ತರಕಾರಿ ಬೆಲೆ ಏರಿಕೆ: ಗ್ರಾಹಕರ ಸಂಕಷ್ಟ
ಯಾವ ಸರ್ಕಾರ ಬಂದರೇನ್ರೀ.. ನಮಗ ಬೆಲೆ ಏರಿಕೆ ಬಿಸಿ ತಪ್ಪಿದ್ದಲ್ಲ. ರೈತ ಬೆಳೆದಾಗ ಉತ್ತಮ ದರ ಸಿಗದೇ ರಸ್ತೆಗೆ ಸುರವಿದ ಟೊಮ್ಯಾಟೊ ದರ ಈಗ ರು. 60ಗೆ ಕೇಜಿ, ಉಳ್ಳಾಗಡ್ಡಿ ರು. 40 ಆಗೈತಿ. ಹಿಂಗಾದ್ರ ಬಾಳೇನಾದ್ರೂ ಹೆಂಗ್ ಸಾಗಿಸೋದು. ಸಾಮೂಹಿಕವಾಗಿ ಜನರಿಂದ ಕೇಳಿ ಬರುತ್ತಿರುವ ಆರ್ತನಾದವಿದು.
ಹೌದು, ಕಳೆದ ಹಂಗಾಮಿನಲ್ಲಿ ಉಳ್ಳಾಗಡ್ಡಿ ಬೆಳೆದ ನೇಗಿಲ ಯೋಗಿಗೆ ಲಾಭವಾಗದೇ ಕಣ್ಣೀರಧಾರೆ ಹರಿದಿದೆ. ಆದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಅದೇ ಉಳ್ಳಾಗಡ್ಡಿ ಖರೀದಿಸುವ ಗ್ರಾಹಕರ ಕಣ್ಣಲ್ಲೂ ಈಗ ಕಣ್ಣೀರು ಸುರಿಯುತ್ತಿದೆ. ಕಾರಣ ಬಾನೆತ್ತರಕ್ಕೆ ಜಿಗಿದ ಉಳ್ಳಾಗಡ್ಡಿ ಬೆಲೆ. ಗನಕ್ಕೇರಿದ ತರಕಾರಿ ದರ, ಅಗತ್ಯ ವಸ್ತುಗಳ ಬೆಲೆಗಳು ಹೊಸ ರೆಕ್ಕೆ-ಪುಕ್ಕ ಹಚ್ಚಿಕೊಂಡು ಆಕಾಶದತ್ತರಕ್ಕೆ ಹಾರುತ್ತವೆ. ಇದರಿಂದ ಬಸವಳಿದು ಕಣ್ಣಿರು ಸುರಿಸುತ್ತಿರುವ ಶ್ರೀ ಸಾಮಾನ್ಯರನ್ನು ಹಣ್ಣುಗಾಯಿ- ನೀರುಗಾಯಿ ಮಾಡಿದೆ.
ಜನಸಾಮಾನ್ಯ ಮೇಲೆ ಗದಪ್ರಹಾರ:
ವಿತ್ತೀಯ ಕೊರತೆ ನಿಯಂತ್ರಣ ಮೀರುತ್ತಿರುವ ನೆಪ ಮುಂದೆ ಮಾಡಿ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮತ್ತು ಅಡುಗೆ ಅನಿಲ ಬೆಲೆ ಹೆಚ್ಚಳ ಮಾಡಿದೆ. ಆದರೆ, ಬಡ ಮತ್ತು ಮಧ್ಯಮ ವರ್ಗದ ಜನ ಬೆಲೆ ಏರಿಕೆ ತಡೆದು ಕೊಳ್ಳುವ ಸಾಮರ್ಥ್ಯ ಹೊಂದಿಲ್ಲ ಎಂಬುದು ಸರ್ಕಾರದ ಗಮನಕ್ಕೆ ಬಾರದಿರುವುದು ದುರದೃಷ್ಟಕರ. ಕೇಂದ್ರ ಸರ್ಕಾರ ಆಗಾಗ ತೈಲ ಬೆಲೆಗಳನ್ನು ಹೆಚ್ಚಿಸಿ ಶ್ರೀ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹಾಕುತ್ತಿದೆ. ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಕೇವಲ ಈ ಉತ್ಪನ್ನಗಳಿಗೆ ಮಾತ್ರ ಸಂಬಂಧಿಸದೇ ಅದು ಆಹಾರ ಪದಾರ್ಥಗಳ ಸಾಗಾಣಿಕೆ ಸಾಧನ ಸಂಪರ್ಕ ಮತ್ತು ಇತರ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜೀವನಾವಶ್ಯಕ ವಸ್ತುಗಳ ಬೆಲೆಗಳು ಮತ್ತಷ್ಟು ಹೆಚ್ಚಳವಾಗುವುದರಿಂದ ಜನಸಾಮಾನ್ಯರ ಬದುಕು ಮತ್ತಷ್ಟು ನರಕ ಸದೃಶ್ಯವಾಗುತ್ತದೆ. ಬರದಿಂದ ತತ್ತರಿಸಿರುವ ಜನತೆಗೆ ಈಗ ಮತ್ತೊಂದು ಆಘಾತ ಕಾದಿದೆ. ಈ ಬಾರಿ ಮುಂಗಾರು ಮಳೆ ಆಭಾವದಿಂದಾಗಿ ಪ್ರಸಕ್ತ ಮುಂಗಾರು ಹಂಗಾಮು ಆಹಾರಧಾನ್ಯ ಉತ್ಪಾದನೆ ಕಡಿಮೆಯಾಗಲಿದೆ ಎಂದು ಕೃಷಿ ಸಚಿವಾಲಯ ಅಂದಾಜು ಮಾಡಿದೆ. ಇದರಿಂದಾಗಿ ಬರುವ ದಿನಗಳಲ್ಲಿ ಆಹಾರಧಾನ್ಯಗಳ ಬೆಲೆ ಮತ್ತಷ್ಟು ಏರುವುದು ಖಂಡಿತ. ಡೀಸೆಲ್ ಬೆಲೆ ಏರಿಕೆ ಪರಿಣಾಮ ಈಗಾಗಲೇ ಮಾರುಕಟ್ಟೆಯಲ್ಲಿ ಕಂಡುಬರತೊಡಗಿದೆ. ಜತೆಗೆ ಆಹಾರಧಾನ್ಯ ಉತ್ಪಾದನೆ ಕಡಿಮೆಯಾಗುವ ಸರ್ಕಾರದ ಪ್ರಕಟಣೆ ಹೊರ ಬಿದ್ದಿರುವುದರಿಂದ ಕಾಳಸಂತೆಕೋರರಿಗೆ ಉತ್ತಮ ಸದಾವಕಾಶ ದೊರೆತಂತಾಗಿದೆ.
ಮತ್ತೊಂದು ಸುತ್ತಿನ ಬೆಲೆ ಏರಿಕೆ
ಮುಂಗಾರು ಹಂಗಾಮಿನಲ್ಲಾದ ಆಹಾರಧಾನ್ಯ ಉತ್ಪಾದನೆ ಕೊರತೆಯನ್ನು ಹಿಂಗಾರು ಹಂಗಾಮಿನಲ್ಲಿ ಭರ್ತಿ ಮಾಡಿಕೊಳ್ಳುವ ವಿಶ್ವಾಸವನ್ನು ಕೃಷಿ ಸಚಿವಾಲಯ ವ್ಯಕ್ತಪಡಿಸಿದೆ. ಇದಕ್ಕೆ ಹಿಂಗಾರಿನಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಬಿದ್ದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮುಂಗಾರಿನಲ್ಲಿ ಉತ್ತಮ ಮಳೆಯಾಗುವ ಲಕ್ಷಣಗಳು ಕಂಡು ಬಂದಿಲ್ಲ. ಆದ್ದರಿಂದ ಸರ್ಕಾರ ಹಿಂಗಾರು ಹಂಗಾಮು ಪೂರ್ಣಗೊಳ್ಳುವವರೆಗೆ ಕಾಯದೇ ಆಹಾರಧಾನ್ಯಗಳ ಸಾಕಷ್ಟು ಪೂರೈಕೆ ಮತ್ತು ಬೆಲೆ ನಿಯಂತ್ರಣಕ್ಕೆ ಈಗಿನಿಂದಲೆ ಕಾರ್ಯಪ್ರವೃತ್ತವಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

