ಭೀಮಾ ಏತ ನೀರಾವರಿ ನಾಳೆ ಲೋಕಾರ್ಪಣೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ 65 ಸಾವಿರ ಎಕರೆ ಭೂಮಿಗೆ ನೀರುಣಿಸುವ ಸಾಮರ್ಥ್ಯವಿರುವಂತಹ ಭೀಮಾ ಏತ ನೀರಾವರಿ ಯೋಜನೆ ಫೆ.19ರಂದು ಲೋಕಾರ್ಪಣೆಗೊಳ್ಳುತ್ತಿದೆ. ಇಂದಿಲ್ಲಿ ಈ ಸಂಗತಿಯನ್ನು ಅಫಜಲ್ಪುರ ಶಾಸಕ ಮಾಲೀಕಯ್ಯಾ ಗುತ್ತೇದಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
1985ರಲ್ಲಿ ಬಂಗಾರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ತಾವು ಈ ಯೋಜನೆ ಅಫಜಲ್ಪುರದಲ್ಲಿ ಆಗಲೇಬೇಕೆಂದು ಪಟ್ಟು ಹಿಡಿದು ಇದನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾಗಿ ಹೇಳಿದ ಅವರು, ಈ ಯೋಜನೆಗಾಗಿ ತಾವು ಬಂಗಾರಪ್ಪ ಸಂಪುಟದಲ್ಲಿ ಮಂತ್ರಿಗಿರಿಯನ್ನೇ ಒಲ್ಲೆಂದಿದ್ದಾಗಿ ಹಳೆಯ ಘಟನಾವಳಿಗಳನ್ನು ಮೆಲಕು ಹಾಕಿದರು.
ಬೋರಿ ಹಾಗೂ ಅಮರ್ಜಾ ನದಿಗಳ ನೆರವಿನ ಈ ಯೋಜನೆ ಹೆಚ್ಚಿನ ರೈತರಿಗೆ ಲಾಭಕಾರಿಯಾಗಲಿದೆ. ಬೋರಿ ನದಿಗೆ 4 ಬಾಂದಾರು ಹಾಗೂ ಅಮರ್ಜಾಕ್ಕೆ 10 ಬಾಂದಾರುಗಳನ್ನು ನಿರ್ಮಿಸಲಾಗಿದೆ. ಇಲ್ಲೆಲ್ಲಾ ನೀರು ನಿಲ್ಲುವ ಮೂಲಕ ಹೆಚ್ಚಿನ ಭೂಮಿ ನಿರಾವರಿಗೊಳಪಡಲಿದೆ ಎಂದರು.
ಅಂತರ್ಜಲ ಹೆಚ್ಚಳ: ಅಫಜಲ್ಪುರದಲ್ಲಿ ಏತ ನೀರಾವರಿ ಹಾಗೂ ಅಣೆಕಟ್ಟೆ, ಬಾಂದಾರುಗಳಿಂದ 100ಕ್ಕೂ ಹೆಚ್ಚು ಕಿಮೀ ನೀರು ನಿಲ್ಲುವಂತಾಗಿದೆ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಿದೆಯಲ್ಲದೆ ಪರಿಸರಕ್ಕೂ ಹೆಚ್ಚಿನ ಅನುಕೂಲವಾಗಿದೆ ಎಂದರು.
100 ಕೋಟಿ ಅಂದಾಜು ಮೊತ್ತದ ಈ ಯೋಜನೆ ಬೆಲೆ ಏರಿಕೆಯಿಂದಾಗಿ ವೆಚ್ಚ ಪರಿಷ್ಕರಣೆಗೊಳಗಾಯ್ತು. ಹಿಂದೆ ಅಫಜಲ್ಪುರ ಪ್ರತಿನಿಧಿಸಿದ್ದ ಶಾಸಕರು ಅಲ್ಪ ಪ್ರಯತ್ನ ಮಾಡಿ ಹಣ ತಂದಿದ್ದರೂ ಈ ಯೋಜನೆ 3 ವರ್ಷಗಳ ಹಿಂದೆಯೇ ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬಹುದಾಗಿತ್ತು. ಆದರೆ ಯಾರೂ ಇಚ್ಛಾಶಕ್ತಿ ತೋರಲಿಲ್ಲ ಎಂದರು.
ಕೇಂದ್ರದಿಂದ 588 ಕೋಟಿ: ಅಳ್ಳಗಿ, ಬಳೂಂಡಗಿ ಬಳಿ 2 ಏತಗಳನ್ನಿಟ್ಟು ಈ ಯೋಜನೆಯ ನೀರೆತ್ತಲಾಗುತ್ತದೆ. ಇದರ ಜೊತೆಗೇ 10.5 ಮೆ.ವ್ಯಾ. ವಿದ್ಯುತ್ ಸಹ ಇಲ್ಲಿ ಉತ್ಪಾದನೆಗೊಳ್ಳುತ್ತದೆ. ಬಂಗಾರಪ್ಪ, ಕೃಷ್ಣ, ದೇವೇಗೌಡ ಸೇರಿದಂತೆ ಅನೇಕರು ಈ ಯೋಜನೆಗೆ ಅನುದಾನ ಹರಿದು ಬರುವಲ್ಲಿ ನೆರವು ನೀಡಿದ್ದಾರೆ. ಕೇಂದ್ರದಿಂದ ಈ ಯೋಜನೆಗೆ 588 ಕೋಟಿ ಹರಿದು ಬಂದಿದೆ ಎಂದರು.
ಭೀಮಾ ಏತ ನೀರಾವರಿ ಯೋಜನೆಯಡಿಯಲ್ಲಿ 6 ಟಿಎಂಸಿ ನೀರು ಸಂಗ್ರಹಿಸುವ ಅವಕಾಶಗಳಿವೆ. ಆದರೆ ಇಲ್ಲೀಗ 2 ಸೇತುವೆಗಳ ಕಾಮಗಾರಿ ಆಗಬೇಕಿರುವುದರಿಂದ 4.5 ಟಿಎಂಸಿವರೆಗೆ ಮಾತ್ರ ನೀರು ಸಂಗ್ರಹಿಸಲಾಗಿದೆ. ಇದರಿಂದಾಗಿ ಗುಲ್ಬರ್ಗ ಮಹಾನಗರದ ಕುಡಿವ ನೀರಿನ ಯೋಜನೆಗೆ ಎಂದಿಗೂ ಸಮಸ್ಯೆ ಬರುವುದಿಲ್ಲ. ಭೀಮಾ ನದಿಗೆ ಸದಾಕಾಲ ನೀರು ಇರುವಂತೆ ಅಫಜಲ್ಪುರದ ಅಣೆಕಟ್ಟೆ ಕೆಲಸ ಮಾಡಲಿದೆ ಎಂದರು.
ರಾ.ಹೆ. ಯೋಜನೆಗೆ ಚಿಂತನೆ: 2013 ಡಿಸೆಂಬರ್ ಒಳಗಾಗಿ ಗುಲ್ಬರ್ಗ- ಅಫಜಲ್ಪುರ ರಸ್ತೆ ಮೇಲ್ದರ್ಜೆಗೇರಿಸುವುದಾಗಿ ಭರವಸೆ ನೀಡಿದ ಗುತ್ತೇದಾರ್, ಈಚೆಗಷ್ಟೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾಪಿಸಿರುವ ಗುಲ್ಬರ್ಗ- ಅಫಜಲ್ಪುರ, ಕರ್ಜಗಿ, ಮಣ್ಣೂರ, ಹೊಸೂರ್, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಚಿಂತನೆಯನ್ನು ಸ್ವಾಗತಿಸಿದರಲ್ಲದೆ ಆದುಷ್ಟು ಬೇಗ ಈ ಯೋಜನೆ ಅನುಮೋದನೆಗೊಂಡು ಜಿಲ್ಲೆಗೆ ಬಂದಲ್ಲಿ ಹಿಂದುಳಿದ ಪ್ರದೇಶದಲ್ಲಿ ಹೆಚ್ಚಿನ ಅನುಕೂಲವಾಗುವುದರಲ್ಲಿ ಶಂಕೆಯಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

