ಜನ ಪೊರಕೆ ಹಿಡಿದಾರು..!
ಸುರಪುರ: ಪಟ್ಟಣದಲ್ಲಿ ಸುಲಭ ಶೌಚಾಲಯ ಕಾಮಗಾರಿ ಮುಗಿದು ಮೂರು ವರ್ಷವಾಗಿದೆ. ಅದನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಉದ್ಘಾಟಿಸಿ ಎರಡು ವರ್ಷಗಳಾಗುತ್ತಿವೆ. ಆದರೆ ಇದುವರೆಗೂ ನಾಗರಿಕರ ಬಳಕೆಗೆ ಮುಕ್ತಗೊಳಿಸದಿರುವುದು ನಾಚಿಗೇಡಿನ ಪ್ರಸಂಗ ಎಂದು ಪುರಸಭೆ ವಿರೋಧ ಪಕ್ಷದ ಸದಸ್ಯ ವೆಂಕಟೇಶ ಹೊಸ್ಮನಿ ತರಾಟೆಗೆ ತೆಗೆದುಕೊಂಡರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಚಂದ್ರಶೇಖರ ಜಡಿಮರಳ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಹೊಸ್ಮನಿಯವರ ಆಕ್ಷೇಪಣೆಗೆ ಕೆಲ ಸದಸ್ಯರು ಧ್ವನಿಗೂಡಿಸಿ ಶೌಚಾಲಯ ವಿಷಯದಲ್ಲಿ ಬಿಸಿ ಬಿಸಿ ಚರ್ಚೆಗೆ ಇಳಿದರು. ಚುನಾವಣೆ ಹತ್ತಿರ ಬರುತ್ತಿದೆ. ನಾಗರಿಕರಿಗೆ ಯಾವ ಉತ್ತರ ನೀಡಬೇಕು. ಜನ ಪೊರಕೆ ಹಿಡಿದು ಬೆನ್ನು ಹತ್ತುತ್ತಾರೆ ಎಂದು ಸದಸ್ಯರು ಅಕ್ರೋಶ ವ್ಯಕ್ತಪಡಿಸಿದರು.
15 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿ ಶಿವಕುಮಾರ ಭರವಸೆ ನೀಡಿದರು. ಇದಕ್ಕೆ ಸಂತುಷ್ಟಗೊಳ್ಳದ ಪ್ರತಿಪಕ್ಷದ ನಾಯಕ ಅಬ್ದುಲ್ ಗಫಾರ ನಗನೂರಿ, 10 ದಿನದೊಳಗೆ ಶೌಚಾಲಯ ಮುಕ್ತಗೊಳಿಸದಿದ್ರೆ ಪುರಸಭೆಗೆ ಬೀಗಮುದ್ರೆ ಹಾಕುತ್ತೇವೆಂದು ಎಚ್ಚರಿಸಿದರು.
ಸಲಹೆ: ಬೇಸಿಗೆ ಹತ್ತಿರವಾಗುತ್ತಿದ್ದು, ಮತ್ತೆ ಕುಡಿವ ನೀರು ಉಲ್ಬಣವಾಗುವ ಸಾಧ್ಯತೆ ಇದೆ. ಮುಂಜಾಗೃತಾ ಕ್ರಮವಾಗಿ ಮೋಟರುಗಳ ಸಂಗ್ರಹ ಮಾಡಿಕೊಳ್ಳಬೇಕು ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ತಿಪ್ಪಣ್ಣ ಬೋವಿ, ವೇಣುಮಾಧವನಾಯಕ ಮುಖ್ಯಾಧಿಕಾರಿಗೆ ಸಲಹೆ ನೀಡಿದರು.
ರಂಗಂಪೇಟೆಯ 4 ವಾರ್ಡುಗಳಿಗೆ ಸಮರ್ಪಪಕವಾಗಿ ನೀರು ಒದಗಿಸಲು ರತ್ತಾಳ ಹತ್ತಿರದಲ್ಲಿ ಇನ್ನೊಂದು ಬೋರವೆಲ್ ಕೊರೆಯಿಸಬೇಕೆಂದು ಸದಸ್ಯ ಮೈಬೂಬ ಒಂಟಿ ಒತ್ತಾಯಿಸಿದರು. ಇದಕ್ಕೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ ಕ್ರಮ ತಗೆದುಕೊಳ್ಳುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಅವ್ಯವಹಾರ: ಪಟ್ಟಣದ ನಾಯಕನ ಬಾವಿ ಸ್ವಚ್ಛತೆಗೆ 37 ಸಾವಿರ ಖರ್ಚು ಮಾಡಿರುವುದು ಮತ್ತು ಹೈ ಮಾಸ್ಟ್ ದೀಪದ ಸಾಮಾಗ್ರಿ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ಇದಕ್ಕೆ ಸಭೆ ಅನುಮತಿ ನೀಡುವುದಿಲ್ಲವೆಂದು ಸದಸ್ಯ ರಾಜಾ ಪಿಡ್ಡನಾಯಕ ತಾತಾ, ಅಬ್ದುಲ್ ಹೇಳಿದರು.
ನೈರ್ಮಲ್ಯ ಅಧಿಕಾರಿ ವಸತಿ ನಿಲಯವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಬಾಡಿಗೆ ನೀಡುವ ವಿಷಯ ಸದಸ್ಯರ ಗಮನಕ್ಕೆ ತರದೆ, ಸಭೆಯಲ್ಲಿ ಅನುಮೋದನೆ ಪಡೆಯದೆ ಏಕಪಕ್ಷೀಯ ನಿರ್ಧಾರ ತಗೆದುಕೊಂಡಿರುವುದು ತಪ್ಪು. ಇದು ಸಭೆಗೆ ಅವಮಾನ ಮಾಡಿದಂತಾಗಿದೆ ಎಂದು ಸದಸ್ಯ ವೆಂಕಟೇಶ ಹೊಸ್ಮನಿ ಅಧ್ಯಕ್ಷರ ವಿರುದ್ಧ ಏರು ಧ್ವನಿಯಲ್ಲಿ ತರಾಟೆಗೆ ತಗೆದುಕೊಂಡರು.
ಇದಕ್ಕೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ ಕೆಂಡಮಂಡಲವಾಗಿ ಅರೋಪ ಮಾಡುವುದರಲ್ಲಿ ಸತ್ಯಾಂಶವಿರಬೇಕು. ವಿಷಯ ಅಪಾರ್ಥ ಮಾಡಿಕೊಂಡು ಅರೋಪ ಮಾಡುವುದು ಸರಿಯಲ್ಲ. ಸಭೆಯ ಒಪ್ಪಿಗೆ ನೀಡಿದರೆ ಮಾತ್ರ ಬಾಡಿಗೆ ಮೇಲೆ ನೀಡಬಹುದು ಎಂದು ಸಮರ್ಥನೆ ನೀಡಿದರು.
ಫಾಂಗಿಗ್ನಲ್ಲಿ ಕ್ರಿಮಿನಾಶಕ ಔಷಧಿ ಬಳಸಲಾಗುತ್ತಿದೆ. ಇದರಿಂದ ಅಪಾಯವಿದೆ. ಕೂಡಲೇ ಅದನ್ನು ಬಿಟ್ಟು ವೈದ್ಯರ ಸಲಹೆ ಮೇರೆಗೆ ಸೊಳ್ಳೆ ಔಷಧಿ ಬಳಸಬೇಕೆಂದು ಸದಸ್ಯ ರಾಜಾ ಪಿಡ್ಡನಾಯಕ ತಾತಾ ಸಲಹೆ ನೀಡಿದರು.
ಐದು ವರ್ಷಗಳಿಂದ ಪುರಸಭೆ ಟ್ರ್ಯಾಕ್ಟರ್ಗಳ ನೋಂದಣಿಯಾಗಿಲ್ಲ. ಏನಾದರು ಅನಾಹುತ ಸಂಭವಿಸಿದರೆ ಯಾರು ಹೊಣೆ, ಕೂಡಲೇ ನೋಂದಣಿ ಮಾಡಿಸಬೇಕೆಂದು ಅಬ್ದುಲ್ ಅಲೀಂ ಗೋಗಿ ಸಭೆಗೆ ಮನವರಿಕೆ ಮಾಡಿದರು.
ಟ್ರ್ಯಾಕ್ಟರಿಗೆ ಸಂಬಂಧಿಸಿದ ದಾಖಲಾತಿಗಳೇ ಇಲ್ಲ. ಈಗಾಗಿ ನೋಂದಣಿಗೆ ವಿಳಂಬವಾಗಿದೆ ಎಂದು ಮುಖ್ಯಾಧಿಕಾರಿ ಸಭೆಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ರತ್ನಮ್ಮ ಎಲಿಗಾರ, ಸದಸ್ಯರಾದ ಸಿದ್ರಾಮ ಪಾಟೀಲ, ನರಸಿಂಹಕಾಂತ ಪಂಚಮಗಿರಿ, ಅಂಬ್ರೇಶ ನಾಯಕ, ವೆಂಕಟೇಶ ಕಲ್ಬುರ್ಗಿ, ಜುಮಣ್ಣ ಏಳರೊಟ್ಟಿ, ನೀಲಮ್ಮ ವಾಲಿ, ಪರಮವ್ವ, ಯಂಕ್ಕಪ್ಪ ನಾಯ್ಕೋಡಿ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

