೂ ಪ್ರಶಿಕ್ಷಣಾರ್ಥಿ ಪೊಲೀಸರ ಮಧ್ಯೆ ಸಂವಾದ ಏರ್ಪಡಿಸುವ ಮೂಲಕ ಸಂಪರ್ಕ ಸೇತುವೆ ಕಟ್ಟುವ ಕೆಲಸಕ್ಕೆ ಅಲ್ಲಿನ ಪ್ರಾಚಾರ್ಯ ಭಗವಾನ್ ಯತ್ನಿಸಿದ್ದರು. ಅವರ ಈ ಕಾರ್ಯ ಮಾಧ್ಯಮವರಿಂದ ಹಾಗೂ ಪ್ರಶಿಕ್ಷಣಾರ್ಥಿಗಳಿಂದ ಮೆಚ್ಚುಗೆ ಪಡೆಯಿತು.
ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಷಿ, ಪಿ.ಎಂ. ಮಣ್ಣೂರ, ಪ್ರಭಾಕರ ಜೋಷಿ, ವಿಶ್ವನಾಥ ಸ್ವಾಮಿ ಮೊದಲ್ಗೊಂಡು ಅನೇಕರ ಪ್ರಾಸ್ತಾವಿಕ ನುಡಿಗಳೊಂದಿಗೆ ಶುರುವಾದ ಕಾರ್ಯಕ್ರಮದಲ್ಲಿ ವೇದಿಕೆ ಪ್ರಶಿಕ್ಷಣಾರ್ಥಿಗಳ ಪ್ರಶ್ನೆಗಳಿಗೆ ತೆರೆದುಕೊಂಡವು.
ಸಮಾರಂಭದಲ್ಲಿ ಮಾತನಾಡಿದ ಪ್ರಾಚಾರ್ಯ ಭಗವಾನ್, ಪ್ರಶಿಕ್ಷಣಾರ್ಥಿಗಳಿಗೆ ಮಾಧ್ಯಮದವರೊಂದಿಗೆ ಸಂವಾದ ನಡೆಸಬೇಕು ಎಂಬುದು 5 ತಿಂಗಳ ಹಿಂದಿನ ಯೋಜನೆ. ಇದೀಗ ಕೈಗೂಡಿದೆ ಎಂದರಲ್ಲದೆ ಸಂವಾದದಲ್ಲಿರುವವರು ಕೈಗಾರಿಕಾ ಭದ್ರತಾ ಪಡೆಯ 543 ಪ್ರಶಿಕ್ಷಣಾರ್ಥಿಗಳಾಗಿದ್ದಾರೆ. ಬರುವ ದಿನಗಳಲ್ಲಿ ಪಿಎಸ್‌ಐಗಳು, ನಾಗರಿಕ ಪೊಲೀಸ್ ಹಾಗೂ ಸೇವೆಯಲ್ಲಿರುವ ಸಿಬ್ಬಂದಿ ತರಬೇತಿ ಸಂದರ್ಭದಲ್ಲಿಯೂ ಮಾಧ್ಯಮ ಸಂವಾದ ಏರ್ಪಡಿಸುವ ಅಗತ್ಯವಿದೆ ಎಂದರು.

ತಿಂಗಳ ಹಿಂದಿನ ಯೋಜನೆ
ವೇದಿಕೆಯಲ್ಲಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬೂರಾವ ಯಡ್ರಾಮಿ, ಸಿದ್ದು ಸುಬೇದಾರ್, ಸಂಜಯ ಚಿಕ್ಕಮಠ, ಸೂರ್ಯಕಾಂತ ಜಮಾದಾರ, ರಾಮಕೃಷ್ಣ ಬಡಶೇಷಿ ಸೇರಿದಂತೆ ಅನೇಕ ಪತ್ರಕರ್ತರು ಉತ್ತರಗಳನ್ನು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.