'ದಲಿತರೇಕೆ ಸಿಎಂ ಆಗ್ಬಾರ್ದು?'
ಗುಲ್ಬರ್ಗ: ಸಾಮಾಜಿಕ ನ್ಯಾಯದ ವ್ಯವಸ್ಥೆಯಲ್ಲಿ ರಾಜ್ಯದಲ್ಲಿ ಎಲ್ಲ ಜಾತಿ- ಜನ ಸಮುದಾಯದವರು ಮುಖ್ಯಮಂತ್ರಿ ಆಗಿರುವಾಗ, ದಲಿತರು ಯಾಕೆ ಈ ಸ್ಥಾನಕ್ಕೆ ತಲುಪಬಾರದು? ಇಂತಹ ಪ್ರಶ್ನೆ ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿಯು ರಾಜ್ಯಾದ್ಯಂತ ದಲಿತರ ಚೈತನ್ಯ ಸಮಾವೇಶಗಳನ್ನು ಸಂಘಟಿಸುತ್ತಿದೆ. ರಾಜಕೀಯವಾಗಿ ದಲಿತರ ಜಾಗೃತಿಗೂ ಮುಂದಾಗುತ್ತಿದೆ ಎಂದು ದಸಂಸ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಹೇಳಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕಲಿಗರು 18 ವರ್ಷ, ಲಿಂಗಾಯಿತರು 25 ವರ್ಷ, ಬ್ರಾಹ್ಮಣರು, ಕ್ಷತ್ರಿಯರು 18 ವರ್ಷ, ಇತರೆ ಹಿಂದುಳಿದ ವರ್ಗದವರು 4 ವರ್ಷ ಮುಖ್ಯಮಂತ್ರಿಗಳಾಗಿ ಅಧಿಕಾರ ನಡೆಸಿದ್ದಾರೆ. ದಲಿತ ಸಮುದಾಯದವರು ಈ ಸ್ಥಾನಕ್ಕೆ ಅರ್ಹರಿದ್ದಾಗಲೂ ಯಾಕೆ ಅಲ್ಲಿಯವರೆಗೂ ಹೋಗಬಾರದು ಎಂಬ ವಿಷಯವಾಗಿಯೇ ಜಾಗೃತಿ ಮೂಡಿಸಲು ಸಂಘಟನೆ ಮುಂದಾಗಿದೆ ಎಂದರು. ಮಾ.16ರಂದು ಗುಲ್ಬರ್ಗದಲ್ಲಿ..: ರಾಜ್ಯದ ವಿಭಾಗೀಯ ಕೇಂದ್ರಗಳಲ್ಲಿ ಇಂತಹ ಚೈತನ್ಯ ಸಮಾವೇಶಗಳನ್ನು ಸಂಘಟಿಸಲಾಗುತ್ತಿದೆ. ಗುಲ್ಬರ್ಗದಲ್ಲಿಯೂ ಸಮಾವೇಶ ಆಯೋಜಿಸಲಾಗಿತ್ತು. ಮಾ.2ರಂದು ನಡೆಯಬೇಕಿದ್ದ ಸಮಾವೇಶ ಚುನಾವಣೆ ಸಂಹಿತೆ ಹಿನ್ನೆಲೆಯಲ್ಲಿ ಮಾ.16ರಂದು ನಿಗದಿಯಾಗಿದೆ ಎಂದರು. ರಂಗನಾಥ, ರಾಚಯ್ಯನಂತಹ ಅರ್ಹರು ದಲಿತ ಸಮುದಾಯದಲ್ಲಿದ್ದರೂ ಸಿಎಂ ಸ್ಥಾನಕ್ಕೆ ಹೋಗಲಿಲ್ಲ. ಮಲ್ಲಿಕಾರ್ಜುನ ಖರ್ಗೆಯಂತಹ ಅರ್ಹರಿಗೆ ಯಾಕೆ ಆ ಸ್ಥಾನ ದಕ್ಕಬಾರದು? ಪಕ್ಷ, ವ್ಯಕ್ತಿ ನಮಗೆ ಮುಖ್ಯವಲ್ಲ, ದಲಿತರಿಗೆ ಸಿಎಂ ಸ್ಥಾನ ದಕ್ಕಬೇಕು ಎಂಬುದೇ ಆಗ್ರಹ ಎಂದರು.
ಪ್ರಾತಿನಿಧ್ಯ ನೀಡುವ ಪಕ್ಷಕ್ಕೆ ಬೆಂಬಲ: ಬರುವ ದಿನಗಳಲ್ಲಿ ರಾಜಕೀಯವಾಗಿ ದಲಿತರಿಗೆ ಅದ್ಯಾವ ಪಕ್ಷ ಉತ್ತಮ ಪ್ರಾತಿನಿಧ್ಯ ನೀಡುವುದೋ ಅಂತಹ ಪಕ್ಷದ ಪರವಾಗಿ ತಮ್ಮ ಸಂಘಟನೆ ನಿಲ್ಲುತ್ತದೆ, ನಿಲ್ಲಲೇಬೇಕು ಎಂದು ನಾಗವಾರ ಹೇಳಿದರು. ಅಧ್ಯಯನ ಕೊರತೆಯೇ ಇಂದು ಹೋರಾಟಗಳು ಹಳಿ ತಪ್ಪಲು ಕಾರಣ ಎಂದರಲ್ಲದೆ ಒಡೆದು ಹೋಗಿರುವ ದಲಿತ ಸಂಘಟನೆಗಳಲ್ಲಿ ತಮ್ಮ, ಮಾವಳ್ಳಿ ಶಂಕರ್ ಹಾಗೂ ಗುರುಪ್ರಸಾದ ಕೆರೆಗೋಡು ನೇತೃತ್ವದ ಸಂಘಟನೆಗಳು ದೇವನೂರ ಮಹಾದೇವರ ನೇತೃತ್ವದಲ್ಲಿ, ಮಾರ್ಗದರ್ಶನದಲ್ಲಿ ಮರಳಿ ಒಗ್ಗಟ್ಟು ಸಾಧಿಸಿದ್ದಾಗಿ ಹೇಳಿದರು.
ಒಗ್ಗಟ್ಟು: ಡಿ.ಜಿ. ಸಾಗರ್ ನೇತೃತ್ವದ ಸಂಘಟನೆ ಈ ಒಕ್ಕೂಟದಲ್ಲಿ ಸೇರುವುದೇ ಎಂಬ ಪ್ರಶ್ನೆಗೆ ಹೆಚ್ಚಿನದೇನನ್ನೂ ಹೇಳದೆ ಈಗಂತೂ ಮೂರು ದಸಂಸಗಳು ಒಂದಾಗಿವೆ. ಬರುವ ದಿನಗಳಲ್ಲಿ ಅದ್ಯಾವ ಬೆಳವಣಿಗೆ ಆಗುವುದೋ ಈಗಲೇ ಹೇಳಲಾಗದು ಎಂಬರ್ಥ ಬರುವಂತಹ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಸುದ್ದಿಗೋಷ್ಠಿಯಲ್ಲಿ ರವಿ ಮದನಕರ್, ಚಂದ್ರು, ವೆಂಕಟೇಶ ಇದ್ದರು.
ಆಳಂದ; 24,426 ಮತದಾರರು
ಆಳಂದ: ಸ್ಥಳೀಯ ಪುರಸಭೆ 23 ವಾರ್ಡಗಳಲ್ಲಿ 12,888 ಪುರುಷ, 10, 538 ಮಹಿಳಾ ಮತದಾರರು ಸೇರಿದಂತೆ ಒಟ್ಟು 24426 ಮತದಾರರಿದ್ದಾರೆ ಎಂದು ತಹಸೀಲ್ದಾರ ಪರಮೇಶ್ವರ ಕೆ. ಸ್ವಾಮಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

