ದಾವಣಗೆರೆ

ಕಳಪೆ ಬತ್ತದ ಬೀಜ: ರೈತ ಸಂಘ ಪ್ರತಿಭಟನೆ

Published On :

ಕ.ಪ್ರ. ವಾರ್ತೆ, ಹರಿಹರ, ಜು.14
ಕೃಷಿ ಇಲಾಖೆಯಿಂದಲೇ ಸರಬರಾಜು ಮಾಡಲಾಗಿರುವ ಬತ್ತದ ಬಿತ್ತನೆ ಬೀಜ ಕಳಪೆಯಾಗಿದೆ, ಕೂಡಲೇ ಇಲಾಖೆ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕು ರೈತ ಸಂಘ ಮತ್ತು ರೈತ ಸಂಘದ ಕಾರ್ಯಕರ್ತರು ಕೃಷಿ ಇಲಾಖೆ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಹಾಳೂರು ನಾಗರಾಜ್ ಮಾತನಾಡಿ, ಈಗಾಗಲೇ ಮುಂಗಾರು ಮಳೆ ತಡವಾಗಿದೆ. ರೈತರು ಮಳೆ ಇಲ್ಲದೆ ಮುಗಿಲು ನೋಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ತಾಲೂಕು ಕೃಷಿ ಇಲಾಖೆ ಕಳಪೆ ಬಿತ್ತನೆ ಬೀಜ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊಳಕೆಯೊಡೆದಿಲ್ಲ: ಇಲಾಖೆಯು ಕರ್ನಾಟಕ ಸೀಡ್ಸ್ ಕಾರ್ಪೋರೇಷನ್ ಕಂಪನಿಯ ಬತ್ತದ ಬಿತ್ತನೆ ಬೀಜಗಳನ್ನು ರೈತರಿಗೆ ಮಾರಾಟ ಮಾಡಿದೆ. ಆದರೆ, ಬೀಜ ಬಿತ್ತಿದ ರೈತರ ಅಗಿಮಡಿ ಹಂತದಲ್ಲಿ ಮೊಳಕೆಯೊಡೆದಿಲ್ಲ. ಈಗಾಗಲೇ ಕೃಷಿ ಇಲಾಖೆಗೆ ಕೆಲ ಬಾರಿ ದೂರನ್ನು ನೀಡಿದ್ದೇವೆ. ಇದುವರೆಗೆ ಯಾವುದೇ ಅಧಿಕಾರಿಗಳು ಬೆಳೆ ಪರಿಶೀಲಿಸಲು ಸ್ಥಳಕ್ಕೆ ಆಗಮಿಸಿಲ್ಲ ಎಂದು ಕಿಡಿಕಾರಿದರು.
ತಾಲೂಕಿನ ಅನೇಕ ಸ್ಥಳಗಳಲ್ಲಿ ಅನಧಿಕೃತ ವ್ಯಕ್ತಿಗಳು ಯಾವುದೇ ಪರವಾನಗಿ ಇಲ್ಲದೆ ಕೀಟನಾಶಕ ಮಾರಾಟ ಮಾಡುತ್ತಿದ್ದಾರೆ. ಆದರೂ, ಅಧಿಕಾರಿಗಳು ಮೌನವಾಗಿರುವುದು ವ್ಯಾಪಕ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ಆಗಮಿಸಿದ ಕೃಷಿ ಸಹಾಯಕ ನಿರ್ದೇಶಕ ಎಂ.ಇ. ನರಸಿಂಹಮೂರ್ತಿ ಮಾತನಾಡಿ, ಮೊಳಕೆಯೊಡೆಯದ ಬತ್ತದ ಬಿತ್ತನೆ ಬೀಜಗಳ ಪರಿಶೀಲನೆಗೆ ವಿಜ್ಞಾನಿಗಳನ್ನು ಕಳುಹಿಸುವಂತೆ ಈಗಾಗಲೇ ಕೃಷಿ ಜಂಟಿ ನಿರ್ದೇಶಕರಿಗೆ ಪತ್ರ ಕಳುಹಿಸಿದ್ದೇನೆ. ಇನ್ನೆರಡು ದಿನಗಳನ್ನು ಅವರು ಬಂದು ಪರಿಶೀಲನೆ ನಡೆಸಲಿದ್ದಾರೆ. ಅವರ ವರದಿ ಆಧರಿಸಿ ರೈತರಿಗೆ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕೆಂಚನಹಳ್ಳಿ ಶೇಖಪ್ಪ, ಹನಗವಾಡಿ ಶೇಖರಪ್ಪ, ಮಹೇಶ್ವರಪ್ಪ, ಸಿದ್ದಪ್ಪ, ಪ್ರಭುದೇವ, ಬಿ. ಸಿದ್ದೇಶ್ವರ್, ಹಲಸಬಾಳು ಲಿಂಗರಾಜ್, ಗುರುಶಾಂತಪ್ಪ, ಅಶೋಕ, ಸುರೇಶ, ರಾಜನಹಳ್ಳಿ ಹನುಮಂತಪ್ಪ, ಮಂಜುನಾಥ ಹಾಗೂ ಇತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.