ಗುಲ್ಬರ್ಗಾ

ಶೇಂಗಾ ಆವಕ ಬಲು ಜೋರು

Published On :

-ನಾರಾಯಣ ಹೆಗಡೆ
ಯಾದಗಿರಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣ ತುಂಬ ಶೇಂಗಾ ರಾಶಿಗಳೇ ಕಾಣುತ್ತವೆ. ನಿತ್ಯ 20 ಸಾವಿರಕ್ಕೂ ಹೆಚ್ಚು ಕ್ವಿಂ. ಶೇಂಗಾ ಆವಕವಾಗುತ್ತಿದ್ದು, ಧಾರಣೆಯೂ ತೇಜಿ ಇರುವುದರಿಂದ ರೈತರು ಪೈಪೋಟಿಗಿಳಿದಂತೆ ಶೇಂಗಾವನ್ನು ಮಾರಾಟಕ್ಕೆ ತರುತ್ತಿದ್ದಾರೆ. ಆದರೆ ಈ ಬೆಲೆ ಯಾತಕ್ಕೂ ಸಾಲದು ಎಂದು ರೈತರು ಹೇಳುತ್ತಿದ್ದಾರೆ.
  ಕಳೆದ 15 ದಿನಗಳಿಂದ ಮಾರುಕಟ್ಟೆಗೆ ಶೇಂಗಾ ಉತ್ಪನ್ನ ಪ್ರವೇಶವಾಗಿದೆ. ಮಳೆ ಇಲ್ಲದೆ ಬರದಲ್ಲೂ ಶೇಂಗಾ ಇಳುವರಿ ಉತ್ತಮವಾಗಿ ಬಂದಿದ್ದು, ಮಾರುಕಟ್ಟೆಯಲ್ಲಿ ಧಾರಣೆಯೂ ಚೆನ್ನಾಗಿದೆ. ಇದು ಶೇಂಗಾ ಬೆಳೆದ ರೈತರ ಸಂತಸಕ್ಕೆ ಕಾರಣವಾಗಿದೆ.
2 ಲಕ್ಷ ಕ್ವಿಂ. ಆವಕ: ಇದುವರೆಗೆ ಯಾದಗಿರಿ ಎಪಿಎಂಸಿಗೆ 2 ಲಕ್ಷ  ಕ್ವಿಂ. ಶೇಂಗಾ ಆವಕವಾಗಿದ್ದು, ದಾಖಲೆ ನಿರ್ಮಿಸುವತ್ತ ದಾಪುಗಾಲು ಹಾಕುತ್ತಿದೆ. ತೊಗರಿ, ಹೆಸರು ಕೈಕೊಟ್ಟಿದ್ದರಿಂದ ಹತಾಶರಾಗಿದ್ದ ರೈತರನ್ನು ಈಗ ಶೇಂಗಾ ಬೆಳೆ ಸ್ವಲ್ಪ ಮಟ್ಟಿಗೆ ಕೈಹಿಡಿದಿದೆ. ತಾಲೂಕಿನ ಮೂಲೆ ಮೂಲೆಗಳಿಂದ ಎತ್ತಿನ ಗಾಡಿ, ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ನಿತ್ಯವೂ ಶೇಂಗಾ ಆವಕವಾಗುತ್ತಿದೆ. ಇದರಿಂದ ಇಡೀ ಎಪಿಎಂಸಿ ಪ್ರಾಂಗಣ ಶೇಂಗಾ ಚೀಲಗಳಿಂದ ತುಂಬಿ ತುಳುಕಾಡುತ್ತಿದೆ. ಕಾಲಿಡಲೂ ಸ್ಥಳ ಇಲ್ಲದಂತಾಗಿದೆ.
ಉತ್ತಮ ದರ: ಈ ಭಾಗದ ಪ್ರಮುಖ ಬೆಳೆಗಳಾದ ಹೆಸರು ಮತ್ತು ತೊಗರಿ ಬೆಳೆ ಸರಿಯಾಗಿ ಬಾರದ್ದರಿಂದ ರೈತರು ಕಂಗಾಲಾಗಿದ್ದರು. ಅಲ್ಲದೆ ಈ ಬೆಳೆಗಳಿಗೆ ಬೆಲೆಯೂ ಕುಸಿದಿತ್ತು. ತೊಗರಿ ಖರೀದಿ ಕೇಂದ್ರ ಆರಂಭಿಸಿದ್ದರೂ ಅಲ್ಲಿಯೂ ತೊಗರಿ ಮಾರಾಟವಾಗಿರಲಿಲ್ಲ. ನಂತರ ಸರ್ಕಾರ ತೊಗರಿಗೆ 4,500 ಬೆಂಬಲ ಬೆಲೆ ನೀಡಿದ್ದರೂ, ಈಗಾಗಲೇ ಸಣ್ಣ ರೈತರು ತೊಗರಿ ಮಾರಿದ್ದರಿಂದ ಅದರ ಪ್ರಯೋಜನ ಸಿಕ್ಕಿಲ್ಲ.   ಆದರೆ ಒಣ ಬೇಸಾಯದಲ್ಲಿ ಬೆಳೆದ ಶೇಂಗಾಕ್ಕೆ ಈ ಬಾರಿ ಉತ್ತಮ ಬೆಲೆ ಬಂದಿದೆ. 4 ಸಾವಿರದಿಂದ 5,200ರವರೆಗೂ ಶೇಂಗಾ ಮಾರಾಟವಾಗುತ್ತಿದೆ. ಉತ್ತಮ ಧಾರಣೆ ಇದ್ದುದರಿಂದ ರೈತರು ಪೈಪೋಟಿ ಮೇಲೆ ಶೇಂಗಾವನ್ನು ಮಾರುಕಟ್ಟೆಗೆ ತರುತ್ತಿದ್ದಾರೆ. ಬೇಡಿಕೆಯೂ ಇದ್ದುದರಿಂದ ವ್ಯಾಪಾರಸ್ಥರು ಹೆಚ್ಚಿನ ದರಕ್ಕೆ ಖರೀದಿ ಮಾಡುತ್ತಿದ್ದಾರೆ. ಇದು ಈ ಬಾರಿ ರೈತನಿಗೆ ವರದಾನವಾಗಿ ಪರಿಣಮಿಸಿದೆ.

ಈ ದರ ಯಾತಕ್ಕೂ ಸಾಲದು...
ಈ ದರ ಯಾತಕ್ಕೂ ಸಾಲದು. ಶೇಂಗಾ ಬೀಜವನ್ನು ಪ್ರತಿ ಕ್ವಿಂ.ಗೆ 10 ಸಾವಿರ ಕೊಟ್ಟು ಖರೀದಿಸಿದ್ದೇವೆ. ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಎಲ್ಲ ದರವೂ ದುಬಾರಿಯಾಗಿದೆ. ಕೂಲಿ ಕಾರ್ಮಿಕರೂ ಸಿಗುತ್ತಿಲ್ಲ. ಎಕರೆಗೆ 30- 40 ಸಾವಿರ ಖರ್ಚು ಮಾಡಿದ್ದೇವೆ. ಆದ್ದರಿಂದ ಕ್ವಿಂಟಲ್ ಶೇಂಗಾಕ್ಕೆ ಕನಿಷ್ಠ 8 ಸಾವಿರ ಬರಬೇಕು. ಆಗ ಮಾತ್ರ ಮಾಡಿದ ಖರ್ಚಿಗೂ, ನಮ್ಮ ಶ್ರಮಕ್ಕೂ ಬೆಲೆ ಬಂದಂತಾಗುತ್ತದೆ. ಇತರ ಬೆಳೆಗಳಿಗೆ ನೀಡುವಂತೆ ಶೇಂಗಾಕ್ಕೂ ಸರ್ಕಾರ ಬೆಂಬಲ ಬೆಲೆ ನೀಡಬೇಕು. ಮುಂದೆ ಬಿತ್ತನೆ ಸಮಯದಲ್ಲಿ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರವೇ ಶೇಂಗಾ ಬೀಜ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳಬೇಕು.
 ಮಲ್ಲಿಕಾರ್ಜುನ ಸತ್ಯಂಪೇಟೆ, ರೈತ ಮುಖಂಡ

ಹೊರ ರಾಜ್ಯಕ್ಕೂ ಜಿಲ್ಲೆ ಶೇಂಗಾ ಮಾರಾಟ...
ಇಲ್ಲಿಯ ಎಪಿಎಂಸಿಗೆ ಆವಕವಾಗುವ ಶೇಂಗಾವನ್ನು ಕೊಳ್ಳಲು ಹೊರ ರಾಜ್ಯಗಳ ವ್ಯಾಪಾರಸ್ಥರೂ ಬರುತ್ತಿದ್ದಾರೆ. ಮಹಾರಾಷ್ಟ್ರ, ಆಂಧ್ರದ ವ್ಯಾಪಾರಸ್ಥರು ಇಲ್ಲಿಯ ದಲ್ಲಾಳಿಗಳ ಮೂಲಕ ಶೇಂಗಾ ಖರೀದಿಸುತ್ತಿದ್ದಾರೆ. ಇಲ್ಲಿ ಬೆಳೆದ ಶೇಂಗಾ ಉತ್ತಮ ಗುಣಮಟ್ಟದ್ದಾಗಿರುವುದೇ ಇದಕ್ಕೆ ಕಾರಣ. ಚಳ್ಳಕೆರೆ, ಬಿಜಾಪುರ, ಹುಬ್ಬಳ್ಳಿ, ದಾವಣಗೆರೆ, ಬೆಂಗಳೂರು, ಆಂಧ್ರದಿಂದರೂ ವ್ಯಾಪಾರಸ್ಥರು ಬಂದು ಇಲ್ಲಿಂದ ಶೇಂಗಾ ಖರೀದಿಸುತ್ತಿದ್ದಾರೆ. ಇದು ಬೆಲೆ ಹೆಚ್ಚಲು ಕಾರಣವಾಗಿದ್ದು, ಇನ್ನೂ ಸುಮಾರು ಒಂದು ತಿಂಗಳ ಕಾಲ ಮಾರುಕಟ್ಟೆಗೆ ಶೇಂಗಾ ಆವಕವಾಗುವ ನಿರೀಕ್ಷಿಯಿದೆ. ತೊಗರಿ, ಹೆಸರು ಆವಕದಲ್ಲಿ ಇಳಿಕೆಯಾಗಿ ಎಪಿಎಂಸಿ ಆದಾಯಕ್ಕೆ ಬಿದ್ದಿದ್ದ ಖೋತಾ ಶೇಂಗಾದಲ್ಲಿ ಮರಳಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.