ದಾವಣಗೆರೆ

ವಚನ ಸಾಹಿತ್ಯ ತಿರುಚುವ ಯತ್ನ

Published On :

ದಾವಣಗೆರೆ: ಅವಕಾಶವಾದಿ ಸಂಶೋಧಕರು ವಚನ ಸಾಹಿತ್ಯವನ್ನು ತಿರುಚುವ ಕುತಂತ್ರದಲ್ಲಿ ತೊಡಗಿದ್ದಾರೆ ಎಂದು ಕರ್ನಾಟಕ ವಚನ ಸಾಹಿತ್ಯ ಪರಿಷತ್ ರಾಜ್ಯ ಘಟಕ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ಆರೋಪಿಸಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ನಡೆದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.
ಬಸವಾದಿ ಶರಣರು ಸಮಾಜದ ಶೋಷಿತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಆದರೆ, ಪ್ರಸ್ತುತ ಬಸವಣ್ಣನ ಹೆಸರೇಳಿಕೊಂಡು ಅಸ್ತಿತ್ವ ಕಂಡುಕೊಂಡಿರುವ ಕೆಲವರು, ತುಳಿತಕ್ಕೆ ಒಳಗಾದವರನ್ನು ಅದೇ ಸ್ಥಿತಿಯಲ್ಲಿಡುವ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
ವಚನ ಸಾಹಿತ್ಯವನ್ನು ಪ್ರಚುರಪಡಿಸುವ ಸಲುವಾಗಿ ಜನ್ಮ ತಾಳಿರುವ ಕರ್ನಾಟಕ ವಚನ ಸಾಹಿತ್ಯ ಪರಿಷತ್
ಯಾವುದೇ ಮತ, ಜಾತಿ, ಮಠಗಳ ಹಿಡಿತದಲ್ಲಿಲ್ಲ. ಇದು ಸಮಾಜದ ಸರ್ವರನ್ನೂ ಜೊತೆಯಲ್ಲಿ ಕರೆದೊಯ್ಯುವ ಅನುಭವ ಮಂಟಪ ಮಾದರಿಯ ಜಾತ್ಯಾತೀತ ವೇದಿಕೆಯಾಗಿದೆ ಎಂದರು.
ಈಗಾಗಲೇ ರಾಜ್ಯದ 17 ಜಿಲ್ಲೆಗಳಲ್ಲಿ ಪರಿಷತ್ತನ್ನು ಸಂಘಟಿಸಿದ್ದು, ಪ್ರಥಮ ವಚನ ಸಾಹಿತ್ಯ ಸಮ್ಮೇಳನವನ್ನೂ ಯಶಸ್ವಿಯಾಗಿ ನಡೆಸಲಾಗಿದೆ. ಮುಂಬರುವ ಸಮ್ಮೇಳನವನ್ನು ಯಾವುದೇ ಮಠದ ಆಸರೆ ಪಡೆಯದೆ, ಸ್ವತಂತ್ರವಾಗಿ ಗದಗ ಅಥವಾ ಬಾಗಲಕೋಟೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಸಾನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ  ಮಾತನಾಡಿ ಬಸವಾದಿ ಶರಣರು ಯಾವುದೇ ಮತ, ಜಾತಿ, ಪಂಥಗಳಿಗೆ ಸೀಮಿತರಲ್ಲ. ಈ ಮೂಲ ತಳಹದಿಯ ಮೇಲೆ ಜಾತ್ಯತೀತ ವಚನ ಸಾಹಿತ್ಯವನ್ನು ಜನಮಾನಸದಲ್ಲಿ ಪ್ರಚುರಪಡಿಸುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಬಸವಣ್ಣ ಹಾಗೂ ಅವರ ಸಮಕಾಲೀನರಿಂದ ವಚನ ಸಾಹಿತ್ಯ ಪ್ರಚಲಿತವಾಗಿದ್ದು, ಶರಣರು ಜಾತಿ, ಮತ, ಪಂಥಗಳಿಂದ ಹೊರತಾಗಿದ್ದಾರೆ, ಅದೇ ರೀತಿ, ವೀರಶೈವ ಮಠಗಳು ಮೊದಲಿನಿಂದಲೂ ಜ್ಞಾನದಾಸೋಹ, ಅನ್ನದಾಸೋಹದ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸುವ ಕಾರ್ಯ ಮಾಡುತ್ತಿವೆ ಎಂದರು.
ವಚನ ಸಾಹಿತ್ಯ ಪ್ರಚಾರಕ ಸಂಸ್ಥೆಗಳು ಈ ಮೂಲ ಆಶಯಕ್ಕೆ ಭಂಗ ಬಾರದಂತೆ ಚಟುವಟಿಕೆ ಕೈಗೊಳ್ಳಬೇಕು. ಸಂಸ್ಥೆಯನ್ನು ಇನ್ನೊಂದು ಧರ್ಮ, ಜಾತಿ, ಪಂಥವನ್ನು ದೂಷಿಸುವುದಕ್ಕೆ ವೇದಿಕೆಯನ್ನಾಗಿ ಬಳಸಿಕೊಳ್ಳಬಾರದು. ಬಸವಾದಿ ಶರಣರ ತತ್ವಗಳ ತಳಹದಿಯಲ್ಲಿ ಸಾಮರಸ್ಯದ ಸಮಾಜ ನಿರ್ಮಿಸಬೇಕು ಎಂದು ಅಭಿಪ್ರಾಯಿಸಿದರು.
ದಾವಣಗೆರೆ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಜಾಗತಿಕ ಸಾಹಿತ್ಯಕ್ಕೆ ಕನ್ನಡದ ಕೊಡುಗೆಯೇ ವಚನ ಸಾಹಿತ್ಯ. ಈ ಸಾಹಿತ್ಯದಲ್ಲಿ ಅವೈಜ್ಞಾನಿಕತೆ, ಕಾಲ್ಪನಿಕತೆಗೆ ಅವಕಾಶವಿಲ್ಲ. ಬದುಕಿಗೆ ಪೂರಕವಾದ ತಾತ್ವಿಕ ಮೌಲ್ಯಗಳು ವಚನ ಸಾಹಿತ್ಯದಲ್ಲಿ ಅಡಕವಾಗಿವೆ ಎಂದರು.
ಇದೇ ವೇಳೆ ಪರಿಷತ್ ಜಿಲ್ಲಾಧ್ಯಕ್ಷ ಜಿ.ಎಚ್.ರಾಜಶೇಖರ ಗುಂಡಗಟ್ಟಿ ಹಾಗೂ ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ಅಧಿಕಾರ ಸ್ವೀಕರಿಸಿದರು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಸಿದ್ದಲಿಂಗ ಸ್ವಾಮೀಜಿ, ರೇವಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎ.ಆರ್.ಉಜ್ಜನಪ್ಪ, ವಚನ ಸಾಹಿತ್ಯ ಪರಿಷತ್ ಮಹಿಳಾ ಘಟಕ ಅಧ್ಯಕ್ಷೆ ನಿರ್ಮಲಾ ಸಿ.ಎಲಿಗಾರ್, ಶರಣ ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ ಗೌ. ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರಗೌಡ್ರು, ಎಚ್.ಕೆ.ಸತ್ಯಭಾಮಾ, ಡಿ.ಸನಾವುಲ್ಲಾ ಇತರರು ಉಪಸ್ಥಿತರಿದ್ದರು.
ಜಿ.ಹೆಚ್.ರಾಜಶೇಖರ ಗುಂಡಗಟ್ಟಿ ಸ್ವಾಗತಿಸಿದರು. ಡಾ.ಎಚ್.ಎಸ್.ಮಂಜುನಾಥ ಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಎಸ್.ವೀರಭದ್ರಪ್ಪ ತೆಲಗಿ, ಚಂದ್ರಿಕಾ ಮಂಜುನಾಥ ನಿರೂಪಿಸಿದರು. ಎಸ್.ಎಂ.ಮಲ್ಲಮ್ಮ ನಾಗರಾಜ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


ವಚನ ಸಾಹಿತ್ಯ ತಿರುಚುವ ಯತ್ನ