ಮನೆ ಹಂಚಿಕೆಯಲ್ಲಿ ಅನ್ಯಾಯ: ಆರೋಪ
ಶಿರಹಟ್ಟಿ: ಇಂದಿರಾ, ಬಸವ ವಸತಿ ಯೋಜನೆಯಡಿಯಲ್ಲಿ ಪರಿಶಿಷ್ಟ ಜನಾಂಗದವರಿಗೆ ನೀಡಲು ಮಂಜೂರಾದ ಮನೆಗಳ ಹಂಚಿಕೆಯಲ್ಲಿ ಅರ್ಹ ಫಲಾನುಭವಿಗಳನ್ನು ಕಡೆಗಣಿಸಿ, ಅನ್ಯಾಯ ಮಾಡಿದ್ದಾರೆಂದು ಆರೋಪಿಸಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮರಿ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರ ತಾಲೂಕಿನ ತೆಗ್ಗಿನಭಾವನೂರ ಗ್ರಾಮದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದೂರು ಸಲ್ಲಿಸಿದರು. ಪರಿಶಿಷ್ಟ ಜನಾಂಗದವರು ಅನೇಕ ವರ್ಷಗಳಿಂದ ಇದೇ ಗ್ರಾಮದಲ್ಲಿ ವಾಸಿಸುತ್ತಿದ್ದು, ಮನೆ ನೀಡುವಂತೆ ಅರ್ಜಿಯನ್ನು ನೀಡಲಾಗಿದೆ. ಗ್ರಾಪಂ ಅಧಿಕಾರಿಗಳ ಕುತಂತ್ರದಿಂದಾಗಿ ವಾಸಿಸಲು ಮನೆಯಿಲ್ಲದೆ ಪರದಾಡುವಂತಾಗಿದೆ. ಪರಿಶೀಲನೆ ನಡೆಸಿ ಆಶ್ರಯ ಮನೆಗಳನ್ನು ನೀಡುವಂತೆ ಒತ್ತಾಯಿಸಿದರು.
ವೀರಣ್ಣ ತುರಮರಿ ಮನವಿ ಸ್ವೀಕರಿಸಿ ಮಾತನಾಡಿ, ನಿವೇಶನ ಹಂಚಿಕೆಯಲ್ಲಿ ಫಲಾನುಭವಿಗಳಿಗೆ ಅನ್ಯಾಯವಾಗಿದ್ದು ಕಂಡು ಬಂದಲ್ಲಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಅಂಗವಿಕಲರ ವೇತನ ಮಂಜೂರು ಮಾಡುವಂತೆ ಅನೇಕ ತಿಂಗಳುಗಳ ಹಿಂದೆಯೇ ಅರ್ಜಿ ನೀಡಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಮಾಸಾಶನ ಮಂಜೂರು ಮಾಡಿಲ್ಲವೆಂದು ಬಸವಣ್ಣೆವ್ವ ಚೋಳಮ್ಮನವರ ದೂರು ನೀಡಿದರು.
ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೇ ನಿತ್ಯ ಪರದಾಡುವಂತಾಗಿದೆ. ಗಟಾರ, ರಸ್ತೆ, ವಿದ್ಯುತ್ ವ್ಯವಸ್ಥೆ ಸರಿಯಿಲ್ಲ, ಇದರ ಬಗ್ಗೆ ಪಂಚಾಯಿತಿಯವರು ಗಮನ ಹರಿಸುತ್ತಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕೊಳಚೆ ನೀರು ಹರಿಯುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಜನತೆ ಅನೇಕ ಕಾಯಿಲೆಗಳಿಂದ ನಿತ್ಯ ಆಸ್ಪತ್ರೆಗೆ ಅಲೆದಾಡುವಂತಾಗಿದೆ. ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ತಿಳಿಸಿದರು.
ಅಂಗನವಾಡಿ ಕಟ್ಟಡವಿದ್ದರೂ ಶಿಕ್ಷಕಿಯರಿಲ್ಲದೇ ಕಟ್ಟಡವೂ ಹಾಳಾಗುತ್ತಿದೆ. ನಿತ್ಯ ಚಿಕ್ಕ ಮಕ್ಕಳು ಪಕ್ಕದ ನವೆಭಾವನೂರ ಗ್ರಾಮಕ್ಕೆ ಹೋಗಬೇಕಾದ ಸ್ಥಿತಿ ಇದೆ. ಅನೇಕ ಬಾರಿ ಶಿಶು ಅಭಿವೃದ್ಧಿ ಇಲಾಖೆ, ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಿದರೂ ಗಮನ ಹರಿಸಿಲ್ಲ. ಮಕ್ಕಳ ನಿತ್ಯದ ಗೋಳು ತಪ್ಪಿಸಿ ಗ್ರಾಮದಲ್ಲಿಯೇ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಪೂಜಾರ, ತಹಸೀಲ್ದಾರ್ ಆರ್.ಡಿ. ಉಪ್ಪಿನ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಕೆ. ಹಿರೇಮಠ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಕರ ಮತ್ತಿತರರು ಸಭೆಯಲ್ಲಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

