371(ಜೆ) ಜಾರಿವರೆಗೆ ನೇಮಕಾತಿ ಸ್ಥಗಿತಗೊಳಿಸಿ
ಯಾದಗಿರಿ: ಹಿಂದುಳಿದ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371(ಜೆ) ಕಲಂ ಸಂಪೂರ್ಣ ಅನುಷ್ಠಾನಗೊಳ್ಳುವವರೆಗೆ ಪ್ರಸ್ತುತ ಅಧಿಸೂಚನೆ ಹೊರಡಿಸಿರುವ ಶಿಕ್ಷಕರು ಹುದ್ದೆ ಸೇರಿದಂತೆ ಯಾವ ನೇಮಕಾತಿಯನ್ನೂ ಮಾಡಬಾರದೆಂದು ಆಗ್ರಹಿಸಿ ಜೈ ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ನಗದರಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸುಭಾಷ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಶಿಕ್ಷಕರ ನೇಮಕಾತಿ ಅಧಿಸೂಚನೆ ಹಿಂಪಡೆದು ಈ ಭಾಗದ ನಿರುದ್ಯೋಗಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು. 4,500 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.
ಸಂಘಟನೆ ಕಾರ್ಯಾಧ್ಯಕ್ಷ ಶ್ರೀಕಾಂತ ಭೀಮನಳ್ಳಿ ಮಾತನಾಡಿ, ಹಿಂದುಳಿದ ಹೈ-ಕ ಭಾಗದ ಪ್ರಾದೇಶಿಕ ಅಸಮತೋಲನ ಹೋಗಲಾಡಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಸಂವಿಧಾನದ ಕಲಂ 371(ಜೆ) ತಿದ್ದುಪಡಿ ಮೂಲಕ ಮಸೂದೆ ಅಂಗೀಕರಿಸಿದೆ. ಈ ಕಾಯ್ದೆ ಅನುಷ್ಠಾನವಾದರೆ ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಇಂಥ ಸಂದರ್ಭದಲ್ಲಿ ಕಾಯ್ದೆ ಜಾರಿಗೊಳ್ಳುವ ಮುನ್ನವೇ ಶಿಕ್ಷಕರ ನೇಮಕಾತಿಗೆ ಅದಿಸೂಚನೆ ಹೊರಡಿಸಿರುವುದು ಗೋರ ಅನ್ಯಾಯವಾಗಿದೆ.
ಸರ್ಕಾರದಿಂದ ಅನ್ಯಾಯ: ಇಂಥ ಸಂದರ್ಭಧಲ್ಲಿ ನೇಮಕಾತಿ ತಡೆಹಿಡಿಯುವುದು ಸರ್ಕಾರದ ಆದ್ಯ ಕರ್ತವ್ಯವಾಗಿತ್ತು. ಆದರೆ ದುರಾದೃಷ್ಟವಶಾತ್ 4,500 ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಹೊರಟಿರುವುದು ಈ ಭಾಗದ ನಿರುದ್ಯೋಗಿಗಳಿಗೆ ಮಾಡಿದ ಅನ್ಯಾಯವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆ ಅಧ್ಯಕ್ಷ ಬಾಪುಗೌಡ ಮುಷ್ಟೂರ, ಈ ಭಾಗಕ್ಕೆ ಸೌಲಭ್ಯ ಕೊಟ್ಟರೂ ಅದು ಸಿಗದಂತೆ ಮಾಡಿರುವ ಸರ್ಕಾರ ಈ ಅಧಿಸೂಚನೆಯನ್ನು ತಕ್ಷಣವೇ ತಡೆ ಹಿಡಿಯಬೇಕು. ಶಿಕ್ಷಕರ ನೇಮಕಾತಿಯಲ್ಲಿ ಮೇಲ್ನೋಟಕ್ಕೆ ಜಿಲ್ಲಾವಾರು ಆಯ್ಕೆ ಮಾನದಂಡ ಅನುಸರಿಸಲಾಗಿದೆ ಎಂದು ಹೇಳಿದರೂ ಈ ಭಾಗದ ಜನತೆಗೆ ನ್ಯಾಯಯುತವಾಗಿ ಲಭಿಸಬೇಕಾದ ಸ್ಥಾನಗಳು ಲಭಿಸದೇ ಅನ್ಯಾಯವಾಗುವುದು ನಿಶ್ಚಿತ. ಒಂದು ವೇಳೆ ಈ ಭಾಗದ ಜನರ ಹಿತಾಸಕ್ತಿ ಬಲಿ ಕೊಡಲು ಮುಂದಾದಲ್ಲಿ ಬೀದಿಗಿಳಿದು ಹೋರಾಡಬೇಕಾಗುತ್ತದೆ. ಹಂತಹಂತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಕುರಿತು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರಿಗೆ ಸಲ್ಲಿಸಿದರು.
ಧರ್ಮಣ್ಣ ಗಿರೆಪ್ಪನೋರ್, ಅನಿಲ್ ಹೆಡಿಗಿಮುದ್ರಿ, ಇಮ್ರಾನ್ ಮುಂಡ್ರಗಿ, ಭೀಮುನಾಯಕ, ಚಂದ್ರಕಾಂತ ಚಲುವಾದಿ, ಅರುಣಕುಮಾರ ಮಾಸನ್, ಶರಣು ಮುಂಡ್ರಿಕೆರ್, ಶರಣು ಮುದ್ನಾಳ, ಸಿದ್ದಪ್ಪ, ಸುಭಾಷ್ ಇದ್ದರು.
'371(ಜೆ) ಜಾರಿಯಿಂದ ಭಾಗ್ಯದ ಬಾಗಿಲು ತೆರೆದಂತೆ'
ಯಾದಗಿರಿ: ಹಿಂದುಳಿದ ಈ ಭಾಗದ ಅಭಿವೃದ್ಧಿಗೆ ಸಂವಿಧಾನದ ಕಲಂ 371(ಜೆ) ಕಾಯ್ದೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದರಿಂದ ಹೈ-ಕ ಭಾಗ್ಯದ ಬಾಗಿಲು ತೆರೆದಿದೆ ಎಂದು ತಾಪಂ ಸದಸ್ಯ ಹನುಮಂತಪ್ಪ ಬಳಿಚಕ್ರ ಅಭಿಪ್ರಾಯಪಟ್ಟರು.
ತಾಲೂಕಿನ ಹತ್ತಿಕುಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿ, ಇನ್ನು ಮುಂದೆ ಸಂವಿಧಾನದ ಈ ತಿದ್ದುಪಡಿಯಿಂದ ಶೈಕ್ಷಣಿಕವಾಗಿ ಹಾಗೂ ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಅಭಿವೃದ್ಧಿಗೆ ವಿಶೇಷ ಅನುದಾನ ದೊರೆತು ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗಲಿದೆ. ಇದರ ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ್ ಮಾತನಾಡಿ, ಸಮಯ, ಸಮುದ್ರ ಅಲೆಗಳು ಯಾರಿಗಾಗಿಯೂ ನಿಲ್ಲುವುದಿಲ್ಲ. ಶಿಕ್ಷಣ ಮಾನವನ ಅದ್ಭುತ ಶಕ್ತಿ. ಸಮಯ ವ್ಯರ್ಥ ಮಾಡದೇ ಶಿಕ್ಷಣವನ್ನು ಪಡೆದು ಸಮಾಜಕ್ಕೆ ಆದರ್ಶರಾಗಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜು ಪ್ರಾಚಾರ್ಯ ವಿ.ಪಿ. ಹೊಸಟ್ಟಿ ಅಧ್ಯಕ್ಷತೆ, ಪಾಂಡು ರಾಠೋಡ ಮಾತನಾಡಿದರು. ಅನಿತಾ ಸ್ವಾಗತಿಸಿ, ರಾಜೇಂದ್ರಕುಮಾರ ವರದಿ ವಾಚಿಸಿದರು. ಉಪನ್ಯಾಸಕ ವೆಂಕಟೇಶ, ಸಾಬಣ್ಣ ಜುಬೇರ್ ನಿರೂಪಿಸಿ ಸುರೇಖಾ ಪಟವಾರಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

