ಹೆಚ್ಚಾಯ್ತು ಪ್ರಭಾವ, ಗುಣ ಅಭಾವ...
ಶೇಷಮೂರ್ತಿ ಅವಧಾನಿ
ಗುಲ್ಬರ್ಗ: ಕರ್ನಾಟಕ ವಿಶ್ವವಿದ್ಯಾಲಯಗಳ ಕಾಯ್ದೆ- 1976(ಕೆಎಸ್ಯು- 2000 ತಿದ್ದುಪಡಿ)ರ ಅನ್ವಯ 69 (2)ರಲ್ಲಿ ಗೌರವ ಡಾಕ್ಟರೇಟ್ ಸಂಪ್ರದಾಯವಲ್ಲ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳಿಗೆ ನೀಡುವ ಗೌರವ. ಈ ಪದವಿ ಕೊಡುವಾಗ ವಿಶ್ವವಿದ್ಯಾಲಯ ತುಂಬಾ ಯೋಚನೆಯಿಂದ ಹಾಗೂ ಜಾಗರೂಕತೆಯಿಂದ ಹೆಜ್ಜೆ ಇಡಬೇಕು. ಆದರೆ ಯಾವುದೇ ಮಾನದಂಡಗಳಿಲ್ಲದೆ, ಕೇವಲ ವಶೀಲಿಬಾಜಿ, ಪ್ರಭಾವಗಳ ಹಿನ್ನೆಲೆಯಲ್ಲಿಯೇ ಗೌರವ ಡಾಕ್ಟರೇಟ್ಗೆ ಹೆಸರುಗಳ ಆಯ್ಕೆ ಮಾಡಿದರೆ ಹೇಗೆ ಇದೊಂದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಕಿದಂತಾಗುವುದಿಲ್ಲವೆ?
- ಜ್ಞಾನಗಂಗೆಯ 'ಗೌಡಾ' ಆಯ್ಕೆ ಮಾನದಂಡ, ಅಲ್ಲಿನ ಹಲವು ಬೆಳವಣಿಗೆಗಳನ್ನು ಹತ್ತಿರದಿಂದ ಕಾಣುವವರು ಕೇಳುತ್ತಿರುವ ಪ್ರಶ್ನೆಗಳಿವು.
ಸಾಮಾಜಿಕವಾಗಿ ಯಾವುದೇ ರೀತಿಯ ಕೊಡುಗೆಗಳನ್ನೂ ನೀಡಿರದ ವ್ಯಕ್ತಿಗಳೇ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಪಟ್ಟಿಯಲ್ಲಿ ಸೇರಿದ್ದು ಈ ಭಾಗದ ಶಿಕ್ಷಣ ಪ್ರೇಮಿಗಳನ್ನು ಕೆಣಕಿದೆ. ಮೈಪೂರಾ ಕಣ್ಣಾಗಿದ್ದುಕೊಂಡು ಕೆಲಸ ಮಾಡಬೇಕಾದಂತಹ ಸಂದರ್ಭದಲ್ಲೇ ಬೇಕಾಬಿಟ್ಟಿಯಾಗಿ ವಿವಿ ಸಾಗಿದರೆ ಹೇಗೆಂಬ ಕಳವಳ ಶಿಕ್ಷಣ ಪ್ರೇಮಿಗಳದ್ದಾಗಿದೆ.
ಗೌಡಾ- ಜ್ಞಾನಗಂಗೆ ಸರಿಸಾಟಿ ಯಾರು?: ಜ್ಞಾನಗಂಗೆ ಕಳೆದೊಂದು ದಶಕದಿಂದ ವಾರ್ಷಿಕ ನೀಡುತ್ತಿರುವ ಗೌರವ ಡಾಕ್ಟರೇಟ್ ಪುರಸ್ಕಾರ ಸಂಖ್ಯಾಬಲದಲ್ಲಿ ರಾಜ್ಯದ ಇತರೆ ವಿವಿಗಳನ್ನು ಹಿಂದಿಕ್ಕಿದೆ. ಗುಣಮಟ್ಟದಲ್ಲಿ ಪಾತಾಳಮುಖಿಯಾಗಿದೆ. ವಿವಾದ ಕಂಡಾಕ್ಷಣ ಮೌನದ ಮೊರೆ ಹೋಗಿಬಿಡುತ್ತದೆ. ಗೌಡಾಗೆ ಗಣ್ಯ- ಮಹನೀಯರ ಆಯ್ಕೆ ಸಿಂಡಿಕೇಟ್ ಜವಾಬ್ದಾರಿ, ಅಲ್ಲಿನ ನಿಲುವು- ಒಲವುಗಳಂತೆಯೇ ಯಾದಿ ಸಿದ್ಧವಾಗುತ್ತದೆ ಎಂದು ಹೇಳುತ್ತ ವಿವಿ ಪಲಾಯನವಾದ ಮಂಡಿಸಲೂ ಹಿಂದೆ ಮುಂದೆ ನೋಡೋದಿಲ್ಲ.
ಮಠಾಧೀಶರು, ಹೋರಾಟಗಾರರು, ಅಧಿಕಾರದಲ್ಲಿರುವ ರಾಜಕಾರಣಿಗಳು, ರಾಜ್ಯದ ಉನ್ನತ ಅಧಿಕಾರಿಗಳನ್ನೆಲ್ಲ ಯಾಕೆ ಗೌರವ ಡಾಕ್ಟರೇಟ್ಗೆ ಆಯ್ಕೆ ಮಾಡುತ್ತೀರಿ, ಇದರ ಬದಲು ತಮ್ಮ ಪಾಡಿಗೆ ತಾವೇ ಸಾಧನೆ ಮಾಡುತ್ತಿರುವ ಮಣ್ಣಿನ ಮಕ್ಕಳು, ಎಲೆಮರೆಯಲ್ಲಿದ್ದೇ ಕೆಲಸ ಮಾಡುವ ಸಾಧಕರನ್ನು- ಮಹನೀಯರನ್ನು ಯಾಕೆ ಗುರುತಿಸುತ್ತಿಲ್ಲ ಎಂದು ಜನತೆ ಆಕ್ಷೇಪಿಸಿದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ಹತ್ತರ ಭಯ ದೂರಾಗಿಲ್ರಿ: ಗುವಿವಿ 30ನೇ ವಾರ್ಷಿಕ ಗೌಡಾ ಯಾದಿಯಲ್ಲಿ ಗುಣಮಟ್ಟ ಬಿದ್ದು ಹೋದಾಗ ಈ ಭಾಗದ ಪ್ರಜ್ಞಾವಂತರೆಲ್ಲರೂ ಕಳವಳಪಟ್ಟಿದ್ದಿದೆ. ಆದಾಗ್ಯೂ ತನ್ನ 3 ದಶಕಗಳ ಅಸ್ತಿತ್ವದಲ್ಲಿಯೇ ಜ್ಞಾನಗಂಗೆ ಸಾರ್ವಕಾಲಿಕ ದಾಖಲೆ ಎಂಬಂತೆ ಗೌರವ ಡಾಕ್ಟರೇಟ್ಗೆ 10 ಜನರನ್ನು ಆಯ್ಕೆಯೇನೋ ಮಾಡಿತ್ತು. ಆದರೆ ಗುಣಮಟ್ಟದಲ್ಲಿ ರಾಜೀ ಒಪ್ಪಂದಕ್ಕೆ ಜೋತು ಬೀಳುವ ಮೂಲಕ ಗೌರವ ಡಾಕ್ಟರೇಟ್ನ ಪಾವಿತ್ರ್ಯಕ್ಕೇ ಸಂಚಕಾರ ತಂದೊಡ್ಡಿತ್ತು.
ಮಠ- ಮತ, ರಾಜಕೀಯ ನಂಟು: ಅಧಿಕಾರದಲ್ಲಿರುವ ರಾಜಕಾರಣಿಗಳ ಓಲೈಸುತ್ತ ಸಾಗಿರುವುದು ದುರಂತ. ಕಳೆದ 2 ವರ್ಷಗಳ ಜ್ಞಾನಗಂಗೆ ಗೌಡಾ ಯಾದಿ ಭೂತಗನ್ನಡಿ ಹಿಡಿದು ಹುಡುಕಿದರೂ ರಾಜ್ಯ, ರಾಷ್ಟ್ರ ಮಟ್ಟದ ಚಿಂತಕರು, ಸಮಾಜಮುಖಿ ಸಾಧನೆಗಳಿಂದಾಗಿ ಬೆಳಕಿಗೆ ಬಂದವರನ್ನು ಗುರುತಿಸಿ ಗೌರವಿಸಿದ್ದು ಅಷ್ಟಕ್ಕಷ್ಟೆ. ಹೀಗಾಗಿ ವಿವಿ ಗೌರವ ಡಾಕ್ಟರೇಟ್ ತನ್ನ ಗೌರವ ತಾನೇ ಕಳೆದುಕೊಳ್ಳುವತ್ತ ಸಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ.
ಮಠ- ಮತ ರಾಜಕೀಯಕ್ಕೂ ಗೌಡಾ ಬಳಸುವ ಕೆಟ್ಟ ಸಂಪ್ರದಾಯ ಹಾಸುಹೊಕ್ಕಾಗಿದೆ. ಸ್ವಾಮೀಜಿಗಳ ಹೆಸರನ್ನು ಸೂಚಿಸಲು ಪ್ರಭಾವಿ ರಾಜಕಾರಣಿಗಳಲ್ಲೇ ಪೈಪೋಟಿ ಕಾಣುತ್ತಿರುವುದು ದುರಂತ. ನೆಲದ ಸಾಧಕರತ್ತ ಬೆರಳು ಮಾಡಿ ಇವರಿಗೆ ಗೌರವ ಕೊಡಿ ಎಂದು ಹೇಳುವವರೇ ಇಲ್ಲಿಲ್ಲ. ಎಲ್ಲರೂ ಮತ ರಾಶಿಗೆ ಅದ್ಯಾವ ಮಠ ಪೂರಕ- ಪ್ರೇರಕ ಎಂಬುದರ ಲೆಕ್ಕ ಹಾಕಿ ಜಾತಿ ಮತ ಗಣಿತ ಸರಿದೂಗಿಸುವುದರಲ್ಲಿಯೇ ತಲ್ಲೀನ.
ಗೌಡಾ ಯಾದಿ ಹನುಮನ ಬಾಲ: 30ನೇ ವಾರ್ಷಿಕ ಘಟಿಕೋತ್ಸವದ 10 'ಗೌಡಾ'ಗಳಲ್ಲಿ ಸ್ವಾಮೀಜಿಗಳದ್ದೇ ಮೇಲುಗೈ ಆಗಲು ಪ್ರಭಾವಿ ರಾಜಕಾರಣಿಗಳ ಒತ್ತಾಸೆ ಎಂಬುದು ರಟ್ಟಾದ ಗುಟ್ಟು. ಹೇಳುವುದಷ್ಟೆ ಅಲ್ಲ, ಸೂಚಿತ ಹೆಸರುಗಳು ಯಾವ ಕಾರಣಕ್ಕೂ ಕೈಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ರಾಜಕಾರಣಿಗಳು ನಿಭಾಯಿಸುತ್ತಾರೆ.
ಗುಲ್ಬರ್ಗ ವಿವಿ ಗೌಡಾ ಪಟ್ಟಿ ಜಾತಿ- ಮತಗಳನ್ನು ಸರಿದೂಗಿಸುವುದರಲ್ಲಿಯೇ ಹನುಮನ ಬಾಲದಂತೆ ಉದ್ದವಾಗುತ್ತಿದೆಯೇ ಹೊರತು ಸಾಧನೆ- ಸಮಾಜಮುಖಿ ಚಿಂತನೆಗಳ ಹಿನ್ನೆಲೆಯಲ್ಲಿ ಗಣ್ಯರು ಈ ಪಟ್ಟಿಯಲ್ಲಿ ಸ್ಥಾನ ವಂಚಿತರಾಗುವುತ್ತಿರುವುದು ವಿವಿ ಹಲವು ಹಂತದಲ್ಲಿ ವೈಚಾರಿಕವಾಗಿ ಅದೆಂತಹ ದುರವಸ್ಥೆ ತಲುಪಿದೆ ಎಂಬುದಕ್ಕೆ ಕನ್ನಡಿ.
ಈ ರೀತಿ ಬೇಕಾಬಿಟ್ಟಿಯಾಗಿ ಡಾಕ್ಟರೇಟ್ ಗೌರವ ಪ್ರದಾನ ಮಾಡುತ್ತ ಸಾಗಿರುವ ಜ್ಞಾನಗಂಗೆ ಇದರಿಂದಾಗಿ ಸಾರ್ವಜನಿಕವಾಗಿ ನಗೆಪಾಟಲಿಗೆ ಗುರಿಯಾಗಿದೆ. ಅಲ್ಲದೆ, ತನ್ನ ಕೈಯ್ಯಾರೆ ತಾನೇ ಬೌದ್ಧಿಕ ವಲಯದ ಕೋಪತಾಪವನ್ನೂ ಆಹ್ವಾನಿಸಿದಂತಾಗಿದೆ.
37 'ಗೌಡಾ'ಗಳಲ್ಲಿ...: ತನ್ನ 3 ದಶಕಗಳಲ್ಲಿ ಗುಲ್ಬರ್ಗ ವಿವಿ ನೀಡಿದ್ದು 37 ಗೌಡಾ. ಈ ಪೈಕಿ ಡಾ. ಪುಟ್ಟಯ್ಯನವರು ಕುಲಪತಿಗಳಾಗಿ ಬಂದ ನಂತರ ನಡೆದಂತಹ 29 ಹಾಗೂ 30ನೇ ಘಟಿಕೋತ್ಸವದಲ್ಲೇ 15 ಗೌಡಾ ಪ್ರದಾನ ನಡೆದಿದೆ. ಅದರಲ್ಲಿಯೂ ಸಂಖ್ಯಾಬಲ, ಗುಣಮಟ್ಟದ ವಿಚಾರವಾಗಿ ವಿವಾದಗಳ ಹುತ್ತ ಬೆಳೆದಿದ್ದೂ ಸಹ ಡಾ. ಪುಟ್ಟಯ್ಯ ಅವರ ಅವಧಿಯಲ್ಲೇ. ಹೀಗಾಗಿ ಕಳೆದೆರಡು ವರ್ಷಗಳ ಗೌಡಾಗಳೇ ಜ್ಞಾನಗಂಗೆಯನ್ನು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದ್ದು ರಟ್ಟಾದ ಗುಟ್ಟು.
ಗುಲ್ಬರ್ಗ, ಬೀದರ್, ರಾಯಚೂರು, ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಜ್ಞಾನಗಂಗೆ ತನ್ನ ಗೌಡಾಗಳಲ್ಲಿ ಈ ನೆಲದ ಸಾಧಕರನ್ನು ಗುರುತಿಸಿದ್ದು ಅಷ್ಟಕ್ಕಷ್ಟೆ. 'ಹಿತ್ತಲ ಗಿಡ ಮದ್ದಲ್ಲ' ಎಂಬಂತೆಯೇ ಗೌಡಾ ಆಯ್ಕೆಯಲ್ಲಿ ವಿವಿ ವರ್ತಿಸಿದ್ದು, ವರ್ತಿಸುತ್ತಿರುವುದು ದುರಂತವಲ್ಲದೆ ಮತ್ತೇನು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

