ಗದುಗಿನಲ್ಲಿ ಉಕ್ಕಲಿದೆ ಅಂತರ್ಜಲ
ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜು. 12
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ತೀವ್ರವಾಗಿ ಕುಸಿಯುತ್ತಿರುವ ಅಂತರ್ಜಲ ಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ವಿಶೇಷ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಗದಗ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದ್ದು, ಇದು ಯಶಸ್ವಿಯಾದ ಬಳಿಕ ಇತರ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಚಿಂತನೆ ಸರ್ಕಾರದ ಮುಂದಿದೆ.
ಗದಗ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಕೊಳವೆಬಾವಿಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ಅವುಗಳ ಮರುಪೂರಣ ಆಗಬೇಕು ಮತ್ತು ಮಳೆ ನೀರು ಪೋಲಾಗಿ ಹರಿದು ಹೋಗದೆ ಭೂಮಿಯ ಆಳವನ್ನು ಸೇರಬೇಕು. ಮಳೆ ನೀರು ಹೆಚ್ಚು ಹರಿದು ಹೋಗುವ ಸ್ಥಳಗಳಲ್ಲಿ ಕೊಳವೆಬಾವಿ ಮರುಪೂರಣ ಘಟಕಗಳನ್ನು ಸ್ಥಾಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಕಾರ್ಯ ವಿಧಾನ: ಮಳೆ ನೀರು ಹರಿದು ಬರುವ ಮುಖ್ಯ ಸ್ಥಳದಲ್ಲಿ ನೀರು ಸೋಸಿ ಒಳಬರುವ ರೀತಿಯಲ್ಲಿ ಒಂದು ವಿಶೇಷ ಘಟಕವನ್ನು ನಿರ್ಮಿಸಲಾಗುತ್ತದೆ. ಈ ಘಟಕದಲ್ಲಿ ಸಂಗ್ರಹವಾದ ಕಲ್ಮಶ ಮುಕ್ತ ನೀರು ಮತ್ತೆ ಮುಂದೆ ಸಾಗಿ ಹೋಗಿ ಮತ್ತೊಂದು ಸಿಮೆಂಟ್ನಲ್ಲಿ ಸಂಗ್ರಹವಾಗುತ್ತದೆ. ಈ ಸಿಮೆಂಟ್ ಟ್ಯಾಂಕ್ನ ಮಧ್ಯದಲ್ಲಿ ಬತ್ತಿ ಹೋಗಿರುವ ಕೊಳವೆಬಾವಿ ಅಥವಾ ಈ ಯೋಜನೆಗಾಗಿಯೇ ಕೊರೆಸಿದ ಕೊಳವೆಬಾವಿ ಇರುತ್ತದೆ. ಆ ಕೊಳವೆ ಬಾವಿ ಕನಿಷ್ಠ 150 ಅಡಿ ಆಳವನ್ನು ಹೊಂದಿದ್ದು, ಅದಕ್ಕೆ ಅಳವಡಿಸಲಾಗುವ ಪೈಪ್ನ ಸುತ್ತಲೂ ದೊಡ್ಡ ದೊಡ್ಡ ರಂಧ್ರಗಳನ್ನು ಮಾಡಿರುವುದರಿಂದ ಭೂಮಿಯ ಮೇಲ್ಮೆಯಿಂದ ಬಂದ ಮಳೆ ನೀರು ನೇರವಾಗಿ ಭೂಮಿಯ ಆಳಕ್ಕೆ ತಲುಪಿಸುವ ಚಿಂತನೆ ಇದಾಗಿದೆ.
ಪ್ರಾಯೋಗಿಕ ಹಂತ: ಈ ಯೋಜನೆಗೆ ಸರ್ಕಾರ ಯಾವುದೇ ನಾಮಕರಣ ಮಾಡಿಲ್ಲ. ಆದರೆ, ಈ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿರುವ ಫಾರಂಲ್ಯಾಂಡ್ ರೇನ್ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಎನ್ನುವ ಸಂಸ್ಥೆಯ ಮೂಲಕ ಇದನ್ನು ಅನುಷ್ಠಾನ ಮಾಡುತ್ತಿದ್ದು, ಒಂದು ಘಟಕ ಸ್ಥಾಪನೆಗೆ ರು. 2 ಲಕ್ಷದವರೆಗೆ ವೆಚ್ಚ ತಗುಲಿದೆ. ಇದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರ ಕನಸಿನ ಕೂಸಾಗಿದ್ದು, ಈ ಕುರಿತು ಈಚೆಗೆ ದಾವಣಗೆರೆಯಲ್ಲಿ ಗ್ರಾಮೀಣಾಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಪೂರ್ಣಗೊಳಿಸಲಾಗಿದೆ. ಸದ್ಯದಲ್ಲಿಯೇ ರಾಜ್ಯದ ಆಯ್ದ 5 ಜಿಲ್ಲೆಗಳಿಗೆ ವಿಸ್ತರಿಸುವ ಚಿಂತನೆ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

