ಅಂಬಿಗರ ಚೌಡಯ್ಯನವರ ಆದರ್ಶ ಸಾರ್ವಕಾಲಿಕ
ಕನ್ನಡಪ್ರಭ ವಾರ್ತೆ, ಗದಗ, ಜ. 21
ನಿಜಶರಣ ಅಂಬಿಗರ ಚೌಡಯ್ಯನವರು ವಚನಗಳ ಮೂಲಕ ನಾಡಿನಲ್ಲಿರುವ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಶ್ರಮಿಸಿದ ಮಹಾನ್ ಶರಣರಾಗಿದ್ದು, ಅವರ ಆದರ್ಶಗಳು ಸಾರ್ವಕಾಲಿಕ ಎಂದು ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ್ ಹೇಳಿದರು.
ಅವರು ಸೋಮವಾರ ನಗರದ ಜ. ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಗದಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಅಂಬಿಗರ ಚೌಡಯ್ಯನವರು ತಮ್ಮ ವಚನಗಳ ಮೂಲಕ ನಾಡಿನ ಜನರಲ್ಲಿರುವ ಮೌಢ್ಯತೆ, ಕಂದಾಚಾರ, ಜಾತಿ, ಬೇಧ-ಭಾವವನ್ನು ತೊಲಗಿಸುವಲ್ಲಿ ಶ್ರಮಿಸಿದವರು. ಅಂತಹ ಮಹಾನ್ ಶರಣರ ಆದರ್ಶಗಳನ್ನು ಇಂದಿನ ಯುವಸಮೂಹ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಪ್ರಸಕ್ತ ಸಾಲಿನಿಂದ ರಾಜ್ಯ ಸರ್ಕಾರವು ಸರ್ಕಾರದ ವತಿಯಿಂದ ಆಚರಿಸಲು ತೀರ್ಮಾನಿಸಿರುವ ಕಾರ್ಯ ಶ್ಲಾಘನೀಯವಾಗಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಕಲ್ಯಾಣ ಕ್ರಾಂತಿಯಲ್ಲಿ ತನ್ನದೇಯಾದ ವಿಶಿಷ್ಟ ವಚನಗಳ ಮೂಲಕ ಪ್ರಖ್ಯಾತಿ ಪಡೆದಿದ್ದ ಅಂಬಿಗರ ಚೌಡಯ್ಯನವರು ಜನಮಾನಸದಲ್ಲಿ ಹೆಸರಾಗಿದ್ದಾರೆ.
ಪ್ರಾಚೀನ ನಾಗರಿಕತೆಯಿಂದಲೂ ಅಂಬಿಗರ ಜನಾಂಗವು ನಾಗರಿಕ ಬೆಳವಣಿಗೆಗೆ ಸಾಕಷ್ಟು ಶ್ರಮಪಟ್ಟಿದ್ದು ಶ್ಲಾಘನೀಯ. ಅವರಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರಾಗಿದ್ದು, ಅವರು ಮೌಢ್ಯತೆ ತೊಲಗಿಸಿ, ತಮ್ಮ ವಚನಗಳ ಮೂಲಕ ಸಮಾನತೆ ಕುರಿತು ಸಾರಿದ್ದಾರೆ ಎಂದರು.
ಈ ಜನಾಂಗದ ಬಹುದಿನಗಳ ಬೇಡಿಕೆಯಾಗಿರುವ ನಿವೇಶನ ಮತ್ತು ಗದಗ-ಬೆಟಗೇರಿಯ ಪ್ರಮುಖ ರಸ್ತೆಯೊಂದಕ್ಕೆ ಹಾಗೂ ಪ್ರಮುಖ ವೃತ್ತಕ್ಕೆ ಅಂಬಿಗರ ಚೌಡಯ್ಯ ಹೆಸರನ್ನಿಡಲು ಮನವಿ ಸಲ್ಲಿಸಲಾಗಿದ್ದು, ಕೂಡಲೇ ತಮ್ಮ ಕೋರಿಕೆಯನ್ನು ಈಡೇರಿಸಲಾಗುವುದು ಎಂದರು.
ಸಾನ್ನಿಧ್ಯ ವಹಿಸಿದ್ದ ಜ. ತೋಂಟದಾರ್ಯ ಮಠದ ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಮಾತನಾಡಿ, 12ನೇ ಶತಮಾನವನ್ನು ಬಸವಾದಿ ಶರಣರ ಪರ್ವಕಾಲವೆಂದೇ ಹೇಳಬಹುದು. ದೇಶದಲ್ಲಿ ಇಂದು 3500 ಕ್ಕೂ ಅಧಿಕ ಜಾತಿಗಳಿವೆ. 12ನೇ ಶತಮಾನವನ್ನು ಕಲ್ಯಾಣ ಕ್ರಾಂತಿಯೆಂದೇ ಹೇಳಲಾಗುತ್ತಿದೆ. ಈ ಶತಮಾನದಲ್ಲಿ 300ಕ್ಕೂ ಅಧಿಕ ಶರಣರು ಬೆಳಕಿಗೆ ಬಂದರು. ಅವರಲ್ಲಿ ಅಂಬಿಗರ ಚೌಡಯ್ಯನವರು ಪ್ರಮುಖರು. ಅವರು ತಮ್ಮ ವಚನಗಳ ಮೂಲಕ ಸಮಾಜದ ಓರೆ, ಕೋರೆ ತಿದ್ದುವಲ್ಲಿ ಶ್ರಮಿಸಿದವರು. ಅಂತಹ ನಿಜಶರಣರ ಆದರ್ಶಗಳನ್ನು ಪ್ರತಿಯೊಬ್ಬರೂ ಬಳಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಚೌಡಯ್ಯನವರ ಹಾಗೂ ಮಹಾನ್ ಶರಣರ ಆದರ್ಶಗಳ ಕುರಿತು ತಿಳಿವಳಿಕೆ ನೀಡುವ ಮೂಲಕ ಉತ್ತಮ ನಾಗರಿಕರನ್ನಾಗಿಸಲು ಶ್ರಮಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಶಿವಣ್ಣ ಮುಳಗುಂದ ಮಾತನಾಡಿದರು. ಪ್ರೊ. ಆರ್.ಎಲ್. ಪೊಲೀಸಪಾಟೀಲ್ ಅವರಿಂದ ಉಪನ್ಯಾಸ ಜರುಗಿತು.
ಈ ಸಂದರ್ಭದಲ್ಲಿ ಎಸ್.ಬಿ. ಸಂಕಣ್ಣವರ, ನಗರಸಭೆ ಸದಸ್ಯೆ ವಂದನಾ ವರ್ಣೇಕರ, ಜ್ಯೋತಿ ಇರಾಳ, ಗಣೇಶ ಸುಲ್ತಾನಪೂರ, ಜೆ.ಬಿ. ಗಾರವಾಡ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಸ್ವಾಗತಿಸಿದರು. ಐ.ಬಿ. ಬಾರಕೇರ ಕಾರ್ಯಕ್ರಮ ನಿರೂಪಿಸಿದರು. ಬಿ.ಎನ್. ಯರನಾಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

