'ಸರ್ಕಾರ ಅಸ್ತಿತ್ವದ ಅನುಮಾನ'
ಯಾದಗಿರಿ: ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ನಗರದಲ್ಲಿ ಸರ್ಕಾರ ಅಸ್ತಿತ್ವದಲ್ಲಿರುವುದು ಅನುಮಾನಕ್ಕೀಡು ಮಾಡಿದೆ ಎಂದು ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಂಚಾಲಕ ವೈಜನಾಥಸ್ವಾಮಿ ಹಿರೇಮಠ ದೂರಿದರು.
ನಗರದ ಚಿತ್ತಾಪುರ ರಸ್ತೆಯಲ್ಲಿರುವ ವೀರಭಾರತಿ ಪ್ರತಿಷ್ಠಾನ ಕಚೇರಿ ಸಭಾಂಗಣದಲ್ಲಿ ಜರುಗಿದ ಆಮ್ ಆದ್ಮಿ ಪಾರ್ಟಿ ಜಿಲ್ಲಾ ಸಮಿತಿ ಹಾಗೂ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಸ್ತುವಾರಿ ಸಚಿವರ ನಿರ್ಲಕ್ಷ್ಯ: ಜಿಲ್ಲೆಯ ಉಸ್ತುವಾರಿ ನೋಡಿಕೊಳ್ಳಬೇಕಾದ ಮಂತ್ರಿ ಬಾಬುರಾವ್ ಚಿಂಚನಸೂರು ಕಳೆದ ಸುಮಾರು ತಿಂಗಳುಗಳಿಂದ ನಗರಕ್ಕೆ ಆಗಮಿಸದೇ ಇರುವುದನ್ನು ಖಂಡಿಸಿ, ಕಳೆದ ಆರು ತಿಂಗಳಾದರೂ ಕೆಡಿಪಿ ಸಭೆ ನಡೆಸದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದು ಜರೆದರು.
ಕಳೆದ ವರ್ಷ ಸಚಿವರಿಗೆ ಎಚ್ಚರಿಕೆ ನೀಡಿದ ಸಂದರ್ಭದಲ್ಲಿ ನಗರದಲ್ಲಿ ನಿವಾಸ ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಂದಿಗೂ ಚಾಲ್ತಿಗೆ ಬಂದಿಲ್ಲ. ಸಚಿವರನ್ನು ಭೇಟಿ ಮಾಡಬೇಕೆಂದರೆ ಗುಲ್ಬರ್ಗ ಅಥವಾ ಬೆಂಗಳೂರಿಗೆ ಹೋಗಬೇಕು. ಇತ್ತ ಗುರುಮಠಕಲ್ ಕ್ಷೇತ್ರದ ಮತದಾರರು ಶಾಸಕರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಆಪಾದಿಸಿದರು.
ಆಶ್ರಯ ಮನೆಗಾಗಿ ನರಕವಾದ ಸಭೆ: ನಗರದಲ್ಲಿ ಆಶ್ರಯ ಮನೆ ಹಂಚಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿರುವುದು ತುಘಲಕ್ ದರ್ಬಾರನ್ನು ನೆನಪಿಸುತ್ತಿದೆ ಎಂದು ಹಿರೇಮಠ ಲೇವಡಿ ಮಾಡಿದರು.
ದೆಹಲಿ ಆಪ್ ಶಾಸಕರನ್ನು ನೋಡಿ ಕಲಿಯಿರಿ: ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಶಾಸಕರು ಮೊಹಲ್ಲಾ ಸಭೆ ನಡೆಸಿ ಮನೆ ಹಂಚಿದಂತೆ, ಅನುದಾನ ಬಳಕೆ ಮಾಡಿದಂತೆ ಜಿಲ್ಲೆಯಲ್ಲಿಯೂ ಶಾಸಕರುಗಳು ಮಾಡಬೇಕು. ಈ ಕಾರ್ಯಕ್ಕೆ ಶಾಸಕರು ಹಾಗೂ ನಗರಸಭೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ಯಾದಗಿರಿ ನಗರಸಭೆ ಸೇರಿದಂತೆ ಎಲ್ಲ ಪಟ್ಟಣ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿವಾರು ಸಮಿತಿಗಳನ್ನು ಶೀಘ್ರ ರಚನೆ ಮಾಡಬೇಕು ಎಂದು ಅವರು ಸೂಚಿಸಿದರು.
ಸಭೆಯಲ್ಲಿ ಮೊದಲಿಗೆ ರಮೇಶ್ ರಾಠೋಡ ಸ್ವಾಗತಿಸಿದರು. ಸೋಮನಾಥ, ಶರಣು. ಎಸ್, ಡಿ. ಮಲ್ಲಿಕಾರ್ಜುನ ಹತ್ತಿಕುಣಿ ಅಪ್ಪುಕುಟ, ಶಿವುಕುಮಾರ. ಎಚ್, ಮುದುಕಪ್ಪ, ಜೈಸಿಂಗ್ ರಾಠೋಡ, ಶರಣಪ್ಪ, ಮಲ್ಲಪ್ಪ. ಸಿ, ಶಂಕರ, ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

