ಗುಲ್ಬರ್ಗಾ

ಧಾರಾಕಾರ ಮಳೆಗೆ ಅನ್ನದಾತ ಹರುಷ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜು.10
ಜಿಲ್ಲಾದ್ಯಂತ ಕಳೆದ ನಾಲ್ಕೈದು ದಿನಗಳಿಂದ ಮಳೆ ಸುರಿಯುತ್ತಿದ್ದು, ನಾಯ್ಕಲ್ ಗ್ರಾಮದ ಹಲವು ಮನೆಗಳು ಮಂಗಳವಾರ ಸಂಜೆ ಜಲಾವೃತಗೊಂಡಿದ್ದವು. ಅಲ್ಲದೆ, ಸಣ್ಣಕೆರೆ ಮತ್ತು ದೊಡ್ಡ ಕೆರೆಗಳು ಭರ್ತಿಯಾಗುವ ಹಂತಕ್ಕೆ ಬಂದಿವೆ. ಇದು ರೈತರು ಮತ್ತು ಜಾನುವಾರುಗಳಿಗೆ ಹರ್ಷ ತಂದಿದೆ.
ಜುಲೈನಲ್ಲಿ ವಾಡಿಕೆ ಮಳೆ 459 ಮಿಮೀ. ಆದರೆ ಜು.9ರವರೆಗೆ ಆದ ಮಳೆ 204 ಮಿಮೀ. ಶಹಾಪುರದಲ್ಲಿ 30 ಮಿಮೀ, ಸುರಪುರದಲ್ಲಿ 43.6 ಮಿಮೀ, ಯಾದಗಿರಿಯಲ್ಲಿ 131.6 ಮಿಮೀ ಮಳೆ ಸುರಿದಿದೆ.
2,69,192 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 24,645 ಹೆಕ್ಟೇರ್ ಬಿತ್ತನೆ(ಶೇ. 9.5)ಯಾಗಿದೆ. ಕಳೆದ ಜೂನ್ ಅಂತ್ಯದವರೆಗೂ ಶೇ.2ರಷ್ಟು ಬಿತ್ತಯಾಗಿದ್ದು, ಜುಲೈ ತಿಂಗಳ ಒಂದು ವಾರದಲ್ಲಿ ಶೇ.9.5 ಬಿತ್ತನೆಯಾಗಿದ್ದು, ಈ ಪೈಕಿ ಯಾದಗಿರಿ ತಾಲೂಕಿನಲ್ಲಿ ಅಧಿಕ ಎಂದು ಕೃಷಿ ಇಲಾಖೆಯ ಉಪನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದ್ದಾರೆ.
ಜಮೀನು ಜಲಾವೃತ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳಿಗೆ ಹೊಲ- ಗದ್ದೆಗಳು ಜಲಾವೃತಗೊಂಡಿದ್ದವು. ನಾಯ್ಕಲ್ ಗ್ರಾಮದಲ್ಲಿ ಭಾರೀ ಮಳೆ ಸುರಿದಿದ್ದರಿಂದ ಭೂಮಿಯಲ್ಲಿ ನೀರು ನಿಂತು ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಅಲ್ಲದೆ ಹೊಲದ ಒಡ್ಡುಗಳು ಒಡೆದಿವೆ.
ಖಾನಾಪುರ, ಉಳ್ಳೆಸುಗೂರ, ಕಾಡಂಗೇರಾ, ದೋರನಹಳ್ಳಿ, ತಡಿಬಿಡಿ, ಚಟ್ನಳ್ಳಿ ಗ್ರಾಮಗಳಲ್ಲಿ ಮಳೆಯ ಆಗದ ಬಗ್ಗೆ ವರದಿಗಳು ಬಂದಿವೆ. ಹತ್ತಿ, ತೊಗರಿ, ಶೇಂಗಾ, ಸೂರ್ಯಕಾಂತಿ ಬಿತ್ತನೆ ಕಾರ್ಯಕ್ಕೆ ಹಿನ್ನಡೆ ಉಂಟಾಗಿದೆ ಎಂದು ರೈತರು ತಿಳಿಸಿದ್ದಾರೆ.
ಜಮೀನುಗಳಲ್ಲಿ ಮಳೆ ನೀರು ಖಾಲಿಯಾಗಬೇಕು, ತೇವಾಂಶ ಪ್ರಮಾಣ ಕಡಿಮೆ ಆದ ಬಳಿಕ ಬಿತ್ತನೆಗೆ ರೈತರು ಮುಂದಾಗಲಿದ್ದಾರೆ. ಹಲವು ಬಡಾವಣೆಗಳಿಗೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ ಸಂಗ್ರಹವಾದ ನೀರನ್ನು ಹೊರ ಹಾಕಲು ರೈತರು ಮುಂದಾಗಿದ್ದರು.
ಪಿಡಿಒ ಭೇಟಿ: ನಾಯ್ಕಲ್‌ನಲ್ಲಿ ನೀರು ನುಗ್ಗಿದ ಬಡಾವಣೆಗಳಿಗೆ ಮಂಗಳವಾರ ಸಂಜೆ ಮತ್ತು ಬುಧವಾರ ಬೆಳಗ್ಗೆ ಪಿಡಿಒ ಸಿದ್ರಾಮಪ್ಪ ಮತ್ತು ಕಾರ್ಯದರ್ಶಿ ರೇವಣಸಿದ್ದಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಆಶ್ರಯ ಕಾಲೋನಿಗೆ ಭೇಟಿ ನೀಡಿದಾಗ ಅಲ್ಲಿನ ನಿವಾಸಿಗಳು ಗ್ರಾಪಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಳೆ ಬಂದಾಗ ಮಾತ್ರ ನಿಮಗೆ ಆಶ್ರಯ ಕಾಲೋನಿ ನೆನಪಾಗುತ್ತದೆ. ಮಳೆಯ ನೀರು ಮನೆಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮಲಗುವುದಕ್ಕೂ ಜಾಗವಿಲ್ಲದೆ ಜಾಗರಣೆ ಮಾಡುವಂತಾಗಿದೆ. ನೀವು ಹಾಗೆ ಬಂದು, ಹೀಗೆ ಹೋಗುತ್ತೀರಿ, ಸಮಸ್ಯೆ ಪರಿಹರಿಸುವುದಿಲ್ಲ ಎಂದು ಮಹಿಳೆಯರನೇಕರು ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳು ಗ್ರಾಪಂ ಸದಸ್ಯರ ಸಭೆ ಸೇರಿಸಿ ತಾತ್ಕಲಿಕ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಶಾಶ್ವತವಾಗಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.