ಗುಲ್ಬರ್ಗಾ

ತೊಗರಿಗೆ ಅ'ಋಣ'ರಾಗ

Published On :

ಶೇಷಮೂರ್ತಿ ಅವಧಾನಿ
 ಗುಲ್ಬರ್ಗ: ಅರುಣ್ ಜೇಟ್ಲಿ ಬಜೆಟ್‌ನಲ್ಲಾದರೂ ತಮ್ಮ ಬೇಡಿಕೆಗಳು ಈಡೇರುತ್ತವೆ ಎಂಬ ಆಶಾಭಾವ ಹೊಂದಿದ್ದ ರೈತರಿಗೆ ನಿರಾಶೆ ತಂದಿದ್ದು, ಮತ್ತೆ 'ಋಣ'ಭಾರದಲ್ಲಿ ಬದುಕುವಂತಾಗಿದೆ.
ಆದರೆ ಇಡೀ ಬಜೆಟ್‌ನಲ್ಲಿ ಗುಲ್ಬರ್ಗ ಮತ್ತು ಬೀಜದರ್‌ನಲ್ಲಿ ರಾಷ್ಟ್ರೀಯ ಹೂಡಿಕೆ ಹಾಗೂ ಉತ್ಪಾದನಾ ವಲಯ ಸ್ಥಾಪನೆಯ ಘೋಷಣೆ ಮಾಡಿದ್ದು ಕೊಂಚ ಸಮಾಧಾನಕರ ವಿಚಾರ. ಇದನ್ನು ಹೊರತುಪಡಿಸಿದರೆ ಬಜೆಟ್‌ನಲ್ಲಿನ ಇನ್ನಾವ ಅಂಶವೂ ಈ ಭಾಗದ ಜನಮನಕ್ಕೆ ಹತ್ತಿರವಾಗಲಿಲ್ಲ.
ದೇಶಿ ತೊಗರಿ ಬೆಳೆಯುವ ರೈತರಿಗೆ ಕೇಂದ್ರ ಬೆಂಬಲವಾಗಿ ನಿಲ್ಲಬೇಕು. ಇದಕ್ಕೆ ಪ್ರತಿಯಾಗಿ ಆಮದು ತೊಗರಿ ಮೇಲೆ ಶೇ.30ರಿಂದ 40ರಷ್ಟು ಸುಂಕ ವಿಧಿಸಬೇಕೆದು ತೊಗರಿ ಬೆಳೆಗಾರರು ಕೇಂದ್ರದ ಗಮನ ಸೆಳೆದಿದ್ದರು. 2 ವಾರಗಳ ಹಿಂದಷ್ಟೇ ದೆಹಲಿಗೆ ಹೋಗಿ 8 ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಭರವಸೆ ನೀಡಿದ್ದರಂತೆ..: ಪ್ರಧಾನಿಯಿಂದ ಹಿಡಿದು ಎಲ್ಲ ಸಚಿವರು ತೊಗರಿ ರೈತರ ಬೇಡಿಕೆಗೆ ಸ್ಪಂದಿಸಿ ಬಜೆಟ್‌ವರೆಗೆ ಕಾಯಿರಿ ಎಂದಿದ್ದರಂತೆ. ಆದರೆ ಜೇಟ್ಲಿ ಬಜೆಟ್‌ನಲ್ಲಿ ಆಮದು ತೊಗರಿಗೆ ಸುಂಕ ವಿಧಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಇದು ರೈತರನ್ನು ಕೆರಳಿಸಿದೆ.
ಏಕೆಂದರೆ ಭಾರತ ತನ್ನ ನೆರೆಯ ದೇಶಗಳಿಂದ ಈಚೆಗಷ್ಟೇ 7 ಲಕ್ಷ ಟನ್ ತೊಗರಿ ಆಮದು ಮಾಡಿಕೊಂಡಿದೆ.  ಗುಲ್ಬರ್ಗ ಸೇರಿದಂತೆ 5 ಜಿಲ್ಲೆಗಳಲ್ಲಿ ರೈತರು ಬೆಳೆದ ಲಕ್ಷಾಂತರ ಟನ್ ತೊಗರಿ ಸೂಕ್ತ ಬೆಲೆಯಿಲ್ಲದೆ ಬಿದ್ದಿರುವಾಗ ತೊಗರಿ ಆಮದಿಗೆ ಯಾಕೆ ಮುಂದಾಗಬೇಕು. ಅದೂ ಸುಂಕಮುಕ್ತ ಆಮದು ಯಾಕೆ ಎಂಬುದು ತೊಗರಿ ರೈತರ ಪ್ರಶ್ನೆ.
ಇದಲ್ಲದೆ ತೊಗರಿ ಬೆಳೆಗಾರರು ಹಾಗೂ ಬೇಳೆ ಕಾರ್ಖಾನೆಗಳ ಸುಸ್ಥಿರತೆ ಮತ್ತು ಅಭಿವೃದ್ಧಿಗಾಗಿ 1,000 ಕೋಟಿ ಮೀಸಲಿಡುವ ವಿಶೇಷ ಪ್ಯಾಕೇಜ್ ಬಗ್ಗೆಯೂ ರೈತರು ಭಾರಿ ನಿರೀಕ್ಷೆ ಹೊಂದಿದ್ದರು. ಈ ಬಗ್ಗೆಯೂ ಬಜೆಟ್‌ನಲ್ಲಿ ಚಕಾರವಿಲ್ಲ.
ವಿಶೇಷ ಅನುದಾನವೂ ಇಲ್ಲ: ಕಲಂ 371(ಜೆ) ಅಡಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ಹೈ-ಕ 6 ಜಿಲ್ಲೆಗಳಲ್ಲಿ ಪ್ರಗತಿ ಕೆಲಸಗಳನ್ನು ಕೈಗೊಳ್ಳಲು ವಿಶೇಷ ಅನುದಾನ ಘೋಷಿಸುತ್ತಾರೆಂಬ 6 ಜಿಲ್ಲೆಗಳ ಜನರ ನಿರೀಕ್ಷೆಯೂ ಹುಸಿಯಾಯ್ತು. ಏಕೆಂದರೆ ಅನುದಾನ ನೀಡುವ ಯಾವುದೇ ಸಂಗತಿ ಜೇಟ್ಲಿ ಬಜೆಟ್‌ನಲ್ಲಿ ಪ್ರಸ್ತಾಪವಾಗಲೇ ಇಲ್ಲ.
ಹೈ-ಕ ಪ್ರದೇಶಕ್ಕೆ ಕೃಷಿ, ಕೈಗಾರಿಕಾ ನೀತಿಯನ್ನು ಘೋಷಿಸಿ ಇಲ್ಲಿನ ಉದ್ದಿಮೆದಾರರಿಗೆ ಸಾಕಷ್ಟು ಸವಲತ್ತುಗಳನ್ನು ಘೋಷಿಸುವ ನಿರೀಕ್ಷೆಯೂ ಕೈಗೂಡಲಿಲ್ಲ. ಐಐಟಿ ಹಾಗೂ ಐಐಎಂಎಸ್ ಸಂಸ್ಥೆಗಳನ್ನು ಕರ್ನಾಟಕದಲ್ಲಿ, ಅದರಲ್ಲೂ ಶೈಕ್ಷಣಿಕವಾಗಿ ಹಿಂದಿರುವ ಹೈ-ಕ ಜಿಲ್ಲೆಗಳಲ್ಲಿ ಸ್ಥಾಪಿಸುವ ವಿಚಾರವಾಗಿಯೂ ಬಜೆಟ್ ಯಾವುದೇ ಸಂಗತಿಗಳನ್ನು ಒಳಗೊಂಡಿರಲಿಲ್ಲ.
ಜೇಟ್ಲಿ ಮುಂಗಡ ಪತ್ರದಲ್ಲಿ ಹೈ-ಕ ಜಿಲ್ಲೆಗಳ ಇಂತಹ ಬೇಡಿಕೆಗಳಿಗೆ ಯಾವುದೇ ರೂಪದ ಸ್ಪಂದನೆ ದೊರಕದೆ ಹೋಗಿದ್ದು ಇಲ್ಲಿನ ಜನತೆಗೆ ತೀವ್ರ ನಿರಾಶೆ ತಂದಿದೆ.
ಎಚ್ಕೆಸಿಸಿಐ ಮಿಶ್ರ ಪ್ರತಿಕ್ರಿಯೆ
ಕೃಷಿ ಮತ್ತು ಉದ್ದಿಮೆ ಪ್ರಗತಿಗೆ ಘೋಷಣೆಯಾಗಿರುವ ಯೋಜನೆಗಳು ಸ್ವಾಗತಾರ್ಹ. ಆದರೆ ತೆರಿಗೆ ವಿಚಾರದಲ್ಲಿ ತೊಗರಿ ರೈತರ ಬೇಡಿಕೆ ಕಡೆಗಣಿಸಲಾಗಿದೆ. ಜೊತೆಗೇ ಹೈ-ಕ ಭಾಗಕ್ಕೆ ಗಮನನೀಡಿಲ್ಲ ಎಂದು ಹೈಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರಾಧಾಕೃಷ್ಣ ರಘೋಜಿ, ಕಾರ್ಯದರ್ಶಿ ಅಮರನಾಥ ಪಾಟೀಲ್, ತೆರಿಗೆ ಸಲಹೆಯ ಉಪ ಸಮೀತಿ ಸದಸ್ಯರಾದ ಗುರುದೇವ ದೇಸಾಯಿ ಹೇಳಿದ್ದಾರೆ. ಗುಲ್ಬರ್ಗ ಹಾಗೂ ಬೀದರ್‌ನಲ್ಲಿ ಹೂಡಿಕೆ ವಲಯ ಆರಂಭಿಸುವುದಾಗಿ ನೀಡಿರುವ ಹೇಳಿಕೆ ಸ್ವಾಗತಾರ್ಹ. ಆದರೆ ತೊಗರಿ ಆಮದಿನ ಮೇಲೆ ಸುಂಕ ವಿಧಿಸಬೇಕೆಂಬ ರೈತರ ಬೇಡಿಕೆ ಈಡೇರಿಲ್ಲ. ಜೊತೆಗೇ ಹೈ-ಕ ಭಾಗದಲ್ಲಿ ಯಾವುದೇ ಗಮನಾರ್ಹ ಅಭಿವೃದ್ಧಿ ಯೋಜನೆ ಮಂಜೂರಾಗಲಿಲ್ಲ ಎಂದಿದ್ದಾರೆ. ಪ್ರಸ್ತುತ ಚಾಲ್ತಿಯಲ್ಲಿರುವ ಆದಾಯ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು, ಶಿಕ್ಷಣ ತೆರಿಗೆ, ಉಪಕರ ತೆರಿಗೆಗಳನ್ನು ಮುಂದುವರಿಸಿದ್ದು, ಆಮದು ಮಾಡಿಕೊಳ್ಳುತ್ತಿರುವ ಬೇಳೆಕಾಳುಗಳ ಮೇಲೆ ಸುಂಕ ವಿಧಿಸದೆ ಇರುವುದು ಸರಿಯಾದ ಕ್ರಮವಲ್ಲ. ಸೇವಾ ತೆರಿಗೆ, ಉಪ ತೇರಿಗೆ ಮುಂದುವರಿಸಿದ್ದು ಸರಿಯಲ್ಲ. ಜಿಎಸ್ಟಿ ಜಾರಿಗೊಳಿಸುವ ವಿಚಾರದಲ್ಲಿ ಯಾವುದೇ ಸಮಯ ಪ್ರಸ್ತಾಪಿಸಲಾಗಿಲ್ಲ. ಇವೆಲ್ಲ ಕಾರಣಗಳಿಂದ ಬಜೆಟ್ ಸಂಪೂರ್ಣ ಜನಪರ ಎನ್ನಲಾಗದು. ವಿತ್ತ ಸಚಿವರು ಬಜೆಟ್‌ಗೂ ಮುನ್ನ ವಾಣಿಜ್ಯೋದ್ಯಮ ಸಂಸ್ಥೆಗಳವರೊಂದಿಗೆ ಚರ್ಚಿಸಿ ಕೆಲವು ಮಾಹಿತಿ ಪಡೆಯಬೇಕಿತ್ತು ಎಂದೂ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.