ಶೇಂಗಾ, ತೊಗರಿ ಖರೀದಿ ಕೇಂದ್ರ ಆರಂಭಕ್ಕೆ ಆಗ್ರಹ
ಸುರಪುರ: ಶೇಂಗಾ ಹಾಗೂ ತೊಗರಿ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಇಲ್ಲಿನ ಎಪಿಎಂಸಿ ಕಚೇರಿ ಎದುರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ರೈತರು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆಯ ಮುಖಂಡರಾದ ಯಲ್ಲಪ್ಪ ಚಿನ್ನಾಕರ್, ಹಮ್ಮಣ್ಣದೊರಿ, ಬಸವರಾಜ ನಾಯಕ ಮಾತನಾಡಿ, ದಿನದಿಂದ ದಿನಕ್ಕೆ ಮಾರುಕಟ್ಟೆ ತನ್ನ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ. ರೈತನ ಮಾಲು ಮಾರುಕಟ್ಟೆಗೆ ಬರುವ ಮೊದಲು ಶೇಂಗಾ ಮತ್ತು ತೊಗರಿಗೆ ಉತ್ತಮ ಬೆಲೆ ಇತ್ತು. ಆದರೆ ರೈತ ತನ್ನ ಬೆಳೆಯನ್ನು ಮಾರುಕಟ್ಟೆಗೆ ತರುತ್ತಿದ್ದಂತೆ ಶೇಂಗಾ, ತೊಗರಿ ಖರೀದಿದಾರರು ಮತ್ತು ದಲ್ಲಾಳಿಗಳು ಸೇರಿ ದಿಢೀರನೆ ಬೆಲೆ ಕುಸಿತ ಮಾಡಿದ್ದಾರೆ. ತಮಗೆ ಲಾಭವಾಗುವ ರೀತಿಯಲ್ಲಿ ರೈತನ ಬೆಳೆಯನ್ನು ಅಗ್ಗದ ದರಕ್ಕೆ ಖರೀದಿ ಮಾಡುವ ಮೂಲಕ ರೈತನ ರಕ್ತ ಹೀರುತ್ತಿದ್ದಾರೆ ಎಂದು ಆರೋಪಿಸಿದರು.
ರೈತನ ಮರೆತ ಸರ್ಕಾರ: ಮಳೆಯನ್ನೇ ಆಶ್ರಯಿಸಿದ ರೈತನಿಗೆ ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಕಾಲುವೆಯಲ್ಲಿ ಸಮರ್ಪಕವಾಗಿ ನೀರು ಹರಿದಿಲ್ಲ. ದುಬಾರಿ ಬೆಲೆಯ ಕೀಟನಾಶಕ ಮತ್ತು ರಸಗೊಬ್ಬರ ಹಾಕಿ ರೈತ ಸಾಕಷ್ಟು ನಷ್ಟದಲ್ಲಿದ್ದಾನೆ. ಯೋಗ್ಯ ಬೆಲೆ ಸಿಕ್ಕೀತು ಎಂಬ ಭಾವನೆಯಿಂದ ಬೆಳೆಯನ್ನು ಮಾರಲು ಕೃಷಿ ಮಾರುಕಟ್ಟಗೆ ತಂದರೆ ಇಲ್ಲಿ ಯೋಗ್ಯ ಬೆಲೆ ಸಿಗುತ್ತಿಲ್ಲ. ಬೆಳೆಗೆ ಹಾಕಿದ ಹಣವು ಬಾರದೆ ತೀವ್ರ ಸಂಕಟ ಎದುರಿಸುತ್ತಿದ್ದಾನೆ. ಅಧಿಕಾರ ಕಿತ್ತಾಟದಲ್ಲಿ ಕಾಲಕಳೆಯುತ್ತಿರುವ ಸರ್ಕಾರ ರೈತನ ನೆರವಿಗೆ ಬಾರದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ತೊಗರಿಗೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ. ಆದರೆ ಇದುವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ. ಕೂಡಲೇ ಖರೀದಿ ಕೇಂದ್ರ ಆರಂಭಿಸಬೇಕು, ಶೇಂಗಾ ಬೆಳೆ ಈ ಭಾಗದ ಮುಖ್ಯ ಬೆಳೆಯಾಗಿರುವುದರಿಂದ ಸರ್ಕಾರ ಶೇಂಗಾ ಖರೀದಿಗೆ ಕನಿಷ್ಠ 700ರಿಂದ 800 ಬೆಂಬಲ ಬೆಲೆ ಘೋಷಿಸಬೇಕು. ಪ್ರತಿ ರೈತನಿಂದ 100 ಕ್ವಿಂಟಲ್ವರೆಗೆ ಖರೀದಸುವಂತೆ ಆದೇಶ ಹೊರಡಿಸಬೇಕು. ರೈತನ ಬೆಳೆಯನ್ನು ಗಣಕಯಂತ್ರದಲ್ಲಿ ತೂಕ ಮಾಡಬೇಕು ಹಾಗೂ ಅಧಿಕೃತ ಬಿಲ್ ನೀಡಬೇಕು. ಇದನ್ನು ಉಲ್ಲಂಘಿಸುವ ಖರೀದಿದಾರರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಬರೆದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಶಿವರಾಂ ಸಿಂಗ್ ಅವರಿಗೆ ಸಲ್ಲಿಸಿದರು. ನಂದಣ್ಣ ವಾರಿ, ಪರಮಣ್ಣ ಜಂಪಾ, ಜೆಟ್ಟೆಪ್ಪಗೌಡ ಪಾಟೀಲ, ರುದ್ರಪ್ಪ ಜಂಪಾ, ಬಸಣ್ಣ ಶಾಮತಪುರ, ಮೈಬೂಬ ಸುರಪುರ, ಬಸವರಾಜ ಮುರಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

