ರಾಜಕೀಯದಿಂದ ಪ್ರಾವಿತ್ರ್ಯತೆ ಬಲಿ
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಉನ್ನತ ಶಿಕ್ಷಣ ಹರಡುವ, ಸತ್ಸಂಪ್ರದಾಯ ಹುಟ್ಟು ಹಾಕುವ ಜವಾಬ್ದಾರಿ ಹೊತ್ತಿರುವ ವಿಶ್ವವಿದ್ಯಾಲಯಗಳು ತಮ್ಮ ವಾರ್ಷಿಕ ಘಟಿಕೋತ್ಸವದಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರು ಎಂದು ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡುತ್ತಿರುವ ಗಣ್ಯರ ವಿಚಾರದಲ್ಲಿ ಸಾರ್ವಜನಿಕವಾಗಿ ಶಹಬಾಸ್ಗಿರಿ ಪಡೆದುಕೊಳ್ಳದೆ ತೀವ್ರ ವಿವಾದ ಹುಟ್ಟು ಹಾಕುತ್ತ ಸಾಗಿರುವುದು ವಿಪರ್ಯಾಸ.
ಅಧಿಕಾರದಲ್ಲಿರುವ ರಾಜಕಾರಣಿಗಳಿಗೆ, ಉನ್ನತಾಧಿಕಾರಿಗಳಿಗೆ, ಮಠಾಧೀಶರಿಗೆ, ಕೆಲವು ಸಮುದಾಯಗಳ ಮುಖಂಡರಿಗೆ... ಹೀಗೆ ಹಲವರನ್ನು ಡಾಕ್ಟರೇಟ್ಗೆ ಆಯ್ಕೆ ಮಾಡುವ ಮೂಲಕ ವಿವಿಗಳು ಸುದ್ದಿಗೆ ಗ್ರಾಸವಾಗುತ್ತಿವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಸಂಪ್ರದಾಯ, ಇದೇನು ಸತ್ಸಂಪ್ರದಾಯವೇನಲ್ಲ ಎಂದು ಪ್ರಾಜ್ಞರೇ ಟೀಕಿಸುವಂತಾಗಿರುವುದು ದುರಂತ. ವಿಶ್ವವಿದ್ಯಾಲಯಗಳ ಚಿಂತನಾಮಟ್ಟ ಅದೆತ್ತ ಸಾಗಿದೆ ಎಂಬುದಕ್ಕೆ ಗೌರವ ಡಾಕ್ಟರೇಟ್ ನೀಡಿಕೆಯ ಸುತ್ತಮುತ್ತಲಿನ ಬೆಳವಣಿಗೆಗಳೇ ಕನ್ನಡಿ. ಇದು ಪ್ರಜ್ಞಾವಂತರಲ್ಲಿ ಕಳವಳ ಮೂಡಿಸಿದೆ.
ಪ್ರಭಾವಿಗಳದ್ದೇ ದರ್ಬಾರ್: ಕಳೆದೆರಡು ಶೈಕ್ಷಣಿಕ ವರ್ಷ ಜ್ಞಾನಗಂಗೆ ನೀಡಿದ ಗೌರವ ಡಾಕ್ಟರೇಟ್ನಲ್ಲಿ ಸಚಿವರು, ಮಠಾಧೀಶರು, ವಿವಿಧ ಸಮಾಜಗಳ ಮುಖಂಡರದ್ದೇ ಸಿಂಹಪಾಲು. ಅದನ್ನು ಜನ ಇನ್ನೂ ಮರೆತಿಲ್ಲ. ಈ ಬೆಳವಣಿಗೆ ಅನೇಕ ಹಂತಗಳಲ್ಲಿ ತರಹೇವಾರಿ ವಿವಾದಗಳನ್ನು ಹುಟ್ಟುಹಾಕಿದೆ. ಡಾಕ್ಟರೇಟ್ ಗೌರವ ಆಯಾ ವಿಶ್ವವಿದ್ಯಾಲಯ ನೀಡುವ ಉನ್ನತ ಪದವಿ ಎಂಬುದು ಸ್ಪಷ್ಟ. ಈ ಪದವಿಗೆ ಆಯ್ಕೆ ಮಾಡುವಾಗ ವಿಶ್ವವಿದ್ಯಾಲಯ ಮೈತುಂಬಾ ಕಣ್ಣಾಗಿದ್ದರೂ ಸಾಲದು.
ಆದರೆ ಈಗ ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟ್ ಪಟ್ಟಿ ಹೊರಬೀಳುತ್ತಿದ್ದಂತೆಯೇ ಅದರಲ್ಲೊಬ್ಬರು ಅಧಿಕಾರದಲ್ಲಿರುವ ಮಂತ್ರಿ, ಇನ್ನೋರ್ವ ಉನ್ನತಾಧಿಕಾರಿ, ಮತ್ತೋರ್ವ ರಾಜಕೀಯವಾಗಿ ತುಂಬ ಪ್ರಭಾವಿ ವ್ಯಕ್ತಿ ಹೆಸರು- ಚಿತ್ರ ಕಣ್ಣಿಗೆ ರಾಚದೆ ಇರದು. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಡಾಕ್ಟರೇಟ್ ಗೌರವಕ್ಕೆ ಅದ್ಯಾವ ಸೀಮೆಯ ಅರ್ಹತೆ, ಮಾನದಂಡ ವಿವಿ ಹೊಂದಿದೆ ಎಂಬುದಕ್ಕೆ ಆಯ್ಕೆ ಪಟ್ಟಿಯೇ ಸಾಕ್ಷಿಯಾಗಿರುತ್ತದೆ.
ವಿಶ್ವವಿದ್ಯಾಲಯಗಳನ್ನು ಹೊಕ್ಕಿರುವ ರಾಜಕೀಯ, ಸಿಂಡಿಕೇಟ್ ಅಲಂಕರಿಸಿರುವ ರಾಜಕೀಯ ಹಿನ್ನೆಲೆಯ ಸದಸ್ಯರಿಂದಾಗಿ ಡಾಕ್ಟರೇಟ್ ಉಪಾದಿಯ ಗೌರವ ವರ್ಷದಿಂದ ವರ್ಷಕ್ಕೆ ತಗ್ಗುತ್ತಿರುವುದು ಎಲ್ಲರ ಅನುಭವಕ್ಕೆ ಬರುತ್ತಿದೆ.
ಇವೆಲ್ಲ ಕಾರಣಗಳಿರಬಹುದೇ? ಹಿಂದೆಲ್ಲ ವಿಶ್ವವಿದ್ಯಾಲಯ ನೀತಿ ನಿರೂಪಕ ಉನ್ನತಾಂಗ ಸಿಂಡಿಕೇಟ್, ಸೆನೆಟ್, ಅಕಾಡೆಮಿಕ್ ಕೌನ್ಸಿಲ್ಗೆ ಚುನಾವಣೆ ನಡೆದು ಸದಸ್ಯರು ಆಯ್ಕೆಯಾಗುತ್ತಿದ್ದರು. ಸರ್ಕಾರದ ನೇಮಕಾತಿ ಈ ಅಂಗಗಳಲ್ಲಿ ಇರಲೇ ಇಲ್ಲ.
ಆದರೆ ದಶಕದ ಹಿಂದೆ ಮಾರ್ಪಾಟಾಗಿರುವ ವಿವಿ ಕಾಯ್ದೆಯನ್ವಯ ಇದೀಗ ಸೆನೆಟ್ ಇಲ್ಲವೇ ಇಲ್ಲ. ಅಸ್ತಿತ್ವದಲ್ಲಿರುವ ಸಿಂಡಿಕೇಟ್ ಹಾಗೂ ಸೆನೆಟ್ಗಳಿಗೆ ಸರ್ಕಾರದಿಂದ ನೇಮಕಾತಿ ನಡೆಯುತ್ತದೆ. ಈ ಅಂಗಗಳ ಸದಸ್ಯಗಿರಿ ಹೊಂದುವವರು ಸಾಮಾನ್ಯವಾಗಿ ಆಡಳಿತ ಪಕ್ಷಗಳ ಕಾರ್ಯಕರ್ತರೋ, ಅಭಿಮಾನಿಗಳೋ ಆಗಿರುತ್ತಾರೆಯೇ ವಿನಹಃ ಶಿಕ್ಷಣ ತಜ್ಞರಾಗಿರುವುದು ವಿರಳ.
ಶಿಕ್ಷಣ ತಜ್ಞರನ್ನು ಈ ಅಂಗಗಳಿಗೆ ಸರ್ಕಾರ ನೇಮಕ ಮಾಡಬಹುದು ಎಂಬ ಕಾಯ್ದೆಯ ಅನುಕೂಲ ಸಿಂಧು ಭಾಗವನ್ನೇ ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ರಾಜಕೀಯ ಪಕ್ಷಗಳು ಉನ್ನತ ಶಿಕ್ಷಣದ ಸಂಸ್ಥೆಯಲ್ಲಿಯೂ ತಮ್ಮ ಬಾಲಂಗೋಚಿಗಳಿರಲಿ ಎಂದು ಸಿಂಡಿಕೇಟ್, ಅಕಾಡೆಮಿಕ್ ಕೌನ್ಸಿಲ್ಗಳ ಪಾವಿತ್ರ್ಯತೆಯನ್ನೇ ಬಲಿ ನೀಡುತ್ತಿವೆ.
ಗಾಳಿ ಬಿಟ್ಟಾಗ ತೂರಿಕೋ...: ವಿಶ್ವವಿದ್ಯಾಲಯಗಳಿಗೆ ನೇಮಕವಾಗುವ ಕುಲಪತಿಗಳೂ ಗಾಳಿ ಬಿಟ್ಟಾಗ ತೂರಿಕೋ ಮನೋಭಾವದವರೇ ಆಗಿದ್ದರಂತೂ ಮುಗಿದೇ ಹೋಯ್ತು. 'ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಹೇಳಿದ್ದೂ ಅದೇ...' ಎಂಬಂತೆ ಸಿಂಡಿಕೇಟ್ ಸದಸ್ಯರ ತಾಳಕ್ಕೆ ತಕ್ಕಂತೆ ತಲೆ ಅಲ್ಲಾಡಿಸುತ್ತ ವಿಶ್ವವಿದ್ಯಾಲಯ ಮಾನ- ಮರ್ಯಾದೆಯನ್ನು ಚಿಲ್ಲರೆ ರಾಜಕೀಯಕ್ಕೆ ಹರಾಜು ಹಾಕಿದರು ಸರಿ, 'ಬಿದ್ದರೂ ಮೀಸೆ ಮಣ್ಣಾಗಲಿಲ್ಲವಲ್ಲ' ಎಂಬಂತೆ ಬಂಡೆಗಲ್ಲಿನಂತೆ ವಿಶ್ವವಿದ್ಯಾಲಯ ಮಾನ-ಮರ್ಯಾದೆ ಮಣ್ಣುಪಾಲು ಮಾಡುವಲ್ಲಿ ಶಕ್ತ್ಯಾನುಸಾರ ಕೊಡುಗೆ ನೀಡಿದರೆ ವಿವಿ ಪಾವಿತ್ರ್ಯ ಅದ್ಹೇಗೆ ತಾನೆ ಉಳಿದೀತು?
ಜ್ಞಾನಗಂಗೆ ಜಾಣ ಕುರುಡು ನೀತಿ: ಗೌರವ ಡಾಕ್ಟರೇಟ್ ನೀಡುವಾಗ ಜ್ಞಾನಗಂಗೆ ಮಂದಿಗೆ ಈ ನೆಲದ ಸಂಸ್ಕೃತಿ ರಕ್ಷಕರಾಗಿರುವ ಜನಪದ ಕಲಾವಿದರು, ಸಂಪ್ರದಾಯದ ಹಾಡುಗಳಲ್ಲಿ ಪರಿಣತಿ ಹೊಂದಿದವರು, ಈ ನೆಲದ ಪ್ರಗತಿಗೆ ಬೆಂಬಲವಾಗಿ ಸದಾಕಾಲ ತಮ್ಮ ಕರ್ತವ್ಯಪ್ರಜ್ಞೆ ಮೆರೆಯುವ ಚಿಂತನಶೀಲ ಪತ್ರಕರ್ತರು, ಕೃಷಿಯಲ್ಲಿ ಸದಾಕಾಲ ಪ್ರಯೋಗಶೀಲರಾಗಿರುವ ಪ್ರಗತಿಪರ, ಅಪರೂಪದ ಸಾಧನೆ ಮಾಡಿರುವ ತೊಗರಿ ಕಣಜದ ರೈತರು, ತೋಟಗಾರಿಕೆಯಲ್ಲಿ ಅಪ್ರತಿಮ ಸಾಧನೆ ಮಾಡುತ್ತಿರುವ ಅನ್ನದಾತರು, ಆಯುರ್ವೇದ ಪಂಡಿತರು, ಸಂಸ್ಕೃತ ವಿದ್ವಾಂಸರು, ಈ ಭಾಗದಲ್ಲಿ ಸಾಮರಸ್ಯ ಸೌಹಾರ್ದತೆ ಕಾಪಾಡುತ್ತಿರುವ ಹಲವು ಸಾಧಕರು, ಅನಾಥ ಮಕ್ಕಳಿಗೆ ಆಸರೆಯಾದಂತಹ ಮಹನೀಯರೂ... ಹೀಗೆ ಸಾಧನೆಯ ದಾರಿಯಲ್ಲಿ ಸದಾಕಾಲ ಕ್ರಿಯಾಶೀಲ, ಸೃಜನಶೀಲರಾಗಿರುವ ಅನೇಕರು ಹೈ-ಕ ನೆಲದಲ್ಲಿದ್ದರೂ ಅಂತಹವರು ಯಾರೂ ಇವರಿಗೆ ಕಂಡೇ ಇಲ್ಲವೇ?
ಜನಪದ ರಂಗದಲ್ಲಿ ಹೈ-ಕ ನೆಲದ ಸಿರಿವಂತಿಕೆ ನಾಡಿನ ಬೇರಾವ ಸೀಮೆಗೂ ಸರಿಸಾಟಿಯಾಗದು. ಇಂದಿಗೂ ಜನಪದ ಕಲಾವಿದರು, ಹಾಡುಗಾರರು ಈ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಉಪಾದಿಗೆ ಭಾಜನರಾಗಿಲ್ಲ. ಹೊಸತನದ ಪ್ರಯೋಗಗಳೊಂದಿಗೆ ನಾಡಿನ ಆಹಾರ ಭದ್ರತೆಗೆ ಕೊಡುಗೆ ನೀಡಿರುವ ರೈತರೂ ಈ ವಿವಿಯ ಗೌರವ ಡಾಕ್ಟರೇಟ್ ಪಡೆದಿಲ್ಲ. ಇಲ್ಲಿನ ರೈತರ ಸಾಧನೆ ನಾಡಿಗೇ ನಾಡೇ ಪ್ರಶಂಸಿದ್ದರೂ ವಿಶ್ವವಿದ್ಯಾಲಯಕ್ಕೆ ಅದಿನ್ನೂ ಸಾಧನೆ ಎಂದು ಅನ್ನಿಸಿಯೇ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

