ಹಾಲಕೆರೆ: ಭಕ್ತರಿಗೆ ಹಬ್ಬ
ಕನ್ನಡಪ್ರಭ ವಾರ್ತೆ, ನರೇಗಲ್ಲ, ಆ. 3
ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಮಠ ಮತ್ತು ಹಾನಗಲ್ ಕುಮಾರೇಶ್ವರ ಸಭಾ ಮಂಟಪವು ಸಾಕ್ಷಾತ್ ಅನುಭವ ಮಂಟಪವಾಗಿ ಕಂಗೊಳಿಸುತ್ತ ಭಕ್ತರ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.
ಪುರಾಣ ಮಹಾ ಮಂಗಲ ಮತ್ತು ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿಡಗುಂದಿಕೊಪ್ಪದ ಶಿವಬಸವ ಶ್ರೀಗಳು ಆಶೀರ್ವಚನ ನೀಡಿ, ಈವರೆಗೆ ಅನ್ನದಾನಕ್ಕೆ ಹೆಸರಾಗಿದ್ದ ಹಾಲಕೆರೆ ಈ ಶತಮಾನೋತ್ಸವದ ಮೂಲಕ ರಕ್ತದಾನಕ್ಕೂ ಮುಂದಾಗಿರುವುದು ರಕ್ತದಾನ ಭಗೀರಥ ಹಾಲಕೆರೆ ಎಂಬ ಅಭಿದಾನವನ್ನು ನೀಡಿದೆ. ಶತಮಾನೋತ್ಸವ ನೆಪದಲ್ಲಿ ಹಾಲಕೆರೆಯಲ್ಲಿ ಸರ್ವ ಧರ್ಮ, ಸರ್ವ ಭಕ್ತರುಗಳ ಮನಸ್ಸನ್ನು ಕಟ್ಟುವ ಕಾರ್ಯ ನಡೆದಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಡಾ. ಅಭಿನವ ಅನ್ನದಾನ ಶ್ರೀಗಳು ಆಶೀರ್ವಚನ ನೀಡಿ, ತ್ಯಾಗಕ್ಕೆ ಎಂದಿಗೂ ದೊಡ್ಡ ಬೆಲೆ ಇದೆ. ತ್ಯಾಗದ ಮೂಲಕ ಈ ಜಗತ್ತನ್ನೆ ಗೆದ್ದವರಿದ್ದಾರೆ. ಇಂತಹ ಧಾರ್ಮಿಕ ಕಾರ್ಯಗಳು ನಡೆದಾಗ ನಾವುಗಳ ಸಕಲ ತ್ಯಾಗಕ್ಕೆ ಸಿದ್ಧರಾಗಬೇಕು. ಅಂದಾಗ ಮಾತ್ರ ಈ ಜಗತ್ತಿನಲ್ಲಿ ಧರ್ಮ ಉಳಿಯುತ್ತದೆ. ಮುಂಗಾರು ಕೈಕೊಟ್ಟಿತೆಂದು ಯಾರೂ ಬೇಸರ ಮಾಡಿಕೊಳ್ಳಬೇಡಿರಿ. ನೀವಿಂದು ಮಾಡುತ್ತಿರುವ ಹಿರಿಯ ಶ್ರೀಗಳವರ ಶತಮಾನೋತ್ಸವದ ಆಶೀರ್ವಾದದ ಫಲ ನಿಮಗೆ ಖಂಡಿತ ಹಿಂಗಾರಿನಲ್ಲಿ ದೊರಕುತ್ತದೆ. ಹಿಂಗಾರಿನಲ್ಲಿ ನೀವುಗಳು ಸಮೃದ್ಧ ಮಳೆ ಮತ್ತು ಸಮೃದ್ಧ ಬೆಳೆಯನ್ನು ಕಾಣಲಿದ್ದೀರಿ ಎಂದರು.
ಜಮಖಂಡಿ ಓಲೆಮಠದ ಅಭಿನವ ಚನ್ನಬಸವ ಶ್ರೀಗಳು, ಚಿಕ್ಕತೊಟ್ಟಿಲಕೆರೆಯ ಅಟವೀಶ್ವರ ಮಠದ ಶಿವಲಿಂಗ ಶ್ರೀಗಳು, ಕರೆಗುಡ್ಡದ ಮಹಾಂತಲಿಂಗ ಶಿವಾಚಾರ್ಯರು, ರಾಯಚೂರಿನ ಅಭಿನವ ವೀರರಾಚೋಟಿ ಶಿವಾಚಾರ್ಯ, ಬ್ಯಾಹಟ್ಟಿಯ ಮರುಳಸಿದ್ದ ಶಿವಾಚಾರ್ಯರು ಸೇರಿದಂತೆ ನಾಡಿನ ಅನೇಕ ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದರು. ನಾಗರಾಜ ಹೂಗಾರ ಸಂಗೀತ ಸೇವೆ ನೀಡಿದರು. ಉಪನ್ಯಾಸಕ ಎಫ್.ಎನ್. ಹುಡೇದ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹೂಲಗೇರಿ ನಿರೂಪಿಸಿದರು. ಉಪನ್ಯಾಸಕ ಎನ್.ಎಸ್. ಹೊನ್ನೂರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

