ಜಮೀನಿಗೆ ಕಾಡು ಪ್ರಾಣಿಗಳ ಕಾಟ
ಕನ್ನಡಪ್ರಭ ವಾರ್ತೆ, ಗದಗ, ಜು. 23
ಜಿಲ್ಲೆಯ ರೈತರ ಸಮಸ್ಯೆಗಳಿಗೆ ಮುಕ್ತಿಯೇ ಇಲ್ಲದಂತಾಗಿದೆ. ಒಂದಿಲ್ಲೊಂದು ಸಮಸ್ಯೆಗಳು ಜಿಲ್ಲೆಯ ರೈತರನ್ನು ಬೆಂಬಿಡದೇ ಕಾಡುತ್ತಿದ್ದು, ಬಿದ್ದಿರುವ ಅಲ್ಪ ಮಳೆಯಾಧರಿಸಿ ಬಿತ್ತನೆ ಮಾಡಿರುವ ರೈತರಿಗೆ ಕಾಡು ಪ್ರಾಣಿಗಳ ಹಾವಳಿ ತೀವ್ರವಾಗಿ ಕಾಡುತ್ತಿದ್ದು, ಮಳೆ ಮತ್ತು ನೀರಾವರಿ ಬೆಳೆ ಆಧರಿಸಿ ಬಿತ್ತನೆ ಮಾಡಿರುವ ರೈತರು ಹೊಲದಲ್ಲಿ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಲ್ಲಿ ಗದಗ, ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ವ್ಯಾಪಿಸಿಕೊಂಡಿರುವ ಕಪ್ಪತ್ತಗುಡ್ಡಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಿಗೆ ಹಾಗೂ ಗಜೇಂದ್ರಗಡ ಗುಡ್ಡದ ಸಮೀಪದಲ್ಲಿ ಮಿಕಗಳ ಕಾಟ ವ್ಯಾಪಕವಾಗಿದೆ. ಇನ್ನು ರೋಣ ಹಾಗೂ ಗದಗ ತಾಲೂಕಿನ ಗ್ರಾಮಗಳ ವ್ಯಾಪ್ತಿಯ, ರೈತರ ಕಪ್ಪು ಮಣ್ಣಿನ ಭೂಮಿಯ ಬಯಲು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜಿಂಕೆಗಳಿದ್ದು, ರೈತರು ಬಿತ್ತನೆ ಮಾಡಿರುವ ಎಲ್ಲ ಬೆಳೆಗಳನ್ನು ತಿಂದು ಹಾಕುತ್ತಿದ್ದು, ಗ್ರಾಮೀಣ ರೈತರಿಗೆ ಕಾಡು ಪ್ರಾಣಿಗಳು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪಟ್ಟಣ ಪ್ರದೇಶಗಳಲ್ಲೂ ಸಮಸ್ಯೆ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜಿಂಕೆ ಮತ್ತು ಮಿಕಗಳು ರೈತರಿಗೆ ತೊಂದರೆ ನೀಡುತ್ತಿದ್ದರೆ, ಲಕ್ಷ್ಮೇಶ್ವರ, ಶಿರಹಟ್ಟಿ, ಮುಂಡರಗಿ, ರೋಣ, ನರಗುಂದ, ಮುಳಗುಂದ, ನರೇಗಲ್ಲ, ಗಜೇಂದ್ರಗಡ ಹಾಗೂ ಮುಖ್ಯವಾಗಿ ಗದಗ-ಬೆಟಗೇರಿ ಅವಳಿ ನಗರದ ಸುತ್ತಲೂ ಇರುವ ರೈತರ ಜಮೀನುಗಳಿಗೆ ಹಂದಿಗಳ ಕಾಟವೂ ತೀವ್ರವಾಗಿದೆ. ಬಿತ್ತನೆ ಮಾಡಿರುವ ಬೀಜಗಳನ್ನು ತಿಂದು ಹಾಕುತ್ತಿದ್ದು, ನಗರ ಪ್ರದೇಶಗಳ ಸಮೀಪದಲ್ಲಿ ಜಮೀನು ಹೊಂದಿರುವ ರೈತರು ಬಿತ್ತನೆ ಮಾಡಿ, ಹಂದಿಗಳನ್ನು ಕಾಯುವಂಥ ಸ್ಥಿತಿ ನಿರ್ಮಾಣವಾಗಿದೆ.
ರಾತ್ರಿ ದಾಳಿ: ಶಿರಹಟ್ಟಿ ತಾಲೂಕಿನ ಬೆಳಟ್ಟಿ, ಮಾಚೇನಹಳ್ಳಿ, ಬನ್ನಿಕೊಪ್ಪ, ಮಜ್ಜೂರು ಹಾಗೂ ಮುಂಡರಗಿ ತಾಲೂಕಿನ ಬಾಗೇವಾಡಿ ಬಿದರಳ್ಳಿ, ವಿಠಲಾಪುರ, ಮುಂಡವಾಡ, ಬಾಗೇವಾಡಿ, ಕೆಲೂರು, ಗುಡ್ಡದಬೂದಿಹಾಳ, ಚಿಕ್ಕವಡ್ಡಟ್ಟಿ ಕಲಕೇರಿ, ಮುಷ್ಟಿಕೊಪ್ಪ, ವಿರೂಪಾಪುರ, ವಿರುಪಾಪುರತಾಂಡಾ, ಬಾಗೇವಾಡಿ, ಮುಂಡವಾಡ, ಜಾಲವಾಡಗಿ, ವಿಠಲಾಪುರ, ಬಿದರಳ್ಳಿ, ಮುರುಡಿ, ಮುರುಡಿತಾಂಡಾ, ಗುಡ್ಡದಬೂದಿಹಾಳ, ಕೆಲೂರ, ಚಿಕ್ಕವಡ್ಡಟ್ಟಿ, ಮಲ್ಲಿಕಾರ್ಜುನಪುರ ಹೀಗೆ ಅನೇಕ ಗ್ರಾಮಗಳಲ್ಲಿನ ರೈತರ ಬಿತ್ತನೆ ಮಾಡಿರುವ ಜಮೀನುಗಳಿಗೆ ರಾತ್ರಿಯಾಗುತ್ತಿದ್ದಂತೆ ದಾಳಿ ಮಾಡುವ ಮಿಕಗಳು ಬಿತ್ತಿರುವ ಬೀಜಗಳನ್ನು ತಿಂದು ಹಾಕುತ್ತಿದ್ದು, ರೈತರು ಪದೇ ಪದೇ ಬಿತ್ತನೆ ಮಾಡಬೇಕು. ಇಲ್ಲವೇ ರಾತ್ರಿಯಲ್ಲಾ ಹೊಲ ಕಾಯಲು ಹೋಗುವಂತಾಗಿದೆ.
ಅನೇಕ ವರ್ಷದ ಸಮಸ್ಯೆ: ರೈತರಿಗೆ ಜಿಂಕೆ, ಮಿಕ ಹಾಗೂ ಹಂದಿಗಳ ಕಾಟ ವ್ಯಾಪಕವಾಗಿರುವುದು ಇದೇನು ಹೊಸದಲ್ಲ ಪ್ರತಿವರ್ಷವೂ ರೈತರು ಈ ಸಮಸ್ಯೆಯನ್ನು ಎದುರಿಸುತ್ತಾರೆ.
ಇವುಗಳಿಗೆ ಕಡಿವಾಣ ಹಾಕಿ (ಜಿಂಕೆ ಹಾಗೂ ಮಿಕ) ಎಂದು ಅರಣ್ಯ ಇಲಾಖೆಗೆ ಹಾಗೂ ಹಂದಿಗಳ ಕಾಟ ತಪ್ಪಿಸುವಂತೆ ಸ್ಥಳೀಯ ನಗರಸಭೆ, ಪುರಸಭೆ ಪಟ್ಟಣ ಪಂಚಾಯ್ತಿಗಳಿಗೆ ಮನವಿ ನೀಡುತ್ತಲೇ ಬಂದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಅವುಗಳ ಸಂತತಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ರೈತರಿಗೆ ನಷ್ಟ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ಇದರ ಬಗ್ಗೆ ಯಾವಾಗ ಜಿಲ್ಲಾಡಳಿತ ಗಮನ ನೀಡುತ್ತೋ ಕಾಯ್ದು ನೋಡಬೇಕು.
-ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

