ಆತ್ಮಾವಲೋಕನಕ್ಕಿದು ಸಕಾಲವಯ್ಯಾ...
ಗುಲ್ಬರ್ಗ: ಆಟೋ ಮುಷ್ಕರ 4ನೇ ದಿನ ಪೂರ್ಣಗೊಳಿಸಿದೆ. ಬೇಡಿಕೆ ಈಡೇರಿಸುವ ವಿಚಾರದಲ್ಲಿ ಜಿಲ್ಲಾಡಳಿತದೊಂದಿಗೆ ಮಾತುಕತೆ ನಡೆಸುತ್ತೇವೆ. ಸೆರೆಯಲ್ಲಿರುವ ಸಹೋದರ ಚಾಲಕರು ಹೊರ ಬರುವವರೆಗೂ ಮುಷ್ಕರ ಮುಂದುವರಿಯುತ್ತದೆ ಎಂಬ ಅವರ ಪಟ್ಟಿನಲ್ಲಿ ಗುರುವಾರ ತುಸು ಸಡಿಲಿಕೆ ಗೋಚರಿಸಿದೆ.
ಕಾನೂನು ಪ್ರಕಾರ ಜಾಮೀನು ಇತ್ಯಾದಿ ಪ್ರಕ್ರಿಯೆ ನಡೆದು ಬಂಧಿತ ಚಾಲಕರು ಹೊರ ಬುರತ್ತಾರೆ. ಆ ಬಗ್ಗೆ ಈಗ ಏನನ್ನೂ ಮಾತನಾಡುವುದಿಲ್ಲ. ಈಗೇನಿದ್ದರೂ ನಮ್ಮಬೇಡಿಕೆಗಳ ಬಗ್ಗೆ ಗೃಹ ಸಚಿವ ಆರ್.ಅಶೋಕ ಅವರ ಜೊತೆ ಮಾತುಕತೆ ನಡೆಸುತ್ತೇವೆ. ಎಂಎಲ್ಸಿ ಅಮರನಾಥ ಪಾಟೀಲ್ ಅವರೇ ಸಚಿವರೊಂದಿಗೆ ತಮ್ಮ ಮಾತುಕತೆ ನಿಗದಿಪಡಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಗುರುಶರಣ ದುಧನಿ, ಪ್ರಧಾನ ಕಾರ್ಯದರ್ಶಿ ಹುಳಿಪಲ್ಲೆ ರೇವರ್ಣಸಿದ್ದಪ್ಪ ಹೇಳಿದ್ದಾರೆ.
ಏತನ್ಮಧ್ಯೆ ಆಟೋಗಳಿಲ್ಲದ್ದರಿಂದ ಶಾಲಾ ಮಕ್ಕಳ ಪರದಾಟ ಮುಂದುವರಿದಿದೆ. ಶಾಲೆಗಳಲ್ಲಂತೂ ಮಕ್ಕಳ ದಟ್ಟಣೆ ತಪ್ಪಿಸಲು ಆಡಳಿತ ಮಂಡಳಿಯವರು ಕಟ್ಟುನಿಟ್ಟು ಕ್ರಮ ಕೈಗೊಳ್ಳುತ್ತಿದ್ದಾರೆ. ಸಾರಿಗೆ ಸಂಸ್ಥೆ 90ಕ್ಕೂ ಹೆಚ್ಚು ಬಸ್ಸುಗಳನ್ನು ಬಳಸಿ ಹೆಚ್ಚಿನ ಸೇವೆ ನೀಡುತ್ತಿದೆ. ಕ್ರೂಸರ್ ಇತ್ಯಾದಿ ವಾಹನಗಳ ನಗರ ಪ್ರವೇಶ ನಿಷೇಧ ತೆರವುಗೊಂಡಿದ್ದರಿಂದ ಜನರ ಸಾರಿಗೆ ಅವಶ್ಯಕತೆ ಇನ್ನೊಂದು ರೂಪದಲ್ಲಿ ಈಡೇರಿಕೆಯಾಗುತ್ತಿದೆ.
ಆತ್ಮಾವಲೋಕನ ಕಾಲವಯ್ಯ: ಆಟೋ ರಸ್ತೆಯಿಂದ ಮರೆಯಾಗಿ 4 ದಿನ ಕಳೆದರೂ ಯಾರಿಗೂ ನಮ್ಮ ಅನುಪಸ್ಥಿತಿ ಅನುಭಕ್ಕೇ ಬರುತ್ತಿಲ್ಲವೆ, ನಮ್ಮನ್ನು ಮಾತುಕತೆಗೂ ಕರೆಯುತ್ತಿಲ್ಲ. ಎಸ್ಪಿ, ಡಿಸಿ ಇವರೂ ಏನೂ ಕೇಳಿಲ್ಲ, ನಾವಂದ್ರ ಯಾಕಿಷ್ಟು ತಾತ್ಸಾರ, ನಮ್ಮನ್ಯಾಕೆ ಈ ರೀತಿ ಅಲಕ್ಷಿಸ್ಲಿಕತ್ತಾರ, ಹಿಂದೆಲ್ಲಾ ಆಟೋ ಮುಷ್ಕರ ಇದ್ರ ಜಿಲ್ಲಾಡಳಿತ ಪರೇಶಾನ್ ಆಗ್ತಿತ್ತು. ಈಗ ನೋಡಿದ್ರ ಹಾಗೇನು ವಾತಾವರಣ ಇಲ್ಲ...
- ಮುಷ್ಕರ ನಿರತ ಆಟೋ ಚಾಲಕರ ಸಂಘಟನೆಗಳ ಮುಖಂಡರ ಮಾತುಗಳಿವು. ನೃಪತುಂಗ ಸಾರಿಗೆ ಹಳ್ಳಿಗಾಡಿಗೂ ವಿಸ್ತರಿಸಿ, ಜಗತ್ನಿಂದ ಸೂಪರ್ ಮಾರ್ಕೆಟ್ ರಸ್ತೆಯಲ್ಲಿ ನಗರ ಸಾರಿಗೆ ಬಸ್ ಓಡಿಸದೆ ಜಗತ್ನಿಂದಲೇ ಕೆರೆಮಾರ್ಗವಾಗಿ ಬಸ್ ಓಡಿಸಿ ಎಂಬಿತ್ಯಾಗಿ 27 ಬೇಡಿಕೆಗಳೊಂದಿಗೆ ಜಿಲ್ಲಾಡಳಿತದ ಗಮನ ಸೆಳೆಯುವ ಉದ್ದೇಶದಿಂದ ಕಳೆದ ಸೋಮವಾರ ನಡೆದ ಆಟೋ ರ್ಯಾಲಿ ಹಿಂಸಾಚಾರಕ್ಕೆ ತಿರುಗಿ ಇಷ್ಟೆಲ್ಲಾ ರಾದ್ಧಾಂತ ಸಂಭವಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕರೇ ಕಂಗಾಲಾಗಿದ್ದಾರೆ.
ಆಟೋ ಚಾಲಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನಾಯಕರು ತಮ್ಮ ಮನದಾಳದ ನೋವು- ಯಾತನೆ ಹಂಚಿಕೊಳ್ಳಲು ಸುದ್ದಿಗೋಷ್ಠಿ ಕರೆದು ನಾವು ಯಾರಿಗೂ ಬೇಡವಾದಂತಾಗಿದ್ದೇವೆ ಎಂದು ವಿಷಾದಿಸಿದರು.
ನಗರ ಸಾರಿಗೆ ಬಸ್ ಬಂದ್ ಮಾಡುವ ಮಾತನ್ನಾಡಿಲ್ಲ. ರೈತರು- ಕಾರ್ಮಿಕರಿಗೂ ಬಸ್ಸುಗಳ ಸವಲತ್ತು ದೊರಕಲೆಂಬ ಸದುದ್ದೇಶದಿಂದ ನೃಪತುಂಗ ಸಾರಿಗೆ ಹಳ್ಳಿಗಾಡಿಗೂ ವಿಸ್ತರಿಸುವಂತೆ ಕೇಳಿದ್ದೇವೆಯೇ ಹೊರತು ತಮ್ಮ ಆ ಬೇಡಿಕೆಯಿಂದ ಯಾವುದೇ ದುರುದ್ದೇಶವಿಲ್ಲ ಎಂದರು.
ಪೊಲೀಸ್ ದೌರ್ಜನ್ಯ ಖಂಡನೀಯ: ಪೊಲೀಸರು ಮನವಿ ಕೊಟ್ಟು ಮನೆಗೆ ಹೋಗುವಾಗ ಲಾಠಿಚಾರ್ಜ್ ಮಾಡಿದ್ದಾರೆ. ಇದು ಪೊಲೀಸ್ ದೌರ್ಜನ್ಯ. ಇದು ಖಂಡನೀಯ ಎಂದು ಸಂಘದ ಅಧ್ಯಕ್ಷ ಗುರುಶರಣ ದುಧನಿ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಹುಳಿಪಲ್ಲೆ, ಉಪಾಧ್ಯಕ್ಷ ಶೇಖ್ ಸಲೀಂ ಪೊಲೀಸ್ ವಿರುದ್ಧ ದೂರಿದರು.
ಸಂಚಾರ ಪೊಲೀಸರು ಆಟೋಗಳನ್ನೇ ಗುರಿಯಾಗಿಸಿ ಶಿಕ್ಷಿಸುತ್ತಿದ್ದಾರೆ. ಉಳಿದ ವಾಹನಗಳಲ್ಲಿ ಕಾನೂನು ಉಲ್ಲಂಘನೆಯಾದರೂ ಸುಮ್ಮನಿರುತ್ತಿದ್ದಾರೆ ಎಂದು ದೂರಿದ ದುಧನಿ, ಮುಷ್ಕರದ ದಿನ ವಯೋವೃದ್ಧ ಚಾಲಕರಿಗೂ ಹೊಡೆಯಲಾಗಿದೆ. ಅವರ ವಯಸ್ಸಿಗೂ ಗೌರವ ನೀಡಲಾಗಿಲ್ಲ ಎಂದು ಸಂಚಾರ ಪೊಲೀಸರ ವರ್ತನೆ, ಕರ್ತವ್ಯ ಲೋಪಗಳ ಬಗ್ಗೆ ಮಾತನಾಡಿದರು.
ಪತ್ರಕರ್ತರು ಆಟೋದವರ ಬೇಡಿಕೆಗಳಲ್ಲಿ ನಗರ ಸಾರಿಗೆ ಕುರಿತಂತೆ ಇದ್ದಂತಹ ಕೆಲವು ಬೇಡಿಕೆಗಳ ಬಗ್ಗೆ ಸ್ಪಷೀಕರಣ ಕೇಳಿ ಪ್ರಶ್ನಿಸಿದಾಗ, ಸಮರ್ಥಿಸುವಂತಹ ಉತ್ತರಗಳು ಅವರಿಂದ ಬರಲೇ ಇಲ್ಲ. ಬದಲಾಗಿ ಆಟೋ ಚಾಲಕರಿಗೂ ಕೇಳುವ ಹಕ್ಕಿದೆ ಎಂಬ ಹಕ್ಕಿನ ಉತ್ತರ ಬಂತೇ ಹೊರತು ಚಾಲಕರು ಮಾಡಬೇಕಾದಂತಹ ಕರ್ತವ್ಯಗಳೇನು ಎಂಬುದರ ಬಗ್ಗೆ ಚರ್ಚೆಗಳಿಗೆ ಸಂಘಟನೆ ಮುಖಂಡರು ಒಲವು ತೋರಲಿಲ್ಲ.
ಚಾಲಕರ ವರ್ತನೆ ಚರ್ಚೆ: ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಆಟೋ ಚಾಲಕರ ವರ್ತನೆಯ ಬಗ್ಗೆ ಸಾರ್ವಜನಿಕರು ಹೊಂದಿರುವ ಅಭಿಪ್ರಾಯಗಳನ್ನು ಪ್ರಸ್ತಾಪಿಸಿ ಪ್ರಶ್ನಿಸಿದಾಗ ದುಧನಿ, ಹುಳಿಪಲ್ಲೆ ಇವರು ಆ ಮಾತಿಗೆ ಒಪ್ಪಿಗೆ ಸೂಚಿಸಿದರಲ್ಲದೆ ಚಾಲಕರಿಗೆ ವಾರಕ್ಕೊಮ್ಮೆ ಶಿಬಿರ ನಡೆಸುತ್ತಿದ್ದೇವೆ. ಶಿಸ್ತು, ಗ್ರಾಹಕರೊಂದಿಗೆ ಮಾತನಾಡುವ ವೈಖರಿ ಬಗ್ಗೆ ಹೇಳಿಕೊಡಲಾಗುತ್ತಿದೆ. ನಗರದಲ್ಲಿ ಸಂಘಟನೆಯವರು ಖುದ್ದಾಗಿ ಈ ಕೆಲಸಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದರು.
ಗೃಹಸಚಿವರು, ಜಿಲ್ಲಾಡಳಿತ ಜೊತೆ ಚರ್ಚಿಸುತ್ತೇವೆ: ತಮ್ಮ 27 ಬೇಡಿಕೆಗಳ ಪಟ್ಟಿಯ ಬಗ್ಗೆ ಏನೆಲ್ಲ ಈಡೇರಿಸಲಾಗುತ್ತದೆ ಎಂಬ ವಿಚಾರವಾಗಿ ನಗರಕ್ಕೆ ಫೆ.28ರಂದು ಭೇಟಿ ನೀಡಲಿರುವ ಗೃಹ ಸಚಿವರೊಂದಿಗೆ ಚರ್ಚಿಸುತ್ತೇವೆ. ಜಿಲ್ಲಾಧಿಕಾರಿಗಳನ್ನು ಕಾಣುತ್ತೇವೆ. ನಮ್ಮ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುತ್ತೇವೆ ಎಂದು ದುಧನಿ ಹೇಳಿದ್ದಾರೆ.
ಆಟೋ ಸೇವೆ ಜನರಿಗೆ ಬೇಕೇಬೇಕು. ಸಾರ್ವಜನಿಕರೂ ಆಟೋದವರ ಬಗ್ಗೆ ಅನುಕಂಪ ತೋರಲಿ. ನಮ್ಮ ಬಗ್ಗೆ, ಬೇಡಿಕೆಗಳ ಬಗ್ಗೆ ಅಪಾರ್ಥ ಮಾಡಿಕೊಳ್ಳದೆ ನಮಗೂ ಬೆಂಬಲಿಸಬೇಕೆಂದು ದುಧನಿ, ಹುಳಿಪಲ್ಲೆ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

