ಗುಲ್ಬರ್ಗಾ

ಅನಾರೋಗ್ಯ ಮರೆತ ಅನಂತಮೂರ್ತಿ ಅಜ್ಜ

Published On :

 ಶೇಷಮೂರ್ತಿ ಅವಧಾನಿ
ಗುಲ್ಬರ್ಗ
: ಕನ್ನಡ ಸಾರಸ್ವತ ಲೋಕದ ಧೃವತಾರೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ತಮ್ಮ ಗುಲ್ಬರ್ಗ ಪ್ರವಾಸದಲ್ಲಿ ಕಾಡುತ್ತಿರುವ ಅನಾರೋಗ್ಯ (ಮೂತ್ರಪಿಂಡ ತೊಂದರೆ) ವನ್ನೂ ಮರೆತು ಎಲ್ಲರೊಂದಿಗೆ ಬೆರೆತರು.
ಕರ್ನಾಟಕ ಕೇಂದ್ರೀಯ ವಿವಿ ಕುಲಾಧಿಪತಿಗಳಾದ ನಂತರ ಇದೇ ಮೊದಲ ಬಾರಿಗೆ ಗುಲ್ಬರ್ಗ ಕೇಂದ್ರೀಯ ವಿವಿಗೆ ಭೇಟಿ ನೀಡಿರುವ ಅನಂತಮೂರ್ತಿ ಸೋಮವಾರದಿಂದ ಇಲ್ಲೇ ಇದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಎಡೆಬಿಡದಂತೆ ಕಾರ್ಯಕ್ರಮಗಳು. ಅನಾರೋಗ್ಯದಿಂದ ತುಸು ನಿತ್ರಾಣ ಆದಂತೆ ಕಂಡರೂ ಡಾ. ಅನಂತಮೂರ್ತಿ ಮಾತಿಗೆ ಇಳಿದರೆಂದರೆ ತೀರಿತು. ವಿಚಾರ, ಶಬ್ದ ಪ್ರಯೋಗ ಎರಡರಲ್ಲೂ ಅದೇ ಮೊನಚುತನ.
ಅಗಾಧ ಅನುಭವದ ಹಿನ್ನೆಲೆಯಲ್ಲಿ ಯುಗಧರ್ಮ, ಶಿಕ್ಷಣ, ಆರೋಗ್ಯ, ಖಾಸಗೀಕರಣ ಎಂದು ಹಲವು ಸಂಗತಿಗಳ ಮೇಲೆ ತಮ್ಮ ಪ್ರಖರ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತ ಸಾಗಿರುವ ಡಾ. ಅನಂತಮೂರ್ತಿ ತಮ್ಮ ಮಾತು ಆಲಿಸುವ ಎಲ್ಲರ ಮನಸೂರೆಗೊಳ್ಳುತ್ತಿದ್ದಾರೆ.
ಪೇಟಾ ಕೊರಗು ಮಾಯವಾಯ್ತು ನೋಡ್ರಿ: ಮಂಗಳವಾರ ಇಲ್ಲಿನ ಜ್ಞಾನಗಂಗೆ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರೀಯ ವಿವಿ ಪರವಾಗಿ ಹಮ್ಮಿಕೊಳ್ಳಲಾಗಿದ್ದ ಸತ್ಕಾರ ಸಮಾರಂಭದಲ್ಲಿ ರುಮಾಲು ತೊಡಿಸಿ ಆತ್ಮೀಯವಾಗಿ ಗೌರವಿಸಿದಾಗ ಅನಂತಮೂರ್ತಿ ಭಾವಪರವಶರಾದರು.
ಕಾರ್ಯಕ್ರಮದುದ್ದಕ್ಕೂ ತುಂಬ ಲವಲವಿಕೆಯಿಂದ ಇದ್ದ ಅನಂತಮೂರ್ತಿ ತಮ್ಮನ್ನು ರುಮಾಲು ತೊಡಿಸಿ ಸತ್ಕರಿಸಿದ್ದ ಪ್ರಸಂಗವನ್ನು ಬಲು ಹಾಸ್ಯಮಯವಾಗಿ ವಿವರಿಸುತ್ತ ರುಮಾಲು ತಮಗಿಷ್ಟವಾಯ್ತು ಎಂದು ಸಭೆಯುದ್ದಕ್ಕೂ ರುಮಾಲುಧಾರಿಯಾಗಿಯೇ ಕಂಗೊಳಿಸಿದರು.
ರುಮಾಲು ತೊಡಿಸಿದ ಸಮಾರಂಭದ ಸಭಿಕರ ಸಾಲಲ್ಲಿ ಪತ್ನಿ ಎಸ್ತರ್ ಮುಂಭಾಗದಲ್ಲೇ ಇದ್ದರು. ಅವರತ್ತ ನೋಡುತ್ತಲೇ ಅನಂತಮೂರ್ತಿ ತಾವು ಎಸ್ತರ್ ಜೊತೆ ಮಾಡಿಕೊಂಡ ರಿಜಿಸ್ಟರ್ಡ್ ಮದುವೆ ಪ್ರಸಂಗ ಮೆಲಕು ಹಾಕಿದರು.
ತರಾತುರಿಯಲ್ಲಿ ಎಸ್ತರ್ ಮದುವೆಯಾದೆ, ಆಗ ನನಗೆ ಯಾರೂ ಪೇಟಾ ಇಡಲಿಲ್ಲ, ಆದರ ಆತಿಥ್ಯ ಮಾಡಲಿಲ್ಲ. ಪೇಟಾದ ಕೊರಗು ಮನದಲ್ಲಿ ಕಾಡುತ್ತಿತ್ತು. ನೀವಿಗ ಅದನ್ನು ರುಮಾಲು ತೊಡಿಸುವ ಮೂಲಕ ನಿವಾರಿಸಿದ್ದೀರಿ. ಸಮಾರಂಭದ ಪೂರ್ತಿ ಪೇಟಾ ತೊಟ್ಟುಕೊಂಡೇ ಇರುವೆ ಎಂದಾಗ ಸೇರಿದ್ದ ಸಭಿಕರ ಸಮೂಹದಲ್ಲಿ ನಗೆಯಲೆ ಕಂಡಿತ್ತು.
ಅನಂತಮೂರ್ತಿ ಅಜ್ಜ: ಡಾ. ಅನಂತಮೂರ್ತಿ ರುಮಾಲು ತೊಟ್ಟುಕೊಂಡೇ ಸಮಾರಂಭದಲ್ಲಿ ಕಂಡರು. ಬಿಳಿ ಕುರುಚಲು ಗಡ್ಡ, ಮೇಲೆ ಶುಭ್ರ ರುಮಾಲು. ಎಣ್ಣೆಗೆಂಪು ಬಣ್ಣದ ಅನಂತಮೂರ್ತಿ ತಾವು ತೊಟ್ಟಂತಹ ನೀಲಿ ಬಣ್ಣದ ಅಂಗಿಯ ಹಿನ್ನೆಲೆಯಲ್ಲಿ ತುಂಬ ಆಕರ್ಷಕವಾಗಿ ಕಂಡರು.
ಪೇಟಾ ತೊಟ್ಟು ಸಾಗುತ್ತಿರುವಂತೆಯೇ ಕ್ಯಾಮೆರಾ ಮಂದಿ ಅವರ ಫೋಟೋ ಕ್ಲಿಕ್ಕಿಸಲು ನಾ ಮುಂದೆ, ತಾ ಮುಂದೆ ಎಂದು ದೌಡಾಯಿಸಿದಾಗ ಅದನ್ನರಿತ ಅನಂತಮೂರ್ತಿ ವೇದಿಕೆಯಲ್ಲೇ ಫೋಟೋ ಪೋಸ್ ಕೊಟ್ಟಾಗಲಂತೂ ಸಭಿಕರಲ್ಲಿ ಮತ್ತೆ ನಗೆ ಉಕ್ಕಿತ್ತು.
ಇದನ್ನೆಲ್ಲ ಗಮನಿಸಿದ್ದ ಸಭೆಯ ನಿರೂಪಕ ಅಪ್ಪಗೆರೆ ಸೋಮಶೇಖರ ಅನಂತಮೂರ್ತಿಯವರ ಸಂಬಂಧಿಸಿದ ವಿಷಯಗಳನ್ನೆಲ್ಲ ಮೆಲಕು ಹಾಕುತ್ತಲೇ ಪೇಟಾ ತೊಟ್ಟಿದ್ದೀರಿ, ನಿಮ್ಮನ್ನು ಹಿರಿಯ ಸಾಹಿತಿ, ಸರ್ ಎನ್ನುವುದಕ್ಕಿಂತ ಅನಂತಮೂರ್ತಿ ಅಜ್ಜ... ಎನ್ನುವೆ... ಎಂದಾಗ ಅನಂತಮೂರ್ತಿ ಸೇರಿದಂತೆ ಎಲ್ಲರೂ ನಕ್ಕರು.
ಬುದ್ಧ ವಿಹಾರ ಸಮಯ... ಆನಂದಮಯ..: ಜ್ಞಾನಗಂಗೆ ಅತಿಥಿ ಗೃಹದಲ್ಲಿರುವ ಡಾ. ಅನಂತಮೂರ್ತಿ ಪಕ್ಕದಲ್ಲೇ ಇರುವ ಬಂಗಾರ ಲೇಪಿತ ಮಂದಸ್ಮಿತ ಬುದ್ಧನ ವಿಗ್ರಹವಿರುವ, ತನ್ನ ಗಾತ್ರ, ಆಕಾರ, ವ್ಯಾಪ್ತಿ- ವಿಸ್ತಾರದಿಂದಾಗಿ ದಕ್ಷಿಣ ಏಷಿಯಾದಲ್ಲೇ ಹೆಸರಾಂತ  ಬುದ್ಧ ವಿಹಾರಕ್ಕೆ ಭೇಟಿ ಕೊಟ್ಟು ಅಲ್ಲಿನ ಅಂದ- ಆನಂದ ತಮ್ಮದಾಗಿಸಿಕೊಂಡಿದ್ದಾರೆ.
ಗುಲ್ಬರ್ಗದಲ್ಲಿಯೂ ಇಂತಹ ಸುಂದರ ಸ್ಥಳ ಇದೆ ಎಂಬುದೇ ನನಗೆ ಆನಂದ ನೀಡಿದ ಸಂಗತಿ. ರಾಜಕಾರಣಿಗಳು ಬಹುತೇಕರು ಫೈವ್ ಸ್ಟಾರ್ ಹೋಟೆಲ್ ಕಟ್ಟಿಸಿರುತ್ತಾರೆ. ಆದರೆ ನಮ್ಮ ಖರ್ಗೆಯವರು ಇಲ್ಲಿ ಬುದ್ಧನ ತತ್ವ- ಸಂದೇಶ ಸಾರುವ ವಿಹಾರ ಕಟ್ಟಿಸಿ ಚರಿತ್ರೆ ನಿರ್ಮಿಸಿದ್ದಾರೆ ಎಂದರು.
ಸಾಹಿತ್ಯ ಸಮ್ಮೇಳನಕ್ಕೆ ಎಲ್ರೂ ಹೋಗಬೇಕ್ರಿ: ಸಮಮೇಳನಗಳಿಂದ ಹಿರಿಯ ಸಾಹಾತಿಗಳು, ಜ್ಞಾನಪೀಠ ಪುರಸ್ಕೃತರು ದೂರವಾಗುತ್ತಿದ್ದಾರೆಂದು ಈಚೆಗೆ ಬಿಜಾಪುರ ಸಮ್ಮೇಳನ ಮುಗಿದ ನಂತರ ಎದ್ದಿರುವ ಕೂಗಿನ ಬಗ್ಗೆ ಗಮನ ಸೆಳೆದಾಗ ಆಹ್ವಾನ ಇದ್ದರೇ ಹೋಗಬೇಕು ಅಂತೇನಿಲ್ಲ, ಕನ್ನಡ ಸಮ್ಮೇಳನಕ್ಕೆ ಸಾಹಿತಿಗಳು ಎಲ್ಲರೂ ಹೋಗಲೇಬೇಕು. ನಮ್ಮ ಸಮಾರಂಭಕ್ಕೆ ಹೋಗಲು ಆಹ್ವಾನವೇ ಇರಬೇಕು ಅಂತ ಕಟ್ಟು ಬಿದ್ದರೆ ಹೇಗೆ ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಅನಂತಮೂರ್ತಿ ಹೇಳಿದರು. ಅನಾರೋಗ್ಯದಿಂದಾಗಿ ತಾವು ಬಿಜಾಪುರ ಸಮ್ಮೇಳನಕ್ಕೆ ಹೋಗಲು ಆಗಲಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.