ಗುಲ್ಬರ್ಗಾ

ನಡುಗಡ್ಡೆಗೆ ತಲುಪದ ಆಹಾರ

Published On :

ಯಾದಗಿರಿ: ಕೃಷ್ಣಾ ನದಿ ಪ್ರವಾಹದಿಂದ ಸಂಪರ್ಕ ಕಡಿದುಕೊಂಡಿರುವ ನೀಲಕಂಠರಾಯನಗಡ್ಡೆಯ ಜನತೆಗೆ ಆಹಾರ ತಲುಪಿಸುವಲ್ಲಿ ಸುರಪುರ ತಾಲೂಕಾಡಳಿತ ವಿಫಲವಾಗಿದ್ದು, ನಡುಗಡ್ಡೆಯ ಜನತೆ ಅನ್ನಕ್ಕಾಗಿ ಪರದಾಡುವಂತಾಗಿದೆ.
ತಹಸೀಲ್ದಾರ್ ಅರುಣ ಕುಲಕರ್ಣಿ ಅವರು ತಮ್ಮ ಸಿಬ್ಬಂದಿಯೊಂದಿಗೆ ನದಿಯ ಮಧ್ಯದವರೆಗೂ ಹೋಗಿ ನೀರಿನ ಪ್ರವಾಹ, ಗಾಳಿ ಜಾಸ್ತಿಯಾಗಿ ಮುಂದೆ ಹೋಗಲಾಗದೆ ಮತ್ತೆ ವಾಪಸ್ಸಾದ ಘಟನೆ ಭಾನುವಾರ ನಡೆದಿದೆ.
ಶನಿವಾರ ರಾತ್ರಿಯವರೆಗೂ ನಾರಾಯಣಪುರ ಜಲಾಶಯದಿಂದ 1.41 ಸಾವಿರ ಕ್ಯುಸೆಕ್ ನೀರು ಬಿಟ್ಟಿರುವುದರಿಂದ ನೀಲಕಂಠರಾಯನಗಡ್ಡೆ ಹತ್ತಿರ ಹರಿ ನೀರಿನ ಸೆಳೆತ ಹೆಚ್ಚಾಗಿದ್ದು ಬೋಟ್ ಚಲಿಸಲು ಸಾಧ್ಯವಾಗಲಿಲ್ಲ.
ಗುಲ್ಬರ್ಗ ಜಿಲ್ಲೆಯ ಮೂರು ಜನ ಗೃಹರಕ್ಷಕ ದಳ ಸಿಬ್ಬಂದಿಯನ್ನು ತರಿಸಲಾಗಿದೆ. ಆದರೆ ಯಾವುದೇ ತರಬೇತಿಯಿಲ್ಲದೆ ಜೀವಭಯದಲ್ಲಿ ನದಿಗೆ ಹೋಗಲು ಸಾಧ್ಯವಾಗುವುದಿಲ್ಲ ಎಂದು ಆಪರೇಟರ್ ತಮ್ಮ ಅಳಲು ತೋಡಿಕೊಂಡರು.
ನಿಯಂತ್ರಣ ಕಳೆದುಕೊಂಡ ಬೋಟ್: ಆಪರೇಟರ್‌ಗೆ ಧೈರ್ಯ ತುಂಬಿ ಸುರಪುರ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಗಡ್ಡೆ ಜನರೊಡನೆ ಕುಳಿತುಕೊಂಡ ಬೋಟ್ ನದಿ ಮಧ್ಯೆ ತಲುಪಿತು. ಬೀಸುತ್ತಿರುವ ಗಾಳಿ, ಭೋರ್ಗರಿಯುತ್ತಿರುವ ನೀರಿನ ಶಬ್ದಕ್ಕೆ ಬೋಟ್ ನಿಯಂತ್ರಣ ಕಳೆದುಕೊಳ್ಳುತ್ತಿದ್ದಂತೆ ಹೆದರಿದ ಬೋಟ್ ಚಾಲಕ ಶ್ರೀಮಂತ ಮರಳಿ ವಾಪಸ್ ದಡಕ್ಕೆ ಬಂದು ನಿಟ್ಟುಸಿರು ಬಿಟ್ಟರು.
ಬೆಂಗಳೂರಿಗೆ ದುಡಿಯಲು ಗುಳೆ ಹೋಗಿದ್ದ ನೀಲಕಂಠರಾಯನಗಡ್ಡೆಯ ಮೂರ್ನಾಲ್ಕು ಯುವಕರು ವಾಪಸ್ಸಾಗಿದ್ದು, ಸ್ವಗ್ರಾಮಕ್ಕೆ ತೆರಳುವವರಿದ್ದರು. ಆದರೆ ಬೋಟ್ ನದಿ ದಾಟದ ಕಾರಣ ಬೆಂಚಿಗಡ್ಡೆ ನದಿ ದಂಡೆಯಲ್ಲಿ ಉಳಿಯುವಂತಾಗಿದೆ.
ಸಂಕಷ್ಟ: ಕಳೆದ ಒಂದು ವಾರದಿಂದ ಸಂಪರ್ಕ ಕಡಿದುಕೊಂಡಿರುವ ಗಡ್ಡೆಯ ಜನರಿಗೆ ಆಹಾರ ವಿತರಿಸಲು ಆಗಿಲ್ಲ. ನಾನಾ ಜನರಿಗೆ ಕಾಯಿಲೆ ಬಂದಿದೆ ಎಂದು ಅಲ್ಲಿನ ಜನರು ಸುದ್ದಿ ತಿಳಿಸಿದ್ದಾರೆ. ಹೀಗಾಗಿ ಔಷಧ ಇನ್ನಿತರ ಸಾಮಾಗ್ರಿಗಳನ್ನು ತಲುಪಿಸಬೇಕೆಂದರೂ ನುರಿತ ಬೋಟ್ ತಜ್ಞರಿಲ್ಲದೆ ಸಾಮಾಗ್ರಿಗಳು ಹಾಗೂ ಜನರನ್ನು ಗಡ್ಡೆಗೆ ಹೋಗಿ ಬಿಡಲಾಗಿಲ್ಲ. ಹೀಗಾಗಿ ಅಲ್ಲಿನವರ ಸ್ಥಿತಿ ಚಿಂತಾಜನಕವಾಗಿದೆ.
'ಇದು ಅಗ್ನಿಶಾಮಕ ದಳದವರು ಮಾಡಬೇಕಾದ ಕಾರ್ಯ. ಬೋಟ್ ನಡೆಸುವುದು ಸಾಧ್ಯವಿಲ್ಲ' ಎಂದು ಗೃಹರಕ್ಷದಳದ ನಂದಕಿಶೋರ, ಶ್ರೀಮಂತ, ಶ್ರೀನಿವಾಸ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಅತ್ಯಂತ ಸಣ್ಣ ಬೋಟ್ ಆಗಿರುವುದರಿಂದ ಅದರಲ್ಲಿ ಕೇವಲ ಆರು ಜನ ಮಾತ್ರ ಕುಳಿತುಕೊಂಡು ಹೋಗಬೇಕು. ಭಾರವಾದ ಸಾಮಾಗ್ರಿಗಳನ್ನೂ ಹಾಕಿಕೊಂಡು ಹೋಗುವಂತಿಲ್ಲ. ಇದರಿಂದಾಗಿ ಸಾಮಾಗ್ರಿಗಳನ್ನು ತೆಗೆದುಕೊಂಡು ಗಡ್ಡೆ ಜನರಿಗೆ ನೀಡಲೂ ಆಗುವುದಿಲ್ಲ.
ಚಿಕ್ಕ ಬೋಟ್ ನಿಷ್ಪ್ರಯೋಜಕ: ಈ ಹಿಂದಿನ ವರ್ಷ ಪ್ರವಾಹ ಬಂದಾಗ ರಾಯಚೂರು ಡಿಆರ್ ಎಡಕ್ವಾರ್‌ದಿಂದ 12 ಜನರು ಕುಳಿತುಕೊಂಡು ಹೋಗುವ ಬೋಟ್ ತರಿಸಲಾಗಿತ್ತು. ನುರಿತ ಆಪರೇಟರ್ ಸಹ ಇದ್ದರು. ನೀಲಕಂಠರಾಯನಗಡ್ಡೆ ಜನರಿಗೆ ಆಹಾರ ಇನ್ನಿತರ ಸಾಮಗ್ರಿ ಸಾಗಿಸುವ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಅತಿ ಸಣ್ಣ ಬೋಟ್ ಇದಾಗಿದ್ದು ಪ್ರಯೋಜನವಿಲ್ಲದಂತಾಗಿದೆ.
ನೀಲಕಂಠರಾಯನಗಡ್ಡೆ ಜನತೆಗೆ ಹೇಗಾದರೂ ಮಾಡಿ ಆಹಾರ ತಲುಪಿಸಲು ಹೊರಟಿದ್ದ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಕಂದಾಯ ನಿರೀಕ್ಷಕ ಸಂಗಮೇಶ, ಸಂತೋಷ ರೆಡ್ಡೆ, ಗಡ್ಡೆ ಜನ ಲಕ್ಷತ್ಮಣ್ಣ, ಅಮರೇಶ, ಮರಳಿ ದಡ ತಲುಪಲಾಗದೆ ಬೋಟ್ ಇಳಿಯಬೇಕಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.