ನಾಗರ ಪಂಚಮಿ ಸಡಗರ
ಕೆಂಭಾವಿ: ಪಂಚಮಿ ಹಬ್ಬಕ್ಕ ಉಳಿದಾವ ದಿನಾ ನಾಕ, ಅಣ್ಣ ಬರಲಿಲ್ಲ ಇನ್ನೂ ಕರಿಲಾಕ...
- ಇದು ನಾಗರಪಂಚಮಿ ಕುರಿತ ಜನಪದ ಹಾಡಿನ ಸಾಲು.
ನಾಗರ ಪಂಚಮಿ ಹೆಣ್ಣುಮಕ್ಕಳಿಗೆ ತವರನ್ನು ನೆನಪಿಸುವ ಹಬ್ಬ. ಮದುವೆಯಾದ ಹೊಸದರಲ್ಲಿ ಸಹೋದರರು ಸಹೋದರಿಯರನ್ನು ತವರಿಗೆ ಕರೆದುಕೊಂಡು ಹೋಗಿ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುವ ಹಬ್ಬ. ಈ ಹಬ್ಬವನ್ನು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಹೆಂಗಳೆಯರು ಮಕ್ಕಳು ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಶಿಲಾ ಪ್ರತಿಮೆಗಳಿಗೆ ಹಾಗೂ ಮೃತ್ತಿಕಾ ಮೂರ್ತಿಗಳಿಗೆ ಹಾಗೂ ನಾಗರ ಹುತ್ತಗಳಿಗೆ ಹಾಲೆರೆದು ತಂಬಿಟ್ಟು ಉಂಡಿ ಮುಂತಾದ ಬಗೆಬಗೆಯ ಖಾದ್ಯಗಳನ್ನು ಸಮರ್ಪಿಸಿ ಪೂಜೆ ಸಲ್ಲಿಸಿದರು. ನಂತರ ಬಂಧು ಬಳಗ, ನೆರೆ ಹೊರೆ, ಹಾಗೂ ಸ್ನೇಹಿತರಿಗೆ ಬಗೆಬಗೆಯ ಖಾದ್ಯಗಳನ್ನು ಕೊಡುತ್ತಾ ಸಂಭ್ರಮ ಪಟ್ಟರು. ಸಾಯಂಕಾಲ ಪ್ರತಿಯೊಬ್ಬರೂ ಮರಗಳಿಗೆ ಜೋಕಾಲಿ ಕಟ್ಟಿ ಆಟವನ್ನಾಡಿ ಕೇಕೆ ಹಾಕುತ್ತಾ ಸಂಭ್ರಮ ಪಟ್ಟರು.
ಶಹಾಪುರದಲ್ಲಿ...
ಶಹಾಪುರ: ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬ ಸಂಭ್ರಮ ಕಂಡು ಬಂತು. ಬಹುತೇಕ ಬಡಾವಣೆಗಳಲ್ಲಿ ನಾಗರ ಕಟ್ಟೆಗಳಲ್ಲಿ ವಿಶೇಷ ಪೂಜೆ ಕಂಡುಬಂದಿತು. ತಾಲೂಕಿನ ಗ್ರಾಮಾಂತರ ಭಾಗದಿಂದ ಭಾರವಾದ ಚೀಲ ಹೊತ್ತು ಬರುವುದು, ಬಂಡಿ ಗಾಲಿ ಎಳೆಯುವುದು, ಒಂದೇ ಕಾಲಿನಿಂದ ಕುಂಟುತ್ತ ಬರುವುದು, ನಿಂಬೆಕಾಯಿ ಎಸೆಯುವುದು, ಭಾರವಾದ ಕಲ್ಲುಗಳನ್ನು ಎತ್ತುವುದು, ಶಕ್ತಿ ಪ್ರದರ್ಶನದ ಜಿದ್ದಾಜಿದ್ದಿನ ಆಟಗಳು ನಡೆದವು.
ಮಕ್ಕಳಿಗೆ ಹಾಲುಣಿಸಿ
ಯಾದಗಿರಿ: ಮಕ್ಕಳಿಗೆ ಹಾಲುಣಿಸುವ ಮೂಲಕ ಗುರುಮಠಕಲ್ ಖಾಸಾಮಠದಲ್ಲಿ ನಾಗರ ಪಂಚಮಿಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಕಳೆದ ಹಲವು ವರ್ಷಗಳಿಂದ ಶ್ರೀಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಖಾಸಾಮಠದ ಶಾಲೆಯ ವಿದ್ಯಾರ್ಥಿಗಳಿಗೆ ನಾಗರ ಪಂಚಮಿಯ ನಿಮಿತ್ತ ಹಾಲು ಕುಡಿಸಲಾಯಿತು. ಅಖಿಲ ಭಾರತ ವೀರಶೈವ ಮಹಾಸಭಾ ಉಪಾದ್ಯಕ್ಷ ವೆಂಕಟರೆಡ್ಡಿ ಮುದ್ನಾಳ ಇದ್ದರು.
ಹಾಲಿನ ಅಭಿಷೇಕ
ಯಾದಗಿರಿ: ಶ್ರಾವಣ ಮಾಸದ ಸಾಲು ಸಾಲು ಹಬ್ಬಗಳಿಗೆ ಮುನ್ನುಡಿಯಾಗಿರುವ ನಾಗರ ಪಂಚಮಿ ಹಬ್ಬವನ್ನು ಯಾದಗಿರಿ ನಗರದ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಮತ್ತು ಮಕ್ಕಳು ಶುಕ್ರವಾರ ಸಡಗರದಿಂದ ಆಚರಿಸಿದರು. ಪುರಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಪಂಚಮಿ ಹಬ್ಬ ಭಾವೈಕ್ಯ, ಸಂಸ್ಕೃತಿ ಬಿಂಬಿಸುತ್ತದೆ. ನಗರದ ಲಕ್ಷ್ಮೀ ನಗರ, ಬಸವೇಶ್ವರ ನಗರ, ಗಾಂಧಿನಗರದಲ್ಲಿ ಪ್ರಾರ್ಥನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

