ಬತ್ತಿದ ಕೆರೆ; ಜಲಚರ ಜೀವಕ್ಕೆ ಬರೆ
ನಾಗರಾಜ ಎಸ್. ಬಡದಾಳ್
ದಾವಣಗೆರೆ: ಜನ, ಜಾನುವಾರುಗಳಷ್ಟೇ ಅಲ್ಲ ಜಲಚರಗಳೂ ಈಗ ಜಲಕ್ಷಾಮಕ್ಕೆ ತುತ್ತಾಗಿವೆ. ಅಪಾರ ಪ್ರಮಾಣದ ಮೀನು, ನೀರು ಹಾವು ಸೇರಿದಂತೆ ಜಲಚರಗಳ ಅಸ್ಥಿಗಳು ಈಗ ಕೆರೆ ಅಂಗಳದಲ್ಲಿ ಹದ್ದು, ಕಾಗೆ, ಪಕ್ಷಿಗಳ ಆಹಾರವಾಗುತ್ತಿವೆ.
ಹೌದು, ಕಳೆದ ಕೆಲವು ತಿಂಗಳ ಹಿಂದೆಯೇ ಮಹಾನಗರ ಪಾಲಿಕೆ ಆಡಳಿತ ಯಂತ್ರ ಎಚ್ಚೆತ್ತುಕೊಂಡು, ಭದ್ರಾ ನಾಲೆಯಿಂದ, ತುಂಗಭದ್ರಾ ನದಿಯಿಂದ ಕೆರೆ ತುಂಬಿಸಲು ಮನಸ್ಸು ಮಾಡಿದ್ದರೆ ಇಂದು ಜನ ಪರದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಹೀಗೆ ಜಲಚರಗಳ ಸಾಮೂಹಿಕ ಮಾರಣಹೋಮವೂ ನಡೆಯುತ್ತಿರಲಿಲ್ಲ.
ದೂರದೃಷ್ಟಿ ಇಲ್ಲ: ಪಾಲಿಕೆಯ ಆಡಳಿತ ಯಂತ್ರದ ದೂರದೃಷ್ಟಿ ಕೊರತೆಯ ಫಲವಾಗಿ ಅದಕ್ಕೆ ಮಹಾಜನತೆ, ಮೂಕ ಪ್ರಾಣಿಗಳು ಸಂಕಷ್ಟ ಎದುರಿಸುವಂತಾಗಿದೆ. ಅಪಾರ ಸಂಖ್ಯೆಯ ಜಲಚರಗಳು ಬಲಿಯಾಗಬೇಕಾದ ದುಸ್ಥಿತಿ ಉಂಚಾಗಿದೆ.
ಇಂದಿಗೂ ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆ ಅಂಗಳದಲ್ಲಿ ಸಣ್ಣ- ಪುಟ್ಟ, ಮಧ್ಯಮ ಹಾಗೂ ದೊಡ್ಡ ಗಾತ್ರದ ಮೀನಿನ ಅವಶೇಷಗಳು, ಅಸ್ಥಿಗಳು ನೋಡುಗರ ಕರುಳು ಕಿವುಚಿ ಬರುವಂತೆ ಮಾಡುತ್ತಿವೆ.
ಪ್ರಾಣಾರ್ಪಣೆ: ಕೆರೆಯ ಅಂಗಳದ ಕೆಸರು ನೀರಿನಲ್ಲಿ ತಮ್ಮ ಕೊನೆಯ ಕ್ಷಣಗಳವರೆಗೂ ಬದುಕಲು ಹೆಣಗಾಡಿದ ಮೀನುಗಳು ಅಂತಿಮ ಕ್ಷಣಗಳಲ್ಲಿ ನೀರೆಲ್ಲವೂ ಬತ್ತಿ ಹೋದ ಪರಿಣಾಮ ಉಸಿರಾಡಲಾಗದೆ, ನೀರು ಇಲ್ಲದೆ ನಿತ್ರಾಣವಾಗಿ ಪ್ರಾಣಾರ್ಪಣೆ ಮಾಡಿವೆ. ಲಕ್ಷಾಂತರ ಸಂಖ್ಯೆಯಲ್ಲಿ ಮೀನುಗಳ ಮಾರಣಹೋಮವೇ ಆಗಿದೆ. ಕಳೆದ ಕೆಲ ದಿನಗಳಿಂದಲೂ ಕೆರೆಯಂಗಳದಲ್ಲಿ ಸತ್ತು ಬಿದ್ದು, ದುರ್ನಾತ ಬೀರುತ್ತಿರುವ ಸ್ಥಳವನ್ನು ವೀಕ್ಷಿಸಿ ಜನರು ಬೇಸರ ವ್ಯಕ್ತಪಡಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಟಿವಿ ಸ್ಟೇಷನ್ ಹಾಗೂ ಕುಂದುವಾಡ ಕೆರೆಗಳು ನೀರಿಲ್ಲದೆ ಸಂಪೂರ್ಣವಾಗಿ ಬರಿದಾಗಿವೆ. ಕೆರೆಯ ಅಂಗಳ ಒಣಗಿ ಬಿರುಕು ಬಿಡುತ್ತಿವೆ.
ಹಾಲಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ಹಿಂದೆ ನಗರಸಭೆ ಅಧ್ಯಕ್ಷರಾಗಿದ್ದಾಗ ನಗರಕ್ಕೆ ಕೇವಲ ಬಾತಿ ಕೆರೆಯಿಂದ ಕುಡಿಯುವ ನೀರು ಪೂರೈಸುವುದು ತ್ರಾಸವಾಗುತ್ತಿತ್ತು. ಆಗದೂರದೃಷ್ಟಿ ಇಟ್ಟುಕೊಂಡು, ಭದ್ರಾ ನಾಲೆಯಿಂದ ಟಿವಿ ಸ್ಟೇಷನ್ ಹಿಂಭಾಗದಲ್ಲಿ ಒಂದನೇ ಹಂತದ ಸಮಗ್ರ ನೀರು ಸರಬರಾಜು ಯೋಜನೆಯ ಅಡಿ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದ್ದರು. ಆಗ ಡಾ. ಶಾಮನೂರು ಶಿವಶಂಕರಪ್ಪ ಅವರ ಕಾಳಜಿಯಿಂದಾಗಿ ನೀರಿನ ಸಮಸ್ಯೆ ಸಾಕಷ್ಟು ಇಲ್ಲದಂತಾಗಿತ್ತು.
ಹಾಲಿ ಉತ್ತರ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ದಾವಣಗೆರೆ ತ್ಯಾಜ್ಯ ಸಂಗ್ರಹಕ್ಕೆ ಮೀಸಲಾಗಿದ್ದ ಕುಂದುವಾಡ ಕೆರೆಗೆ ಕಾಯಕಲ್ಪ ನೀಡಿದ್ದರು.
ತ್ಯಾಜ್ಯ ನೀರು ಸಂಗ್ರಹಕ್ಕೆ ಮೀಸಲಾಗಿದ್ದ ಕೆರೆಯನ್ನು ನೀರು ಸಂಗ್ರಹಣಾ ಕೆರೆಯಾಗಿ ಅಭಿವೃದ್ಧಿಪಡಿಸುವ ಮೂಲಕ ಜಿಲ್ಲಾ ಕೇಂದ್ರದ ನೀರಿನ ಸಮಸ್ಯೆ ತ್ವರಿತವಾಗಿ ಕಡಿಮೆ ಮಾಡಿದರು.
ಇಚ್ಛಾಶಕ್ತಿ ಕೊರತೆ: ಜನಪ್ರತಿನಿಧಿಗಳಿಗೆ ಇರುವ ಇಚ್ಛಾಶಕ್ತಿ, ಬದ್ಧತೆ ಆಡಳಿತಶಾಹಿಗೆ ಇಲ್ಲದಂತಾಗಿದೆ. ಪಾಲಿಕೆ ಆಡಳಿತ ಅಧಿಕಾರಿಗಳ ಕೈಯಲ್ಲಿದ್ದಾಗ ತೋರಿದ ಅಚಾತುರ್ಯ ಇಂದು ನೀರಿನ ಸಮಸ್ಯೆಗೆ ಕಾರಣವಾಗಿದೆ ಎಂಬುದು ಜನರ ಆರೋಪ.
ಟಿವಿ ಸ್ಟೇಷನ್ ಕೆರೆ ಸುಮಾರು 51 ಎಕರೆ ವಿಸ್ತೀರ್ಣ ಹೊಂದಿದ್ದು, 900 ಮಿಲಿಯನ್ ಲೀಟರ್ನಷ್ಟು, ಕುಂದುವಾಡ ಕೆರೆ ಸುಮಾರು 250 ಎಕರೆ ವಿಸ್ತೀರ್ಣ ಹೊಂದಿದ್ದು, 2400 ಮಿಲಿಯನ್ ಲೀಟರ್ನಷ್ಟು ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹಗೊಳ್ಳುವ ಕೆರೆಗಳಲ್ಲಿ ಅದ್ಯಾವ ಪರಿಯಲ್ಲಿ ಜಲಚರಗಳು ಇದ್ದಿರಬಹುದು ಎಂಬುದನ್ನು ಯಾರಾದರೂ ಊಹಿಸಬಹುದು. ಇಂದು ಜಲಚರಗಳು ಸಂಪೂರ್ಣ ನಾಶವಾಗಿರುವುದು ಸಾಕಷ್ಟು ಜನರ ಬೇಸರಕ್ಕೂ ದಾರಿ ಮಾಡಿಕೊಟ್ಟಿದೆ ಎಂಬುದಂತೂ ಸತ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

