ಗದಗ

ಕಳಪೆ ಆಹಾರ: ವಿದ್ಯಾರ್ಥಿಗಳ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರೋಣ, ಫೆ. 2
ಕಳೆದ 5 ತಿಂಗಳಿನಿಂದ ಕಳಪೆ ಗುಣಮಟ್ಟದ ಆಹಾರ ತಯಾರಿಸುತ್ತಿದ್ದಾರೆಂದು ಆರೋಪಿಸಿ, ಆಕ್ರೋಶಗೊಂಡು ಮುಗಳಿ ಗ್ರಾಮದ ಪ್ರಾಥಮಿಕ ಮತ್ತು ಉನ್ನತೀಕರಿಸಿದ ಪ್ರೌಢಶಾಲೆಯ ವಿದ್ಯಾರ್ಥಿಗಳು ಶನಿವಾರ ಊಟದ ತಟ್ಟೆಯೊಂದಿಗೆ ಗ್ರಾಮದ ಬೇವಿನಮರದ ಕಟ್ಟೆಗೆ ಬಂದು ಪ್ರತಿಭಟನೆ ನಡೆಸಿದರು.
ತೊಂದರೆ ನಿವಾರಿಸುವಂತೆ ಸಂಬಂಧಿಸಿದ ಅಧಿಕಾರಿಗಳು, ಶಿಕ್ಷಕರು ಮತ್ತು ಬಿಸಿಯೂಟ (ಅಡುಗೆ) ತಯಾರಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪ್ರತಿಭಟನೆಗಿಳಿದರು. ಸಂಬಂಧಿಸಿದ ಅಧಿಕಾರಿಗಳು ಬಂದು ಸಮಸ್ಯೆ ಪರಿಹರಿಸುವವರೆಗೂ ಯಾವುದೇ ರೀತಿಯ ಆಹಾರ ಸೇವಿಸುವದಿಲ್ಲವೆಂದು ವಿದ್ಯಾರ್ಥಿಗಳು ಪಟ್ಟುಹಿಡಿದರು. ಗ್ರಾಮಸ್ಥರು ಡಿಡಿಪಿಐ ರಾಜೀವ ನಾಯಕರಿಗೆ ವಿಷಯ ತಿಳಿಸಿದ ಬಳಿಕ ಬಿಇಓ, ಅಕ್ಷರ ದಾಸೋಹ ಅಧಿಕಾರಿಗಳು ಮ. 3ಗಂಟೆಗೆ ಬಂದರು. ವಿಳಂಬ ನೀತಿ ಅನುಸರಿಸಿದ ಬಿಇಓ ವರ್ತನೆಯನ್ನು ಗ್ರಾಮಸ್ಥರು ತೀವ್ರವಾಗಿ ಖಂಡಿಸಿದರು.
ಕಳಪೆ ಆಹಾರ : ಬಿಸಿಯೂಟದಲ್ಲಿ ಉಪ್ಪು, ಖಾರ, ತರಕಾರಿ, ಬೇಳೆ ಸಮರ್ಪಕವಾಗಿ ಬಳಸುತ್ತಿಲ್ಲ. ಆಗಾಗ್ಗೆ ಅನ್ನದಲ್ಲಿ ಹುಳ, ಸಣ್ಣ ಕಲ್ಲು, ಕಸ, ಕಡ್ಡಿ ಬರುತ್ತವೆ. ಇದನ್ನು ಪ್ರಶ್ನಿಸಿದರೆ ಅಡುಗೆ ತಯಾರಕರು ನಮ್ಮನ್ನು ಗದರಿಸುತ್ತಾರೆ. ಮುಖ್ಯೋಪಾದ್ಯಾಯ ಎಚ್.ವೈ. ನಾಯ್ಕರ ಅಡುಗೆಯವರ ತಾಳಕ್ಕೆ ತಕ್ಕಂತೆ ವರ್ತಿಸುತ್ತಾರೆಂದು ವಿದ್ಯಾರ್ಥಿಗಳು ತಿಳಿಸಿದರು.
ಅಡುಗೆ ಕೋಣೆಗೆ ಹೋಗಿ ನೀರು ಅಥವಾ ಏನನ್ನಾದರೂ ಕೇಳಿದರೆ ಅಡುಗೆ ತಯಾರಕಿ ನಿಂಗಮ್ಮ ಗದಗಿನರವರು, ಇಲ್ಲಿ ಬರಬೇಡ, ಏನನ್ನು ಮುಟ್ಟಬೇಡ ದೂರ ಹೋಗಿರಿ. ಇಲ್ಲಿ ನಿಮ್ಮದೇನು ಕೆಲಸ ಎಂದು ದಬಾಯಿಸುತ್ತಾ ಕಟ್ಟಿಗೆ ತರಲು ಕಳಿಸುತ್ತಾರೆ. ನಮ್ಮನ್ನು ಅಸ್ಪೃಶ್ಯರಂತೆ ನೋಡುತ್ತಾರೆಂದು ದಲಿತ ವಿದ್ಯಾರ್ಥಿ ಸೋಮಪ್ಪ ದಂಡಿನ ಆರೋಪಿಸಿದರು.
ಗ್ರಾಮಸ್ಥರ ಆರೋಪ: ಕಳಪೆ ಅಡುಗೆ ತಯಾರಿಸುವುದಲ್ಲದೇ ವಿದ್ಯಾರ್ಥಿಗಳನ್ನು ಕೀಳುಮಟ್ಟದಿಂದ ಕಾಣುತ್ತಾರೆ. ಕಂಪ್ಯೂಟರ್, ಕ್ರೀಡಾ ಸಾಮಗ್ರಿ, ವಿದ್ಯಾರ್ಥಿಗಳ ಬಳಕೆಗೆ ಕೊಟ್ಟಿಲ್ಲ. ವಿದ್ಯಾರ್ಥಿನಿಯರ ಶೌಚಾಲಯಗಳಿಗೆ ಬೀಗ ಹಾಕಿದ್ದರಿಂದ ಹೊರಗಡೆಯೇ ಹೋಗಬೇಕಾದ ಪರಸ್ಥಿತಿಯಿದೆ. ಶಿಕ್ಷಕರು ಬಳಸಿದ ಶೌಚಾಲಯಗಳನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸುತ್ತಾರೆ. ಇದಕ್ಕೆಲ್ಲ ಮುಖ್ಯೋಪಾದ್ಯಾಯರೇ ಹೋಣೆಗಾರರಾಗಿದ್ದು, ಇವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು. ಹಾಗೂ ಅಡುಗೆ ಸಹಾಯಕಿಯನ್ನು ಅಮಾನತ್ತುಗೊಳಿಸಿ, ಬೇರೆಯವರನ್ನು ನೇಮಿಸಬೇಕೆಂದು ಗ್ರಾಮಸ್ಥರಾದ ಶರಣಪ್ಪ ಹಿರೇಮನಿ, ಹೋನಕೇರಪ್ಪ ತಾಳಿ ಮುಂತಾದವರು ಆಗ್ರಹಿಸಿದರು. ಇನ್ನು ಮುಂದೆ ಶಾಲೆಯಲ್ಲಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಕಾರಣರಾದವರ ಮೇಲೆ ಕ್ರಮ ಜರುಗಿಸಲಾಗುವುದೆಂದು ಬಿಇಓ ಕೆ.ವಿ. ಪಾಟೀಲ್ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂಪಡೆದರು. ಗ್ರಾಪಂ ಉಪಾಧ್ಯಕ್ಷೆ ಹನಮವ್ವ ಪೂಜಾರ, ಶಾಂತವ್ವ ಐಹೊಳ್ಳಿ ವಿದ್ಯಾರ್ಥಿಗಳಾದ ಸುರೇಶ ತಳ್ಳಿಹಾಳ, ಶರಣಪ್ಪ ಪತ್ತಾರ, ವೀರೇಶ ಐಹೊಳ್ಳಿ, ರೇಣುಕಾ ಬೋವಿ, ರಾಘವೇಂದ್ರ ಬಡಿಗೇರ, ಶರಣಪ್ಪ ತಾಳಿ, ರೇಣುಕಾ ಬೋವಿ, ಶೈಲಾ ಶಲವಡಿ, ಮುತ್ತವ್ವ ಬಸಲಕೊಪ್ಪ, ಗೀತಾ ಹಡಗಲಿ, ಯಮನಬಿ ನಧಾಪ, ಚಂದ್ರವ್ವ ಉಸಲಕೊಪ್ಪ, ಬೇಬಿ ತಳ್ಳಿಹಾಳ ಹಲವು ವಿದ್ಯಾರ್ಥಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.