ಅನುದಾನ ದುರ್ಬಳಕೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಜು. 11
2010ರಿಂದ ಈವರೆಗೆ (2014) ಎಸ್.ಎಫ್.ಸಿ. ಅನುದಾನದಲ್ಲಿ ಎಸ್.ಸಿ./ ಎಸ್.ಟಿ. ಜನಾಂಗದವರಿಗೆ ಕಾಯ್ದಿರಿಸಿದ ಹಣ ದುರ್ಬಳಕೆಯಾಗಿದ್ದು, ಇದರಿಂದ ಜನಾಂಗದವರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಶುಕ್ರವಾರ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿ ಪುರಸಭೆ ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ತಾಲೂಕು ಸಂಚಾಲಕ ಪ್ರಕಾಶ ಹೊಸಳ್ಳಿ ಮಾತನಾಡಿ, 2010 ರಿಂದ 2014ರ ವರೆಗೆ ಎಸ್.ಎಫ್.ಸಿಯ ಶೇ. 22.75ರ ಹಾಗೂ ಶೇ. 7.5 ಅನುದಾನದ ಸಂಪೂರ್ಣ ದುರ್ಬಳಕೆಯಾಗಿದೆ. ವಾಜಪೇಯಿ ನಗರ ವಸತಿ ಯೋಜನೆ, ಎಲ್ಪಿಜಿ ಗ್ಯಾಸ್ ಯೋಜನೆ, ವೈದ್ಯಕೀಯ ಭತ್ಯೆ, ಭಾಗ್ಯಜ್ಯೋತಿ ಯೋಜನೆ, ಕಂಪ್ಯೂಟರ್ ವಿತರಣೆ, ಸಿಆರ್ಎಫ್ ಅನುದಾನ, ಲಿಡಕರ್ ಕುಟೀರ ಯೋಜನೆ, ಬಾಂಡೆ ಸಾಮಗ್ರಿ ವಿತರಣೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಎಸ್.ಸಿ. ಮತ್ತು ಎಸ್.ಟಿ. ಜನಾಂಗದವರಿಗೆ ಈವರೆಗೂ ಸಮರ್ಪಕವಾಗಿ ವಿತರಣೆ ಮಾಡಿರುವುದಿಲ್ಲ. ಪಟ್ಟಣದಲ್ಲಿ ವಾಜಪೇಯಿ ವಸತಿ ಯೋಜನೆಯಲ್ಲಿ ಮನೆ ಕಟ್ಟಿಸಿಕೊಂಡಿರುವ ಫಲಾನುಭವಿಗಳಿಗೆ ಬಿಲ್ ಪಾವತಿಯಾಗಿರುವುದಿಲ್ಲ. ಈ ಕುರಿತು ಗಮನ ಹರಿಸಬೇಕಾದ ಪುರಸಭೆ ಆಡಳಿತ ಮತ್ತು ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷರು ಏಕಗವಾಕ್ಷಿ ನೀತಿ (ಏಕಪಕ್ಷೀಯ ನೀತಿ) ಅನುಸರಿಸುತ್ತಿದ್ದು, ಇದರಿಂದ ಎಸ್ಸಿ/ ಎಸ್.ಟಿ. ಜನಾಂಗಗಳಿಗೆ ಅನುದಾನ ಮತ್ತು ಸೌಲಭ್ಯಗಳು ವಿಳಂಬವಾಗುತ್ತಿವೆ. ಆದ್ದರಿಂದ ಅಧ್ಯಕ್ಷರು ಇಂತಹ ನೀತಿಯನ್ನು ಕೈಬಿಟ್ಟು ಸರ್ವ ಜನಾಂಗದ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ಎಚ್ಚರಿಕೆ
ಎಸ್.ಸಿ./ ಎಸ್.ಟಿ. ಜನಾಂಗದ ಫಲಾನುಭವಿಗಳಿಗೆ ಆಗಿರುವ ಅನ್ಯಾಯವನ್ನು ಜುಲೈ 18 ರೊಳಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಗಮನಹರಿಸಿ ಸರಿಪಡಿಸಬೇಕು. ವಿಳಂಬ ಮಾಡಿದಲ್ಲಿ ಜು. 20 ರಂದು ಪುರಸಭೆ ಕಾರ್ಯಾಲಯ ಎದುರು ಉಗ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಆರ್.ಎಂ. ಪಾಟೀಲ ಮಾತನಾಡಿ, ಈ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದರು. ಪ್ರತಿಭಟನೆಯಲ್ಲಿ ದಲಿತ ಮುಖಂಡ ಮೌನೇಶ ಹಾದಿಮನಿ, ದೇವೇಂದ್ರಪ್ಪ ಕೊಳ್ಳಪ್ಪನವರ, ಮುತ್ತಣ್ಣ ಜೋಗಣ್ಣವರ, ಮಾರುತಿ ಹಿರೇಮನಿ, ಮಹೇಶ ಹಿರೇಮನಿ, ಅಯ್ಯಪ್ಪ ಚಲವಾದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

