ಗದಗ

ಮುಂಡರಗಿ: ರಾಜ್ಯ ಮಟ್ಟದ ಕುಸ್ತಿಗೆ ಅಖಾಡ ಸಜ್ಜು

Published On :

ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 21
ಕ್ರಿಕೆಟ್, ಮೊಬೈಲ್ ಗೇಮ್‌ಗಳ ಭರಾಟೆಯಲ್ಲಿ ನಶಿಸುತ್ತಿರುವ ದೇಶಿ ಆಟಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಮುಂಡರಗಿಯ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ ಪ್ರತಿವರ್ಷ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಏರ್ಪಡಿಸುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಜು. 22ರಂದು ಬೆಳಗ್ಗೆ 10ಕ್ಕೆ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
ವರ್ಷದ 12 ತಿಂಗಳಿನಲ್ಲಿಯೂ ತಾಲೂಕಿನ ಒಂದಿಲ್ಲೊಂದು ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ, ಅಧಿಕಾರಿಗಳ ವಿರುದ್ಧ ಹೋರಾಟ ಮಾಡುತ್ತ ಬಂದಿರುವ ಸಾರ್ವಜನಿಕ ಹೋರಾಟ ವೇದಿಕೆ, ಏಳು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿಯೇ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಅವರ ವಯಸ್ಸು ಹಾಗೂ ತೂಕಕ್ಕನುಗುಣವಾಗಿ ಏರ್ಪಡಿಸುತ್ತಾ ಬಂದಿದ್ದಾರೆ.
ದೇಶಿ ಕ್ರೀಡೆ ತಿಳಿಸಲು ಪಂದ್ಯಾವಳಿ
ದೇಹಕ್ಕೆ ಕಸರತ್ತು ಒದಗಿಸುವ ಮತ್ತು ಮಾನಸಿಕ ದೈಹಿಕ ಬೆಳವಣಿಗೆಗೆ ಸಹಾಯಕವಾಗುವ ಮಲ್ಲಗಂಬ, ಹಾವು ಏಣಿಯಾಟ, ಮರಕೋತಿಯಾಟ, ದುಬ್ಬಚೆಂಡು, ಚಿನ್ನಿದಾಂಡು(ಚಿಣಿಪಣಿ), ಕುಂಟೆ ಬಿಲ್ಲೆ, ಸೇರಿದಂತೆ ಅನೇಕ ದೇಶಿ ಆಟಗಳು ಹಿಂದೆ ಪ್ರಾಮುಖ್ಯತೆ ಹೊಂದಿದ್ದವು. ಕುಸ್ತಿ ಹೆಚ್ಚು ಜನಪ್ರಿಯ ಕ್ರೀಡೆಯಾಗಿತ್ತು. ಕಾಲಕ್ರಮೇಣ ಈ ಕ್ರೀಡೆ ಬಗ್ಗೆ ನಿರಾಸಕ್ತಿ ಹೊಂದಿದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಬೇಡಿಕೆಯನ್ನು ಇನ್ನೂ ಕಳೆದುಕೊಂಡಿಲ್ಲ. ಇಂಥ ಕ್ರೀಡೆಗಳ ಉಳಿವಿಗಾಗಿ ಇಲ್ಲಿಯ ವೇದಿಕೆ ಮರಳಿ ಬನ್ನಿ ಗರಡಿ ಮನೆಗೆ ಎಂಬ ವಿಚಾರ ಹೊಂದಿ ಇಂದಿನ ಮಕ್ಕಳಿಗೂ ಕುಸ್ತಿ ಆಟದ ಮಜಾ ಹಾಗೂ ಅದರಿಂದಾಗುವ ಉಪಯೋಗಗಳ ಕುರಿತು ತಿಳಿಸಲು ಈ ಪಂದ್ಯಾವಳಿ ನಡೆಸುತ್ತಿದೆ.
ಪ್ರತಿಭೆಗೆ ಸನ್ಮಾನ
ಕುಸ್ತಿ ಪಂದ್ಯಾವಳಿಯ ಜತೆಗೆ ಸ್ಥಳೀಯ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದ ಕುಸ್ತಿಪಟುಗಳನ್ನು ಕರೆಯಿಸಿ ಸನ್ಮಾನಿಸಿ ಸತ್ಕರಿಸಲಾಗುತ್ತಿದೆ. ಈ ಹಿಂದೆ ಸ್ಥಳೀಯ ಪ್ರತಿಭೆ ಬಷೀರಾಬಾನು ವಕಾರದ, ಇನ್ನೊಂದು ಪ್ರತಿಭೆ ಪ್ರೇಮಾ ಹುಚ್ಚಣ್ಣವರ ಅವರು ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಪುರಸ್ಕಾರಗೊಂಡ ಹಿನ್ನೆಲೆಯಲ್ಲಿ ಸನ್ಮಾನಿಸಲಾಗಿದೆ.
ಕುಸ್ತಿ ಪಂದ್ಯಾವಳಿಗಳು ನಡೆಯಲು ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ವೇದಿಕೆ ಸಂಚಾಲಕ ಬಸವರಾಜ ನವಲಗುಂದ ಶ್ರಮ ಮೆಚ್ಚುವಂತದ್ದು, ಇವರೊಟ್ಟೆಗೆ ಯಮನಪ್ಪ ಭಜಂತ್ರಿ, ಅಂದಾನಗೌಡ ಕುಲಕರ್ಣಿ, ಲಕ್ಕುಂಡಿಯ ಕುಸ್ತಿ ತರಬೇತುದಾರ ಶರಣಪ್ಪ ಬೆಲೇರಿ, ವೈ.ಎಚ್. ಬಚನಳ್ಳಿ, ಕಾಶೀನಾಥ ಶಿರಬಡಗಿ, ಎನ್.ಎಂ. ಕಲಕೇರಿ, ಪೈಲ್ವಾನರಾದ ಕಾಶೀಂಸಾಬ್ ಕೊಕ್ಕರಗುಂದಿ, ವಿರೂಪಾಕ್ಷಪ್ಪ ಅಸುಂಡಿ ಹಾಗೂ ಎಲ್ಲ ರೀತಿಯ ಸಹಕಾರ ನೀಡುವಲ್ಲಿ ವೈ.ಎನ್. ಗೌಡರ ಮತ್ತು ಪ್ರೊ. ಎ.ವೈ. ನವಲಗುಂದ ಬೆನ್ನೆಲುಬಾಗಿ ನಿಂತಿದ್ದಾರೆ.

ಇಂದು ಪಂದ್ಯಾವಳಿ
ಜು. 22ರಂದು ಮುಂಡರಗಿ ಪಟ್ಟಣದ ಪುರಸಭೆ ಪಕ್ಕದಲ್ಲಿರುವ ಪೊಲೀಸ್ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ. ಬೆಳಗ್ಗೆ 10ಕ್ಕೆ ಪಂದ್ಯಾವಳಿಗಳು ಪ್ರಾರಂಭವಾಗಲಿವೆ.
- ಶರಣು ಸೊಲಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.