ಗುಲ್ಬರ್ಗಾ

'ಗುಲ್ಬರ್ಗ ಸಂಚಾರಿ ಪೀಠ ಮುಚ್ಚಿದ್ರೆ ಕ್ರಾಂತಿ'

Published On :

ಗುಲ್ಬರ್ಗ: ಗುಲ್ಬರ್ಗದಲ್ಲಿರುವ ಹೈಕೋರ್ಟ್ ಸಂಚಾರಿ ಪೀಠ ಯಾವುದೇ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ. ಒಂದು ವೇಳೆ ಸರ್ಕಾರ ಸಂಚಾರಿ ಪೀಠ ಮುಚ್ಚಲು ಯತ್ನಿಸಿದರೆ ರಕ್ತಕ್ರಾಂತಿ ಮಾಡಬೇಕಾಗುತ್ತದೆ ಎಂದು ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹಣಮಂತರೆಡ್ಡಿ ಎಚ್ಚರಿಸಿದರು.
ನಗರದಲ್ಲಿ ಮಂಗಳವಾರ ಜಿಲ್ಲಾ ನ್ಯಾಯವಾದಿಗಳ ಸಂಘ 371(ಜೆ) ವಿಧಿ ತಿದ್ದುಪಡಿಯ ರೂವಾರಿಗಳಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ವೈಜನಾಥ ಪಾಟೀಲರಿಗೆ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ದಶಕಗಳ ಈ ಭಾಗದ ವಕೀಲರ ಹೋರಾಟದಿಂದ ಗುಲ್ಬರ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಯಾಯಿತು. ಆದರೆ, ಈ ಪೀಠದಲ್ಲಿ ಹೆಚ್ಚು ಕೇಸ್ ಬರುತ್ತಿಲ್ಲ. ಬೆಂಗಳೂರಿನಿಂದ ಹೋಗಿ ಬರಲು ತೊಂದರೆಯಾಗುತ್ತಿದೆ ಎಂದು ನೆಪವೊಡ್ಡಿ ಇಲ್ಲಿ ಕಾರ್ಯನಿರ್ವಹಿಸಿದ ಕೆಲವು ನ್ಯಾಯಾಧೀಶರು,ಅಧಿಕಾರಿ, ಸಿಬ್ಬಂದಿ ಬೆಂಗಳೂರಿನ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಪೀಠ ಸ್ಥಾಪನೆ ಉದ್ದೇಶ ಅರಿಯಿರಿ: ಈ ಭಾಗದ ಕಕ್ಷದಾರರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಇಲ್ಲಿ ಪೀಠ ಸ್ಥಾಪನೆ ಮಾಡಲಾಗಿದೆ ಹೊರತಾಗಿ ನ್ಯಾಯಾಧೀಶರಿಗೆ, ಅಧಿಕಾರಿ, ಸಿಬ್ಬಂದಿ ಅನುಕೂಲಕ್ಕಾಗಿ ಮಾಡಿಲ್ಲ ಎಂಬುದನ್ನು ಅರಿತುಕೊಳ್ಳಬೇಕೆಂದು ಸಲಹೆ ನೀಡಿದರು.
ಅರ್ಜಿ ಹಿಂಪಡೆಯದಿದ್ದರೆ ರಕ್ತಕ್ರಾಂತಿ- ಎಚ್ಚರಿಕೆ: ಗುಲ್ಬರ್ಗದಲ್ಲಿರುವ ಸಂಚಾರಿ ಪೀಠ ಮುಚ್ಚುವಂತೆ ಬೆಂಗಳೂರಿನ ಹೈಕೋರ್ಟ್ನಲ್ಲಿ ಹಾಕಿದ ಅರ್ಜಿಯನ್ನು ಪಟ್ಟಾಭದ್ರ ಹಿತಾಸಕ್ತಿಗಳು ಹಿಂಪಡೆಯದಿದ್ದರೆ ರಕ್ತಕ್ರಾಂತಿ ಮಾಡಬೇಕಾಗುತ್ತದೆ ಎಚ್ಚರಿಸಿದ ಅವರು, ಧಾರವಾಡದ ಸಂಚಾರಿ ಪೀಠದಲ್ಲಿ 8 ಜಿಲ್ಲೆಗಳನ್ನು ಸೇರ್ಪಡೆ ಮಾಡಿದ್ದು, ಗುಲ್ಬರ್ಗ ಪೀಠದಲ್ಲಿ ಕೇವಲ 4 ಜಿಲ್ಲೆಗಳನ್ನು ಮಾತ್ರ ಸೇರಿಸುವ ಮೂಲಕ ಅನ್ಯಾಯ ಮಾಡಲಾಗಿದೆ. ಕೂಡಲೇ ಸರಿಪಡಿಸಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಈ ಪೀಠದ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.
ನ್ಯಾಯಾಧೀಶರಿಗೆ ಮನವರಿಕೆ ಮಾಡಿ: ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜನ ಖರ್ಗೆ ಅವರು ಸನ್ಮಾನಿತಗೊಂಡು ಮಾತನಾಡಿ, ರಕ್ತಕ್ರಾಂತಿಗೆ ಇಳಿಯಬೇಡಿ, ಸಂಬಂಧಿಸಿದ ಅಧಿಕಾರಿ, ನ್ಯಾಯಾಧೀಶರಿಗೆ ಭೇಟಿಯಾಗಿ ಮನವರಿಕೆ ಮಾಡಿಕೊಡಿ ಎಂದು ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷ ಹಣಮಂತ ರೆಡ್ಡಿ ಅವರಿಗೆ ಸಲಹೆ ನೀಡಿದರು. ಹೈ-ಕ ಪ್ರದೇಶಾಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ 371(ಜೆ) ವಿಧಿ ತಿದ್ದುಪಡಿಯಾಗಿದ್ದು, ರಾಜ್ಯ ಸರ್ಕಾರ ಈ ವಿಧಿ ಅನುಷ್ಠಾನಕ್ಕೆ ತರಲು ಮುತುವರ್ಜಿ ವಹಿಸಬೇಕು ಎಂದರು. ವಿಳಂಬ ಧೋರಣೆ ನೀತಿ ಅನುಸರಿಸದೆ ಕಾರ್ಯಪ್ರವೃತ್ತರಾಗಿ ಕಾನೂನು ತೊಡಕಾಗದಂತೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.