ಮಸ್ಕಿ; ಶೇಖರಪ್ಪ ಸ್ಪರ್ಧೆ ಖಚಿತ
ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಬಳ್ಳಾರಿ ಸಂಸದೆ ಜೆ.ಶಾಂತಾ ಅವರು ಸ್ಪರ್ಧಿಸುತ್ತಿಲ್ಲ. ಬಿಎಸ್ಸಾರ್ ಕಾಂಗ್ರೆಸ್ ಕ್ಷದ ನಿಯೋಜಿತ ಅಭ್ಯರ್ಥಿ ಶೇಖರಪ್ಪ ನಾಯಕ್ ಅವರು ಮಸ್ಕಿ ಕ್ಷೇತ್ರದಲ್ಲಿ ಕೈಗೊಂಡಿರುವ ಸಂಘಟನೆಯನ್ನು ಸಹಿಸಲಾಗದವರು ಅನಗತ್ಯ ಗೊಂದಲ ಹುಟ್ಟುಹಾಕಲು ವದಂತಿ ಹರಡಿವೆ ಎಂದು ಪಕ್ಷದ ಸಂಚಾಲಕ ಸಂಜಯಕುಮಾರ ಜೈನ್ ತಿಳಿಸಿದ್ದಾರೆ. ಪಟ್ಟಣದ ಬಿಎಸ್ಸಾರ್ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರು ಹಾಗೂ ಪಕ್ಷದ ಪ್ರಮುಖರು ಇಂಥ ಯಾವುದೇ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿ, ಪಕ್ಷದ ಸಂಸ್ಥಾಪಕ ಶ್ರೀರಾಮುಲು ಅವರು ಬಿಡುಗಡೆ ಮಾಡಿರುವ ಪಕ್ಷದ 27 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಸ್ಕಿ ಕ್ಷೇತ್ರದ ಅಭ್ಯರ್ಥಿ ಎಂದು ಶೇಖರಪ್ಪ ನಾಯಕ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ದುರುದ್ದೇಶಪೂರ್ವಕವಾಗಿ ವದಂತಿ: ಕಳೆದೊಂದು ವರ್ಷದಿಂದ ಪಕ್ಷ ಸಂಘಟಿಸುತ್ತಿರುವ ಶೇಖರಪ್ಪ ತಳವಾರ ಅವರಿಗೆ ಗ್ರಾಮಾಂತರ ಪ್ರದೇಶದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದರಿಂದ ವಿರೋಧ ಪಕ್ಷದ ಮುಖಂಡರಲ್ಲಿ ನಡುಕ ಹುಟ್ಟಿದೆ. ಆದ್ದರಿಂದ ಗೊಂದಲ ಹುಟ್ಟಿಸಲೆಂದೇ ಬೇರೊಬ್ಬ ಅಭ್ಯರ್ಥಿ ಸ್ಪರ್ಧಿಸುತ್ತಿದ್ದಾರೆಂಬ ವದಂತಿಯನ್ನು ಉದ್ದೇಶ ಪೂರ್ವಕವಾಗಿ ಹರಿಬಿಟ್ಟಿದ್ದಾರೆಂದು ದೂರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಮಲ್ಲನಗೌಡ ಸುಂಕನೂರು, ಆದಪ್ಪ ಕುರುಬರ, ಮಹಾಂತೇಶ ಜಾಲವಾಡಗಿ, ಯಮನೂರು ಚಲುವಾದಿ, ಅಮರೇಶ ಉಪ್ಪಾರ, ಮಲ್ಲಿಕಾರ್ಜುನ ಸ್ವಾಮಿ ಮುಸ್ಲಿ ಕಾರಲಕುಂಟಿ ಸೇರಿದಂತೆ ಇನ್ನಿತರರು ಇದ್ದರು.
'ವಿದ್ಯಾರ್ಥಿಗಳು ಜ್ಞಾನದ ಪ್ರವೃತ್ತಿ ಬೆಳಸಿಕೊಳ್ಳಲಿ'
ಮುದಗಲ್: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನದ ಅವಶ್ಯವಾಗಿದೆ. ವಿದ್ಯಾರ್ಥಿಗಳು ಜ್ಞಾನದಾಹಿಗಳಾಗಿರಬೇಕು. ಜ್ಞಾನವನ್ನು ಜೀರ್ಣಿಸಿಕೊಳ್ಳುವ ಪ್ರವೃತ್ತಿಯನ್ನು ಬೆಳಸಿಕೊಳ್ಳಬೇಕು. ಉತ್ತಮ ನಡತೆಯುಳ್ಳವರಾಗಿ ಮುಂದಿನ ಉತ್ತಮ ನಾಗರಿಕರಾಗಲು ಸಾಧ್ಯವಾಗುತ್ತದೆಂದು ಲಿಂಗಸ್ಗೂರು ಸರ್ಕಾರಿ ಪದವಿ ಪೂರ್ವಕಾಲೇಜಿನ ಪ್ರಾಧ್ಯಾಪಕಿ ಡಾ. ಗಂಗಮ್ಮ ಸತ್ಯಂಪೇಟೆ ಹೇಳಿದರು. ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಆಹ್ವಾನಿತ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಉಪನ್ಯಾಸಕ ರಹೀಮಾನ ಮುಲ್ಲಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಹುಲ್ಲಪ್ಪ ಸರೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಉದ್ಯಮಿ ಗೋಪಾಲಕೃಷ್ಣ ಗುತ್ತೇದಾರ, ಅಮರಗುಂಡಪ್ಪ ಮೇಟಿ, ಭೀಮನಗೌಡ ಗೌಡರ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರಾಧ್ಯಾಪಕ ಜಗದೀಶ ಸ್ವಾಗತಿಸಿದರು. ಬೀಳಗಿ ನಿರೂಪಿಸಿ, ಶ್ರೀನಿವಾಸ ವಂದಿಸಿದರು.
ಕಾಂಗ್ರೆಸ್ಗೆ ಸೇರ್ಪಡೆ
ಮುದಗಲ್: ಸ್ಥಳೀಯ ವಾರ್ಡ್ ನಂಬರ್ 15 ರಲ್ಲಿನ ಬಿಜೆಪಿ ಯುವ ಮುಖಂಡರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು. ಮುಖಂಡರಾದ ರಾಮು ಯಾದವ್, ಭೀಮಣ್ಣ ಗೂಳಿ, ಟೈಲರ ಭೀಮಣ್ಣ ಸೇರಿದಂತೆ 10 ಕ್ಕು ಅಧಿಕ ಯುವ ಮುಖಂಡರನ್ನು ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಸದಸ್ಯ ಶರಣಗೌಡ ಪಾಟೀಲ್ ಬಯ್ಯಾಪುರ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನ್ವರಖಾನಸಾಬ ಹೂಮಾಲೆ ಹಾಕಿ ಸ್ವಾಗತಿಸಿದರು. ಮುಖಂಡರಾದ ಆಶೋಕಗೌಡ ಪಾಟೀಲ್, ಮಹಾಂತೇಶ ಪಾಟೀಲ್, ಮಲ್ಲಪ್ಪ ಹೂಗಾರ, ರಾಜೂ ಮಾಲೀಪಾಟೀಲ್, ಡಾ.ರಹಿಂ ಹಳೇಪೇಟೆ, ವಿರುಪಾಕ್ಷಯ್ಯ ಬನ್ನಿಗೋಳ ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.
24 ರಂದು ಖರ್ಗೆ, ಧರಂಗೆ ಸನ್ಮಾನ
ಜೇವರ್ಗಿ: ತಾಲೂಕಿನ ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಯಡ್ರಾಮಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಫೆ.24 ರಂದು 371 ನೇ ಕಲಂ ಕರಡು ಮಸೂದೆಯ ರೂವಾರಿಗಳ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಸದಸ್ಯ ಡಾ. ಅಜಯಸಿಂಗ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

