ಪ್ರೋತ್ಸಾಹಧನಕ್ಕೆ ಆಶಾ ಕಾರ್ಯಕರ್ತೆಯರ ಮನವಿ
ಯಾದಗಿರಿ: ರಾಜ್ಯದ ಆರೋಗ್ಯ ಇಲಾಖೆಯ ಎನ್ಆರ್ಎಚ್ಎಂನಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರು ಮಾಡುವ ವಿವಿಧ ಸೇವೆಗೆ ಪ್ರೋತ್ಸಾಹಧನ ಹೆಚ್ಚಿಸಿರುವ ಕ್ರಮವನ್ನು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ಸ್ವಾಗತಿಸಿದೆ.
ಹೆರಿಗೆಗೆ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಜೆಎಸ್ವೈ ಹೆರಿಗೆ ಪ್ರೋತ್ಸಾಹ ಧನ 200ರಿಂದ 600ಕ್ಕೆ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ. ಈ ಆದೇಶವು ಫೆ. 6ರಿಂದಲೇ ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಆದ್ದರಿಂದ ರಾಜ್ಯದ ಎಲ್ಲ ಜಿಲ್ಲೆಗಳ ಆರೋಗ್ಯ ಅಧಿಕಾರಿಗಳು ಈ ಆದೇಶದಂತೆ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಬೇಕೆಂದು ಸಂಘವು ಮನವಿ ಮಾಡುತ್ತದೆ.
ಸೇವೆಯಿಂದ ಮರಣ ಪ್ರಮಾಣ ಇಳಿಮುಖ: ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ನಿಸ್ಸೀಮ ಕಾರ್ಯಕ್ಷಮತೆಯಿಂದಾಗಿ ಸಕಾಲಕ್ಕೆ ರೋಗಿಗಳನ್ನು, ಗರ್ಭಿಣಿಯರನ್ನು ಆಸ್ಪತ್ರೆಗೆ ಕರೆದೊಯ್ದು ಸಹಸ್ರಾರು ಗ್ರಾಮೀಣ ಬಡವರು, ಬಾಣಂತಿ ಮತ್ತು ನವಜಾತ ಶಿಶುಗಳ ಜೀವ ಉಳಿಸುತ್ತಿದ್ದಾರೆ. ಸರ್ಕಾರದ ವರದಿಯಂತೆ ಹೆರಿಗೆ ಸಮಯದಲ್ಲಿ ಗ್ರಾಮೀಣ ಬಡ ಕುಟುಂಬಗಳ ಸಹಸ್ರಾರು ಬಾಣಂತಿಯರ, ತಾಯಂದಿರ ಮತ್ತು ನವಜಾತ ಶಿಶುಗಳ ಮರಣಗಳು ಕಡಿಮೆಯಾಗಿವೆ.
ಕಾರ್ಯಕರ್ತೆಯರ ಪರಿಶ್ರಮದಾಯಕ ಸೇವೆಯಿಂದಾಗಿಯೇ ಇದು ಸಾಧ್ಯವಾಗಿದೆ. ಇದಕ್ಕೆ ತಕ್ಕ ಬೆಂಬಲ ಅಗತ್ಯವಿತ್ತು. ಸಂಘವು ಹಲವು ವರ್ಷಗಳಿಂದ ಮುಂದಿಟ್ಟಿದ್ದ ಬೇಡಿಕೆಯನ್ನು ಮನ್ನಿಸಿ ಈಗ ಜೆಎಸ್ವೈ ಯೋಜನೆ ಅಡಿಯಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಪ್ರೋತ್ಸಾಹಧನ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವು ಸ್ವಾಗತಾರ್ಹವಾಗಿದೆ.
ಮಾಸಿಕ ವೇತನ ನಿಗದಿಮಾಡಿಲ್ಲ: ಕಳೆದ ಐದಾರು ವರ್ಷಗಳಿಂದ ಕಾರ್ಯಕರ್ತೆಯರು ದ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗ್ರಾಮೀಣ ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಜೊತೆಗೆ ಗ್ರಾಮ ನೈರ್ಮಲ್ಯ, ಆರೋಗ್ಯದ ಅರಿವನ್ನು ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಮಾಸಿಕ ವೇತನ ನಿಗದಿ ಮಾಡಿಲ್ಲ. ಮಾಸಿಕ ವೇತನವಿಲ್ಲದೆ ದುಡಿಸಿಕೊಳ್ಳುತ್ತಿರುವುದು ಸರಿಯಲ್ಲ. ಆದ್ದರಿಂದ ಅವರಿಗೆ ಮಾಸಿಕ ವೇತನ ನಿಗದಿಮಾಡಬೇಕೆಂದು ಸಂಘದಿಂದ ಒತ್ತಾಯಿಸುತ್ತಾ ಬರಲಾಗಿದೆ.
ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಆಶಾ ಕಾರ್ಯಕರ್ತೆಯರ ಬಹು ಕಾಲದ ಬೇಡಿಕೆಯಾದ ಮಾಸಿಕ ವೇತನವನ್ನು ನಿಗದಿ ಮಾಡುವಂತೆ ಸಂಘದ ಜಿಲ್ಲಾ ಅಧ್ಯಕ್ಷೆ ಡಿ.ಉಮಾದೇವಿ, ಕಾರ್ಯದರ್ಶಿ ದೇವಕಿ ದೊರೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

