ಗುಲ್ಬರ್ಗಾ

ಖರ್ಗೆ ಊರಿಗೆ ಬರ್ಲಿಲ್ಲ ಡಿವಿ ರೈಲು

Published On :

  ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಮೋದಿ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿರುವ ಕನ್ನಡಿಗ, ಸದಾನಂದಗೌಡರ ಚೊಚ್ಚಲ ಬಜೆಟ್‌ನಲ್ಲಿ ಗುಲ್ಬರ್ಗ ಭಾಗದ ಹಲವು ನಿರೀಕ್ಷೆಗಳು ಹಾಗೆಯೇ ಉಳಿದುಕೊಂಡಿವೆ.
ಯುಪಿಎ ಸರ್ಕಾರದಲ್ಲಿ ಇಲ್ಲಿನ ಸಂಸದ ಮಲ್ಲಿಕಾರ್ಜುನ ಖರ್ಗೆ 9 ತಿಂಗಳ ಅವಧಿಗೆ ರೇಲ್ವೆ ಸಚಿವರಾಗಿದ್ದರು. ಆಗ ಕಂಡ ರೈಲ್ವೆ ಮೂಲ ಸೌಕರ್ಯಗಳನ್ನು ಹೊರತುಪಡಿಸಿದರೆ ಸದಾನಂದಗೌಡರ ಬಜೆಟ್ಟಲ್ಲಿ ಹೇಳಿಕೊಳ್ಳುವಂತಹ ಯಾವುದೇ ಸೌಕರ್ಯಗಳು ಈ ಭಾಗಕ್ಕೆ ದಕ್ಕಲಿಲ್ಲ.
ಗುಲ್ಬರ್ಗ ರೇಲ್ವೆ ವಿಭಾಗದ ಮಾತಿಲ್ಲ: ಖರ್ಗೆ ರೈಲ್ವೆ ಮಂತ್ರಿಯಾಗಿದ್ದಾಗ ಕೊನೆ ಗಳಿಗೆಯಲ್ಲಿ ಗುಲ್ಬರ್ಗ ಪ್ರತ್ಯೇಕ ರೈಲ್ವೆ ವಿಭಾಗ ರಚನೆಗೆ ಹಸಿರು ನಿಶಾನೆ ತೋರಿಸಿದ್ದರು. ಅದಕ್ಕೆ ಪೂರ್ಣ ರೂಪ ನೀಡಿ ಅದನ್ನು ಬಜೆಟ್‌ನಲ್ಲಿ ಘೋಷಣೆ ಮಾಡುವ ನಿರೀಕ್ಷೆ ಇಲ್ಲಿನ ಜನರದ್ದಾಗಿತ್ತು. ಆದರೆ ನಂತರ ರೇಲ್ವೆ ಖಾತೆ ವಹಿಸಿಕೊಂಡಿರುವ ಸದಾನಂದಗೌಡರು ಬಜೆಟ್‌ನಲ್ಲಿ ಈ ಬಗ್ಗೆ ಏನನ್ನೂ ಹೇಳದೆ ಹುಸಿಗೊಳಿಸಿದಂತಾಗಿದೆ.
ಮಧ್ಯ, ದಕ್ಷಿಣ ಮಧ್ಯ ಹಾಗೂ ಸಿಕಂದರಾಬಾದ್ ರೇಲ್ವೆ ವಲಯಗಳಲ್ಲಿ ಗುಲ್ಬರ್ಗ ವಿಭಾಗ ಹರಿದು ಹಂಚಿ ಹೋಗಿದೆ. ಇದರಿಂದಾಗಿ ಈ ಭಾಗದಲ್ಲಿ ರೈಲು ಸೌಕರ್ಯ ಮರೀಚಿಕೆಯಾಗಿವೆ. ಇದನ್ನೆಲ್ಲ ಮನಗಂಡೇ ಖರ್ಗೆ ತಾವೇ ರೇಲ್ವೆ ಸಚಿವರಾಗಿದ್ದಾಗ ಗುಲ್ಬರ್ಗ ಜನರ ಬಹುದಿನಗಳ ಬೇಡಿಕೆಗೆ ಒಂದು ಆಕಾರ ನೀಡಿದ್ದಲ್ಲದೆ ವಿಭಾಗೀಯ ಕಚೇರಿಯನ್ನೂ ಘೋಷಣೆ ಮಾಡಿದ್ದರು. ಖರ್ಗೆ ಕೆಲಸಕ್ಕೆ ಗೌಡರು ಬಜೆಟ್‌ನಲ್ಲಿ ಘೋಷಣೆ ಮಾಡುವ ಮೂಲಕ ಬೆಂಬಲ ನೀಡಿದ್ದರೆ ಈ ಭಾಗದ ಜನ ಇನ್ನೂ ಸಂತಸಪಡುತ್ತಿದ್ದರು. ಆದರೆ ಚೊಚ್ಚಲ ಬಜೆಟ್‌ನಲ್ಲಿ ಗುಲ್ಬರ್ಗಕ್ಕೆ 'ಸದಾ'ನಂದ ಸಿಗಲಿಲ್ಲ ಎಂದು ಜನ ಮರಗುವಂತಾಗಿದೆ.
ಹೊಸ ರೈಲುಗಳೂ ಇಲ್ಲ: ಗುಲ್ಬರ್ಗದಿಂದಲೇ ಬೆಂಗಳೂರಿಗೆ ಹೊಸ ರೈಲು ಸೌಲಭ್ಯ ಬೇಕೆಂಬುದು ಬಹುದಿನದ ನಿರೀಕ್ಷೆ. ಆದರೆ ಬಜೆಟ್ ಈ ಸಂಗತಿಗಳನ್ನು ಒಳಗೊಂಡಿಲ್ಲ. ಯಶವಂತಪುರ- ಬೀದರ್ ವಾರಕ್ಕೆ ಮೂರು ಬಾರಿ ಸಂಚರಿಸುತ್ತಿದ್ದ ರೈಲನ್ನೇ ಈಗ ಪ್ರತಿದಿನ ಸಂಚರಿಸುವಂತೆ ಮಾಡಿ ಗೌಡರು ಘೋಷಿಸಿದ್ದಾರಷ್ಟೆ. ಈ ರೈಲು ಸಂಚಾರ ಆರಂಭಿಸಿದ್ದು ಖರ್ಗೆ. ಹೀಗಾಗಿ ಹೊಸ ರೈಲು ಸಂಚಾರ, ಈ ಹಿಂದುಳಿದ ಜಿಲ್ಲೆಗಳಿಂದ ಆರಂಭಿಸುವಲ್ಲಿ ಗೌಡರು ಅದ್ಯಾಕೋ ಹೆಚ್ಚಿನ ಆಸಕ್ತಿ ತೋರಿಸಿಲ್ಲ.
ಇನ್ನು ಜಿಲ್ಲೆಯ ವಾಡಿ ಜಂಕ್ಷನ್ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯೂ ರೇಲ್ವೆ ಸಚಿವಾಲಯದ ಮುಂದಿತ್ತು. ಇದಕ್ಕೂ ಬಜೆಟ್ ಸ್ಪಂದಿಸಿಲ್ಲ. ಮುಂಬೈ- ಚೆನ್ನೈ ಮಾರ್ಗದಲ್ಲಿ ವಾಡಿ ಜಂಕ್ಷನ್ ಮಹತ್ವದ್ದು. ಇದನ್ನು ಮೇಲ್ದರ್ಜೆಗೇರಿಸುವ ಮೂಲಕ ಅಭಿವೃದ್ಧಿಪಡಿಸಿದಲ್ಲಿ ಈಗ ಅನೇಕ ರೈಲುಗಳು ವಾಡಿಯಿಂದ ಹೊರಹೋಗುವುದು ತಪ್ಪಿ ಎಲ್ಲರಿಗೂ ಎಲ್ಲ ರೈಲುಗಳ ಸೌಕರ್ಯ ದೊರಕುತ್ತದೆ. ಆದರೆ ಸದಾನಂದಗೌಡರು ಇದಕ್ಕೂ ಆಸಕ್ತಿ ತೋರಿಲ್ಲ.
ಚಾಲನೆ ನೀಡಿದ ಯೋಜನೆ ಬೇಗ ಪೂರ್ಣಗೊಳಿಸಲಿ...
ಸದಾನಂದಗೌಡರ ರೇಲ್ವೆ ಬಜೆಟ್‌ನಿಂದ ಹೆಚ್ಚಿನದೇನನ್ನೂ ಈ ಭಾಗದವರು ನಿರೀಕ್ಷಿಸಿರರಿಲ್ಲ. ಏಕೆಂದರೆ ಕಳೆದ 9 ತಿಂಗಳಲ್ಲಿ ಖರ್ಗೆಯವರು ಸಾಕಷ್ಟು ಕೊಡುಗೆಗಳನ್ನು ರೈಲು ಯೋಜನೆಗಳ ಮೂಲಕ ನೀಡಿದ್ದರು. ಇದೀಗ ಜನತೆ ಚಾಲ್ತಿಯಲ್ಲಿರುವ ಕಾಮಗಾರಿಗಳು ಯಾವವೂ ನನೆಗುದಿಗೆ ಬೀಳದಂತೆ ಗೌಡರು ಬೆಂಬಲಿಸಿದರೆ ಸಾಕು ಎನ್ನುತ್ತಿದ್ದಾರೆ. ಗುಲ್ಬರ್ಗದಿಂದಲೇ ರೈಲು ಉಗಮವಾಗುವಂತಹ ಪಿಟ್‌ಲೈನ್ ಕಾಮಗಾರಿಗಳು, ರೇಲ್ವೆ ಸೇತುವೆಗಳು, ರೈಲು ಮಾರ್ಗ ವಿದ್ಯುದ್ದೀಕರಣ, ಜೋಡಿಹಳಿ ಮಾರ್ಗ ನಿರ್ಮಾಣ, ಬೀದರ್- ಗುಲ್ಬರ್ಗ ಹೊಸ ರೈಲ್ವೆ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳಿಗೆ ಖರ್ಗೆ ಮಹತ್ವ ನೀಡಿದ್ದರು. ಇದೀಗ ಗೌಡರು ರೇಲ್ವೆ ಸಚಿವರಾಗಿ ಇವುಗಳನ್ನೆಲ್ಲ ಬೆಂಬಲಿಸಲಿ ಎಂದು ಗುಲ್ಬರ್ಗ ಜನತೆ ಆಗ್ರಹಿಸುತ್ತಿದ್ದಾರೆ.
'ಸದಾ' ಬಜೆಟ್‌ಗೆ ನಮೋಶಿ ಬಹುಪರಾಕ್
ಗುಲ್ಬರ್ಗ: 2014-15ನೇ ಸಾಲಿನ ರೈಲ್ವೆ ಬಜೆಟ್ ಮಂಡಿಸಿದ ಸಚಿವ ಡಿ.ವಿ. ಸದಾನಂದಗೌಡರಿಗೆ ಮಾಜಿ ಎಂಎಲ್ಸಿ ಶಶೀಲ್ ನಮೋಶಿ ಅಭಿನಂದಿನೆ ಸಲ್ಲಿಸಿದ್ದಾರೆ. ನಿರೀಕ್ಷೆಯಂತೆ ರಾಜ್ಯಕ್ಕೆ ಈ ಬಾರಿ ಅನೇಕ ಹೊಸ ರೈಲುಗಳನ್ನು ಘೋಷಣೆ ಮಾಡಿದ್ದಾರೆ. ಹೈ.ಕ. ಭಾಗಕ್ಕೆ ಬೀದರ್- ಯಶವಂತಪುರ ರೈಲು ಇನ್ನು ನಿತ್ಯ ಓಡಲಿದ್ದು, ಹೈ.ಕ. ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಗುಲ್ಬರ್ಗ- ಹೈದ್ರಾಬಾದ್‌ಗೆ ಇಂಟರ್‌ಸಿಟಿ ರೈಲು ಘೋಷಣೆ ಮಾಡಿ ಈ ಭಾಗದ ಜನರ ಬಹುದಿನಗಳ ಕನಸು ನನಸಾಗಿಸಿದ್ದಾರೆ. ದೇಶದಲ್ಲೇ ಮೊಟ್ಟಮೊದಲು ಬುಲೆಟ್ ಟ್ರೇನ್ ಮುಂಬೈ- ಅಹಮದಾಬಾದ್ ಮಾರ್ಗದಿಂದ ಪ್ರಾರಂಭಿಸಲು ಹಸಿರು ನಿಶಾನೆ ತೋರಿಸಿ ಮೆಚ್ಚುಗೆಯ ಬಜೆಟ್ ಮಂಡಿಸಿದ ರೈಲ್ವೆ ಸಚಿವರಿಗೆ ಅಭಿನಂದನೆ ಎಂದಿದ್ದಾರೆ.
ಎಚ್‌ಕೆಸಿಸಿಐ ಅಸಮಾಧಾನ
ಗುಲ್ಬರ್ಗ: ಕೇಂದ್ರ ರೈಲ್ವೆ ಬಜೆಟ್‌ಗೆ ಹೈ-ಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ರಾಧಾಕೃಷ್ಣ ರಘೋಜಿ, ಗೌರವ ಕಾರ್ಯದರ್ಶಿ ಅಮರನಾಥ ಪಾಟೀಲ್ ಹಾಗೂ ಆಡಳಿತ ಮಂಡಳಿಯ ಸದಸ್ಯರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಗುಲ್ಪರ್ಗದಿಂದ ಬೆಂಗಳೂರು ಮುಖಾಂತರ ಮೈಸೂರಿಗೆ ಹೊಸ ರೈಲು ಸಂಚರಿಸುವ ಕುರಿತು ಈ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸಚಿವರು ಸ್ಪಂದಿಸಿಲ್ಲ. ನನೆಗುದಿಗೆ ಬಿದ್ದಿರುವ ಗುಲ್ಪರ್ಗ- ಬೀದರ್ ನೂತನ ರೈಲ್ವೆ ಮಾರ್ಗ, ವಾಡಿ- ಗದಗ ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಹಾಗೂ ವಾಡಿ ಜಂಕ್ಷನ್ ಮೇಲ್ದರ್ಜೆಗೇರಸಲು ಪ್ರಸ್ತಾಪಿಸಿಲ್ಲದ್ದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಪ್ರಯಾಣ ದರಗಳಲ್ಲಿ ಏರಿಕೆ ಘೋಷಿಸಿದ್ದರಿಂದ ಪ್ರಯಾಣಿಕರಿಗೆ ಅವರು ಭರಿಸುವ ವೆಚ್ಚದ ಸಮತೋಲನವಾಗಿ ಎಲ್ಲ ಸೌಲಭ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.