ಅಧಿಕಾರಿಗಳ ಗೈರು: ತಾಪಂ ಸಭೆ ರದ್ದು
ಕನ್ನಡಪ್ರಭೆ ವಾರ್ತೆ, ರೋಣ, ಜ. 23
ಪ್ರತಿ 2 ತಿಂಗಳಿಗೊಮ್ಮೆ ನಡೆಯಬೇಕಿದ್ದ ತಾಪಂ ಸಾಮಾನ್ಯ ಸಭೆಗೆ ತಾಲೂಕಿನ ವಿವಿಧ ಇಲಾಖೆಯ ಕೆಲ ಮುಖ್ಯಾಧಿಕಾರಿಗಳು ಅನಗತ್ಯ ಗೈರು ಹಾಜರಾಗುವುದರಿಂದ ಕೆರಳಿದ ತಾಪಂ ಸದಸ್ಯರು ಬುಧವಾರ ಸಭೆಯನ್ನು ಬಹಿಷ್ಕರಿಸಿ ಹೊರನೆಡದರು. ಇದರಿಂದ ಸಭೆ ರದ್ದಾಗಿ ಮುಂದೂಡಲ್ಪಟ್ಟಿತು.
ಕೋರಂ ಭರ್ತಿಯಾಗದೆ ಸಭೆ ಆರಂಭವಾಗುವುದೇ ವಿಳಂಬವಾಯಿತು. ಬಳಿಕ ಸಭೆಗೆ ಒಬ್ಬರು ಸದಸ್ಯರು ಹಾಜರಾಗಿ, ಇನ್ನೇನು ಸಭೆ ನಡೆದೀತು ಎನ್ನುವಷ್ಟರಲ್ಲಿ ಸದಸ್ಯ ಅಂದಪ್ಪ ಬಿಚ್ಚೂರ, ಗಾಯತ್ರಿ ನಾಗನೂರ, ರಾಜೇಶ್ವರ ಪಾಟೀಲ, ಬಿ.ಬಿ. ಮಲ್ಲಾಪುರ, ಮೌಲಾನಬಿ ಗಡಾದ ಮಾತನಾಡಿ, ಮುಖ್ಯವಾಗಿ ಚರ್ಚಿಸಬೇಕಾದ ಆಹಾರ, ಅರಣ್ಯ, ಸಾರಿಗೆ, ಬಿಸಿಎಂ ಇಲಾಖೆ ಅಧಿಕಾರಿಗಳು ಸಭೆಗೆ ಪ್ರತಿ ಸಾರಿಯೂ ಗೈರಾಗುತ್ತಾರೆ. ನೋಟಿಸ್ ನೀಡಿ ಕ್ರಮ ಕೈಗೊಳ್ಳುತ್ತೇವೆ ಎಂದು 2 ವರ್ಷಗಳಿಂದ ತಾಪಂ ಇಓ ಹೇಳುತ್ತಲೇ ಬಂದಿದ್ದಾರೆ. ಇಲ್ಲಿಯ ವರೆಗೆ ಯಾರ ಮೇಲೆ ಕ್ರಮ ಕೈಗೊಂಡಿರಿ ಹೇಳಿ. ಸಭೆಗೆ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿರುವವರೆಗೂ ಸಭೆ ನಡೆಯುವಂತಿಲ್ಲ ಎಂದು ಸದಸ್ಯರು ಇಓ ರುದ್ರಸ್ವಾಮಿ ಜತೆಗೆ ವಾಗ್ವಾದ ಮಾಡುತ್ತಾ ಸಭೆಯಿಂದ ಹೊರನಡೆದರು.
ಕ್ರಮ ಕೈಗೊಳ್ಳುವ ಹಕ್ಕಿಲ್ಲ
ಇಓ ಎಸ್.ಎಂ. ರುದ್ರಸ್ವಾಮಿ ಮಾತನಾಡಿ, ದಯವಿಟ್ಟು ಸದಸ್ಯರು ಸಭೆಯಿಂದ ಹೊರಹೋಗದೆ ಕುಳಿತುಕೊಳ್ಳಿ. ಹೊರನಡೆದರೆ ಕೋರಂ ಭರ್ತಿಯಾಗದೆ ಸಭೆ ನಡೆಯುವುದು ಅಸಾಧ್ಯವಾಗುತ್ತದೆ. ಈಗಾಗಲೇ ಗೈರಾಗುತ್ತಿರುವ ಅಧಿಕಾರಿಗಳ ಮೇಲೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡಲಾಗಿದೆ. ನನಗೆ ಕ್ರಮ ಕೈಗೊಳ್ಳುವ ಹಕ್ಕಿಲ್ಲ. ಬೇಕಿದ್ದರೆ ನೋಟಿಸ್ ನೀಡಬಹುದು. ಈ ಕುರಿತು ಸಿಇಓ ಗಮನಕ್ಕೆ ತರಲಾಗುವುದು ಎಂದರು.
ತಾಪಂ ಸದಸ್ಯರು ಆಕ್ರೋಶಗೊಂಡು, ನೀವು ಪದೇ ಪದೇ ಅದನ್ನೇ ಹೇಳಿ ಮುಂದೂಡುತ್ತಿದ್ದೀರಿ. ಅಭಿವೃದ್ಧಿ ಕೆಲಸಗಳು ಮತ್ತು ನೆನೆಗುದಿಗೆ ಬಿದ್ದ ಕಾಮಗಾರಿಗಳ ಬಗ್ಗೆ ಚರ್ಚಿಸುವುದು ಯಾರ ಜತೆ? ಇಂತಹ ಸಭೆ ನಮಗೆ ಬೇಡ. ಪ್ರಗತಿ ವರದಿಯನ್ನು ಮನೆಗೆ ಕಳಿಸಿ, ಅಲ್ಲಿಯೇ ಓದಿ ಸುಮ್ಮನಿರುತ್ತೇವೆ. ಕಾಟಾಚಾರಕ್ಕೆ ಸಭೆ ಯಾಕೆ ನಡೆಸುತ್ತಿರಿ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.
ಅಧ್ಯಕ್ಷರ ಹತಾಶೆ
ಹೊರನಡೆಯುತ್ತಿದ್ದ ಸದಸ್ಯರನ್ನು ತಾಪಂ ಅಧ್ಯಕ್ಷೆ ಲಲಿತಾ ಪೂಜಾರ ತಡೆಯಲೆತ್ನಿಸಿದರು. ಪೋನ್ ಮೂಲಕ ಗೈರಾಗಿದ್ದ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆಗೆ ಬರಲು ಸೂಚಿಸಿದರು. ತಡವಾಗಿ ಬರುವುದಾಗಿ ತಿಳಿದಾಗ ಹತಾಶರಾದ ಅಧ್ಯಕ್ಷರು ಅನಿವಾರ್ಯವಾಗಿ ಸಭೆಯನ್ನು ಫೆ. 5ಕ್ಕೆ ಮುಂದೂಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

