ರೇಪ್ ಅಲ್ಲ, ಲೈಂಗಿಕ ಹಲ್ಲೆ... ಅಂದ್ರು ಇಸ್ಲಾಂ
ಕ.ಪ್ರ. ವಾರ್ತೆ ಗುಲ್ಬರ್ಗ ಜು. 19
ಜೇವರ್ಗಿಯಲ್ಲಿ 2 ದಿನಗಳ ಹಿಂದೆ(ಗುರುವಾರ) ಸಂಭವಿಸಿದ್ದ 7 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಸುತ್ತ ರಾಜಕೀಯ ಗಿರಕಿ ಹೊಡೆಯಲಾರಂಭಿಸಿದೆ. ಏಕೆಂದರೆ ಈ ಪ್ರಕರಣದ ಕುರಿತಂತೆ ಜಿಲ್ಲೆಯ ಇಬ್ಬರು ಸಚಿವರು ವಿಚಿತ್ರ ಧೋರಣೆ ತಾಳಿದ್ದೇ ಪ್ರಕರಣದ ಸುತ್ತ ರಾಜಕೀಯಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.
ಅತ್ಯಾಚಾರಕ್ಕೊಳಗಾಗಿರುವ ಬಾಲಕಿ ತಾಯಿ ನೀಡಿರುವ ದೂರನ್ನಾಧರಿಸಿ ನೆಲೋಗಿ ಪೊಲೀಸರು ರೇಪ್ ಪ್ರಕರಣ ದಾಖಲಿಸಿಕೊಂಡಿದ್ದಲ್ಲದೆ ಶುಕ್ರವಾರ ಆರೋಪಿ ಮಹಿಬೂಬ್ ಕಾಸರಬೋಸ್ಗಾನನ್ನು ಬಂಧಿಸಿ ವಶಕ್ಕೂ ತೆಗೆದುಕೊಂಡಿದ್ದಾರೆ.
ಇಷ್ಟೆಲ್ಲ ಪೊಲೀಸ್ ಪಕ್ಷದಲ್ಲಿ ನಡೆದರೂ ಸಹ ಜಿಲ್ಲಾ ಉಸ್ತುವಾರಿ ಮಂತ್ರಿ ಖಮರುಲ್ ಇಸ್ಲಾಂ ಕಾಸರಭೋಸ್ಗಾ ಪ್ರಕರಣದಲ್ಲಿ ಅದು ರೇಪ್ ಅಲ್ಲ, ಲೈಂಗಿಕ ಹಲ್ಲೆ ಮಾತ್ರ ಎಂದು ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಸೇಡಂ ಶಾಸಕರು, ವೈದ್ಯಕೀಯ ಶಿಕ್ಷಣ ಸಚಿವರಾಗಿರುವ ಡಾ. ಶರಣಪ್ರಕಾಶ ಪಾಟೀಲ್ ಶುಕ್ರವಾರ ಗುಲ್ಬರ್ಗ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಅನೇಕ ಸಂಗತಿಗಳನ್ನು ಪರಿಶೀಲಿಸಿದರೂ ಸಹ ಅವರು ಆಸ್ಪತ್ರೆಯಲ್ಲೇ ದಾಖಲಾಗಿ ಚಿಕಿತ್ಸೆಗೊಳಲಾಗಿರುವ ಅತ್ಯಾಚಾರಕ್ಕೊಳಗಾದ ಬಾಲಕಿಯ ಕುಟುಂಬವನ್ನು ಕಾಣುವ ಗೋಜಿಗೆ ಹೋಗದ ಬೆಳವಣಿಗೆಯೂ ನಡೆದಿದೆ.
ವಿಪಕ್ಷಗಳ ದಾಳಿಗೆ ಸರ್ಕಾರ ತೀವ್ರ ಪೇಚಿಗೆ ಸಿಲುಕಿರುವ ಸಂದರ್ಭದಲ್ಲೇ ಅವರ ಸರ್ಕಾರದಲ್ಲಿರುವ ಇಬ್ಬರು ಸಚಿವರು ಅತ್ಯಾಚಾರ ಪ್ರಕರಣದ ಹಿನ್ನೆಲೆ ವರ್ತಿಸಿರುವ ರೀತಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕೇವಲ ಲೈಂಗಿಕ ಹಲ್ಲೆ: ಇಸ್ಲಾಂ
ತೊಗರಿ ಪಾರ್ಕ್ ಕುರಿತಾಗಿ ಮಾಹಿತಿ ನೀಡಲು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಕಾಸರಬೋಸ್ಗಾ ಬಾಲಕಿ ಅತ್ಯಾಚಾರ ಪ್ರಕರಣದ ಬಗ್ಗೆ ತಾವೇ ಪ್ರಸ್ತಾಪ ಮಾಡಿದ್ದಲ್ಲದೆ ಅದು ರೇಪ್ ಅಲ್ಲ, ಅಲ್ಲಿ ರೇಪ್ ನಡೆದಿಲ್ಲ, ಅದೊಂದು ಸೆಕ್ಸುವಲ್ ಅಸಾಲ್ಟ್ ಕೇಸ್... ಎಂದು ತಮಗೆ ಮಾಹಿತಿ ಬಂದಿದೆ(ಪೊಲೀಸ್, ವೈದ್ಯರು) ಎಂದರು. ಜೇವರ್ಗಿ ಪೊಲೀಸರು ಅತ್ಯಾಚಾರಿ ಆರೋಪಿ ಮಹಿಬೂಬ್ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ಹಂತದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರು ಈ ರೀತಿ ಹೇಳಿಕೆ ನೀಡಿರುವುದು ಇಡೀ ಪ್ರಕರಣದ ತನಿಖೆಯ ದಿಕ್ಕು ಬದಲಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಅತ್ಯಾಚಾರ ಪ್ರಕರಣ ಸಂಭವಿಸಿದೆ ಅಂದಾಕ್ಷಣ ಅಲ್ಲಿ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತವೆ. ಸಾಂದರ್ಭಿಕ ಸಾಕ್ಷಗಳು ಮಹತ್ವ ಪಡೆಯುತ್ತವೆ. ಬಾಲಕಿಯ ಹೇಳಿಕೆಯೂ ಅತ್ಯಂತ ಮಹತ್ವ ಪಡೆಯುತ್ತದೆ. ಹೀಗಿದ್ದರೂ ಸಚಿವರು ಅತ್ಯಾಚಾರವೆಂದು ಪೊಲೀಸರು ದಾಖಲಿಸಿರುವ ಪ್ರಕರಣವನ್ನು ಸೆಕ್ಸುವಲ್ ಅಸಾಲ್ಟ್ ಎಂದು ಹೇಳುವ ಮೂಲಕ ಅದಕ್ಕೊಂದು ತಿರುವು ನೀಡಿದ್ಯಾಕೆ ಎಂಬುದು ತಿಳಿಯಲಿಲ್ಲ. ಈ ಬಗ್ಗೆ ಸುದ್ದಿಗಾರರು ಸಚಿವರಿಗೆ ಪ್ರಶ್ನೆಗಳ ಸುರಿಮಳೆಗರೆದಾಗ ಅವರು ಸ್ಪಷ್ಟ ವಿವರಣೆ ನೀಡಲೇ ಇಲ್ಲ.
ಆರೋಪಿ ಮಹಿಬೂಬ್ ಪೊಲೀಸ್ ಅತಿಥಿ
ಕಾಸರಭೋಸ್ಗಾ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಮಹಿಬೂಬ್(47)ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯನ್ನು ತಕ್ಷಣ ಬಂಧಿಸಬೇಕು ಎಂದು ಶಾಸಕ ಡಾ. ಅಜಯಸಿಂಗ್ ಪೊಲೀಸರಿಗೆ ಸೂಚಿಸಿದ್ದರು. ಕಾರ್ಯಪ್ರವೃತ್ತರಾಗಿರುವ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಗೆ ಬಂದರೂ ಸಾಂತ್ವನ ಹೇಳದ ಮಂತ್ರಿ
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಜಿಲ್ಲಾಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿದರೂ ಸಹ ಅತ್ಯಾಚಾರಕ್ಕೊಳಗಾಗಿ ಭಯಗ್ರಸ್ತಳಾಗಿರುವ ಬಾಲಕಿಗಾಗಲಿ, ಆಕೆಯ ಕುಟುಂಬ ವರ್ಗಕ್ಕಾಗಲಿ ಕಂಡು ಮಾತುಕತೆ ನಡೆಸಲಿಲ್ಲ, ಸಾಂತ್ವನ ಸಹ ಹೇಳಲಿಲ್ಲ. ಈ ಬಗ್ಗೆ ಬಿಜೆಪಿ ಮುಖಂಡ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿಕೆ ನೀಡಿದ್ದು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಧೋರಣೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದಾರೆ. ಮಾನವೀಯತೆಯಿಂದಲಾದರೂ ಸಚಿವರು ಆಸ್ಪತ್ರೆಯಲ್ಲೇ ಇದ್ದ ಬಾಲಕಿಯನ್ನು ಕಂಡು ಮಾತನಾಡಿಸಬೇಕಿತ್ತು. ಅದ್ಯಾವುದನ್ನೂ ಮಾಡದೆ ತಮ್ಮ ಪಾಡಿಗೆ ತಾವು ಪರಿಶೀಲನೆ ನಡೆಸಿ ಹೋಗಿದ್ದು ನಿಜಕ್ಕೂ ಎಲ್ಲರೂ ಖಂಡಿಸಲೇಬೇಕಾದ ಸಂಗತಿ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

