ರೋಣ: ವಿನಾಕಾರಣಕುಸಿಯುವ ಮನೆಗಳು
ಗದಗ: ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿಯಲ್ಲಿ 15 ದಿನಗಳಿಂದ ವಿನಾಕಾರಣ ಮನೆಗಳು ಕುಸಿಯುತ್ತಿವೆ. ಮೊದ ಮೊದಲು ಇದನ್ನು ತಾತ್ಸಾರ ಮಾಡಿದ್ದ ಗ್ರಾಮಸ್ಥರು, 8ಕ್ಕೂ ಹೆಚ್ಚು ಮನೆಗಳು ಕುಸಿದ ಮೇಲೆ ಆತಂಕಕ್ಕೆ ಒಳಗಾಗಿದ್ದಾರೆ. ಸಮಸ್ಯೆಯಿಂದ ಅನಿವಾರ್ಯವಾಗಿ ಮನೆ ತೊರೆಯುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳನ್ನು ನಿರ್ಮಿಸುವುದೇ ಮಣ್ಣಿನಿಂದ. ಚಾವಣಿಗೆ ಸಹ ಮಣ್ಣನ್ನೇ ಹಾಕುತ್ತಾರೆ ಹಾಗಾಗಿ ಮನೆ ಗೋಡೆ ಬಿರುಕು ಬಿಡಲು ಪ್ರಾರಂಭಿಸಿದ ನಂತರವಂತೂ ವಾಸವಾಗಿರುವುದೇ ಜಕ್ಕಲಿ ಗ್ರಾಮಸ್ಥರಿಗೆ ಕಷ್ಟವಾಗಿದೆ. ಗ್ರಾಮದ ಸಂಗಪ್ಪ ಮೆಣಸಗಿ ಎನ್ನುವವರ ಮನೆಯಲ್ಲಿ ಮೊದಲು ಸಣ್ಣ ಬಿರುಕು ಕಾಣಿಸಿಕೊಂಡಿತ್ತು. ದಿನ ಕಳೆದಂತೆ ಅದು ದೊಡ್ಡದಾಗಿ ಮನೆಯವರಲ್ಲಿ ಆತಂಕ ಸೃಷ್ಟಿಸಿತು. ಇದನ್ನು ಅವರು ಓಣಿ ಜನರ ಬಳಿ ಹೇಳಿಕೊಂಡಿದ್ದಾರೆ. ಬಳಿಕ ದಿನೇ ದಿನೆ ಗ್ರಾಮದಲ್ಲಿ ಬೇರೆ ಮನೆಗೂ ಇದು ವ್ಯಾಪಿಸುತ್ತಿದೆ.
ಕಾಂಕ್ರೀಟ್ ಮನೆಗೂ ಸಮಸ್ಯೆ: ಪ್ರಾರಂಭದಲ್ಲಿ ಮಣ್ಣಿನ ಮನೆಗೆ ಮಾತ್ರ ಸೀಮಿತವಾಗಿದ್ದ ಈ ಸಮಸ್ಯೆ ಈಗ ಕಾಂಕ್ರೀಟ್ ಮನೆಗೂ ವಿಸ್ತರಿಸಿದ್ದು, ಕಬ್ಬಿಣ ಮತ್ತು ಸಿಮೆಂಟ್ನಿಂದ ನಿರ್ಮಿಸಿದ ಹಲವಾರು ಮನೆಗಳಲ್ಲಿಯೂ ಬಿರುಕು ಕಾಣಿಸಿಕೊಂಡಿದೆ. ಲಕ್ಷಾಂತರ ಖರ್ಚು ಮಾಡಿ ಮನೆ ನಿರ್ಮಿಸಿದ ಗ್ರಾಮಸ್ಥರು, ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಕುರಿತು ಗಮನ ನೀಡಬೇಕು ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.
ಗ್ರಾಮಸ್ಥರಲ್ಲಿ ಆತಂಕ: ಬೆಳಗಾಗುತ್ತಲೇ ಅಲ್ಲಿ ಬಿರುಕು ಬಿಟ್ಟಿದೆ, ಅವರ ಮನೆಯ ಕಂಬ ಬೀಳುತ್ತಲಿದೆ ಎನ್ನುವ ಮಾತುಗಳೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಪ್ರತಿಯೊಬ್ಬರೂ ಆತಂಕದಲ್ಲಿಯೇ ಹಗಲು-ರಾತ್ರಿ ಕಳೆಯುವಂತಾಗಿದೆ. ಏಕಾಏಕಿ ಮನೆಗಳಲ್ಲಿ ಕಂಡು ಬರುತ್ತಿರುವ ಬಿರುಕು ಹಾಗೂ ಮನೆ ಕುಸಿತವನ್ನು ನೋಡಲು ಪಕ್ಕದ ಗ್ರಾಮಗಳಿಂದ ಸಾರ್ವಜನಿಕರು ಆಗಮಿಸುತ್ತಿದ್ದು, ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಭಯ ಹುಟ್ಟಿಸುತ್ತಿದೆ.
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

